ಡಿವಿ ಕೊಟ್ಟಿದ್ದ ಜಾಗದಲ್ಲಿ ಕಾಂಗ್ರೆಸ್ ಕಚೇರಿ!
ಯಾವುದೇ ಒಂದು ಸರಕಾರಕ್ಕೆ ಹನಿಮೂನ್ ಪಿರೀಡ್ ಎಂದು ಇದ್ದೇ ಇರುತ್ತದೆ. ನಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸ್ವರ್ಗವನ್ನೇ ಧರೆಗೆ ಇಳಿಸುತ್ತೇವೆ ಎಂದು ಹೇಳುವ ಯಾವುದೇ ರಾಜಕೀಯ ಪಕ್ಷಕ್ಕೂ ಅದು ಮಾಡಲು ಸಾಧ್ಯವಿಲ್ಲ ಎನ್ನುವುದು ಆಂತರಿಕವಾಗಿ ಗೊತ್ತೇ ಇರುತ್ತದೆ. ಮತದಾರರಿಗೂ ಅದು ತಕ್ಷಣಕ್ಕೆ ಸಾಧ್ಯವಿಲ್ಲ ಎನ್ನುವ ಅರಿವು ಇದ್ದೇ ಇರುತ್ತದೆ. ಆದ್ದರಿಂದ ನೂತನ ಸರಕಾರ ಟೇಕ್ ಆಫ್ ಆಗುವ ಅವಕಾಶವನ್ನು ವಿಪಕ್ಷಗಳು ಕೂಡ ಕೊಡಬೇಕು. ಆದರೆ ಈ ಬಾರಿಯ ಸಿದ್ದು ಸರಕಾರಕ್ಕೆ ಅಂತಹ ಅವಕಾಶ ಸಿಗಲಿಲ್ಲ. ಹಾಗಂತ ಕಾಂಗ್ರೆಸ್ ಸರಕಾರದ ಮೇಲೆ ಕನಿಕರ ಎಂದಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯ ನಾಯಕರು ಮೇಲಿನಿಂದ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಆರೋಪಗಳು ಮಾಡುತ್ತಾ ಹೋದಂತೆ ಸಿದ್ದು ಸರಕಾರ ಇವರು ಮಾಡಿದ ಆರೋಪಗಳೆಂಬ ಇಟ್ಟಿಗೆಗಳನ್ನೇ ಬಳಸಿ ಗೋಡೆಯನ್ನು ಕಟ್ಟಲು ಮುಂದಾಯಿತು. ಒಂದು ವೇಳೆ ಎಲ್ಲವೂ ಈಗಲೇ ಸರಿಯಾದರೆ ಇನ್ನು ಬಿಜೆಪಿಗೆ ಏನಿದೆ ವಿಷಯ? ಇವರು ಹೇಳಿದ್ದನ್ನು ಅವರು ಮಾಡುತ್ತಾ ಹೋದರು. ಅಲ್ಲಿಗೆ ಗ್ಯಾರಂಟಿಗಳು ಒಂದೊಂದಾಗಿ ಹೇಗೋ ಒಂದು ರೀತಿಯಲ್ಲಿ ಬಹುತೇಕ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಜಾರಿಗೆ ತರಲು ಕಾಂಗ್ರೆಸ್ ಸರಕಾರ ಪ್ರಯತ್ನಪಡುತ್ತಿದೆ. ಒಂದು ವಿಪಕ್ಷವಾಗಿ ಬಿಜೆಪಿ ಸರಿಯಾದ ಕೆಲಸ ಮಾಡುತ್ತಿದೆ. ಆದರೆ ಅದನ್ನು ಮಾಡಿದ ಅವಧಿ ತುಂಬಾ ಬೇಗವಾಯಿತು. ಒಂದು ವೇಳೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಈಡೇರಿಸಲು ನಿರ್ಲಕ್ಷ್ಯ ತೋರಿ ಅದು ಜನಾಕ್ರೋಶವಾಗಿ ಪರಿವರ್ತನೆ ಆಗಿ ಆಗ ಬಿಜೆಪಿ ಅದರ ನೇತೃತ್ವವನ್ನು ವಹಿಸಿಕೊಂಡಿದ್ದರೆ ಆಗ ಅದರ ಪರಿಣಾಮವೇ ಬೇರೆಯಾಗುತ್ತಿತ್ತು. ಆದರೆ ಅಷ್ಟು ಸಮಯ ಕೊಟ್ಟಿಲ್ಲ ಎನ್ನುವುದಕ್ಕಿಂತ ಒಂದು ವರ್ಷದ ಒಳಗೆ ಲೋಕಸಭಾ ಚುನಾವಣೆಗಳು ಬರುವುದರಿಂದ ಸಮಯ ಎರಡೂ ಪಕ್ಷಗಳಿಗೆ ಇಲ್ಲ. ಅದರ ನಡುವೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಗಳು ಕೂಡ ಬರಲಿವೆ. ಆದ್ದರಿಂದ ಪ್ರಾಕ್ಟೀಸ್ ಮ್ಯಾಚ್ ಇಲ್ಲದೆ ಬಿಜೆಪಿ, ಕಾಂಗ್ರೆಸ್ ಚುನಾವಣೆಗೆ ಹೋಗಲಿದೆ. ಇಂತಹ ಸಂಕೀರ್ಣ ಕಾಲಾವಧಿಯಲ್ಲಿ ಬಿಲ್ಲು, ಬಾಣಗಳನ್ನು ಮೊನಚು ಮಾಡುವ ಸಮಯ ಇಬ್ಬರಿಗೂ ಇಲ್ಲ. ಮೇಲ್ನೋಟಕ್ಕೆ ಇದು ಮುಂದಿನ ಸಮರದ ಆರಂಭ ಎಂದು ಪರಿಗಣಿಸಲ್ಪಟ್ಟರೂ ಹಿಂದಿನ ಸಮರದ ಜಿಡ್ಡು ಯುದ್ಧಭೂಮಿಯಿಂದ ಆರುವ ಮೊದಲೇ ಮುಂದಿನ ಸಮರದ ರಕ್ತ ಬೀಳುವುದು ರಾಜ್ಯದ ಜನತೆಯ ದೃಷ್ಟಿಕೋನದಿಂದ ಅಸಹ್ಯಕರ.
ಡಿವಿ ಕೊಟ್ಟಿದ್ದ ಜಾಗದಲ್ಲಿ ಕಾಂಗ್ರೆಸ್ ಕಚೇರಿ!
ಇನ್ನು ರಾಜ್ಯ ಸರಕಾರದ ಸಚಿವರು ಹಿಂದಿನ ಬಿಜೆಪಿ ಸರಕಾರ ತನ್ನ ಪರಿವಾರ ಸಂಘಟನೆಗಳಿಗೆ ಹಿಂದೆ ಕೊಟ್ಟಿರುವ ಭೂಮಿಗಳನ್ನು ತನಿಖೆ ಮಾಡಿ ಅದನ್ನು ಮರುಪರಿಶೀಲಿಸುವ ಬಗ್ಗೆ ತೀರ್ಮಾನ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಇರಲಿ, ಒಂದು ವೇಳೆ
ಎಲ್ಲಿಯಾದರೂ ಅಧಿಕಾರದ ದುರುಪಯೋಗ ಆದರೆ ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅತ್ಯಗತ್ಯ. ಆದರೆ ಇಲ್ಲಿ ದ್ವೇಷದ ರಾಜಕಾರಣ ಮಾಡಿದರೆ ಕಾಂಗ್ರೆಸ್ ತಾನು ಕೂಡ ಗಾಜಿನ ಮನೆಯಲ್ಲಿ ಕುಳಿತು ಕಿಟಕಿಯಿಂದ ಬೇರೆಯವರಿಗೆ ಕಲ್ಲು ಬಿಸಾಡುತ್ತಿದ್ದೇನೆ ಎಂಬ ವಿಷಯವನ್ನು ಮರೆಯಬಾರದು. ಯಾಕೆಂದರೆ ಇದಕ್ಕೆ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ನೂತನ ಕಟ್ಟಡವೇ ಸಾಕ್ಷಿ. ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ನೂತನ ಕಾಂಗ್ರೆಸ್ ಕಚೇರಿಗೆ ಜಾಗ ಕೊಟ್ಟದ್ದು ಆಗ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡ. ಆದರೆ ಜಾಗ ಕೊಟ್ಟಿದ್ದು ಕಾಂಗ್ರೆಸ್ ಹೊಸ ಕಚೇರಿ ಕಟ್ಟಲಿ ಎನ್ನುವ ಕಾರಣಕ್ಕೆ ಅಲ್ಲ. ಕಾಂಗ್ರೆಸ್ಸಿನ ಇಂದಿರಾ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಗಾಗಿ ಜಾಗವನ್ನು ನೀಡಲಾಗಿತ್ತು. ಕಾಂಗ್ರೆಸ್ ತನ್ನ ಟ್ರಸ್ಟಿಗಾಗಿ ನೀಡಿದ ಜಾಗದಲ್ಲಿ ಕಚೇರಿಯ ಭವ್ಯ ಸಂಕೀರ್ಣವನ್ನು ಕಟ್ಟಿದೆ. ಅಷ್ಟೇ ಅಲ್ಲದೆ ಅಲ್ಲಿ ಬ್ಯಾಂಕೊಂದರ ಎಟಿಎಂ ಕೂಡ ಕಾರ್ಯಾಚರಿಸುತ್ತಿದೆ. ಹಾಗಾದರೆ ಸಮಾಜಸೇವೆ(?) ಎನ್ನುವ ಹೆಸರಿನಲ್ಲಿ ರಚನೆಯಾಗಿರುವ ಟ್ರಸ್ಟ್ ಇದರ ಜಾಗದಲ್ಲಿ ಕಚೇರಿ ಕಟ್ಟಿಸಿಕೊಂಡು ಅದನ್ನು ವಾಣಿಜ್ಯ ವ್ಯವಹಾರಕ್ಕೂ ಬಳಸಿಕೊಂಡು ಈಗ ಹಿಂದಿನ ಸರಕಾರದ ವಿರುದ್ಧ ಚಾಟಿ ಬೀಸುತ್ತೇವೆ ಎನ್ನುವುದು ಎಷ್ಟು ಸರಿ? ಇದು ಕಾಂಗ್ರೆಸ್ಸಿಗೆ ಗೊತ್ತಿರಲಿಲ್ಲವೇ?
ಕರೆಂಟ್ ದರ ಹಿಂದಕ್ಕೆ ಪಡೆದುಕೊಳ್ಳುವುದು ಕಷ್ಟವೇ?
ಇನ್ನು ಈ ತಿಂಗಳಿನಿಂದ ವಿದ್ಯುತ್ ದರ ಕೂಡ ಹೆಚ್ಚಾಗಿದೆ. ಕಾಂಗ್ರೆಸ್ ಸರಕಾರಕ್ಕೆ ಕೇಳಿದರೆ ಅದು ಬಿಜೆಪಿ ಸರಕಾರ ಇದ್ದಾಗ ಮಾಡಿದ್ದು, ಅದನ್ನು ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಕರೆಂಟ್ ವಿಷಯದಲ್ಲಿ ಬಿಜೆಪಿ ಸರಕಾರ ಮಾಡಿದ್ದನ್ನು ನೀವು ಈಗ ಹಿಂದಕ್ಕೆ ಪಡೆದುಕೊಳ್ಳಲು ಸಾಧ್ಯವಿಲ್ಲದಿದ್ದರೆ ಅದೇ ಬಿಜೆಪಿ ಸರಕಾರ ಜಾರಿಗೊಳಿಸಿದ ಕಾಮಗಾರಿಗಳ ಅನುದಾನ, ಅಭಿವೃದ್ಧಿ ಯೋಜನೆಗಳ ಫಂಡ್ ಘೋಷಣೆ, ಯಾರಿಗೋ ಜಾಗವನ್ನು ನೀಡಲಾಗಿದೆ ಎಂದು ನೀವು ಹೇಳುತ್ತಿರುವುದು, ಪಠ್ಯಪುಸ್ತಕಗಳ ಪಾಠವನ್ನು ಕೈಬಿಡುವುದು, ಇನ್ನು ಮುಂದಕ್ಕೆ ಹೋಗಿ ಗೋಹತ್ಯಾ ನಿಷೇಧ ಕಾಯ್ದೆ, ಮತಾಂತರ ಕಾಯ್ದೆ ಹೀಗೆ ಬಿಜೆಪಿ ಸರಕಾರದ ಅಷ್ಟೂ ಕಾರ್ಯಕ್ರಮಗಳನ್ನು ಇಂಚಿಂಚಾಗಿ ಹಿಂದಕ್ಕೆ ಪಡೆಯುತ್ತಿರಿ ಎಂದಾದರೆ ಏರಿದ ಕರೆಂಟ್ ದರ ಮಾತ್ರ ಹಿಂದಕ್ಕೆ ಪಡೆದುಕೊಳ್ಳುವುದು ಕಷ್ಟನಾ?
ಒಟ್ಟಿನಲ್ಲಿ ಕಾಂಗ್ರೆಸ್ ಎಡವಲು ಜಾಗ ಮತ್ತು ಸಮಯವನ್ನು ಬಿಜೆಪಿ ಕೊಡಬೇಕು. ಎಡವುವ ಮೊದಲೇ ಎಚ್ಚರಿಸಿದರೆ ಅದರ ಲಾಭ ಸಿಗುವುದು ಕಾಂಗ್ರೆಸ್ಸಿಗೆ. ಇನ್ನು ಕಾಂಗ್ರೆಸ್ ಕೂಡ ಕೆಲವು ಸೂಕ್ಷ್ಮ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಇಲ್ಲದೇ ಹೋದರೆ ಬೇರೆಯವರ ಜಮಖಾನೆ ಎಳೆಯಲು ಹೋಗಿ ತಾನೇ ನಿಂತ ಭೂಮಿ ಕುಸಿದ ಪರಿಸ್ಥಿತಿ ಕಾಂಗ್ರೆಸ್ಸಿಗೆ ಬರಬಹುದು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನ ಪಡೆಯಲು ಹೋಗಿ ಎರಡೂ ಸಿಗದ ಪರಿಸ್ಥಿತಿಯನ್ನು ಎರಡೂ ಪಕ್ಷಗಳು ಅನುಭವಿಸುವ ಮೊದಲು ರಣತಂತ್ರ ಸೂಕ್ತವಾಗಿರಬೇಕು!
Leave A Reply