ಯೋಗಿ ಆಡಳಿತದಲ್ಲಿ ಮತ್ತೆ ಅಲ್ಲಿಯೇ ಡ್ರಾ,!
ಕೊಲೆಗಡುಕರು, ರೌಡಿಗಳು, ಕ್ರಿಮಿನಲ್ ಗಳು ಸತ್ತರೆ ಯಾರೂ ಅಳುವ ಅವಶ್ಯಕತೆ ಇರುವುದಿಲ್ಲ. ಹೇಗೆ ಸುಂದರ ಉದ್ಯಾನವನದಲ್ಲಿ ಕಳೆ ಬೆಳೆದಾಗ ಅದನ್ನು ಕಿತ್ತು ಬುಟ್ಟಿಯಲ್ಲಿ ಹಾಕಿ ಉದ್ಯಾನವನವನ್ನು ಸ್ವಚ್ಛ ಮಾಡಲಾಗುತ್ತದೆಯೋ ಅದೇ ರೀತಿಯಲ್ಲಿ ಒಂದು ರಾಜ್ಯದಲ್ಲಿ ದುಷ್ಟ ಕೃತ್ಯಗಳನ್ನು ಮಾಡುವವರನ್ನು, ಅಶಾಂತಿ ಸೃಷ್ಟಿಸುವವರನ್ನು ಹೆಡೆಮುರಿ ಕಟ್ಟಿ ಪರಲೋಕಕ್ಕೆ ಕಳುಹಿಸಿದರೆ ಅದರಿಂದ ಯಾರು ತಾನೆ ಅಳಬೇಕು. ಆದರೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಪುತ್ರ ಅಖಿಲೇಶ್ ಯಾದವ್, ಮುಸ್ಲಿಮರ ರಕ್ಷಕ ಎಂದು ತಾನೇ ಅಂದುಕೊಂಡಿರುವ ಓವೈಸಿ ಮತ್ತು ರಾಜಕೀಯ ಜೀವನವನ್ನು ಬಹುತೇಕ ಮುಗಿಸಿರುವ ಮಾಯಾವತಿ ಕಣ್ಣೀರು ಹಾಕಿ ಮಮ್ಮುಲ ಮರಗುತ್ತಿದ್ದಾರೆ. ಹಾಗೆ ಅವರು ಸ್ವತ: ಸಹೋದರಿಯ ಮಗ ಸತ್ತಂತೆ ಅಳಲು ಕಾರಣವಾಗಿರುವುದು ಅಸಾದ್ ಅಹ್ಮದ್ ಸಾವು.
ಅಸಾದ್ ಅಹ್ಮದ್ ಯುಪಿಯಲ್ಲಿ ಐದಾರು ಬಾರಿ ಶಾಸಕ, ಒಂದು ಬಾರಿ ಸಂಸದನೂ ಆಗಿರುವ ಅತೀಕ್ ಅಹ್ಮದ್ ಪುತ್ರ. ನರನಾಡಿಗಳಲ್ಲಿ ರಕ್ತಕ್ಕಿಂತ ಕೌರ್ಯವೇ ಹೆಚ್ಚು ತುಂಬಿದಂತೆ ಕಾಣುವ ಅತೀಕ್ ಅಹ್ಮದ್ ನಟೋರಿಯಸ್ ಪಾತಕಿ. ತನ್ನ ವಿರುದ್ಧ ಯಾರು ಧ್ವನಿ ಎತ್ತುತ್ತಾರೋ ಅವರನ್ನು ಮೊಳಕೆಯಲ್ಲಿಯೇ ಚಿವುಟಿ ಬಿಟ್ಟು ಅದನ್ನು ಈಗಿನ ಪ್ರಜಾಪ್ರಭುತ್ವದಲ್ಲಿ ಕೂಡ ದಕ್ಕಿಸಿಕೊಳ್ಳಲು ಸಾಧ್ಯ ಎಂದು ಇತ್ತೀನವರೆಗೆ ಅಂದುಕೊಂಡಿದ್ದ ಭೂಗತ ಪಾತಕಿ. 2005 ರಲ್ಲಿ ತನ್ನ ವಿರುದ್ಧ ತನ್ನದೇ ಪಕ್ಷದ ಶಾಸಕ ರಾಜು ಪಾಲ್ ಎನ್ನುವವರು ಮಾತನಾಡಿದರು ಎನ್ನುವ ಕಾರಣಕ್ಕೆ ಅವರನ್ನು ಕೊಂದು ಮುಗಿಸಿದ್ದ ಅತೀಕ್ ಅಹ್ಮದ್ ಗೆ ಆವತ್ತು ತಾನು ರಾಜು ಪಾಲ್ ಅವರನ್ನು ಕೊಲ್ಲುವಾಗ ಅಲ್ಲಿಯೇ ಇದ್ದ ವಕೀಲ ಉಮೇಶ್ ಪಾಲ್ ಮುಂದೊಂದು ದಿನ ಸಾಕ್ಷಿಯಾಗಿ ತನ್ನ ಬುಡಕ್ಕೆ ನೀರು ತರಬಹುದು ಎನ್ನುವ ಕಲ್ಪನೆಯಿರಲಿಲ್ಲ. ಆದರೆ ತಮ್ಮ ಕಣ್ಣೇದುರೇ ಶಾಸಕರೊಬ್ಬರು ಶೂಟೌಟ್ ಆದಾಗ ತಾವು ಸುಮ್ಮನೆ ಕುಳಿತುಕೊಂಡರೆ ಆಗುವುದಿಲ್ಲ ಎಂದು ಉಮೇಶ್ ಹೋರಾಟಕ್ಕೆ ಇಳಿಯುವ ಕೆಲಸ ಮಾಡಿದ್ದರು. ಆಗ ಅವರಿಗೆ ಬಂದ ಬೆದರಿಕೆಯ ಕರೆಗಳು ಒಂದೆರಡಲ್ಲ. ಸ್ವತ: ಅತೀಕ್ ಪುತ್ರ ಅಸಾದ್ ಕೂಡ ತಂದೆಯ ವಿರುದ್ಧ ಸಾಕ್ಷ್ಯ ನುಡಿದರೆ ಆವತ್ತೆ ಮೇಲಕ್ಕೆ ಕಳುಹಿಸುವುದಾಗಿ ಬೆದರಿಸಿದ್ದ. ಅದರಿಂದ ಉಮೇಶ್ ಪಾಲ್ ರಾಜ್ಯ ಸರಕಾರಕ್ಕೆ ರಕ್ಷಣೆ ನೀಡಬೇಕು ಎಂದು ವಿನಂತಿಸಿಕೊಂಡಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ರಾಜ್ಯ ಸರಕಾರ ಅವರಿಗೆ ಇಬ್ಬರು ಗನ್ ಮ್ಯಾನ್ ಗಳನ್ನು ನೀಡಿತ್ತು. ಆದರೆ ಇತ್ತೀಚೆಗೆ ಫೆಬ್ರವರಿ 24 ರಂದು ಸಾಕ್ಷ್ಯ ಹೇಳಲು ಮನೆಯಲ್ಲಿ ತಯಾರಾಗುತ್ತಿದ್ದ ಉಮೇಶ್ ಅವರ ಮನೆಗೆ ನುಗ್ಗಿದ ಅಸಾದ್ ಮತ್ತು ಅವನ ಬಂಟರು ಹೊರಗೆ ಕಾವಲಿದ್ದ ಇಬ್ಬರು ಗನ್ ಮ್ಯಾನ್ ಗಳ ಮೇಲೆ ಬಾಂಬ್ ಬಿಸಾಡಿ ಅವರನ್ನು ಗುಂಡಿಕ್ಕಿ ಮನೆಯ ಒಳಗೆ ಇದ್ದ ಉಮೇಶ್ ಮೇಲೆ ಅವರ ತಾಯಿಯ ಎದುರೇ ಗುಂಡಿನ ಮಳೆಗೆರೆದು ಹೋಗಿದ್ದರು. ಅದರಿಂದ ಕೆರಳಿದ್ದು ಸ್ವತ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಬೇರೆ ಮುಖ್ಯಮಂತ್ರಿಗಳಾಗಿದ್ದರೆ ತನಿಖೆ, ವಿಚಾರಣೆ, ಜಾಮೀನು ಹೀಗೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದರೇನೋ. ಆದರೆ ಯೋಗಿ ಆಡಳಿತದಲ್ಲಿ ಅಲ್ಲಿಯೇ ಡ್ರಾ, ಅಲ್ಲಿಯೇ ಬಹುಮಾನ. ಕಾಯುವ ವಿಷಯವೇ ಇಲ್ಲ. ಉಮೇಶ್ ಪಾಲ್ ಅವರನ್ನು ಕೊಂದವರನ್ನು ಇದೇ ಮಣ್ಣಿನಲ್ಲಿ ಹೂತು ಹಾಕಲಾಗುವುದು ಎಂದು ಯೋಗಿ ವಿಧಾನಸಭೆಯಲ್ಲಿ ನಿಂತು ಹೇಳಿದ್ದಷ್ಟೇ ಬಾಕಿ. ಪೊಲೀಸರನ್ನು ಕರೆದು ಬೇರೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಬರಲಿಲ್ಲ. ಪೊಲೀಸರು ಅಸಾದ್ ನನ್ನು ಹಿಡಿಯಲು ಹೊರಟರು. ಅವನ ಗನ್ ಮ್ಯಾನ್ ಪೊಲೀಸರ ಮೇಲೆ ಗುಂಡು ಹಾರಿಸಿದ. ತಮ್ಮ ರಕ್ಷಣೆಗೆ ಪೊಲೀಸರು ಮರುದಾಳಿ ನಡೆಸಿ ಅಸಾದ್ ಹಾಗೂ ಅವನ ಗನ್ ಮ್ಯಾನ್ ಇಬ್ಬರನ್ನು ಮಣ್ಣಿನಡಿ ಹೂತುಬಿಟ್ಟರು. ಈ ಕೊನೆಯ ಮೂರು ವಾಕ್ಯಗಳನ್ನು ಓದಿದ ನಾಗರಿಕರು ನಿಟ್ಟುಸಿರುಬಿಟ್ಟರು. ಉಮೇಶ್ ಪಾಲ್ ತಾಯಿ ಮಗನ ಸಾವಿಗೆ ನ್ಯಾಯ ಕೊಡಿಸಿದ ಯೋಗಿಯನ್ನು ಶ್ಲಾಘಿಸಿದರು.
ಆದರೆ ಅಖಿಲೇಶ್, ಓವೈಸಿ, ಮಾಯಾವತಿಯವರಿಗೆ ಮನೆಮಕ್ಕಳು ಸತ್ತಷ್ಟೇ ದು:ಖವಾಯಿತು. ಇದು ಫೇಕ್ ಎನ್ ಕೌಂಟರ್ ಎಂದು ದಡಬಡಾಯಿಸಿದರು. ಈ ಬಗ್ಗೆ ತನಿಖೆ ಆಗಬೇಕು, ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಕನಿಷ್ಟ ಆರು ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಸ್ಲಿ ಮುಖಂಡರು ಸರತಿ ಸಾಲಿನಲ್ಲಿ ನಿಂತು ಪ್ಯಾನಲ್ ಗಳಲ್ಲಿ ಮೇಜು ಕುಟ್ಟಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಉಮೇಶ್ ಪಾಲ್ ಅವರನ್ನು ಇದೇ ಅಸಾದ್ ಮತ್ತು ಹಂತಕರು ಶೂಟೌಟ್ ಮಾಡಿದಾಗ ಮಾನವ ಹಕ್ಕುಗಳು ನೆನಪಾಗಲಿಲ್ಲವಾ ಎಂದು ಕೇಳಲು ಯಾವ ಹಿಂದೂ ಮುಖಂಡ ಕೂಡ ಸರತಿಯಲ್ಲಿ ನಿಂತು ಮರುಪ್ರಶ್ನೆ ಕೇಳುತ್ತಿಲ್ಲ. ಇದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಎನ್ ಕೌಂಟರ್ ಫೇಕ್ ಅಥವಾ ನೈಜ ಎಂದು ಹೇಳಲು ಅಖಿಲೇಶ್, ಓವೈಸಿ ಅಥವಾ ಮಾಯಾವತಿ ಆ ಘಟನಾ ಸ್ಥಳದಲ್ಲಿ ಇರಲಿಲ್ಲ. ಆದರೂ ತಮ್ಮವರು ಸತ್ತಾಗ ತಕ್ಷಣ ಅದನ್ನು ಫೇಕ್ ಎಂದು ಹೇಳಲು ಓಡೋಡಿ ಬರುತ್ತಾರೆ. ಅದೇ ಈ ಅಸಾದ್ ತನ್ನ ಬೆಂಬಲಿಗರ ಜೊತೆಗೆ ಉಮೇಶ್ ಪಾಲ್ ಮನೆಗೆ ನುಗ್ಗಿ ಗುಂಡಿನ ಮಳೆ ಸುರಿದಾಗ ಯಾವ ಅಖಿಲೇಶಿಗೂ, ಓವೈಸಿಗೂ, ಮಾಯಾವತಿಗೂ ಬಾಯಲ್ಲಿ ಅವಲಕ್ಕಿ ತುಂಬಿದ ಕಾರಣ ಮಾತನಾಡಲು ಆಗಲಿಲ್ಲ. ಒಟ್ಟಿನಲ್ಲಿ ಯುಪಿಯಲ್ಲಿ ಗನ್ ಎತ್ತಿಕೊಳ್ಳಲು ಹೆದರುವ ಕ್ರಿಮಿನಲ್ ಗಳು ಜಾಮೀನು ಸಿಕ್ಕಿದರೂ ಜೈಲಿನಿಂದ ಹೊರಗೆ ಕಾಲಿಡುತ್ತಿಲ್ಲ. ಹೊರಗಿದ್ದವರು ಎಲ್ಲಿಯಾದರೂ ಗುಂಡಿನ ಶಬ್ದ ಕೇಳಿದರೆ ಸಾಕು, ಉಟ್ಟ ಬಟ್ಟೆಯಲ್ಲಿ ಸ್ಟೇಶನ್ ಎದುರು ನಿಂತು ನಾವಲ್ಲ ಎನ್ನುತ್ತಿದ್ದಾರೆ. ಯುಪಿ ಸ್ವಚ್ಚವಾಗುತ್ತಿದೆ. ಬಾಕಿ ಇರುವುದು ಅಖಿಲೇಶ್, ಮಾಯಾವತಿ, ಓವೈಸಿ ಮನಸ್ಸುಗಳು!
Leave A Reply