ಅಷ್ಟು ಲಾಭದ ಹುದ್ದೆನಾ?
ಯಾವುದೇ ಒಂದು ಸರಕಾರ ಆಡಳಿತಕ್ಕೆ ಬರುವಾಗ ಮೊದಲು ಆಲರ್ಟ್ ಆಗುವವರೇ ಅಧಿಕಾರಿಗಳು. ಅವರು ತಮಗೆ ಆಯಕಟ್ಟಿನ ಸ್ಥಾನಮಾನ ಅಥವಾ ಹುದ್ದೆ ಸಿಗುವ ಹಾಗೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಯಾರ ಕೈಕಾಲು ಹಿಡಿಯಬೇಕೋ ಅದಕ್ಕೆ ತಯಾರಾಗಿ ನಿಂತಿರುತ್ತಾರೆ. ಇನ್ನು ಕೆಲವು ಅಧಿಕಾರಿಗಳನ್ನು ಸಚಿವರುಗಳು ತಮ್ಮ ಇಲಾಖೆಯಲ್ಲಿ ಆಪ್ತ ಕಾರ್ಯದರ್ಶಿಯನ್ನಾಗಿಯೋ ಅಥವಾ ಇಲಾಖೆಯ ಆಯಕಟ್ಟಿನ ಜಾಗಗಳಲ್ಲಿ ಬೇಕಾದ ಕಡೆ ಪೋಸ್ಟಿಂಗ್ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಕೆಲವು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಸಚಿವರಿಗೆ ಅಥವಾ ಇಲಾಖೆಗೆ ಒಳ್ಳೆಯ ಹೆಸರು ತರುತ್ತಾರೆ. ಇನ್ನು ಕೆಲವರು ಸಚಿವರಿಗೆ “ಆದಾಯ ಮೂಲ” ವನ್ನು ತಲುಪಿಸುವವರು ಇರುತ್ತಾರೆ. ಒಟ್ಟಿನಲ್ಲಿ ಅಧಿಕಾರಿಗಳು ಸಚಿವರುಗಳ ಕೈ ಬಾಯಿ ಸ್ವಚ್ಚ ಅಥವಾ ಬ್ಯುಸಿ ಇಡಲು ಆಸರೆಯಾಗಿರುತ್ತಾರೆ. ಯಾವುದೇ ಸರಕಾರದಲ್ಲಿ ಕೆಲವು ಸಂಪದ್ಭರಿತ ಸ್ಥಾನಗಳು ಇರುತ್ತವೆ. ಅವು ಒಂದು ರೀತಿಯಲ್ಲಿ ಎಷ್ಟು ಮೇದರೂ ಖಾಲಿಯಾಗದ ಫಲವತ್ ಭರಿತ ಹುಲ್ಲುಗಾವಲು. ಅಂತಹ ಕಡೆ ಮಾಲಿಗಳಾಗಲು ಪೈಪೋಟಿ ಇರುತ್ತದೆ. ಅದಕ್ಕೆ ಇಂತಿಷ್ಟೇ ಎಂದು ದೇಣಿಗೆ ಕೂಡ ಇರುತ್ತದೆ. ಆ ಸ್ಥಾನಗಳಿಗೆ ಪೋಸ್ಟಿಂಗ್ ಮಾಡಿಸಲು ವಿಧಾನಸೌಧದ ಕಾರಿಡಾರುಗಳಲ್ಲಿ ವೈಟ್ ಕಾಲರ್ ಬ್ರೋಕರ್ ಗಳಿರುತ್ತಾರೆ. ಅವರು ರೇಟ್ ಕುದುರಿಸಿ ಎಲ್ಲವನ್ನು ಮ್ಯಾನೇಜ್ ಮಾಡುತ್ತಾರೆ. ಇನ್ನು ಕೆಲವು ಲಾಬಿ ಮಾಡುವವರು ಸರಕಾರದ ಉನ್ನತ ವಲಯದಲ್ಲಿ ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಅವರಿಗೆ ಸಿಎಂ ಗೃಹಕಚೇರಿಯಿಂದ ಹಿಡಿದು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಆಂಟಿ ಚೇಂಬರ್ ತನಕ ಪ್ರವೇಶ ಇರುತ್ತದೆ. ಇಂತವರನ್ನು ಎಷ್ಟು ಒಳಗೆ ಬಿಡಲಾಗುತ್ತದೆ ಮತ್ತು ಎಷ್ಟು ದೂರ ಇಡಲಾಗುತ್ತದೆ ಎನ್ನುವುದರ ಮೇಲೆ ಆ ರಾಜ್ಯ ಸರಕಾರದ ಇಮೇಜ್ ನಿರ್ಧರಿತವಾಗುತ್ತದೆ.
ಅಷ್ಟು ಲಾಭದ ಹುದ್ದೆನಾ?
ಸದ್ಯ ತಂದೆಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟು ತ್ಯಾಗಮಯಿ ಪುತ್ರರಾಗಿರುವ ಯತೀಂದ್ರ ಅವರು ಸಿಎಂ ಗೃಹ ಕಚೇರಿಯಲ್ಲಿ ಸೂಪರ್ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅನಿಸುತ್ತಿದೆ. ಇದು ಸ್ಪಷ್ಟತೆಯನ್ನು ಪಡೆದುಕೊಳ್ಳಲು ಸ್ಪಷ್ಟ ಕಾಲಾವಕಾಶ ಬೇಕಾಗುತ್ತದೆ. ಆದರೆ ಈಗ ಆಗುತ್ತಿರುವ ಒಂದೊಂದೇ ಎಡವಟ್ಟುಗಳು ಸಿಎಂ ಗೃಹಕಚೇರಿಯ ವರ್ಚಸ್ಸಿಗೆ ಶೋಭೆ ತರುವಂತದ್ದಲ್ಲ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಟಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ಆ ಹುದ್ದೆಗೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದು ಇದೀಗ ಬಹಿರಂಗವಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಟಾನ ಘಟಕದಲ್ಲಿ ಲೆಕ್ಕಾಧಿಕಾರಿಯಾಗಿ ಒಂದು ವರ್ಷ 4 ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿರುವ ಎಂ ಜಿ ಮಂಜುನಾಥ್ ಅವರು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಯೋಜನಾ ಮುಖ್ಯಸ್ಥರು ಪತ್ರವನ್ನು ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆಯ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಬರೆದಿದ್ದರು. ಇವತ್ತಿನ ದಿನಗಳಲ್ಲಿ ಒಬ್ಬ ಅಧಿಕಾರಿ ಒಂದು ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತಾ ಇದ್ದರೆ ಮತ್ತು ಅವರು ಎರಡ್ಮೂರು ವರ್ಷ ಕಾಲಾವಧಿ ಮುಗಿಸದೇ ಇದ್ದರೆ ಅಂತವರನ್ನು ಸುಮ್ಮನೆ ವರ್ಗಾವಣೆ ಮಾಡುವುದು ಎಂದರೆ ಬೇರೆ ಯಾರೋ ಹೆಚ್ಚಿನ ಮೊತ್ತವನ್ನು ನೀಡಿ ಆ ಹುದ್ದೆಗೆ ಬರಲು ತಯಾರಾಗಿದ್ದಾರೆ ಎಂದೇ ಅರ್ಥ. ಇಲ್ಲದೇ ಹೋದರೆ ಸಿಎಂ ಗೃಹಕಚೇರಿಗಳು ಸುಖಾಸುಮ್ಮನೆ ಕೈಯಾಡಿಸುವುದಿಲ್ಲ. ಈಗ ನೋಡಿದರೆ ನಾಲ್ವರು ಅಧಿಕಾರಿಗಳಿಗೆ ಒಂದು ಹುದ್ದೆ ನೀಡಲು ಸಿಎಂ ಗೃಹ ಕಚೇರಿಯ ಕಡೆಯಿಂದ ಶಿಫಾರಸ್ಸು ಹೋಗಿದೆ. ಬಿಬಿಎಂಪಿಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್ ಕೆ ಜಗದೀಶ್, ಬಿಬಿಎಂಪಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಲೆಕ್ಕಪರಿಶೋಧನಾಧಿಕಾರಿ ಕೆ.ಎಚ್.ಶ್ರೀನಿವಾಸ್, ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಎಂ ನಾಗರಾಜು, ಮೈಸೂರು ಜಿಲ್ಲಾ ಪಂಚಾಯತಿಯಲ್ಲಿ ಲೆಕ್ಕಾಧಿಕಾರಿ ಎಂಎಸ್ ಪ್ರತಿಭ ಹೀಗೆ ನಾಲ್ಕು ಮಂದಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಟಾನ ಘಟಕದಲ್ಲಿ ಲೆಕ್ಕಾಧಿಕಾರಿಯಾಗಿರುವ ಎಂ ಜಿ ಮಂಜುನಾಥ ಅವರ ಹುದ್ದೆಗೆ ತರಲು ಪ್ರಯತ್ನ ನಡೆಯುತ್ತಿದೆ.
ವರ್ಗಾವಣೆ ಅಂಗಡಿ ಅಷ್ಟು ಬೇಗ ಓಪನ್!
ಕೆಲವು ಸರಕಾರಿ ಹುದ್ದೆಗಳಿಗೆ ಬರಲು ತುಂಬಾ ಪೈಪೋಟಿ ಇರುತ್ತದೆ. ಇದು ಒಂದು ರೀತಿಯಲ್ಲಿ ಪ್ರಮುಖ ಸಚಿವಸ್ಥಾನಗಳಿಗೆ ಆಡಳಿತ ಪಕ್ಷದ ಶಾಸಕರು ಸಿಎಂ ಮುಂದೆ ಅಹವಾಲು ಮಂಡಿಸಿ ಕೊನೆಗೆ ಪಕ್ಷದ ಹೈಕಮಾಂಡಿಗೆ ಎಷ್ಟು ಕಪ್ಪ ಕೊಡಲು ಯಾರು ಶಕ್ತರಿರುತ್ತಾರೋ ಅವರಿಗೆ ಆ ಸಚಿವ ಸ್ಥಾನ ಒಲಿಯುತ್ತದೆಯಲ್ಲ, ಹಾಗೆ ಅಧಿಕಾರಿ ವಲಯದಲ್ಲಿಯೂ ಇರುತ್ತದೆ. ಸರಿಯಾಗಿ ನೋಡಿದರೆ ಪ್ರಮುಖ ಸರಕಾರಿ ಹುದ್ದೆಗಳು ಮತ್ತು ಪ್ರಮುಖ ಸಚಿವ ಸ್ಥಾನಗಳು ಎಂದು ಪ್ರತ್ಯೇಕವಾಗಿ ಇರುವುದಿಲ್ಲ. ಏನಿದ್ದರೂ ಲಾಭ ಮತ್ತು ನಿರಂತರ ಆದಾಯ ತರಬಲ್ಲ ಇಲಾಖೆಗಳಿಗೆ ಹೆಚ್ಚಿನ ಲಾಬಿ ಇರುತ್ತದೆ. ಸಿದ್ದು ಸರಕಾರ ಇಷ್ಟು ಬೇಗ ವರ್ಗಾವಣೆಯ ಮಾವಿನ ತೋಪಿಗೆ ನುಗ್ಗಿ ಮಾವು ತಿನ್ನಲು ಹೊರಟು ವಿವಾದವನ್ನು ಕಾಲ ಮೇಲೆ ಎತ್ತಿಹಾಕಲು ತಯಾರಾಗುತ್ತದೆ ಎನ್ನುವ ಐಡಿಯಾ ಯಾರಿಗೂ ಇರಲಿಲ್ಲ. ಯಾಕೆಂದರೆ ಈಗಾಗಲೇ ಒಂದು ಅವಧಿ ಪೂರ್ತಿ ಸಿಎಂ ಆಗಿರುವ ಸಿದ್ದು ಇನ್ನೊಂದು ಬಾರಿ ಅಧಿಕಾರಕ್ಕೆ ಏರಿದಾಗ ಇಷ್ಟು ಬೇಗ ಮಾವಿನ ಹಣ್ಣಿನ ಪರಿಮಳ ಮೂಸಿಯಾರೆ ವಿನ: ಮಾವಿನ ಹಣ್ಣಿನ ಸಿಪ್ಪೆಯನ್ನು ಮೂಗಿಗೆ ತಿಕ್ಕಿ ಗಲೀಜು ಮಾಡಲಿಕ್ಕಿಲ್ಲ ಎನ್ನುವುದು ಊಹೆ. ಇನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿದ್ದ ಲಿಂಗೇಗೌಡರು ಪ್ರಮೋಶನ್ ಪಡೆದು ಶಿವಮೊಗ್ಗ ಮಹಾನಗರ ಪಾಲಿಕೆಗೆ ಹೋಗಿದ್ದಾರೆ. ಒಟ್ಟಿನಲ್ಲಿ ಹೊಸ ಸರಕಾರ ಬಂದ ಕೂಡಲೇ ಗುಪ್ತವಾಗಿ ಸರಕಾರಿ ಹುದ್ದೆಗಳಿಗೆ ಏಲಂ ಕರೆಯಲಾಗುತ್ತಿದೆಯೋ ಎನ್ನುವುದು ಸಂಶಯ!!
Leave A Reply