ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!

ಮಂಗಳೂರಿನಲ್ಲಿ ಮಂಗಳಾ ಕ್ರೀಡಾಂಗಣ ಇದೆ. ಅಲ್ಲಿ ಜಿಲ್ಲೆಯ ಅತ್ಲೇಟಿಕ್ ಗಳು ಪ್ರಾಕ್ಟೀಸ್ ಮಾಡಲು ಉತ್ತಮವಾದ ಮೂಲಭೂತ ಸೌಕರ್ಯಗಳಾದ ಟ್ರಾಕ್ ಸಹಿತ ಎಲ್ಲವೂ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ನಾಗರಿಕರು ಬೆಳಿಗ್ಗೆ, ಸಂಜೆ ವಾಕ್ ಮಾಡಲು ಬರುತ್ತಾರೆ. ಜಿಮ್ ಇದೆ. ಬಹಳ ದೊಡ್ಡ ಮೈದಾನವಾಗಿರುವುದರಿಂದ ಮಂಗಳೂರಿನ ಅಷ್ಟೂ ಶಾಲೆ, ಕಾಲೇಜುಗಳ, ಶಿಕ್ಷಣ ಸಂಸ್ಥೆಗಳು ತಮ್ಮ ವಾರ್ಷೀಕ ಕ್ರೀಡಾಕೂಟವನ್ನು ಇಲ್ಲಿಯೇ ನಡೆಸುತ್ತವೆ. ಯಾವುದೇ ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸುವ ಮೊದಲು ಕ್ರೀಡೆ ಮತ್ತು ಯುವಜನ, ಸಬಲೀಕರಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ನೀಡಿ, ನಿಗದಿತ ಮೊಬಲಗನ್ನು ಸಂದಾಯ ಮಾಡಿ ಗ್ರೌಂಡ್ ಬುಕ್ ಮಾಡಬೇಕು. ಹಾಗೆ ಕ್ರೀಡಾಂಗಣವನ್ನು ಬಳಸುವ ಯಾವುದೇ ಸಂಸ್ಥೆಗಳಿಗೆ ಆ ಮೈದಾನದ ಮೇಲೆ ಏನೂ ಪ್ರೀತಿ ಇರುವುದಿಲ್ಲ. ಅವರು ಆವತ್ತು ಬರುತ್ತಾರೆ, ಆಡುತ್ತಾರೆ, ತಾವು ಕುಡಿದ ನೀರು, ಜ್ಯೂಸ್, ಪಾನೀಯಗಳ ಬಾಟಲುಗಳನ್ನು, ಚಾ, ಕಾಫಿ ಕುಡಿದ ಪೇಪರ್, ಪ್ಲಾಸ್ಟಿಕ್ ಗ್ಲಾಸುಗಳನ್ನು, ತಿಂದ ತಿಂಡಿ ಪ್ಯಾಕೇಟುಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಯಾಕೆಂದರೆ ಹೇಗೂ ಇಲಾಖೆ ಹಣ ತೆಗೆದುಕೊಂಡಿರುತ್ತದೆಯಲ್ಲ, ಸ್ವಚ್ಚ ಮಾಡಿಸಲಿ ಎಂಬ ಮನೋಭಾವನೆ ಇರುತ್ತದೆ. ಇದು ಇಲ್ಲಿಯ ತನಕ ನಡೆದುಕೊಂಡು ಬಂದಿರುವ ಕ್ರಮ.
ಈಗ ಮಂಗಳಾ ಕ್ರೀಡಾಂಗಣ ಸ್ಮಾರ್ಟ್ ಸಿಟಿ ಕೈಗೆ ಸಿಕ್ಕಿದ ನಂತರ ಮೇಕಪ್ ಆಗಿ ಚೆಂದಗೊಂಡಿದೆ. ತಟ್ಟನೆ ಒಳಗೆ ಹೋದರೆ 45ರ ಹೆಂಗಸು 25 ರ ಯುವತಿ ಹೇಗೆ ಕಾಣಿಸಬೇಕೋ ಹಾಗೆ ಕಾಣಿಸುತ್ತದೆ. ಈಗಲೂ ಮಂಗಳಾ ಕ್ರೀಡಾಂಗಣ ಈ ಹಿಂದಿನಂತೆ ಸ್ಥಳೀಯ ಸಂಘ, ಸಂಸ್ಥೆಗಳ ನೆಚ್ಚಿನ ಆಯ್ಕೆಯಾಗಿಯೇ ಮುಂದುವರೆದಿದೆ. ಜನ ಈಗಲೂ ಕ್ರೀಡಾಂಗಣ ಬುಕ್ ಮಾಡುತ್ತಾರೆ. ಕಾರ್ಯಕ್ರಮ ಮುಗಿಸಿ ಹೋಗುತ್ತಾರೆ. ತಾವು ತಿಂದ, ಕುಡಿದ ವಸ್ತುಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಅದರ ಫೋಟೋಗಳನ್ನು ಇವತ್ತು ನಾನು ಈ ಜಾಗೃತ ಅಂಕಣದಲ್ಲಿ ಪೋಸ್ಟ್ ಮಾಡಿದ್ದೇನೆ. ಕ್ರೀಡಾಂಗಣದ ಪ್ರವೇಶ ಸ್ಥಳದಲ್ಲಿ, ಗ್ಯಾಲರಿಯಲ್ಲಿ, ಒಳಗೆ ಇರುವ ತೋಡಿನಲ್ಲಿ ಮೋದಿಯವರ ಸ್ವಚ್ಚ ಭಾರತದ ಕಲ್ಪನೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಇದು ಇಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಬರುವ ಮಕ್ಕಳ ಮನಸ್ಸಿನಲ್ಲಿ ಯಾವ ಪರಿಣಾಮ ಬೀಳುತ್ತದೆ. ನೀವು ಇವತ್ತಿನ ಅಂಕಣದಲ್ಲಿ ನಾನು ಹಸಿರು ನೆಟ್ ಒಂದರ ಫೋಟೋವನ್ನು ಪೋಸ್ಟ್ ಮಾಡಿರುವುದನ್ನು ನೋಡಬಹುದು. ಅದಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯ ಇದೆ. ಅದನ್ನು ನೀಟಾಗಿ ಒಳಗೆ ತೆಗೆದಿಟ್ಟು ಹಲವು ವರ್ಷ ಬಳಸುವ ಅವಕಾಶ ಇದೆ. ಆದರೆ ಅದು ಹೇಗೆ ಇದೆ ಎಂದರೆ ಅಲ್ಲೇ ಬಿಸಾಡಿ ಹೋಗುವ ಪರಿಣಾಮದಿಂದ ಇವತ್ತು, ನಾಳೆ ಹಾಳಾಗುವ ಸಾಧ್ಯತೆ ಇದೆ. ನಾನು ಈ ಎಲ್ಲಾ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗೆ ವಾರದ ಮೊದಲೇ ಫೋಟೋ ದಾಖಲೆ ಸಹಿತ ತೋರಿಸಿ ವಿವರಿಸಿ ಬಂದಿದ್ದೇನೆ. ಅದಕ್ಕೆ ಅವರು ” ನೀವು ಹೇಳಿದ್ದು ಸರಿ, ಆದರೆ ಕ್ರೀಡಾಂಗಣವನ್ನು ಸ್ಮಾರ್ಟ್ ಸಿಟಿಯವರು ಕಾಮಗಾರಿ ಮುಗಿಸಿದ ಬಳಿಕ ನಮಗೆ ಹ್ಯಾಂಡ್ ಓವರ್ ಮಾಡಿಲ್ಲ” ಎಂದು ಹೇಳಿದ್ದಾರೆ.
ಈಗ ವಿಷಯ ಇರುವುದು ಯಾವುದೇ ಸಾರ್ವಜನಿಕ ಸಂಘ, ಸಂಸ್ಥೆಗಳಿಗೆ ಕ್ರೀಡಾಕೂಟ ಆಯೋಜಿಸಬೇಕಾದರೆ ಅವರು ಗ್ರೌಂಡ್ ಕೇಳುವುದು ಯಾರ ಬಳಿ? ಸ್ಮಾರ್ಟ್ ಸಿಟಿಯವರ ಬಳಿಯಾ? ಅಲ್ಲ. ಕ್ರೀಡೆ, ಯುವಜನ, ಸಬಲೀಕರಣ ಇಲಾಖೆಯವರ ಬಳಿ. ನಿಮಗೆ ಗ್ರೌಂಡ್ ಕೊಡಲು ಅಧಿಕಾರ ಇದೆ. ಅದಕ್ಕೆ ಸಂಬಂಧಪಟ್ಟ ಫೀಸ್ ತೆಗೆದುಕೊಳ್ಳುವ ಅವಕಾಶ ಇದೆ. ಅದೇ ಕ್ಲೀನ್ ಆಗಿ ಇಡಬೇಕು ಎನ್ನುವ ವಿಷಯ ಬಂದಾಗ ಸ್ಮಾರ್ಟ್ ಸಿಟಿಯವರು ಕಾಮಗಾರಿ ಮುಗಿಸಿ ನಮಗೆ ಹಸ್ತಾಂತರ ಮಾಡಿಲ್ಲ ಎನ್ನುವ ಸಬೂಬು ಯಾಕೆ ಎನ್ನುವುದು ನನ್ನ ಪ್ರಶ್ನೆ. ಯಾವುದೇ ಕಾಮಗಾರಿ ನಡೆದ ನಂತರ ಅದರ ನಿರ್ಮಾಣ ತ್ಯಾಜ್ಯ (ಡೆಬ್ರಿಸ್) ರಾಶಿಗಟ್ಟಲೆ ಒಟ್ಟಾಗಿರುತ್ತದೆ. ಅದನ್ನು ಅಲ್ಲಿಂದ ಸಾಗಿಸಬೇಕಾಗಿರುವುದು ಆ ನಿರ್ಮಾಣ ಹೊಣೆ ಹೊತ್ತ ಸಂಸ್ಥೆ. ಈಗ ಸ್ಮಾರ್ಟ್ ಸಿಟಿಯವರು ಮಂಗಳಾ ಕ್ರೀಡಾಂಗಣದ ಹೊಣೆ ಹೊತ್ತಿರುವುದರಿಂದ ಅದು ಅವರ ಜವಾಬ್ದಾರಿ. ಅದು ಅಲ್ಲಿಯೇ ಇದ್ದರೆ ಅದನ್ನು ಕ್ರೀಡಾ ಇಲಾಖೆ ತೆಗೆಯದಿದ್ದರೆ ನಮಗೆ ಅರ್ಥವಾಗುತ್ತದೆ. ಆದರೆ ಸಾರ್ವಜನಿಕರ ಕಾರ್ಯಕ್ರಮದ ತ್ಯಾಜ್ಯ ಅಲ್ಲಿ ರಾಶಿ ಬೀಳುವುದಕ್ಕೂ ಮೈದಾನ ಹಸ್ತಾಂತರ ಆಗಿಲ್ಲ ಎನ್ನುವ ಕಾರಣವೇ ಬಾಲಿಶತನದ್ದು.
ಈಗ ಒಂದು ವೇಳೆ ಕ್ರೀಡಾಂಗಣದ ಸ್ವಚ್ಚತೆಯನ್ನು ಕಾಪಾಡಲು ಇಬ್ಬರು ಕ್ಲೀನಿಂಗ್ ಸಿಬ್ಬಂದಿಗಳು ಸಾಕಾಗುವುದಿಲ್ಲ ಎಂದಾದರೆ ಈ ಕ್ರೀಡಾಕೂಟಗಳು ಆಯೋಜನೆಯಾಗಿರುವ ದಿನ ಹೆಚ್ಚುವರಿಯಾಗಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಿ. ಹೇಗೂ ನೀವು ಹಣ ತೆಗೆದುಕೊಂಡೇ ಮೈದಾನವನ್ನು ನೀಡುವುದರಿಂದ ತುಂಬಾ ಕೆಲಸಗಳು ಇದ್ದಾಗ ಜನ ಜಾಸ್ತಿ ಹಾಕಿ. ಅಷ್ಟೇ ಅಲ್ಲದೇ ಅಲ್ಲಿ ಎದುರು ಪುಟ್ಟ ಉದ್ಯಾನವನ ಕೂಡ ಇದೆ. ಅದರ ಎಲೆ ಸಹಿತ ಇತರ ತ್ಯಾಜ್ಯಗಳು ಕೂಡ ಅಲ್ಲಿ ರಾಶಿ ಬೀಳುತ್ತದೆ. ಇವರು ಎಲ್ಲಾ ಕಸ, ಕಡ್ಡಿ, ಒಣ ತ್ಯಾಜ್ಯವನ್ನು ಒಟ್ಟು ಮಾಡಿ ಹೊರಗೆ ಇಟ್ಟರೆ ಪಾಲಿಕೆಯ ಗುತ್ತಿಗೆ ಸಂಸ್ಥೆಯ ವಾಹನ ಬಂದು ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ಆದರೆ ಇವರು ಕೆಲವು ಬಾರಿ ಅತೀ ಬುದ್ಧಿವಂತಿಕೆಯಿಂದ ಅಲ್ಲಿಯೇ ಹೊರಗೆ ಕಸಕ್ಕೆ ಬೆಂಕಿ ಕೊಡುತ್ತಾರೆ. ಅದರ ಬೂದಿ ಕೂಡ ಅಲ್ಲಿಯೇ ಬಿದ್ದಿರುತ್ತದೆ. ಅದರ ಫೋಟೋ ಕೂಡ ಹಾಕಿದ್ದೇನೆ. ಕಸಕ್ಕೆ ಬೆಂಕಿ ಕೊಡುವುದು ಕೂಡ ಸರಕಾರದ ನಿಯಮಕ್ಕೆ ವಿರುದ್ಧ. ಆದರೆ ಸರಕಾರದ ಇಲಾಖೆಯೊಂದು ರಾಜಾರೋಷವಾಗಿ ತ್ಯಾಜ್ಯಕ್ಕೆ ಬೆಂಕಿ ನೀಡುತ್ತಿರುವುದು ಜನರಿಗೆ ಯಾವ ಸಂದೇಶ ನೀಡುತ್ತದೆ. ಒಟ್ಟಿನಲ್ಲಿ ಎಲ್ಲವನ್ನು ಜನಪ್ರತಿನಿಧಿಗಳದ್ದೇ ತಪ್ಪು ಎನ್ನಲು ಸಾಧ್ಯವಿಲ್ಲ. ಅವರು ಅನುದಾನ ತಂದು ಅಭಿವೃದ್ಧಿಪಡಿಸಿ ಕೊಟ್ಟಿದ್ದಾರೆ. ಉಳಿಸಿಕೊಳ್ಳುವ ಹೊಣೆ ಅಧಿಕಾರಗಳ ಮೇಲಿರುತ್ತದೆ. ಅದೇನೂ ಅವರು ಉಚಿತವಾಗಿ ಮಾಡುವುದಿಲ್ಲ. ನಮ್ಮ ತೆರಿಗೆಯ ಹಣದಲ್ಲಿ ದೊಡ್ಡ ಮೊತ್ತದ ಸಂಬಳ ತಿಂದು ಸಬೂಬು ಹೇಳುವ ಅಧಿಕಾರಿಗಳಿಗೆ ಮೆಚ್ಚನಾ ಪರಮಾತ್ಮನು!!
Leave A Reply