ಬಿಕೆ ಹರಿಪ್ರಸಾದ್ ಕ್ರಿಶ್ಚಿಯನ್ ಆಗಲು ಕಾಯ್ದೆಯಲ್ಲಿ ಅವಕಾಶ ಇದೆ!!
ಬಿ.ಕೆ ಹರಿಪ್ರಸಾದ್ ರಾಜಕೀಯ ಜೀವನ ಬಹುತೇಕ ಮುಗಿಸಿರುವುದೇ ದೆಹಲಿಯಲ್ಲಿ. ತಮ್ಮ ಜೀವಿತಾವಧಿಯಲ್ಲಿ ಕಾಂಗ್ರೆಸ್ಸಿನ ಒಂದಲ್ಲ ಒಂದು ಹುದ್ದೆಯಲ್ಲಿದ್ದ ಹರಿಪ್ರಸಾದ್ ಅದರ ಕಾರಣದಿಂದಲೇ ರಾಜ್ಯಸಭಾ ಸ್ಥಾನದಲ್ಲಿದ್ದರು. ಸೋನಿಯಾ ಗಾಂಧಿಯವರ ಬಲಕೈಯಾಗಿ ಆಸ್ಕರ್ ಇದ್ದರೆ ಎಡದಲ್ಲಿ ಆಂಟೋನಿ ಇದ್ದಾಗ ಒಂದು ಎಕ್ಸಟ್ರಾ ಕೈಯಾಗಿ ಹರಿಪ್ರಸಾದ್ ಇದ್ದೇ ಇರುತ್ತಿದ್ದರು. ಒಬ್ಬ ವ್ಯಕ್ತಿ ತನ್ನ ಬದುಕಿನ ಹೆಚ್ಚಿನ ಕಾಲವನ್ನು ಎಲ್ಲಿ ಕಳೆಯುತ್ತಾನೋ ಮತ್ತು ಯಾರ ಸಂಪರ್ಕದಲ್ಲಿ ಇರುತ್ತಾನೋ ಕಾಲಾನುಕ್ರಮದಲ್ಲಿ ಹಾಗೆ ಆಗುತ್ತಾನೆ ಎನ್ನುವುದು ಸಹಜವಾಗಿ ಎಲ್ಲರ ಅನುಭವಕ್ಕೆ ಬಂದಿರುವ ಸತ್ಯ. ಬಿಕೆ ಕೂಡ ಅದರಿಂದ ಹೊರತಾಗಿಲ್ಲ. ರಾಜ್ಯಸಭೆಗೆ ನಿರಂತರವಾಗಿ ಕಾಂಗ್ರೆಸ್ಸಿನಿಂದ ಕಳುಹಿಸಲ್ಪಡುತ್ತಿದ್ದ ಬಿಕೆ ಯಾವಾಗ ಎಲ್ಲಿಂದಲಾದರೂ ರಾಜಸಭಾ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದಾಗ ಕಣ್ಣು ಹಾಕಿದ್ದೇ ಕರ್ನಾಟಕದ ಮೇಲೆ. ಆದರೆ ಜೈರಾಂ ರಮೇಶ್ ಅವರಿಗೆ ಇಲ್ಲಿಂದ ಆಯ್ಕೆ ಮಾಡಲೇಬೇಕಾಗುತ್ತದೆ, ನಿಮಗಾದರೂ ಕನ್ನಡ ಬರುತ್ತೆ, ಅಲ್ಲಿನ ವಿಧಾನಪರಿಷತ್ತಿನಲ್ಲಿ ಕುಳಿತುಕೊಳ್ಳಿ. ಬೇಕಾದರೆ ವಿಪಕ್ಷ ನಾಯಕ ಬೇಕಾದರೂ ಆಗಿ. ಅಲ್ಲಿನ ಕಾಂಗ್ರೆಸ್ಸನ್ನು ಹದ್ದುಬಸ್ತಿನಲ್ಲಿಡಲು ನೀವು ಅಲ್ಲಿದ್ದರೆ ಒಳ್ಳೆಯದು ಎಂದು ಸೋನಿಯಾ ಮತ್ತು ರಾಹುಲ್ ಅಸ್ತು ಎಂದರೋ ನೇರವಾಗಿ ಬಿಕೆ ಇಳಿದದ್ದು ವಿಧಾನಸೌಧದ ಅಂಗಣದಲ್ಲಿ. ಹಾಗೇ ನೋಡಿದರೆ ಕರ್ನಾಟಕದಲ್ಲಿ ಹುಟ್ಟಿದ್ದಾರೆ ಮತ್ತು ಕರಾವಳಿಯ ಪ್ರಬಲ ಬಿಲ್ಲವ ಜಾತಿಗೆ ಸೇರಿದ್ದಾರೆ ಎನ್ನುವುದು ಬಿಟ್ಟರೆ ಬಿಕೆಗೆ ಇರುವ ಏಕೈಕ ಅರ್ಹತೆ ಎಂದರೆ ದೆಹಲಿಯ ಜನಪಥ್ 10 ಕ್ಕೆ ಎಂಟ್ರಿ ಕೊಡಬೇಕಾದರೆ ಯಾವುದೇ ಅಪಾಯಿಂಟಮೆಂಟ್ ಅಗತ್ಯ ಇಲ್ಲ ಎನ್ನುವುದು ಮಾತ್ರ. ಬೆಂಗಳೂರಿನಲ್ಲಿ ಕುಳಿತು ನೇರ ಸೋನಿಯಾ ಮನೆಗೆ ಕಾಲ್ ಮಾಡಬಲ್ಲ ಕರ್ನಾಟಕದ ಏಕೈಕ ಸದ್ಯದ ನಾಯಕ ಎಂದರೆ ಅದು ಬಿಕೆ ಮಾತ್ರ ಎನ್ನುವುದು ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಗೊತ್ತಿರುವುದರಿಂದ ವಿಧಾನಪರಿಷತ್ ವಿಪಕ್ಷ ಸ್ಥಾನಕ್ಕೆ ಅವರನ್ನು ಪ್ಲಾಂಟ್ ಮಾಡಿದಾಗ ಡಿಕೆಶಿಯಾಗಲಿ, ಸಿದ್ದು ಆಗಲಿ ಒಂದು ಸಣ್ಣ ಕೆಮ್ಮು ಕೂಡ ತೆಗೆಯಲಿಲ್ಲ.
ಅಂತಹ ಬಿಕೆ ಈಗ ಕಾಂಗ್ರೆಸ್ ಅಧಿನಾಯಕಿ ಹಾಗೂ ಆಕೆಯ ಮಗನನ್ನು ಒಲಿಸಲು ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಏನೇನೋ ಅಸಂಬದ್ಧವಾಗಿ ಮಾತನಾಡಿದ್ದಾರೆ. ಮೊದಲನೇಯದಾಗಿ ಮೆಕಾಲೆ ಶಿಕ್ಷಣ ಪದ್ಧತಿಯಿಂದ ನಮ್ಮ ದೇಶದಲ್ಲಿ ವಿದ್ಯೆಯ ಆರಂಭವಾಯಿತು ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿರುವ ಕುಖ್ಯಾತಿ ಏನಾದರೂ ಇದೆ ಎಂದರೆ ಅದು ಮೆಕಾಲೆಗೆ. ನಮ್ಮ ದೇಶದ ಗುರುಕುಲ ಪದ್ಧತಿಯನ್ನು ಹಾಳು ಮಾಡಿ ಆ ಜಾಗದಲ್ಲಿ ವಿದೇಶಿ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೆಕಾಲೆಯಿಂದಾಗಿ ನಮ್ಮ ದೇಶದಲ್ಲಿ ಮೂಲ ಶಿಕ್ಷಣ ಪದ್ಧತಿಯೇ ಹಾಳಾಯಿತು. ನಳಂದ ವಿಶ್ವವಿದ್ಯಾನಿಲಯಗಳ ಸಹಿತ ಅನೇಕ ವಿವಿಗಳನ್ನು ಹೊಂದಿದ್ದ ಸನಾತನ ಭಾರತದಲ್ಲಿ ಅವುಗಳ ಅವನತಿಗೆ ಬ್ರಿಟಿಷರು, ಮೊಗಲರು ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಬಿಕೆಗೆ ಇದೆಲ್ಲವೂ ಗೊತ್ತಿಲ್ಲ ಎನ್ನುವುದು ಮೊನ್ನೆ ಅಧಿವೇಶನದಲ್ಲಿ ಇಡೀ ರಾಜ್ಯಕ್ಕೆ ಗೊತ್ತಾಯಿತು. ಇಲ್ಲಿಯ ತನಕ ಬಿಕೆಗೆ ತುಂಬಾ ಜ್ಞಾನ ಇದೆ ಎಂದು ಕನಿಷ್ಟ ಕಾಂಗ್ರೆಸ್ಸಿಗರಾದರೂ ನಂಬಿದ್ದರು. ಆದರೆ ಈಗ ಅವರಿಗೂ ಬಿಕೆ ಹಣೆಬರಹ ಗೊತ್ತಾಗಿದೆ. ಬಿಕೆ ಮೆದುಳಿಗೆ ಇಟಲಿಯ ಶಿಕ್ಷಣದ ಮಂಕು ಬಡಿದಿರಬಹುದು. ಅದಕ್ಕಾಗಿ ಅವರು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದಾರೆ. ಬೇಕಾದರೆ ಬಿಕೆ ಕೈಸ್ತರಾಗಿ ಮತಾಂತರ ಆಗಲು ಹೊಸ ಕಾಯ್ದೆ ಅಡ್ಡಿಬರುವುದಿಲ್ಲ ಎಂದು ಅವರಿಗೆ ಸದನದಲ್ಲಿಯೇ ಸ್ಪಷ್ಟಪಡಿಸಲಾಗಿದೆ. ಬಿಕೆ ಎಂದಲ್ಲ, ವಿಧಾನ ಮಂಡಲದಲ್ಲಿರುವ ಅಷ್ಟೂ ಕಾಂಗ್ರೆಸ್ ಶಾಸಕರು ನಾವು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿ ನಾಳೆಯಿಂದ ನಮ್ಮ ಅಧಿನಾಯಕಿಯ ಮತವನ್ನು ಸ್ವೀಕರಿಸುತ್ತೇವೆ ಎಂದು ಸಾಮೂಹಿಕವಾಗಿ ಮತಾಂತರ ಆದರೂ ಈ ಕಾಯ್ದೆಯಲ್ಲಿ ಅವಕಾಶವಿದೆ. ಅದೇ ಸೋನಿಯಾ ತಮ್ಮ ಪಕ್ಷದ ಸಂಸದರನ್ನು, ಶಾಸಕರುಗಳನ್ನು ಕರೆದು ನೀವೆಲ್ಲರೂ ನನ್ನ ಮತಕ್ಕೆ ಮತಾಂತರ ಆದರೆ ಮಾತ್ರ ಪಕ್ಷದ ಟಿಕೆಟ್ ಕೊಡುತ್ತೇನೆ ಎಂದು ಆಮಿಷ ಕೊಡಲು ಮಾತ್ರ ಈ ಕಾಯ್ದೆಯಲ್ಲಿ ಅವಕಾಶವಿಲ್ಲ. ಇದನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ಆಮಿಷ ಅಥವಾ ಬಲವಂತದ ಮತಾಂತರಕ್ಕೆ ಹೊಸ ಕಾಯ್ದೆಯಲ್ಲಿ ಅವಕಾಶವಿಲ್ಲ. ಒಂದು ವೇಳೆ ಸೋನಿಯಾ ಕಾಂಗ್ರೆಸ್ಸಿನ ಮಹಾ ಅಧಿವೇಶನ ಕರೆದು ಅಲ್ಲಿ ನೆರೆದಿರುವ ಸಾವಿರಾರು ಕಾಂಗ್ರೆಸ್ ಮುಖಂಡರಿಗೆ ಕೈಸ್ತ ಮತದ ಪ್ರಾಮುಖ್ಯತೆ ಬಗ್ಗೆ ಬೋಧಿಸಿ ಅದರ ನಂತರ ನೀವೆಲ್ಲರೂ ಕೈಸ್ತ ಮತಕ್ಕೆ ಮತಾಂತರ ಆಗಬೇಕು. ಆಗ ನಿಮ್ಮನ್ನು ನಾವು ಅಧಿಕಾರಕ್ಕೆ ಬಂದಾಗ ಉನ್ನತ ಸ್ಥಾನಕ್ಕೆ ಕುಳ್ಳಿರಿಸುವೆವು ಎಂದು ಹೇಳಿದರೆ ಆಗ ಈ ಕಾಯ್ದೆಯ ಅಡಿಯಲ್ಲಿ ಅವರನ್ನು ಬಂಧಿಸಬಹುದು. ಹಾಗೆ ಮಾಡದಿದ್ದರೆ ಕಾಂಗ್ರೆಸ್ಸಿಗರು ಹೆದರುವಂತಹ ಅಗತ್ಯ ಇಲ್ಲ. ಆದರೆ ಬಿಕೆ ಯಾವ ಮಟ್ಟದಲ್ಲಿ ಮತಾಂತರ ನಿಷೇಧ ಕಾಯ್ದೆಯ ಪ್ರತಿಯನ್ನು ಹರಿದು ಬಿಸಾಡಿದರು ಎಂದರೆ ಸದನದ ಹೊರಗೆ ಒಂದು ಗಾಡಿಯಲ್ಲಿ ಅವರನ್ನು ಕುಳ್ಳಿರಿಸಿ ನೇರ ಮತಾಂತರ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅವರನ್ನು ಕ್ರೈಸ್ತನನ್ನಾಗಿ ಮಾಡುತ್ತಾರೇನೋ ಎನ್ನುವ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹುದಕ್ಕೆ ಮುಂದಾದರೆ ಅಂತಹುದಕ್ಕೆ ಮಾತ್ರ ಈ ಕಾಯ್ದೆಯಲ್ಲಿ ಅವಕಾಶ ಇಲ್ಲ. ಅದು ಬಿಟ್ಟು ಬಿಕೆ ನಾನು ನನ್ನದೇ ಖುಷಿಯಲ್ಲಿ ಸೋನಿಯಾ ಅವರು ಅನುಸರಿಸುವ ಮತಧರ್ಮವನ್ನು ಪಾಲಿಸುತ್ತೇನೆ ಎಂದು ಬರೆದುಕೊಟ್ಟರೆ ಅದಕ್ಕೆ ಅವಕಾಶ ಇದೆ. ಆದರೆ ಯಾವಾಗ ಜ್ಞಾನದ ಪ್ರದರ್ಶನಕ್ಕಿಂತ ಬಕೆಟಗಿರಿ ಮುಖ್ಯವಾಗುತ್ತೋ ಆಗ ಮೆದುಳಿಗೆ ಮೋಡ ಕವಿಯುತ್ತದೆ. ಬಿಕೆಗೆ ಆಗಿದ್ದೂ ಅದೇ!
Leave A Reply