ಹೊಸ ಮಾರುಕಟ್ಟೆ ಆಗುವ ಮೊದಲೇ ಕುಲಾವಿ ಹೊಲೆದ ಕುತಂತ್ರಿ ಯಾರು?

ಮಂಗಳೂರಿನಲ್ಲಿ ನೂತನ ಸೆಂಟ್ರಲ್ ಮಾರುಕಟ್ಟೆ ಕಟ್ಟಡ ಇನ್ನು ಕನಿಷ್ಟ 3 ವರ್ಷಗಳ ನಂತರ ತಲೆಎತ್ತಲಿದೆ. ಆದರೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಎನ್ನುವ ಮಾತಿನಂತೆ ಮೂರು ವರ್ಷಗಳ ನಂತರ ಆಗುವ ಕಟ್ಟಡದಲ್ಲಿ 9 ಬೀಫ್ ಸ್ಟಾಲ್ ಗಳು ಇರಲಿವೆ ಎನ್ನುವ ಮಾಹಿತಿ ಹೊರಗೆ ಬಿದ್ದಿದೆ. ಇದು ಅಧಿಕೃತ ಮಾಹಿತಿಯೋ ಅಥವಾ ಹಿಂದಿನ ಬಾರಿದ್ದು ಈಗ ಲೀಕ್ ಆಗಿರುವುದೋ ಅಥವಾ ಇಂತಹ ಒಂದು ಲಿಸ್ಟ್ ಮಾಡಿದ್ದ ಫೋಟೋ ಹೇಗೆ ಹೊರಗೆ ಬಂತು ಎನ್ನುವುದರ ಬಗ್ಗೆ ಶಾಸಕರು ಮತ್ತು ಮೇಯರ್ ಅವರು ಮೊದಲು ಚರ್ಚೆ ಮಾಡಬೇಕು. ತಮ್ಮ ಗಮನಕ್ಕೆ ತರದೇ ಇಂತಹ ಒಂದು ಲಿಸ್ಟ್ ಮಾಡಿದವರು ಯಾರು? ಅದನ್ನು ಯಾರು, ಯಾಕೆ ಬಹಿರಂಗಗೊಳಿಸಿದರು ಎನ್ನುವುದನ್ನು ಮೊದಲು ಪತ್ತೆ ಮಾಡಬೇಕು. ಇದರಲ್ಲಿ ಮೊತ್ತಮೊದಲಾಗಿ ಕಂಡು ಬರುತ್ತಿರುವುದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ. ಯಾಕೆಂದರೆ ಕಟ್ಟಡಕ್ಕೆ ಭೂಮಿ ಪೂಜೆಯೇ ಆಗದೇ ಅಂಗಡಿಗಳನ್ನು ಹಂಚಲು ಅದೇನು ಆಶ್ರಯ ಯೋಜನೆಯ ವಸತಿ ಸಮುಚ್ಚಯ ಅಲ್ಲ. ಈಗ ಪಾಲಿಕೆಯ ವ್ಯಾಪ್ತಿಯಲ್ಲಿ ಬಡವರಿಗೆ ಸ್ವಂತ ಮನೆ ಕಟ್ಟಿಕೊಡಲು ಅಗತ್ಯವಿರುವಷ್ಟು ಜಾಗದ ಕೊರತೆ ಇರುವುದರಿಂದ ಫ್ಲಾಟ್ ಸಿಸ್ಟಮ್ ವ್ಯವಸ್ಥೆಯಲ್ಲಿ ನಿರ್ಮಾಣಗಳನ್ನು ಮಾಡಲಾಗುತ್ತದೆ. ಹೀಗಿರುವಾಗ ಅಲ್ಲಿ ಫ್ಲಾಟ್ ಕಟ್ಟುವಾಗ ಇಂತಿಷ್ಟು ಜನರಿಗೆ ಎಂದು ಘೋಷಣೆ ಮಾಡುವುದಕ್ಕೂ ಸೆಂಟ್ರಲ್ ಮಾರುಕಟ್ಟೆಯಲ್ಲಿ ಮಳಿಗೆ ಹಂಚುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ಒಂದು ಕಟ್ಟಡ ಕಟ್ಟಿದ ನಂತರ ಎಲ್ಲೆಲ್ಲಿ ತರಕಾರಿ, ಹಣ್ಣುಹಂಪಲು, ಬಟ್ಟೆ, ಚಪ್ಪಲಿ, ಪಾತ್ರೆ, ಮೀನು, ಮಾಂಸ ಎಂದು ನಿರ್ಧಾರ ಮಾಡಿ ಅದನ್ನು ಸೂಕ್ತವಾಗಿ ಹಂಚುವ ಕ್ರಮ ಇದೆ. ಯಾಕೆಂದರೆ ಎಲ್ಲಾ ಅಂಗಡಿಗಳು ಒಂದೇ ರೀತಿ ಮತ್ತು ಅಳತೆ ಇರುವುದಿಲ್ಲ.
ಇದು ಒಂದು ಭಾಗವಾದರೆ ಒಬ್ಬ ಅಂಗಡಿಯವನು ಕಳೆದ 12 ವರ್ಷಗಳಿಂದ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಆ ಅಂಗಡಿಯನ್ನು ಹೊಸದಾಗಿ ಏಲಂ ಮಾಡಬೇಕಾಗುತ್ತದೆ. ಅದರ ನಂತರ ಹೊಸದಾಗಿ ಏಲಂನಲ್ಲಿ ಪಡೆದುಕೊಂಡವರೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಇಲ್ಲಿ ಕೂಡ ಸೆಂಟ್ರಲ್ ಮಾರುಕಟ್ಟೆಯ ಹಳೆ ಮಾರುಕಟ್ಟೆಯ ಕಟ್ಟಡದಲ್ಲಿದ್ದ ಭೀಪ್ ಸ್ಟಾಲ್ ನಲ್ಲಿ ಎಷ್ಟೋ ವರ್ಷಗಳಿಂದ ಅವರವರೇ ಹಳೆ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದಾರೆ. ಹಾಗಿರುವಾಗ ಅಲ್ಲಿ ಏಲಂ ನಡೆಸಲೇಬೇಕು. ಏಲಂ ನಡೆಸುವುದು ಕಡ್ಡಾಯ. ಇನ್ನು ಹೊಸದಾಗಿ ಏಲಂ ಬೀಫ್ ಸ್ಟಾಲ್ ಗಳಿಗೆ ಮಾಡುವುದಿಲ್ಲ ಎಂದು ಪಾಲಿಕೆಯವರು ನಿಶ್ಚಯಿಸಿದರೆ ಮುಗಿಯಿತು. ಯಾಕೆಂದರೆ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಜಾರಿಯಲ್ಲಿದೆ. ಆದ್ದರಿಂದ ಬೀಫ್ ಸ್ಟಾಲ್ ಏಲಂ ಮಾಡಲೇಬೇಕಾಗಿಲ್ಲ ಅಥವಾ ಬೀಫ್ ಸ್ಟಾಲ್ ಸೆಂಟ್ರಲ್ ಮಾರುಕಟ್ಟೆಯಲ್ಲಿ ಮಳಿಗೆ ತೆರೆಯಲೇಬೇಕಾಗಿಲ್ಲ. ಇನ್ನು 12 ವರ್ಷದಿಂದ ವ್ಯಾಪಾರ ಮಾಡುವವರು ತಮಗೆನೆ ಮಳಿಗೆ ಕೊಡಬೇಕು ಎಂದು ಹಟ ಹಿಡಿಯುವಂತಿಲ್ಲ. ಅವರು ಕೋರ್ಟಿಗೆ ಹೋದರೂ ಅದು ನಿಲ್ಲುವುದಿಲ್ಲ.
ಇನ್ನು ಈಗ ಲೀಕ್ ಆಗಿ ವಾಟ್ಸಪ್ ಗಳಲ್ಲಿ ವೈರಲ್ ಆಗುತ್ತಿರುವ ಪಾಲಿಕೆಯ ಅಂಗಡಿಗಳ ಲಿಸ್ಟ್ ಇತ್ತೀಚೆಗೆ ಮಾಡಿದಂತೆ ಕಾಣುವುದಿಲ್ಲ. ಅದು ಬಹುಶ: ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನು ಭಾರತೀಯ ಜನತಾ ಪಾರ್ಟಿಯ ಸರಕಾರ ರಾಜ್ಯದಲ್ಲಿ ಜಾರಿಗೆ ತರುವ ಮೊದಲು ತಯಾರಿಸಿದ ಲಿಸ್ಟ್ ಆಗಿರಬಹುದು. ಈಗ ಹೊಸ ಕಾಯ್ದೆ ಬಂದ ಬಳಿಕ ಯಾವ ಶಾಸಕ, ಮೇಯರ್ ಕೂಡ ಭೀಪ್ ಸ್ಟಾಲಿಗೆ ಅನುಮತಿ ಕೊಡುವುದಿಲ್ಲ. ಆದರೆ ರಾಜಕೀಯದಲ್ಲಿ ಒಬ್ಬ ವ್ಯಕ್ತಿಯ ತೇಜೋವಧೆ ಮಾಡಲು ತುಂಬಾ ದಾರಿಗಳಿವೆ. ಇದು ಅದರಲ್ಲಿ ಒಂದು ಅಷ್ಟೇ!
Leave A Reply