ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಇಷ್ಟು ಬೇಗ ಅವರ ಒರಗೆಯ ಪುಂಡರು ಆಕ್ಟಿವ್ ಆಗುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಆದರೆ ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆದ್ದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ ಪರಿಣಾಮ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನೊಬ್ಬನ ಹತ್ಯೆಯಾಗಿದ್ದು, ಆತನ ಪತ್ನಿ ಹಾಗೂ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸ್ಪಟ್ಟಿರುವ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ತಾವು ಗೆದ್ದ ಸಂಭ್ರಮವನ್ನು ವಿರೋಧಿಗಳ ಮನೆಯ ಮುಂದೆ ಪಟಾಕಿ ಸಿಡಿಸಿ, ವ್ಯಂಗ್ಯ ಮಾಡಿ ಆಚರಿಸುವ ಅಗತ್ಯ ಇಲ್ಲ. ಹೀಗೆ ಮಾಡಿದರೆ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ಗಲಾಟೆ ಆಗಲಿ ಎನ್ನುವುದೇ ಕಾಂಗ್ರೆಸ್ ನಾಯಕರ ಉದ್ದೇಶ ಇರಬಹುದು. ಹೇಗೂ ಸರಕಾರ ನಮ್ಮದು. ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವುದು ತಲೆಗೆ ಅಂಟಿರಬಹುದು. ಆದ್ದರಿಂದ ಪಟಾಕಿ ಸಿಡಿಸಿದ್ದನ್ನು ಆಕ್ಷೇಪಿಸಿದ ಮಾತ್ರಕ್ಕೆ ಆಯುಧಗಳನ್ನು ಹಿಡಿದು ಮನೆಗೆ ನುಗ್ಗಿ, ಹಲ್ಲೆ ಮಾಡಿ ಕೊಂದು ಹಾಕುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಕಾಂಗ್ರೆಸ್ ಮುಖಂಡರೇ ಹೇಳಬೇಕು.
ಇನ್ನೊಂದು ಪ್ರಕರಣವನ್ನು ತೆಗೆದುಕೊಳ್ಳೋಣ. ಅದು ಭಟ್ಕಳ ತಾಲೂಕು. ಕಾಂಗ್ರೆಸ್ ಮುಖಂಡರು ಗೆದ್ದ ಸಂಭ್ರಮದಲ್ಲಿ ತೇಲಾಡುತ್ತಲೇ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ರಾಮಚಂದ್ರ ನಾಯ್ಕ್ ಅವರ ಮನೆಗೆ ನುಗ್ಗಿ ಹೆಂಡತಿ, ಮಕ್ಕಳು ಎಂದು ನೋಡದೇ ಹಲ್ಲೆ ನಡೆಸಿದ್ದಾರೆ. ಹೇಳಿ, ಕೇಳಿ ಭಟ್ಕಳ ಮೊದಲೇ ಕೋಮುಸೂಕ್ಷ್ಮ ಪ್ರದೇಶ. ಹಾಗಿರುವಾಗ ನಾಮಧಾರಿ ಮುಖಂಡನೊಬ್ಬನ ಮನೆಗೆ ನುಗ್ಗಿ ಹಲ್ಲೆ ಮಾಡಿ ದಾಂಧಲೆ ಎಬ್ಬಿಸುವ ಮೂಲಕ ರಾಜ್ಯದಲ್ಲಿಯೂ ಹೀಗೆ ಮಾಡಲಾಗುತ್ತದೆ ಎನ್ನುವ ಸಂದೇಶವನ್ನು ಸಾರಿದಂತೆ ಕಾಣುತ್ತದೆ.
ಮೂರನೇ ಪ್ರಕರಣ ನೋಡೋಣ. ಬೆಳಗಾವಿ ಉತ್ತರದ ಆರ್ ಪಿಡಿ ಕ್ರಾಸ್ ಬಳಿ ಕಾಂಗ್ರೆಸ್ ಕಾರ್ಯಕರ್ತರ ನಡುವಿನಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಕೂಡ ಕೇಳಿಬಂದಿವೆ. ಇನ್ನು ನಾಲ್ಕನೇ ಘಟನೆಯಲ್ಲಿ ಶಿರಸಿಯ ಮಾರಿಕಾಂಬಾ ದೇವಸ್ಥಾನದ ಬಳಿ ಹಸಿರು ಫ್ಲಾಗ್ ಬೀಸುತ್ತಾ ಇನ್ನು ಮುಂದೆ ಇದೆಲ್ಲಾ ನಮ್ಮದೇ ಎನ್ನುವ ಸಂದೇಶವನ್ನು ಕೆಲವು ಮತಾಂಧರು ನೀಡಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ಬಯಸುತ್ತಿರುವುದೇನು? ಈಗ ಬಿಜೆಪಿಯ ವಿರುದ್ಧ ಜನ ಮತ ಹಾಕಿ ಕಾಂಗ್ರೆಸ್ಸನ್ನು ಗೆಲ್ಲಿಸಿರಬಹುದು. ಅದರ ಅರ್ಥ ಉತ್ತಮ ಆಡಳಿತ ನೀಡಿ, ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಿ, ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಿ ಎನ್ನುವ ಕಾರಣಕ್ಕೆ ಮಾತ್ರ ಎನ್ನುವುದನ್ನು ಕಾಂಗ್ರೆಸ್ ಕಾರ್ಯಕರ್ತರು ಮರೆಯಬಾರದು. ಕರ್ನಾಟಕದ ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಏನು ಬೇಕಾದರೂ ಮಾಡಿ ಎಂದು ಬರೆದುಕೊಟ್ಟಿಲ್ಲ. ಚುನಾವಣೆಯ ಸಮಯದಲ್ಲಿ ಹೆಚ್ಚೆಂದರೆ ಮೂರ್ನಾಕು ವಾರ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ, ಆರೋಪ, ಪ್ರತ್ಯಾರೋಪಗಳನ್ನು ಮಾಡಿ ಮತದಾರರನ್ನು ತಮ್ಮ ಕಡೆ ಸೆಳೆಯುವ ಪ್ರಯತ್ನ ಮಾಡುತ್ತವೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡ ಮನೆಮನೆ ಪ್ರಚಾರ ಮಾಡಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಹರಸಾಹಸ ಪಡುತ್ತಾರೆ. ಮತದಾರರು ತಮಗೆ ಇಷ್ಟ ಇರುವ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿಬಿಡುತ್ತಾರೆ. ಅದೆಲ್ಲವೂ ಫಲಿತಾಂಶ ಬರುವ ತನಕ ಮಾತ್ರ. ಅದರ ನಂತರ ಆ ಪಕ್ಷದವರು, ಈ ಪಕ್ಷದವರು ಎನ್ನುವ ಮನೋಭಾವನೆಯನ್ನು ದ್ವೇಷ ಸಾಧನೆಗಾಗಿ ಯಾರೂ ಇಟ್ಟುಕೊಳ್ಳಬಾರದು. ಅವನು ಹಿಂದೂ, ಕೇಸರಿ ಪಾಳಯದವನು, ಅವನಿಗೆ ಬುದ್ಧಿ ಕಲಿಸೋಣ, ನಾಲ್ಕು ಬಿದ್ದರೆ ಸರಿಯಾಗುತ್ತಾನೆ ಎಂದು ಯುದ್ಧಕ್ಕೆ ಹೊರಡುವಂತೆ ಹೋಗಿ ಗಲಾಟೆ ಮಾಡಿ ಹಲ್ಲೆ ಮಾಡಿ ಸಾವು, ನೋವು, ಆಸ್ತಿಪಾಸ್ತಿ ನಷ್ಟಕ್ಕೆ ಯಾರೂ ಮುಂದಾಗಬಾರದು. ಯಾಕೆಂದರೆ ಒಂದೇ ಊರಿನಲ್ಲಿ ಇದ್ದ ಮೇಲೆ ಇವತ್ತು ಚುನಾವಣೆ ಬರುತ್ತೆ, ಹೋಗುತ್ತೇ ಹಾಗಂತ ಪರಸ್ಪರ ದ್ವೇಷ ಸಾಧಿಸುತ್ತಾ ಕುಳಿತರೆ ಒಬ್ಬರ ಮುಖ ಇನ್ನೊಬ್ಬರು ನೋಡಬೇಕಲ್ಲವೇ?
ಗೆದ್ದವರು ಐದು ವರ್ಷ ನಿತ್ಯ ಯಾರಿಗೂ ಊಟ, ಖರ್ಚಿಗೆ ಎಂದು ಹಣ ನೀಡುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಕೆಲವು ದಿನ ಕಾರ್ಯಕರ್ತರನ್ನು ನೋಡಿಕೊಳ್ಳಬಹುದು. ಆದರೆ ಅದು ಶಾಶ್ವತವಲ್ಲ. ಕೊನೆಗೆ ಸಹಾಯಕ್ಕೆ ಬೀಳುವವರು ನೆರೆಹೊರೆಯವರು ಮಾತ್ರ. ಅದನ್ನು ಅರ್ಥ ಮಾಡಿಕೊಳ್ಳಬೇಕೆ ವಿನ: ಶಾಸಕನನ್ನು ನಂಬಿಕೊಂಡು ದಾಂಧಲೆ ಮಾಡಿದರೆ ನೀವೆ ನಿಮ್ಮ ಭವಿಷ್ಯವನ್ನು ಹಾಳುಗೆಡವಲು ಹೊರಟಿದ್ದೀರಿ ಎಂದು ಅರ್ಥ. ಆದರೆ ಇದು ಎಲ್ಲರಿಗೂ ಅರ್ಥವಾಗಲ್ಲ. ಕೆಲವರಿಗೆ ಪಕ್ಷ, ನಾಯಕರು, ಸರಕಾರ ಎಂದು ಭ್ರಮೆ ಇರುತ್ತದೆ. ಅಂತವರು ತಮ್ಮ ಮುಖಂಡರಿಗೆ ಖುಷಿ ಮಾಡಲು ಇನ್ನೊಂದು ಪಕ್ಷದ ಕಾರ್ಯಕರ್ತರಿಗೆ ಹೊಡೆದು ಹೀರೋ ಆಗಲು ಹೊರಡುತ್ತಾರೆ. ಇಂತವರಿಗೆ ಹೀಗೆ ಮಾಡಬೇಡಿ ಎಂದು ಹೇಳುವ ದೊಡ್ಡ ಜವಾಬ್ದಾರಿ ಕಾಂಗ್ರೆಸ್ ಮುಖಂಡರ ಮೇಲಿದೆ. ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿರುವ ಸಿದ್ದು, ಡಿಕೆಶಿಯವರು ತಮ್ಮ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಬೇಕು. ಬಿಜೆಪಿಯವರಿಗೆ ಹೊಡೆಯುವುದನ್ನು ಕಾಂಗ್ರೆಸ್ ಬಯಸುವುದಿಲ್ಲ ಎಂದು ಕರೆಕೊಡಬೇಕು. ಅಂತವರು ಕಾಂಗ್ರೆಸ್ ಹೆಸರು ಹಾಳು ಮಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿಬಿಡಬೇಕು. ಒಂದು ವೇಳೆ ಇದನ್ನು ಕಾಂಗ್ರೆಸ್ ಮಾಡದಿದ್ದರೆ ಅವರು ಕೂಡ ಇದಕ್ಕೆ ಮೌನ ಸಮ್ಮತಿ ಸೂಚಿಸಿದ್ದಾರೆ ಎಂದು ರಾಜ್ಯದ ಜನ ತೀರ್ಮಾನಿಸುತ್ತಾರೆ. ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ವಿಶೇಷವಾಗಿ ಅಧಿಕಾರ!!
Leave A Reply