ಪರೇಶ್ ಮೇಸ್ತಾ ಕೇಸ್ ಸಿದ್ದುಗೆ ಸಿಕ್ಕಿದ ಬೆನಿಫಿಟ್ ಆಫ್ ಡೌಟ್!
Posted On October 5, 2022
ಪರೇಶ್ ಮೇಸ್ತಾ ಎಂಬ ಯುವಕನ ಅನುಮಾನಾಸ್ಪದ ಸಾವು ಅನೇಕ ಆಯಾಮಗಳನ್ನು ಐದು ವರ್ಗಗಳ ಬಳಿಕ ಮತ್ತೆ ತೆರೆದಿಟ್ಟಿದೆ. ಆವತ್ತು 2017 ರಲ್ಲಿ ಆ ಹುಡುಗ ಸಾಯುವ ಎರಡು ದಿನಗಳ ಮೊದಲು ನಾಪತ್ತೆಯಾಗಿದ್ದ. ಬಳಿಕ ಕೆರೆಯ ಸಮೀಪ ಆತನ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಚಿತ್ರಹಿಂಸೆ ನೀಡಿದ ಕುರುಹುಗಳಿದ್ದವು ಎಂದು ಸುದ್ದಿ ಹಬ್ಬಿತ್ತು. ಹೇಳಿ, ಕೇಳಿ ಹೊನ್ನಾವರ. ಬಿಸಿರಕ್ತದ ಮೊಗವೀರರು ಮತ್ತು ಮೂಲಭೂತವಾದಿಗಳಿಗೆ ನೆಲೆ ನೀಡಿರುವ ಅಲ್ಪಸಂಖ್ಯಾತರು ವಾಸಿಸುವ ಜಾಗ. ಹಿಂದೂ ಹುಡುಗನೊಬ್ಬನಿಗೆ ಮತಾಂಧರು ಹಿಂಸಿಸಿ ಕೊಂದಿದ್ದಾರೆ ಎಂದು ವದಂತಿ ಹಬ್ಬಿತ್ತು. ಇದ್ದದ್ದು ಸಿದ್ಧರಾಮಯ್ಯನವರ ಸರಕಾರ. ರಾಜ್ಯದ ವಿವಿದೆಡೆ ಆಗಲೇ ಕೆಲವು ಹಿಂದೂ ಯುವಕರ ಕೊಲೆಗಳು ಆಗುತ್ತಿದ್ದವು. ಅದರ ಹಿಂದೆ ಜಿಹಾದಿಗಳ ಕೈವಾಡದ ಶಂಕೆ ತನಿಖೆಯಲ್ಲಿ ಪುಷ್ಠಿ ನೀಡುವಂತಿದ್ದವು. ಯಾವಾಗ ಅದೇ ಸರಣಿಯಲ್ಲಿ ಪರೇಶ್ ಕೂಡ ಹತ್ಯೆಗೊಳಗಾದನಾ? ಯಾವಾಗ ಆತನ ಸಾವು ಅವನ ಮನೆಯವರಿಗೂ ಹಲವು ಸಂಶಯಗಳಿಗೆ ಕಾರಣವಾಯಿತಾ, ಸಹಜವಾಗಿ ಅದನ್ನು ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಒಂದು ಹೋರಾಟದ ಭಾಗವನ್ನಾಗಿ ಸ್ವೀಕರಿಸಿರುವುದು ಅದರ ರಾಜಕೀಯ ನಡೆ. ಇಂತಹ ಒಂದು ಪ್ರಕರಣವಾದಾಗ ಬಿಜೆಪಿ ಹಿಂದೂ ಕುಟುಂಬದ ಪರವಾಗಿ ನಿಲ್ಲದಿದ್ದರೆ ಮತ್ಯಾರು ನಿಲ್ಲುವುದು? ಅನಂತ ಕುಮಾರ್ ಹೆಗ್ಡೆ, ಶೋಭಾ ಹಾಗೂ ಕೇಸರಿ ಪಡೆಯ ನಾಯಕರು ಸಿದ್ದು ವಿರುದ್ಧ ಮುಗಿಬಿದ್ದದ್ದರಲ್ಲಿ ಯಾವ ತಪ್ಪು ಕೂಡ ಇಲ್ಲ. ಯಾಕೆಂದರೆ ಬಿಜೆಪಿ ಮಾತನಾಡದೇ ಇದ್ದರೆ ಜನರೇ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಪರೇಶ್ ತಂದೆ ಕೂಡ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರು ಈಗಲೂ ಅದೇ ಅಭಿಪ್ರಾಯ ಹೊಂದಿದ್ದಾರೆ. ಆದರೆ ಅಂತಿಮ ವಿಚಾರಣೆ ಮುಗಿದು ತಮ್ಮ ವರದಿ ನೀಡಿರುವುದು ಸಿಬಿಐ. ಅದು ಹತ್ಯೆ ಅಲ್ಲ, ಅದು ಅಪಘಾತ ಎಂದು ಅವರು ಹೇಳುತ್ತಿದ್ದಾರೆ. ಇಲ್ಲಿ ಕೊಲೆಯಾಗಿರದೇ ಬಿಜೆಪಿಗರು ಸುಳ್ಳು ಸುದ್ದಿ ಹಬ್ಬಿಸಿದರು ಎನ್ನುವುದು ಕಾಂಗ್ರೆಸ್ಸಿಗರ ವಾದ. ಹಾಗಾದರೆ ಬಿಜೆಪಿ ಒಂದು ಅನುಮಾನಾಸ್ಪದ ಸಾವಿನ ಬಗ್ಗೆ ಆವತ್ತು ಮಾತನಾಡಿದ್ದೇ ತಪ್ಪಾ. ಅಷ್ಟಕ್ಕೂ ಬಿಜೆಪಿಯವರು ಅಂದು ಹೇಳಿದ್ದೇನು? ಈ ಪ್ರಕರಣದಲ್ಲಿ ಸತ್ಯಾಂಶ ಹೊರಗೆ ಬರಲೇಬೇಕಾದರೆ ಸಿಬಿಐ ತನಿಖೆಗೆ ಕೊಡಲೇಬೇಕು. ಆದರೆ ಸಿಬಿಐಗೆ ಕೊಡಲು ಅಂದಿನ ಸಿಎಂ ಸಿದ್ದು ಒಪ್ಪಿರಲಿಲ್ಲ. ಆದರೆ ಯಾವಾಗ ಬಿಜೆಪಿಗರ ಪ್ರತಿಭಟನೆ ಜೋರಾಯಿತೋ, ಒಲ್ಲದ ಮನಸ್ಸಿನಿಂದ ನೀಡಲಾಗಿತ್ತು. ಆವತ್ತು ಪರೇಶ್ ಬಿಜೆಪಿಗರ ಪಾಲಿಗೆ ವರವಾಗಿದ್ದ. ಇವತ್ತು ಅದೇ ಪರೇಶ್ ಚುನಾವಣೆಗೆ ಆರು ತಿಂಗಳು ಇರುವಾಗ ಸಿಬಿಐ ಕೊಟ್ಟ ವರದಿಯನ್ನೇ ನಂಬುವುದಾದರೆ ಬಿಜೆಪಿ ಪಾಲಿಗೆ ವಿಲನ್ ಆಗಿದ್ದಾರೆ.
ಇಲ್ಲಿ ಇರುವಂತಹ ಇನ್ನೊಂದು ವಿಷಯ ಏನೆಂದರೆ ಸಿಬಿಐಯನ್ನು ಯಾರು ಹೊಗಳುತ್ತಿದ್ದಾರೆ ಮತ್ತು ಯಾರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದೇ ಆಗಿದೆ. ಒಂದು ಪಕ್ಷದ ಸರಕಾರ ಇರುವಾಗ ಅವರಿಗೆ ಬೇಕಾದ ಹಾಗೆ ಸಿಬಿಐ ವರದಿ, ತೀರ್ಪು ಬರುತ್ತೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ. ಅದಕ್ಕಾಗಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬೇರೆ ಬೇರೆ ಪಕ್ಷದವರು ಅಧಿಕಾರದಲ್ಲಿ ಇದ್ದಾಗ ರಾಜ್ಯದವರು ಸಿಬಿಐ ತನಿಖೆಗೆ ಕೊಡಲು ಹೋಗುವುದಿಲ್ಲ. ಆದರೆ ಆಯಾ ರಾಜ್ಯಗಳ ವಿಪಕ್ಷದಲ್ಲಿ ಬಿಜೆಪಿ ಇದ್ದರೆ ಅವರು ಸಿಬಿಐಗೆ ಕೊಡಲು ಹಟ ಹಿಡಿಯುತ್ತಾರೆ. ಯಾಕೆಂದರೆ ತಮ್ಮ ಸರಕಾರ ಮೇಲೆ ಇರುವಾಗ ತಮ್ಮ ಪರವಾಗಿ ಆದೇಶ, ವರದಿ, ತೀರ್ಪು ಬರಬಹುದು ಎನ್ನುವ “ದೂರಾ”ಲೋಚನೆ. ಇಲ್ಲಿಯೂ ಆವತ್ತು ಸಿದ್ದುಗೆ ಮನಸ್ಸಿರಲಿಲ್ಲ. ಬಿಜೆಪಿಗೆ ಆಶಾಭಾವನೆ ಇತ್ತು. ಇವತ್ತು ಸಿದ್ದುಗೆ ಖುಷಿಯಾಗಿದೆ. ಬಿಜೆಪಿಗೆ ಫೈನಲಿಗೆ ಬಂದು ಟಾಸ್ ಸೋತ ದು:ಖವಾಗಿದೆ. ಹಾಗಾದರೆ ಈ ಪ್ರಕರಣದಲ್ಲಿ ಸಿಬಿಐ ಕೊಟ್ಟ ವರದಿ ಬಿಜೆಪಿ ಪರವಾಗಿ ಯಾಕಿಲ್ಲ. ಒಂದನೇಯದಾಗಿ ಸಾಕ್ಷಾಧಾರಗಳ ಕೊರತೆ. ಸ್ಥಳೀಯ ಮಟ್ಟದ ಪೊಲೀಸರು ಸಂಗ್ರಹಿಸಿದ ಸಾಕ್ಷಿಗಳು ಮತ್ತು ಸಿಬಿಐ ತನಿಖೆಯಲ್ಲಿ ಒಟ್ಟು ಮಾಡಿದ ಸಾಕ್ಷಿಗಳಲ್ಲಿ ವ್ಯತ್ಯಾಸಗಳಿರಬಹುದು. ಒಂದು ಪ್ರಕರಣದಲ್ಲಿ ಅದು ಕೊಲೆನೆ ಆಗಿದೆ ಎಂದು ನಿಖರವಾದ ಸಾಕ್ಷಿಗಳು ಸಿಗದೇ ಹೋದರೆ ಆಗ ಸಿಬಿಐ ಹೇಗೆ ತಾನೆ ಕೊಲೆ ಎಂದು ನಿರ್ಧಾರಕ್ಕೆ ಬರುತ್ತದೆ. ಒಂದು ಕೊಲೆ ಎಂದು ಅನಿಸಿ ಹಾಗೆ ವರದಿ ಕೊಟ್ಟರೆ ಸಾಕ್ಷಿಗಳು ಪೂರಕವಾಗಿ ಸಿಗದೇ ಹೋದರೆ ನ್ಯಾಯಾಲಯ ಛೀಮಾರಿ ಹಾಕುವುದಿಲ್ಲವೇ? ಒಂದು ಕೊಲೆ ಎಂದು ಸಾಕ್ಷಿ ಸಿಕ್ಕಿದ ತಕ್ಷಣ ಅದರ ಜಾಡು ಹಿಡಿದು ಹೊರಟಾಗ ಅದು ಕೊಲೆಗೆ ಏನೂ ಲಿಂಕ್ ಕೊಡದೇ ಹೋದರೆ ಯಾರನ್ನಾದರೂ ಸುಮ್ಮನೆ ಒಳಗೆ ಹಾಕಲು ಆಗುತ್ತಾ? ಬಹುಶ: ಎಲ್ಲವನ್ನು ಗಮನಿಸಿ ಕೊನೆಗೆ ಇದು ಕೊಲೆ ಅಲ್ಲ ಎನ್ನುವ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರಬಹುದು. ನೂರು ಮೀಟರ್ ರೇಸ್ ನಲ್ಲಿ ಕೊನೆಯ ಹತ್ತು ಮೀಟರ್ ಹೆಚ್ಚು ಪ್ರಾಮುಖ್ಯವಾಗಿರುತ್ತದೆ. ಬಿಜೆಪಿಗೆ ಇಲ್ಲಿಯೇ ಹಿನ್ನಡೆಯಾಗಿರುವುದು. ಆದರೆ ಇದನ್ನು ಹೇಗೆ ಪರಿಣಾಮಕಾರಿಯಾಗಿ ತೆಗೆದುಕೊಂಡು ಹೋಗುವಲ್ಲಿ ಕಾಂಗ್ರೆಸ್ ಯಶಸ್ವಿಯಾಗುತ್ತದೆ ಎನ್ನುವುದು ಆರು ತಿಂಗಳ ನಂತರ ಗೊತ್ತಾಗುತ್ತದೆ!!
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply