ಹಲಾಲ್-ಜಟ್ಕಾ ವಿಷಯದಲ್ಲಿ ಪ್ರವೀಣ್ ಹತ್ಯೆಯಾಯಿತಾ ಎನ್ನುವ ತನಿಖೆ ಆಗಲಿ!
ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಮೂರು ಜನ ಆರೋಪಿಗಳನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ-ಕೇರಳ ಗಡಿಯಾಗಿರುವ ತಲಪಾಡಿ ಚೆಕ್ ಪೋಸ್ಟಿನಲ್ಲಿ ಬಂಧಿಸಿದ್ದೇವೆ ಎಂದು ಹೇಳಿದ್ದಾರೆ. ಎಲ್ಲೇ ಬಂಧಿಸಿರಲಿ, ಆದರೆ ಬಂಧಿತರಾದವರು ಸುಳ್ಯದವರೇ ಎನ್ನುವುದು ಮಾತ್ರ ನಿಜ. ಅದರಲ್ಲಿಯೂ ಪ್ರವೀಣ್ ಮಾಲೀಕತ್ವದ ಕೋಳಿಯಂಗಡಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯ ಮಗ ಕೂಡ ಈ ಒಟ್ಟು ಪ್ರಕರಣದಲ್ಲಿ ಆರೋಪಿಯಾಗಿರುವುದನ್ನು ಬೆಂಬಿಡದೇ ಹೋದ ಪೊಲೀಸರಿಗೆ ಸದ್ಯ ಹತ್ಯೆ ಆರೋಪದಲ್ಲಿ ನೇರ ಭಾಗಿಯಾದವರು ಸಿಕ್ಕಿದ್ದಾರೆ. ಬಂಧಿತರಿಗೆ ಎಸ್ ಡಿಪಿಐ ಮತ್ತು ಪಿಎಫ್ ಐ ನಂಟು ಮೇಲ್ನೋಟಕ್ಕೆ ಇರುವುದು ಗೊತ್ತಾಗಿದೆ ಎಂದು ಹೇಳಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ಈ ಬಗ್ಗೆ ಸೂಕ್ತ ತನಿಖೆ ಮಾಡಿ ಎಷ್ಟರಮಟ್ಟಿಗೆ ಆ ಸಂಘಟನೆಗಳು ಇದರಲ್ಲಿ ಭಾಗಿಯಾಗಿವೆ ಎಂದು ಹೇಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರವೀಣ್ ಹತ್ಯೆ ಯಾಕಾಯಿತು ಎಂದು ತನಿಖೆ ಮಾಡಿ ಹೇಳಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದ್ದಾರಾದರೂ ಈ ಹತ್ಯೆಯ ಹಿಂದೆ ಕೋಳಿ ಅಂಗಡಿ ಹಿಂದೂಗಳು ತೆರೆಯುವ ವಿಷಯದಲ್ಲಿ ಇದ್ದ ಮೈಮನಸ್ಸು ಕಾರಣವಾಯಿತಾ ಎನ್ನುವುದು ಕೂಡ ತನಿಖೆಯಿಂದ ಗೊತ್ತಾಗಬೇಕಿದೆ. ಇತ್ತೀಚೆಗೆ ಹಲಾಲ್ ಮಾಂಸ ಮತ್ತು ಜಟ್ಕಾ ಮಾಂಸದ ವಿಷಯ ಇಡೀ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದದ್ದು ಎಲ್ಲರಿಗೂ ಗೊತ್ತೆ ಇದೆ. ಇದರೊಂದಿಗೆ ಹಿಂದೂಗಳು ಕೂಡ ಕೋಳಿ ಮಾಂಸದ ಅಂಗಡಿ ತೆರೆದು ಪ್ರತ್ಯೇಕ ವ್ಯಾಪಾರ ಮಾಡುವ ವಿಷಯ ಕೂಡ ಅಲ್ಲಲ್ಲಿ ಮಾತುಕತೆ ಬಂದಿತ್ತು. ಕೋಳಿ ವ್ಯಾಪಾರದಲ್ಲಿ ಇವತ್ತಿಗೂ ಮುಸ್ಲಿಮರು ಅಧಿಪತ್ಯ ಸ್ಥಾಪಿಸಿದ್ದಾರೆ. ಆ ಉದ್ಯಮದಲ್ಲಿ ಅವರಿಗೆ ಬಿಗಿಯಾದ ಹಿಡಿತ ಇದೆ. ಈ ಹಲಾಲ್ ವಿಷಯ ಮುನ್ನಲೆಗೆ ಬಂತಲ್ಲ, ಆಗ ಮುಸ್ಲಿಂ ಕೋಳಿ ವ್ಯಾಪಾರಿಗಳಿಂದ ಹಿಂದೂಗಳು ವ್ಯಾಪಾರ ಮಾಡಬಾರದು ಎಂದು ಹಿಂದೂ ಮುಖಂಡರು ಘೋಷಿಸಿದರು. ಇದು ಸಹಜವಾಗಿ ಮುಸ್ಲಿಂ ವ್ಯಾಪಾರಿಗಳಿಗೆ ಸಾಕಷ್ಟು ಆರ್ಥಿಕ ಹಿನ್ನಡೆಯನ್ನು ಉಂಟು ಮಾಡಿತು. ಬಹುಸಂಖ್ಯಾತರಾಗಿರುವ ಹಿಂದೂಗಳು ತಮ್ಮ ಬಳಿ ಮಾಂಸ ಖರೀದಿಸದೇ ಹೋದರೆ ಅಂಗಡಿಗಳನ್ನೇ ಮುಚ್ಚಬೇಕಾದಿತು ಎಂದು ಮುಸ್ಲಿಂ ವ್ಯಾಪಾರಿಗಳು ಆತಂಕಕ್ಕೆ ಒಳಗಾದರು. ಇನ್ನು ಹಲಾಲ್ ಮಾಂಸ ಮಾತ್ರ ಮಾರುವವರಿಂದ ಹಿಂದೂಗಳು ಖರೀದಿಸಬಾರದು ಎಂದರೆ ಎಲ್ಲಿ ಖರೀದಿಸಬೇಕು ಎನ್ನುವ ವಿಷಯ ಬಂದಾಗ ಜಟ್ಕಾ ಮಾಂಸ ಅಂಗಡಿಗಳನ್ನು ತೆರೆಯುವುದಕ್ಕೆ ಅನೇಕ ಹಿಂದೂ ಮುಖಂಡರು ಮುಂದಾದರು. ಈ ಬಗ್ಗೆ ಮುಂದುವರೆದ ಪ್ರವೀಣ್ ನೆಟ್ಟಾರು ತಾವು ಕೂಡ ಕೋಳಿ ಮಾಂಸದ ಅಂಗಡಿಯನ್ನು ತೆರೆದರು. ಅಲ್ಲಿ ಅವರು ಕೆಲಸಕ್ಕೆ ಇಟ್ಟಿದ್ದು ಒಬ್ಬ ಮುಸ್ಲಿಂ ವ್ಯಕ್ತಿಯನ್ನು. ಪ್ರವೀಣ್ ತಾವು ಕೋಳಿ ಮಾಂಸದ ಅಂಗಡಿಯನ್ನು ತೆರೆದದ್ದಲ್ಲದೇ ಅನೇಕ ಹಿಂದೂ ಯುವಕರಿಗೆ ಇದೇ ದಾರಿಯಲ್ಲಿ ಉದ್ಯಮ ಆರಂಭಿಸಲು ಪ್ರೇರಣಿ ನೀಡಿದರು. ಇವರ ಸ್ಫೂರ್ತಿಯಿಂದ ಕೆಲವು ಹಿಂದೂ ಯುವಕರು ಜಟ್ಕಾ ಕೋಳಿ ಮಾಂಸದ ಅಂಗಡಿಯನ್ನು ತೆರೆಯಲು ಮುಂದಾದರು. ಇದು ಮುಸ್ಲಿಮರ ಕೆಂಗೆಣ್ಣಿಗೆ ಗುರಿಯಾಯಿತು. ಪ್ರವೀಣ್ ನೆಟ್ಟಾರು ಅವರನ್ನು ಹೀಗೆ ಬಿಟ್ಟರೆ ಅವರು ನಮಗೆ ಸಂಚಕಾರ ಎಂದು ಅಂದುಕೊಂಡ ಮತಾಂಧರು ಪ್ರವೀಣ್ ಹತ್ಯೆಗೆ ಸಂಚು ರೂಪಿಸಿದ್ದರು. ಪ್ರವೀಣ್ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿಯಿಂದ ಪ್ರವೀಣ್ ಚಲನವಲನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾ ಇದ್ದರು. ಕೊನೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡ ಹಂತಕ ಆರೋಪಿಗಳು ಪ್ರವೀಣ್ ನೆಟ್ಟಾರು ಅವರು ಕೋಳಿ ಅಂಗಡಿ ಬಂದ್ ಮಾಡುವ ಸಂದರ್ಭದಲ್ಲಿ ರಾತ್ರಿ ಹೊಂಚು ಹಾಕಿ ಕುಳಿತು ಭೀಭತ್ಸವಾಗಿ ಹತ್ಯೆ ಮಾಡಿದ್ದಾರೆ.
ವ್ಯಾಪಾರ ಎಂದ ಮೇಲೆ ಸ್ಪರ್ಧೇಗಳು ಸರ್ವೇಸಾಮಾನ್ಯ. ಅದನ್ನು ಸಕರಾತ್ಮಕವಾಗಿ ಸ್ವೀಕರಿಸಬೇಕಾಗಿರುವುದು ವ್ಯಾಪಾರಿಗಳ ಕರ್ತವ್ಯ. ಅದು ಬಿಟ್ಟು ನೇರ ಹತ್ಯೆ ಮಾಡಲು ಮುಂದಾಗುವುದು ಇದೆಯಲ್ಲ, ಅದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಹಳ ಆತಂಕಕಾರಿ ಬೆಳವಣಿಗೆ. ಪ್ರವೀಣ್ ಈಗ ಅಂತಹ ಒಂದು ದ್ವೇಷದ ಜ್ವಾಲೆಗೆ ಬಲಿಯಾದರಾ ಎಂದು ಕೂಡ ನೋಡಬೇಕಾಗಿದೆ. ಒಂದು ವೇಳೆ ಹೌದಾದರೆ ಇದು ನಿಜಕ್ಕೂ ಆತಂಕಕಾರಿ ಹಂತ. ಅದರಲ್ಲಿಯೂ ಈ ದ್ವೇಷಕ್ಕೆ ಮತಾಂಧ ಸಂಘಟನೆಗಳು ಹಂತಕರಿಗೆ ಸಹಾಯ ಮಾಡಿವೆ ಎನ್ನುವುದು ಪತ್ತೆಯಾದರೆ ಅದಕ್ಕಿಂತ ದುರಂತ ಬೇರೆ ಇಲ್ಲ. ಒಂದು ವೇಳೆ ಮಸೂದ್ ಹತ್ಯೆಗೆ ಪ್ರತೀಕಾರ ಎಂದು ಗೊತ್ತಾದ್ದಲ್ಲಿ ಅದಕ್ಕೆ ಪ್ರವೀಣ್ ನೆಟ್ಟಾರು ಅವರನ್ನೇ ಗುರಿಯಾಗಿಸಿದ್ದು ಯಾಕೆ ಎನ್ನುವುದನ್ನು ನೋಡಿದಾಗಲೂ ಈ ಕೋಳಿ ಅಂಗಡಿಯ ಹಿನ್ನಲೆ ತಿಳಿಯಬಹುದು. ಕೆಲವು ಸಮಯದ ಹಿಂದೆ ಹಿಂದೂಗಳು ಮೀನು ವ್ಯಾಪಾರಕ್ಕೆ ಇಳಿಯುತ್ತಾರೆ ಎಂದು ಗೊತ್ತಾದಾಗ ಉಪ್ಪಿನಂಗಡಿಯಲ್ಲಿ ಹಿಂದೂ ಮೀನು ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆಗಳಾಗಿರುವುದು ನಿಮಗೆ ನೆನಪಿರಬಹುದು. ತಾವು ನಡೆಸುವ ಉದ್ಯಮವನ್ನು ಬೇರೆ ಯಾರಾದರೂ ಓವರ್ ಟೇಕ್ ಮಾಡಲು ಯತ್ನಿಸಿದ್ದಲ್ಲಿ ಅಂತವರನ್ನು ಮುಗಿಸಿಬಿಡಬೇಕು ಎಂದು ಸಂಚು ಹೂಡುವುದಿದೆಯಲ್ಲ, ಇದರ ಹಿಂದೆ ಪ್ರಬಲ ಸಂಘಟನೆಗಳು ಇರುವುದು ಸ್ಪಷ್ಟ. ಯಾಕೆಂದರೆ ಬೆಳ್ಳಾರೆಯಲ್ಲಿ ಕುಳಿತ ಮೂರ್ನಾಕು ಯುವಕರು ಇಂತಹ ಒಂದು ಘನಘೋರ ಪ್ಲಾನ್ ಗೆ ಕೈ ಹಾಕಲು ಸಾಧ್ಯವಿಲ್ಲ. ಅದರ ಹಿಂದೆ ಅವರಿಗೆ ಆರ್ಥಿಕ, ಕಾನೂನು ಮತ್ತು ಸಾಮಾಜಿಕ ಬೆಂಬಲ ಕೊಡುವ ಪ್ರಾಮಿಸ್ ಸಂಘಟನೆಗಳು ಮಾಡಿರಬಹುದು. ಒಂದು ಕಾಲದಲ್ಲಿ ಹೀಗೆ ಇರಲೇ ಇಲ್ಲ. ಹಿಂದೂ, ಮುಸ್ಲಿಂ ತಮ್ಮ ತಮ್ಮ ವ್ಯಾಪಾರದಲ್ಲಿ ಖುಷಿಯಾಗಿದ್ದರು. ಆದರೆ ಕಾಲಾಂತರದಲ್ಲಿ ಮೂಲಭೂತವಾದವನ್ನು ಹೊತ್ತುಕೊಂಡ ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳು ಮತೀಯವಾದವನ್ನೇ ಅಂತಿಮವಾಗಿ ಎತ್ತಿಹಿಡಿಯುವ ನಿರ್ಧಾರ ಮಾಡಿದ ಬಳಿಕ ಹತ್ಯೆಗಳು ಇಂತಹ ವಿಷಯಗಳಿಗೂ ಆರಂಭವಾಗಿದೆ!
Leave A Reply