ಬ್ಯಾನ್ ಆದಾಗ ಪಿಎಫ್ ಐಗಿಂತ ಜಾಸ್ತಿ ನೋವಾಗಿದ್ದು ಸಿದ್ದುಗೆ!!

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಬ್ಯಾನ್ ಆಗುತ್ತಿದ್ದಂತೆ ತಮ್ಮ ಬೆಂಬಲಿಗರಿಗೆ ಅನ್ಯಾಯ ಆಯಿತು ಎನ್ನುವಂತೆ ಆಕ್ರೋಶಕ್ಕೆ ಬಿದ್ದ ಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೂಡ ಬ್ಯಾನ್ ಮಾಡಬೇಕು ಎಂದು ಹಟಕ್ಕೆ ಬಿದ್ದಿದ್ದಾರೆ. ಈ ಮೂಲಕ ಮುಸ್ಲಿಮರ ಅನುಕಂಪವನ್ನು ಗಿಟ್ಟಿಸುವ ಕೊನೆಯ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸಿಗರೇ ಹೇಳುವಂತೆ ಮುಸ್ಲಿಮರಲ್ಲಿ 2-3 ಶೇಕಡಾ ಬಿಟ್ಟರೆ ಉಳಿದವರು ಯಾರೂ ಕೂಡ ಪಿಎಫ್ ಐಯನ್ನು ಬೆಂಬಲಿಸುವುದಿಲ್ಲ. ಆದ್ದರಿಂದ ಪಿಎಫ್ ಐ ಪರ ಸಿದ್ದು ಬ್ಯಾಟ್ ಬೀಸುವುದು ಎಂದರೆ ಖಾಲಿ ಟ್ರಾಕ್ ನಲ್ಲಿ ನಿಂತು ಹಸಿರು ಫ್ಲಾಗ್ ತೋರಿಸಿದ ಸ್ಟೇಶನ್ ಮ್ಯಾನೇಜರ್ ನಂತೆ ಸಿದ್ದು ಗೋಚರಿಸುತ್ತಿದ್ದಾರೆ. ಯಾಕೆಂದರೆ ಸಿದ್ದುವಿಗಿಂತ ಹೆಚ್ಚು ಕಾಂಗ್ರೆಸ್ಸಿಗರಾಗಿದ್ದ ಪ್ರಣಬ್ ಮುಖರ್ಜಿಯವರೇ ಆರ್ ಎಸ್ ಎಸ್ ಕಚೇರಿಗೆ ಭೇಟಿ ಕೊಟ್ಟು ಅದರ ಕಾರ್ಯಗಳನ್ನು ಪ್ರಶಂಸಿಸಿರುವುದು ರಾಷ್ಟ್ರಕ್ಕೆ ಗೊತ್ತಿದೆ. ಆದ್ದರಿಂದ ಸಿದ್ದು ಬಾಲಿಶ ಹೇಳಿಕೆಗಳಿಂದ ಅಂತಹ ಪ್ರಯೋಜನ ಕಾಂಗ್ರೆಸ್ಸಿಗೆ ಆಗುವುದಿಲ್ಲ. ಎಲ್ಲಿಯಾದರೂ ಸಿದ್ದು ಅವರ ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ಸೋ, ಜಾತ್ಯಾತೀತ ಜನತಾದಳವೋ ಎನ್ನುವ ಹೊಸ್ತಿಲಲ್ಲಿ ನಿಂತಿರುವ ಮುಸ್ಲಿಂ ಮತದಾರರಲ್ಲಿ ಒಂದೆರಡು ಶೇಕಡಾ ಜನ ಕಾಂಗ್ರೆಸ್ಸಿಗೆ ಬರಬಹುದು ಎನ್ನುವುದು ಬಿಟ್ಟರೆ ಅದರಿಂದಲೇ ತಾವು ಗೆಲುವಿನ ದಡ ಸೇರುತ್ತೇವೆ ಎನ್ನುವ ಭ್ರಮೆ ಸಿದ್ದುಗೆ ಇರಲೇಬಾರದು. ಯಾಕೆಂದರೆ ಪಿಎಫ್ ಐ ಮುಸ್ಲಿಮರ ಪರ ಹೋರಾಟ ಮಾಡಿರಬಹುದೇ ವಿನ: ಸಂಘದವರಂತೆ ಸಕರಾತ್ಮಕ ಕೆಲಸಗಳನ್ನು ಎಲ್ಲಿಯೂ ಮಾಡಿಲ್ಲ. ಈ ನಡುವೆ ಸಿದ್ದು ಅವರ ಆರ್ ಎಸ್ ಎಸ್ ಬ್ಯಾನ್ ಗೆ ಪ್ರತಿಯಾಗಿ ಕಾಂಗ್ರೆಸ್ಸನ್ನು ಬ್ಯಾನ್ ಮಾಡಬೇಕೆಂದು ಸಂಸದ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ಸಿನವರು ಮಹಾತ್ಮಾ ಗಾಂಧಿಜಿಯವರು ಹಾಕಿಕೊಟ್ಟ ಹಾದಿಯಲ್ಲಿಯೇ ನಡೆಯುವವರಾದರೆ ಸ್ವಾತಂತ್ರ್ಯ ಸಿಕ್ಕಿದ ನಂತರ ಕಾಂಗ್ರೆಸ್ ವಿಸರ್ಜನೆ ಆಗಬೇಕು ಎಂದು ಗಾಂಧೀಜಿ ಬಯಸಿದಂತೆ ನಡೆಯಬೇಕಿತ್ತು. ಆದರೆ ಕಾಂಗ್ರೆಸ್ ವಿಸರ್ಜನೆ ಮಾಡಿದರೆ ನಮ್ಮ ಅಸ್ತಿತ್ವ ಏನು ಎಂದುಕೊಂಡ ನೆಹರೂಗಳು ಅದನ್ನು ಇಲ್ಲಿಯ ತನಕ ಉಳಿಸಿಕೊಂಡು ಬಂದಿದ್ದಾರೆ. ಯಾಕೆಂದರೆ ನಕಲಿ ಗಾಂಧಿಗಳಿಗೆ ರಾಜಕೀಯವೇ ಉದ್ಯೋಗ. ಇನ್ನು ಸರದಾರ್ ವಲ್ಲಭ ಬಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿಯಂತವರು ಇರುವ ತನಕ ಕಾಂಗ್ರೆಸ್ ಸರಿಯಾಗಿತ್ತು. ಅದರ ನಂತರ ಏನಾಯಿತು ಎನ್ನುವುದನ್ನು ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಅವರು ಹೇಳಿದ್ದಾರೆ _ “ಮೂರು ತಲೆಮಾರಿಗೆ ತಿನ್ನುವಷ್ಟು ಮಾಡಿದ್ದೇವೆ. ಅದರ ಋಣ ತೀರಿಸಬೇಕು” ಬಹುಶ: ಮಹಾತ್ಮ ಗಾಂಧೀಜಿಯವರು ಈ ಮಾತನ್ನು ಕೇಳಿದಿದ್ದರೆ ಏನು ಅಂದುಕೊಳ್ಳುತ್ತಿದ್ದರೋ. ಮಹಾತ್ಮ ಗಾಂಧೀಜಿಯವರ ಆತ್ಮ ಈ ಮಾತುಗಳನ್ನು ಕೇಳಿ ಎಷ್ಟು ನೊಂದುಕೊಳ್ಳುತ್ತಿದ್ದೇಯೋ, ದೇವರಿಗೆ ಗೊತ್ತು. ಇದೆಲ್ಲ ಮೊದಲೇ ಗೊತ್ತಿತ್ತೋ ಏನೋ, 75 ವರ್ಷಗಳ ಹಿಂದೆನೆ ಕಾಂಗ್ರೆಸ್ಸನ್ನು ವಿಸರ್ಜಿಸಿ ಎಂದು ಗಾಂಧೀಜಿ ಹೇಳಿದ್ದರು. ಇನ್ನು ಸಿದ್ದು ಹೇಳಿದ ಇನ್ನೊಂದು ಸುಳ್ಳು ಏನೆಂದರೆ ಕಾಂಗ್ರೆಸ್ಸಿನಿಂದ ಸ್ವಾತಂತ್ರ್ಯ ಬಂದಿದೆ. ಮದನ್ ಲಾಲ್ ಧಿಂಗ್ರಾ, ಬಲವಂತ ಫಡಕೆ ಸಹಿತ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಅವಿರತ ಶ್ರಮದಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ಕಾಂಗ್ರೆಸ್ಸಿನಿಂದ ಸ್ವಾತಂತ್ರ್ಯ ಬಂದಿದೆ ಎನ್ನುವ ಮೂಲಕ ಸಿದ್ದು ಅನೇಕ ಧೀಮಂತ ನೈಜ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಶ್ರಮವನ್ನು ಕಡೆಗಣಿಸಿದ್ದಾರೆ. ಸರಿಯಾಗಿ ನೋಡಿದರೆ ಸಿದ್ದು ಕಾಂಗ್ರೆಸ್ಸಿಗರಲ್ಲ. ಅವರು ಜೆಡಿಎಸ್. ಅವರು ಜೆಡಿಎಸ್ ನಲ್ಲಿದ್ದಾಗ ಇದೇ ಕಾಂಗ್ರೆಸ್ಸಿಗರನ್ನು ಅವಮಾನಿಸುತ್ತಿದ್ದರು. ಈಗ ತಮ್ಮ ಸ್ವಪ್ರತಿಷ್ಟೆಗಾಗಿ ಕಾಂಗ್ರೆಸ್ಸಿಗೆ ಬಂದು ಇಲ್ಲಿ ಮುಖ್ಯಮಂತ್ರಿಯಾಗಿ ಈಗ ಎರಡನೇ ಸಲ ಮುಖ್ಯಮಂತ್ರಿಯಾಗಬೇಕೆನ್ನುವ ಉಮ್ಮೇದಿನಿಂದ ಮೂಲ ಕಾಂಗ್ರೆಸ್ಸಿಗರು ಕೂಡ ನಾಚಿಕೆಪಡುವಷ್ಟು ಹೊಗಳುತ್ತಿದ್ದಾರೆ.
ಇನ್ನು ಸಿದ್ದುಗೆ ಅಷ್ಟು ವಯಸ್ಸಾಗಿದ್ದರೂ ತಂದೆ ಮತ್ತು ಕೂಸಿನಲ್ಲಿ ಮೊದಲು ಹುಟ್ಟುವುದು ಯಾರೆಂದು ಗೊತ್ತಿಲ್ಲ. ಆರ್ ಎಸ್ ಎಸ್ ಅದು ಬಿಜೆಪಿಯ ಪಾಪದ ಕೂಸು ಎನ್ನುತ್ತಿದ್ದಾರೆ. ಬಿಜೆಪಿ ಹುಟ್ಟಿದ್ದು ಎಂಭತ್ತರ ದಶಕದಲ್ಲಿ. ಸಂಘ ಜನ್ಮ ತಾಳಿದ್ದು ಸ್ವಾತಂತ್ರ್ಯ ಸಿಗುವ ದಶಕಗಳ ಮೊದಲು. ಹಾಗಾದರೆ ಬಿಜೆಪಿ ದೊಡ್ಡದೋ, ಸಂಘ ದೊಡ್ಡದೋ ಎಂದು ಸಿದ್ದು ಹೇಳಬೇಕು. ಸಿದ್ದು ಹೀಗೆ ಮಾತನಾಡುವುದರಿಂದಲೇ ಅವರ ಮೇಲಿನ ಗೌರವ ಕಡಿಮೆಯಾಗುತ್ತಾ ಹೋಗುವುದು. ಇನ್ನು ಎಸ್ ಡಿಪಿಐ ಪಕ್ಷ ಬಿಜೆಪಿಯ ಬಿ ಟೀಂ ಎಂದು ಮುತಾಲಿಕ್, ಸತ್ಯಜಿತ್ ಹೇಳಿದ್ದಾರೆ ಎಂದು ಸಿದ್ದು ಉಲ್ಲೇಖಿಸುತ್ತಾರೆ. ಅದಕ್ಕಾಗಿ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದನ್ನು ಸಿದ್ದು ಸಿಎಂ ಆಗಿ ಐದು ವರ್ಷ ಅಧಿಕಾರದಲ್ಲಿದ್ದಾಗ ಮಾಡಬಹುದಿತ್ತು. ಈಗ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಮುತಾಲಿಕ್ ಬಿಜೆಪಿ ಸರಕಾರ ಒಳ್ಳೆಯದು ಮಾಡಿದಾಗ ಶಹಭಾಷ್ ಎಂದಿದ್ದಾರೆ. ದಾರಿ ತಪ್ಪಿದಾಗ ಜೋರು ಮಾಡಿದ್ದಾರೆ. ಅವರು ಹೇಳಿದ್ದನ್ನು ಅರಿತು ಒಳ್ಳೆಯ ದಾರಿಯಲ್ಲಿ ಬಿಜೆಪಿ ನಡೆಯಲಿ ಎನ್ನುವುದು ನಮ್ಮ ಆಶಯ. ಹಾಗಂತ ಒಂದು ಸರಕಾರವನ್ನು ನಡೆಸುವುದು ಎಂದರೆ ಅಲ್ಲಿ ಕೇವಲ ಮುತಾಲಿಕ್ ಅಂತವರೇ ಕ್ಯಾಬಿನೆಟ್ ನಲ್ಲಿ ಇದ್ದರೆ ರಾಜ್ಯ ನಡೆಯುವುದು ಕಷ್ಟ. ಹಾಗೆ ಬಿಜೆಪಿಯ ಅತೃಪ್ತರು ಯಾವುದೋ ಕೋಪದಲ್ಲಿ ಹೇಳಿದ್ದನ್ನು ತನಿಖೆ ಮಾಡುತ್ತಾ ಕೂತರೆ ರಾಜ್ಯ ಸರಕಾರ ಅದನ್ನೇ ಮಾಡಬೇಕಾದಿತು. ಕಳೆದ ಬಾರಿ ಎಸ್ ಡಿಪಿಐ ಬಂಟ್ವಾಳ ಹಾಗೂ ಉಳ್ಳಾಲದಲ್ಲಿ ಅಭ್ಯರ್ಥಿ ಹಾಕಿ ಕೊನೆಯ ಕ್ಷಣದಲ್ಲಿ ರೈ ಹಾಗೂ ಖಾದರ್ ಗೆಲ್ಲಬೇಕು ಎಂದು ಚುನಾವಣೆಯ ಸಂದರ್ಭದ ಕೊನೆಯ ದಿನಗಳಲ್ಲಿ ಸೈಲೆಂಟ್ ಆಗಿತ್ತಲ್ಲ, ಅದರ ತನಿಖೆ ಮಾಡಲು ಸಿದ್ದು ಹೇಳಿದರೆ ಒಳ್ಳೆಯದಿತ್ತು!!
Leave A Reply