ಒಂದು ಅಶ್ಲೀಲ ಫೋಟೊ ಮತ್ತು ಕುತಂತ್ರಿಗಳ ಸವಾಲು!!
ಅಭ್ಯರ್ಥಿಯ ಘೋಷಣೆಗೆ 48 ಗಂಟೆಗಳು ಬಾಕಿ ಇರುವಾಗ ಈ ಮಟ್ಟದ ಅಶ್ಲೀಲ ರಾಜಕೀಯವನ್ನು ಆಡುವುದೇ ನೀಚತನ. ಒಂದು ರೀತಿಯಲ್ಲಿ ಹೀಗೆ ಅಶ್ಲೀಲವಾಗಿ ತಂತ್ರ ಮಾಡುವವರ ಮನಸ್ಥಿತಿ ಯಾವ ಲೆವೆಲ್ಲಿಗೆ ಇಳಿದಿದೆ ಎನ್ನುವುದನ್ನು ಇದು ತೋರಿಸುತ್ತದೆ. ಯಾಕೆಂದರೆ ಇಲ್ಲಿ ಹಾಗೇ ಮಾಡಲು ಹೊರಡುವವರಿಗೆ ತಮ್ಮ ರಾಜಕೀಯ ಭವಿಷ್ಯವನ್ನು ಸುಧೃಡ ಮಾಡುವ ಗಡಿಬಿಡಿ ಇರುತ್ತದೆ. ಇನ್ನೊಬ್ಬರದ್ದು ಹಾಳು ಮಾಡುವ ಹಪಾಹಪಿ ಇರುತ್ತದೆ. ನಡುವಿನಲ್ಲಿ ಸಿಕ್ಕಿಬೀಳುವುದು ಮಾತ್ರ ಆ ಅಮಾಯಕ ಹೆಣ್ಣುಮಗಳು. ಈಗ ಅವಳ ಕುಟುಂಬದ ಪರಿಸ್ಥಿತಿ ಹೇಗಾಗಬೇಡಾ. ಸದ್ಯ ಅವಳು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅದೇ ರೀತಿಯಲ್ಲಿ ಶಾಸಕರ ಆಪ್ತ ಸಹಾಯಕರು ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ನೀಡಿದ್ದಾರೆ. ಈ ವಿಷಯ ಈಗ ಪಕ್ಷ, ಸಂಘ, ಮತದಾರ ಮತ್ತು ರಾಜ್ಯದ ರಾಜಕೀಯ ಹೇಗೆ ನೋಡುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಮೊದಲನೇಯದಾಗಿ ಇದರಿಂದ ಸಂಜೀವ ಮಠಂದೂರು ಅವರ ರಾಜಕೀಯ ಭವಿಷ್ಯ ಹಾಳಾಗುತ್ತದೆ ಎಂದು ಷಡ್ಯಂತ್ರ ಮಾಡಿದವರಿಗೆ ಪಕ್ಷ ಇದನ್ನು ಹೇಗೆ ತೆಗೆದುಕೊಳ್ಳುತ್ತದೆ ಎನ್ನುವುದರ ಮೇಲೆ ಕುತಂತ್ರಿಗಳು ಯಶಸ್ವಿಯಾಗಿದ್ದಾರಾ, ಇಲ್ಲವಾ ಎಂದು ನಿರ್ಧಾರವಾಗುತ್ತದೆ. ಮೊದಲನೇಯದಾಗಿ ಭಾರತೀಯ ಮತದಾರರು ಬೇರೆ ಯಾವ ವಿಷಯವನ್ನಾದರೂ ಸಹಿಸಿಯಾರು. ಆದರೆ ಅನೈತಿಕತೆಯ ವಿಷಯ ಬಂದಾಗ ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದು ಚುನಾವಣೆಯ ಒಂದು ವರ್ಷದ ಮೊದಲು ಬೇಕಾದರೂ ಬರಲಿ, ಮತದಾನದ ಒಂದು ವಾರದ ಮೊದಲು ಬೇಕಾದರೂ ಬರಲಿ.
ಅದು ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಆದ್ದರಿಂದ ಒಬ್ಬ ಜನಪ್ರತಿನಿಧಿ ಹಾದಿ ತಪ್ಪುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ಆತನ ಕ್ಷೇತ್ರದ ಮತದಾರ ಅದನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಹಾಗಂತ ಕ್ಷೇತ್ರದ ಅಭಿವೃದ್ಧಿಯಲ್ಲಿ ತುಂಬಾ ಎತ್ತರಕ್ಕೆ ಏರಿದರೆ ಆಗ ಅದೇ ಮತದಾರ ಯಾರೋ ಷಡ್ಯಂತ್ರ ಮಾಡಿ ಹೀಗೆ ಮಾಡಿರಬಹುದು ಎಂದು ಅದನ್ನು ಪಕ್ಕಕ್ಕೆ ಸರಿಸಲೂಬಹುದು. ಆದರೆ ಅಭಿವೃದ್ಧಿಯಲ್ಲಿ ಮೈನಸ್, ಕಾರ್ಯಕರ್ತರೊಂದಿಗೆ ಸಂಬಂಧ ಚೆನ್ನಾಗಿಲ್ಲದಿರುವುದು, ಮುಖಂಡರೊಂದಿಗೆ ವೈಮನಸ್ಸು ಎಲ್ಲವೂ ಹೆಚ್ಚಾಗಿದ್ದಲ್ಲಿ ಅದಕ್ಕೆ ಇದು ಕೂಡ ಸೇರಿದರೆ ಆಗ ಅದೇ ಮತದಾರ ಜನಪ್ರತಿನಿಧಿಯ ವಿರುದ್ಧ ಕೂಡ ತಿರುಗಬಹುದು. ಈಗ ಸಂಜೀವ ಮಠಂದೂರು ಅವರು ಎನ್ನಲಾದ ವ್ಯಕ್ತಿ ಮತ್ತು ಓರ್ವ ಮಹಿಳೆಯ ಖಾಸಗಿ ಫೋಟೋಗಳು ವೈರಲ್ ಆಗುತ್ತಿರುವುದರಿಂದ ಪಕ್ಷ ಕೂಡ ಇಕ್ಕಟ್ಟಿಗೆ ಬೀಳುತ್ತದೆ. ಈಗಾಗಲೇ ಅವರ ಕ್ಷೇತ್ರದಲ್ಲಿ ಅವರನ್ನು ಬದಲಾಯಿಸಬೇಕೆಂಬ ಕೂಗು ಏನೂ ಜಾಸ್ತಿಯಾಗಿ ಕೇಳಿಬರುತ್ತಾ ಇತ್ತಲ್ಲ, ಅದಕ್ಕೆ ಇನ್ನಷ್ಟು ಪುಷ್ಟಿ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಆ ಹೆಣ್ಣುಮಗಳು ಹೇಳುವ ಹಾಗೆ ಈ ಫೋಟೋ ಅಡಿಟ್ ಮಾಡಲಾಗಿದ್ದು, ತನ್ನ ಚಾರಿತ್ರ್ಯಹರಣ ಮಾಡಲಾಗಿದೆ ಎಂದು ಹೇಳಿದ್ದಾರೆ. ಅದು ಈಗ ನಿಜವಾಗಿಯೂ ತನಿಖೆಗೆ ಒಳಪಡಬೇಕಾಗಿರುವ ವಿಷಯ. ಆದರೆ ಇಂತಹ ವಿಷಯಗಳು ಬರುವುದು ಸೈಬರ್ ಕ್ರೈಂ ಅಡಿಯಲ್ಲಿ. ಭಾರತದ ಸೈಬರ್ ಕಾನೂನುಗಳು ಎಷ್ಟು ಬಲಿಷ್ಟವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರೊಂದಿಗೆ ಇಂತಹ ಪ್ರಕರಣಗಳ ಹಿಂದೆ ಇರುವ ವಿಷ್ನಸಂತೋಷಿಗಳನ್ನು ಹೇಗೆ ಸೆರೆ ಹಿಡಿಯಬೇಕು ಎನ್ನುವುದು ಇನ್ನೊಂದು ವಿಷಯ. ನಿಜವಾದ ಆರೋಪಿಗಳ ತನಕ ನಮ್ಮ ಸೈಬರ್ ಪೊಲೀಸರು ತಲುಪುತ್ತಾರಾ ಎನ್ನುವುದು ಮೂರನೇ ವಿಷಯ. ಕೊನೆಗೆ ವಾಸ್ತವ ಬಹಿರಂಗವಾಗುವಾಗ ಕಾಲ ಮಿಂಚಿ ಹೋಗುತ್ತಾ ಎನ್ನುವುದು ಇನ್ನೊಂದು ಸಂಗತಿ. ಇಂತಹ ವೈರುದ್ಯಗಳು ಇರುವುದರಿಂದ ಇಂಟರನೆಟ್ ನಲ್ಲಿ ಹೀಗೆ ಯಾರದ್ದೋ ಇಮೇಜನ್ನು ಹಾಳು ಮಾಡುವ ತಂತ್ರಗಳು ನಡೆಯುತ್ತಾ ಇರುತ್ತವೆ.
ಒಂದು ವೇಳೆ ಆ ಹೆಣ್ಣುಮಗಳ ಫೋಟೋವನ್ನು ಅನಗತ್ಯವಾಗಿ ಬಳಸಲಾಗಿದೆ ಎಂದು ಸಾಬೀತಾದ್ದಲ್ಲಿ ಹಾಳಾಗಿರುವ ಇಮೇಜನ್ನು ಸರಿ ಮಾಡುವುದು ಯಾರು? ಅದನ್ನು ಆ ಕುತಂತ್ರಿಗಳು ಸರಿ ಮಾಡಬಲ್ಲರಾ? ಅದೇ ರೀತಿಯಲ್ಲಿ ಇದೇ ವಿಷಯ ಇಟ್ಟುಕೊಂಡು ಸಂಜೀವ ಮಠಂದೂರು ಅವರಿಗೆ ಪಕ್ಷ ಟಿಕೆಟ್ ನೀಡದೇ ಇದ್ದಲ್ಲಿ ಅವರ ಹಾಳಾಗುವ ರಾಜಕೀಯ ಭವಿಷ್ಯವನ್ನು ಮತ್ತೆ ಮುಖ್ಯವಾಹಿನಿಗೆ ತರುವುದು ಯಾರು? ಇಂತಹ ವಿಚಾರಗಳು ಕೂಡ ಮುಖ್ಯವಾಗುತ್ತವೆ. ಒಟ್ಟಿನಲ್ಲಿ ಸಂಜೀವ್ ಟ್ರಾಪ್ ಆಗಿದ್ದಾರೆ. ಅವರನ್ನು ಪುತ್ತೂರು ಮಹಾಲಿಂಗೇಶ್ವರನೇ ರಕ್ಷಿಸಬೇಕು
Leave A Reply