ಮಹತ್ವಾಕಾಂಕ್ಷಿ ಹರೀಶ್ ಪೂಂಜಾಗೆ ಎಸ್ ಪಿ ಹೇಳಿಕೆಯೇ ಮುಳುವಾಯಿತಾ?

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ತಲವಾರು ದಾಳಿ ನಡೆಸಲು ಯತ್ನಿಸಲಾಗಿತ್ತು ಎಂದು ಸುದ್ದಿ ಹೊರಬಿದ್ದ ದಿನ ಯಾರೆಲ್ಲ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ವಾಲ್ ನಲ್ಲಿ ಹಾಕಿದ್ದರೋ ಅಥವಾ ವಾರ್ತಾ ವಾಹಿನಿಗಳ ಲಿಂಕನ್ನು ಶೇರ್ ಮಾಡಿದ್ದರೋ ಅವರಿಗೆ ಬಂದ ಕಮೆಂಟ್ ಗಳಲ್ಲಿ ಹೆಚ್ಚಿನವು “ಎಂತಹ ನಾಟಕ ಮಾರ್ರೆ” ಎನ್ನುವ ಅರ್ಥದಲ್ಲಿ ಬಂದವೇ ಆಗಿದ್ದವು. ಅದಕ್ಕೆ ಸರಿಯಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅದು ಶಾಸಕರ ಕಾರನ್ನು ಓವರ್ ಟೇಕ್ ಮಾಡಿದ ವ್ಯಕ್ತಿಯೊಬ್ಬ ಮತ್ತು ಶಾಸಕರ ಚಾಲಕನ ನಡುವೆ ನಡೆದ ಗಲಾಟೆ ಮಾತ್ರ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದರು. ಅದು ಟೀಕಿಸುವವರಿಗೆ ಇನ್ನಷ್ಟು ವಿಷಯ ಕೊಟ್ಟಂತೆ ಆಯಿತು. ಹಾಗಾದರೆ ಶಾಸಕರ ವಾಹನವನ್ನು ಯಾರೂ ಕೂಡ ಓವರ್ ಟೇಕ್ ಮಾಡಬಾರದಾ? ಸಾಮಾನ್ಯವಾಗಿ ಎಸ್ಕಾಟ್ ಇರುವ ವಾಹನಗಳು ಬಹಳ ತುರ್ತು ಕಾರ್ಯದ ನಿಮಿತ್ತ ಹೋಗುವುದರಿಂದ ಅವುಗಳನ್ನು ಒವರ್ ಟೇಕ್ ಮಾಡಲು ಯಾರೂ ಕೂಡ ಹೋಗುವುದಿಲ್ಲ. ಆದರೆ ಶಾಸಕರು ಪ್ರಯಾಣಿಸದೇ ಇದ್ದ, ಕೇವಲ ಅವರ ಚಾಲಕ ಚಲಾಯಿಸುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿದರೆ ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ತಮ್ಮ ಅಧಿಕೃತ ಕಾರಿನಲ್ಲಿ ಸಂಚರಿಸದೇ ಗೆಳೆಯರ ಕಾರಿನಲ್ಲಿ ಹೋಗುತ್ತಿದ್ದ ಹರೀಶ್ ಪೂಂಜಾ ಮೇಲೆ ಹಲ್ಲೆ ಮಾಡುವ ಯತ್ನ ನಡೆದಿದೆ ಎಂದು ಚಾಲಕ ಕೊಟ್ಟ ಪೊಲೀಸ್ ದೂರು ಮತ್ತು ಹಲ್ಲೆಗೆ ಬಂದವರು ತಲವಾರು ತೋರಿಸಿ ಕಾರಿನ ಗಾಜಿನ ಮೇಲೆ ಎರಡ್ಮೂರು ಸಲ ಹೊಡೆದರು ಎನ್ನುವುದನ್ನು ಹರೀಶ್ ಪೂಂಜಾ ಇದ್ದಬದ್ದ ಎಲ್ಲಾ ಮಾಧ್ಯಮಗಳ ಮುಂದೆ ನಿಂತು ಹೇಳಿದಾಗ ಪೊಲೀಸ್ ಇಲಾಖೆ ಏನು ಮಾಡಬೇಕಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಅಲ್ಲಿ ನೋಡಿದರೆ ಶಾಸಕ ಪೂಂಜಾ ತಾವು ಹಿಂದೂತ್ವದ ಕೆಲಸ ಮಾಡುತ್ತಿರುವುದರಿಂದ, ಹಿಂದೂ ಕಾರ್ಯಕರ್ತರ ರಕ್ಷಣೆಗೆ ಇರುವುದರಿಂದ ತಮ್ಮ ಮೇಲೆ ದಾಳಿ ಯತ್ನ ಆಗಿರಬಹುದು. ಗಾಡಿ ಕೇರಳದ್ದು ಎಂದು ಹೇಳುತ್ತಿದ್ದರೆ ಇತ್ತ ಪೊಲೀಸ್ ಅಧಿಕಾರಿಗಳು ಓವರ್ ಟೇಕ್ ಗಲಾಟೆ ಎಂದು ತಿಪ್ಪೆ ಸಾರಿಸಿ ಶಾಸಕರ ಮರ್ಯಾದೆಯನ್ನು ಹರಾಜಿಗೆ ಇಟ್ಟುಬಿಟ್ಟಿದ್ದರು. ಹಾಗಾದರೆ ಪೊಲೀಸ್ ಇಲಾಖೆ ಭಾರತೀಯ ಜನತಾ ಪಾರ್ಟಿಯ ಶಾಸಕರನ್ನು ಲಘುವಾಗಿ ತೆಗೆದುಕೊಂಡಿದೆಯಾ?
ಬಹುತೇಕ ಹೌದು. ಇದು ಈ ವಿಷಯದಲ್ಲಿ ಮಾತ್ರ ಅಲ್ಲ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆಯೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಅಕ್ರಮ ಗೋಸಾಗಾಟಕ್ಕೆ ಸಹಾಯ ಮಾಡಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರೇ ತಮ್ಮ ಪಕ್ಷದ ಮೇಲೆ ಉರಿದು ಬೀಳುವಂತೆ ಮಾಡುವಲ್ಲಿ ಪೊಲೀಸರ ಪಾತ್ರ ಇದೆ. ಹರ್ಷ, ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಜೀವ ಬೆದರಿಕೆ ಇದೆ ಎಂದು ಗೊತ್ತಿದ್ದ ಮೇಲೆಯೂ ಅದನ್ನು ಲೈಟಾಗಿ ತೆಗೆದುಕೊಂಡಿದ್ದು ಯಾರು? ಇವತ್ತಿಗೂ ಮಟ್ಕಾ, ಸ್ಕಿಲ್ ಗೇಮ್ ಗಳು ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ನಡೆಯುವ ಅವ್ಯವಹಾರಗಳಿಂದ ಹೋಗುತ್ತಿರುವುದು ಜನಪ್ರತಿನಿಧಿಗಳ ಮರ್ಯಾದೆಯಾದರೂ ಹಣ ಸಂದಾಯವಾಗುತ್ತಿರುವುದು ಯಾವ ಇಲಾಖೆಗೆ? ಮನಸ್ಸು ಮಾಡಿದ್ರೆ ಪೊಲೀಸರು ನಿಲ್ಲಿಸಬಹುದಾಗಿದ್ದರೂ ಮೌನ ವಹಿಸುತ್ತಿರುವುದು ಯಾತಕ್ಕೆ? ಮರಳು ಮಾಫಿಯಾದ ಹಿಂದೆ ಪೊಲೀಸರ ಮೌನ ಯಾಕೆ? ಈಗ ಪೂಂಜಾ ಪ್ರಕರಣದಲ್ಲಿಯೂ ಓವರ್ ಟೇಕ್ ಎಂದು ಮೌನವಾಗಿರುವುದನ್ನು ನೋಡುವಾಗ ಪೊಲೀಸ್ ಅಧಿಕಾರಿಗಳಿಗೆ ಈ ಸರಕಾರ ಅನೇಕ ದಿನ ಉಳಿಯಲ್ಲ ಎಂಬ ಧೈರ್ಯ ಬಂದಂತೆ ಕಾಣುತ್ತದೆ. ಇದೇ ಸಂದರ್ಭದಲ್ಲಿ ಒಂದು ವೇಳೆ ಕಾಂಗ್ರೆಸ್ ಸರಕಾರ ಇದ್ದು, ಆಗ ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕನ ಮೇಲೆ ಹಲ್ಲೆ ಯತ್ನ ಆಗಿದ್ರೆ ಈ ಪೊಲೀಸ್ ಅಧಿಕಾರಿಗಳು ಸುಮ್ಮನೆ ಕೂರುತ್ತಿದ್ದರಾ? ಒಂದು ವೇಳೆ ಓವರ್ ಟೇಕಿಗೆ ಆದ ಗಲಾಟೆಯಾದರೂ ಅದನ್ನು ಹಲ್ಲೆ ಯತ್ನ ಎಂದೇ ಹೇಳುತ್ತಿದ್ದರು. ಎಸ್ ಪಿಯವರೇ ಕಾಂಗ್ರೆಸ್ ಶಾಸಕನ ಮನೆಗೆ ಹೋಗಿ ಕುಳಿತುಬಿಡುತ್ತಿದ್ದರು. ತನಿಖೆ ಆಗುವ ಮೊದಲೇ ಗಡಿಬಿಡಿಯಲ್ಲಿ ಹೇಳಿಕೆ ಕೊಡುತ್ತಿರಲಿಲ್ಲ. ಈಗ ಜನರಿಗೆ ಪೊಲೀಸ್ ಅಧಿಕಾರಿಗಳ ಹೇಳಿಕೆಯಿಂದ ಏನು ಭಾವನೆ ಬರತೊಡಗಿದೆ ಎಂದರೆ ಹರೀಶ್ ಪೂಂಜಾ ನಾಟಕ ಮಾಡಿದ್ದಾರೆ. ಅವರು ಅದರಲ್ಲಿ ನಿಸ್ಸೀಮರು. ಏನಾದರೂ ಒಂದು ಹೇಳಿ ಮಾಧ್ಯಮಗಳಲ್ಲಿ ಮಿಂಚಲು ಅವರಿಗೆ ಗೊತ್ತು ಎಂದು ಜನರಿಗೆ ಅನಿಸುತ್ತದೆ. ಕಳೆದ ಬಾರಿ ಪ್ರವೀಣ್ ನೆಟ್ಟಾರು ಹತ್ಯಾ ಸಂದರ್ಭದಲ್ಲಿ ಬಿಜೆಪಿ ಮುಖಂಡರ ಮೇಲೆ ಜನ ಆಕ್ರೋಶಗೊಂಡ ಸನ್ನಿವೇಶ ನಿರ್ಮಾಣವಾದಾಗಲೂ ಒಬ್ಬ ವ್ಯಕ್ತಿ ಹರೀಶ್ ಪೂಂಜಾ ಅಂತವರು ನಮಗೆ ಬೇಕು ಎಂದು ಹೇಳಿ ಆ ವಿಡಿಯೋ ವೈರಲ್ ಆಗಿತ್ತು. ಈಗ ಈ ಪ್ರಕರಣದಲ್ಲಿ ಎಸ್ ಪಿಯವರ ಹೇಳಿಕೆ ಬಳಿಕ ಜನ ಆ ವೈರಲ್ ವಿಡಿಯೋವನ್ನು ಕೂಡ ಸೆಟ್ಟಿಂಗ್ ಎನ್ನತೊಡಗಿದ್ದಾರೆ.
ಹರೀಶ್ ಪೂಂಜಾ ಮೂಲತ: ವಕೀಲರು. ಅದಕ್ಕಿಂತ ಹೆಚ್ಚಾಗಿ ಬುದ್ಧಿವಂತರು. ಒಬ್ಬ ಶಾಸಕನಾಗಿ ಅವರು ತಮ್ಮ ಕೇತ್ರಕ್ಕೆ ಉತ್ತಮ ಅನುದಾನ ತಂದಿದ್ದಾರೆ. ಈಗಂತೂ ಅವರ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ಆ ಕ್ಷೇತ್ರದಲ್ಲಿ ಬಿಜೆಪಿ ಸಹಜವಾಗಿ ಹೆಚ್ಚು ಸ್ಟ್ರಾಂಗ್ ಆಗಿದೆ. ಸದ್ಯಕ್ಕೆ ಪೂಂಜಾರಿಗೆ ಅಲ್ಲಿ ಸೋಲುವ ಭೀತಿ ಇಲ್ಲ. ಆದರೆ ಶಾಸಕನಾಗಿಯೇ ಇದ್ದರೆ ಸಾಕಾ? ಮಹತ್ವಾಕಾಂಕ್ಷಿ ಹರೀಶ್ ಪೂಂಜಾ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ಹೇಳಿಕೆ ಕೋಪ ನೆತ್ತಿಗೇರುವಂತೆ ಮಾಡಿದೆ!
Leave A Reply