ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕೆಂದು ಗುರಿ ಇಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್ ಉಚಿತ ಘೋಷಣೆಗಳನ್ನು ಯಥೇಚ್ಚವಾಗಿ ಬಿಡುತ್ತಿದೆ. ಇವರ ಘೋಷಣೆಗಳನ್ನು ನಂಬಿ ಇವರನ್ನು ಅಧಿಕಾರಕ್ಕೆ ತಂದದ್ದೇ ಆದ್ದಲ್ಲಿ ಒಂದೋ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತೆ ಅಥವಾ ಇಷ್ಟು ಉಚಿತಗಳನ್ನು ಕೊಡಲಾಗದೇ ಕಾಂಗ್ರೆಸ್ ಜನರ ಕಣ್ಣಿನಲ್ಲಿ ವಿಲನ್ ಆಗಿ ಮುಂದಿನ ಬಾರಿ ವಿಪಕ್ಷಕ್ಕೂ ಬರಲಾಗದಷ್ಟು ಅವನತಿ ಹೊಂದುತ್ತೆ. ಸದ್ಯ ಇದರಲ್ಲಿ ಯಾವುದು ಆಯ್ಕೆ ಮಾಡುವುದು ಎನ್ನುವುದು ಕಾಂಗ್ರೆಸ್ಸಿಗೆ ಬಿಟ್ಟಿದ್ದು. ಒಂದು ಕಾಲದಲ್ಲಿ ಕಾಂಗ್ರೆಸ್ಸಿನಿಂದ ಲೈಟ್ ಕಂಬ ನಿಂತರೂ ಜನ ಮತ ಹಾಕುತ್ತಾರೆ ಎನ್ನುವಂತಹ ವಾತಾವರಣ ಇತ್ತು. ಈಗ ಮನೆಗೊಂದು ಲೈಟ್ ಕಂಬ ಕೊಟ್ಟರೂ ಜನ ವೋಟ್ ನೀಡುತ್ತಾರಾ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರೋಟಿ, ಕಪಡಾ, ಮಕಾನ್ ಎನ್ನುವುದು ಕಾಂಗ್ರೆಸ್ಸಿನ ಹಳೆ ಘೋಷವಾಕ್ಯ. ಈಗ ಅವರು ನೇರವಾಗಿ ಹಣ ನೀಡುವ ಆಸೆ ಹುಟ್ಟಿಸುತ್ತಿದ್ದಾರೆ. ಇವರು ಈಗ ಮಾಡುತ್ತಿರುವ ಘೋಷಣೆಗಳು ಹೆಚ್ಚುಕಡಿಮೆ ಪಂಜಾಬ್ ನಲ್ಲಿ ಅಧಿಕಾರಕ್ಕೆ ಬರಲು ಆಮ್ ಆದ್ಮಿ ಹಮ್ಮಿಕೊಂಡಿದ್ದ ಉಚಿತದ ಘೋಷಣೆಗಳು. ಅದನ್ನೇ ಕಾಪಿ ಮಾಡಿದ್ದಾರೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಕೂಡ ಇಂತಿಷ್ಟು ಫ್ರೀ ವಿದ್ಯುತ್ ನೀಡುವ ಭರವಸೆ ನೀಡಿದ್ದರು. ಅದರ ಹೊರೆ ಈಗ ಎಷ್ಟು ಬೀಳುತ್ತಿದೆ ಎಂದರೆ ಪಂಜಾಬ್ ಬಜೆಟ್ ಅಕ್ಷರಶ: ತತ್ತರಿಸುತ್ತಿದೆ. ಒಟ್ಟು ಐದು ವರ್ಷ ಅಷ್ಟು ಉಚಿತ ವಿದ್ಯುತ್ ನೀಡಿದರೆ ಪಂಜಾಬ್ ಭವಿಷ್ಯವೇ ಅಂಧಕಾರವಾಗಲಿದೆ. ಇನ್ನು ಇವರು ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ ಕೊಡುವ ವಾಗ್ದಾನ ನೀಡಿದ್ದಾರೆ. ಈ ಘೋಷಣೆಯನ್ನು ಪಂಜಾಬ್ ನಲ್ಲಿ ಆಮ್ ಆದ್ಮಿ ಕೂಡ ಮಾಡಿತ್ತು. ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಾ ಬಂದರೂ ಅವರಿಗೆ ಅದನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಪದವೀಧರ ನಿರುದ್ಯೋಗಿಗಳಿಗೆ 3000 ಮತ್ತು ಡಿಪ್ಲೊಮಾ ನಿರುದ್ಯೋಗಿಗಳಿಗೆ 2000 ಕೊಡುವ ಭರವಸೆ ನೀಡಲಾಗಿದೆ. ಬಹುಶ: ಉದ್ಯೋಗ ಕೊಡುವುದಕ್ಕಿಂತ ನಿರುದ್ಯೋಗ ಭತ್ಯೆ ಕೊಡುವುದು ಹೆಚ್ಚು ಆಕರ್ಷಕ ಎಂದು ಕಾಂಗ್ರೆಸ್ಸಿಗೆ ಅನಿಸಿದೆ.
ಮೂರ್ನಾಕು ದಶಕಗಳ ಹಿಂದೆ ಚುನಾವಣೆ ಎಂದರೆ ಕಥೆಯೇ ಬೇರೆ ಇತ್ತು. ಇವತ್ತಿನ ಹಾಗೆ ಸಾಧ್ಯವಿಲ್ಲದ ಭರವಸೆಗಳನ್ನು ನೀಡಿ ಗೆಲ್ಲುವುದು ಆಗಿರಲಿಲ್ಲ. ಅದಕ್ಕಿಂತ ಮೊದಲು ಚುನಾವಣೆಗಳಲ್ಲಿ ನಿಲ್ಲಲು ಅರ್ಹರಿಗೆ ಒತ್ತಾಯ ಮಾಡಬೇಕಿತ್ತು. ಅದಕ್ಕಿಂತ ಹಿಂದೆ ಚುನಾವಣೆಗೆ ಅಭ್ಯರ್ಥಿಗಳೇ ಇರಲಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಚುನಾವಣೆಗೆ ನಿಲ್ಲಲು ಸ್ಪರ್ಧೆ ಶುರುವಾಗಿದೆ. ಅದರಲ್ಲಿಯೂ ಕೋಟ್ಯಾಂತರ ರೂಪಾಯಿ ಹಣವನ್ನು ಚೆಲ್ಲಿ ಚುನಾವಣೆಗೆ ನಿಲ್ಲಲು ಈಗ ಪೈಪೋಟಿ ಇದೆ. ಸ್ಪರ್ಧಿಸಲು ಜನರೇ ಒಪ್ಪದೇ ಇದ್ದ ಕಾಲದಿಂದ ಹಣ ಬಲ, ತೋಳ್ಬಲವೇ ಮುಖ್ಯವಾಗಿರುವ ಕಾಲಕ್ಕೆ ನಾವು ಬಂದು ತಲುಪಿದ್ದೇವೆ. ಅದರ ನಡುವೆ ಪೂರೈಸಲು ಸಾಧ್ಯವೇ ಇರದ ಆಶ್ವಾಸನೆಗಳು ಜನರ ಮುಂದಿವೆ.
ಇದೆಲ್ಲವನ್ನು ಬಿಟ್ಟು ಕಾಂಗ್ರೆಸ್ ಒಂದು ವೇಳೆ ಜನರ ಆರೋಗ್ಯ, ಶಿಕ್ಷಣ ಕ್ಷೇತ್ರದ ಬಗ್ಗೆ ಯೋಚಿಸಿದರೆ ಅದೆಷ್ಟು ಒಳ್ಳೆಯದಿತ್ತು. ಉದಾಹರಣೆಗೆ ಎಲ್ಲರಿಗೂ ಉಚಿತ ಆರೋಗ್ಯ. ಆರೋಗ್ಯವನ್ನು ಎಲ್ಲರಿಗೂ ಉಚಿತವಾಗಿ ಮಾಡುವ ಮೂಲಕ ಜನಸಾಮಾನ್ಯರು ಎದುರಿಸುವ ಬಹುದೊಡ್ಡ ಸವಾಲನ್ನು ಪರಿಹರಿಸಿದಂತಾಗುತ್ತದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯನ್ನೇ ತೆಗೆದುಕೊಂಡರೂ ಇಲ್ಲಿ 8 ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಒಂದು ಕೂಡ ಸರಕಾರಿ ಮೆಡಿಕಲ್ ಕಾಲೇಜು ಇಲ್ಲ. ಈ ಬಗ್ಗೆ ಯಾವ ಪಕ್ಷ ಕೂಡ ಗಂಭೀರವಾಗಿ ಯೋಚಿಸಿಲ್ಲ. ವೆನಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುವುದರ ಜೊತೆಗೆ ಇನ್ನೊಂದೆರಡು ಉತ್ತಮ ದರ್ಜೆಯ ಸರಕಾರಿ ಆಸ್ಪತ್ರೆಗಳನ್ನು ಆರಂಭಿಸಬೇಕು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಕೂಡ ಇಲ್ಲ. ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಬಿಎಡ್, ಎಂಎಡ್ ಆಗಿರುವವರನ್ನು ಬೋಧಕರನ್ನಾಗಿ ನೇಮಿಸಬೇಕು. ಬಿಎ ಆದವರನ್ನು ಪ್ರಾಧ್ಯಾಪಕರನ್ನಾಗಿ ಮಾಡಿದರೆ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ?
ಇನ್ನು ಕೊನೆಯದಾಗಿ ಇಷ್ಟೆಲ್ಲಾ ಉಚಿತ ಭರವಸೆಗಳನ್ನು ನೀಡಿದ ಪಕ್ಷ ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಅದು ತಾನು ನೀಡಿದ ಭರವಸೆಯನ್ನು ಎಷ್ಟರಮಟ್ಟಿಗೆ ಈಡೇರಿಸಿದೆ ಎಂದು ಪರಿಶೀಲಿಸಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ಅದರಿಂದ ತನಿಖೆ ಮಾಡಿಸಬೇಕು. ಒಂದು ವೇಳೆ ನೀಡಿದ ಉಚಿತ ಭರವಸೆಗಳು ಈಡೇರಿಸದೇ ಇದ್ದ ಆಡಳಿತ ಪಕ್ಷದ ವಿರುದ್ಧ ಸೂಕ್ತ ಕ್ರಮವನ್ನು ಅನುಷ್ಟಾನಕ್ಕೆ ತರಬೇಕು. ಅದರ ರಾಜ್ಯಾಧ್ಯಕ್ಷರಿಗೆ ಆರು ವರ್ಷಗಳ ತನಕ ಯಾವುದೇ ಸದನದ ಸದಸ್ಯತ್ವವನ್ನು ನೀಡದೇ ಇರುವುದು, ಸಿಎಂ ರಾಜೀನಾಮೆ ಪಡೆಯುವುದು ಹೀಗೆ ಮಾಡಿದ್ದಲ್ಲಿ ದೇಶಮಟ್ಟದಲ್ಲಿಯೂ ಆ ಪಕ್ಷದ ಬಂಡವಾಳ ಜನರಿಗೆ ಗೊತ್ತಾಗುತ್ತದೆ. ಮತ್ತೆಂದೂ ಆ ಪಕ್ಷ ಹೀಗೆ ಸುಳ್ಳು ಭರವಸೆ ನೀಡಲು ಬಯಸುವುದಿಲ್ಲ. ಈಗ ಏನಾಗಿದೆ ಎಂದರೆ ಮನಸ್ಸಿಗೆ ಬಂದ ಘೋಷಣೆಗಳನ್ನು ಮಾಡುವುದು. ನಂತರ ಅದನ್ನೇ ಇಟ್ಟುಕೊಂಡು ಅಧಿಕಾರಕ್ಕೆ ಬರುವುದು. ಆ ಬಳಿಕ ಕೊಟ್ಟ ಭರವಸೆಗಳನ್ನು ಮರೆತುಬಿಡುವುದು. ಇದೇ ನಡೆಯುತ್ತಾ ಇದೆ. ಕಾಂಗ್ರೆಸ್ ಪಕ್ಷ ಕೂಡ ಸದ್ಯ ಅದೇ ಹಾದಿಯಲ್ಲಿದೆ. ಮತದಾರ ಎಚ್ಚರದಿಂದ ಇರಬೇಕು. ಯಾಕೆಂದರೆ ಕೊಡುವ ಉಚಿತ ಹಣ ಕಾಂಗ್ರೆಸ್ ಪಾಕೀಟಿನಿಂದ ಹೋಗುವುದಲ್ಲ. ನಮ್ಮ ನಿಮ್ಮ ತೆರಿಗೆಯ ಹಣದ್ದು!
Leave A Reply