ಆಯುಕ್ತರೇ, ಸ್ಪೆಶಲ್ ಗ್ಯಾಂಗ್ ಎಲ್ಲಿದೆ?
ವಸ್ತುಗಳು, ವ್ಯಕ್ತಿಗಳು ಕಾಣೆಯಾದರೆ ಅದನ್ನು ಹುಡುಕಿಕೊಡಲು ನಮ್ಮಲ್ಲಿ ಬೇರೆ ಬೇರೆ ಜ್ಯೋತಿಷಿಗಳಿರುತ್ತಾರೆ. ಅವರು ಅದನ್ನು ತಮ್ಮದೇ ಶೈಲಿಯಲ್ಲಿ ಎಲ್ಲಿದೆ ಎಂದು ಪತ್ತೆ ಮಾಡಿ ಹೇಳಬಲ್ಲರು. ಅಂತವರು ಈಗ ಮಂಗಳೂರು ಮಹಾನಗರ ಪಾಲಿಕೆಗೆ ಬೇಕಾಗಿದ್ದಾರೆ. ಅವರು ಅರ್ಜೆಂಟಾಗಿ ಈ ಸ್ಪೆಶಲ್ ಗ್ಯಾಂಗ್ ಗಳು ಪಾಲಿಕೆಯ ಅರವತ್ತು ವಾರ್ಡುಗಳಲ್ಲಿ ಎಲ್ಲಿ ಕೆಲಸ ಮಾಡುತ್ತಿವೆ ಎಂದು ಹುಡುಕಿಕೊಡಬೇಕಾಗಿದೆ. ಬೇಕಾದರೆ ನಾಲ್ಕು ಒಳ್ಳೆಯ ಜ್ಯೋತಿಷಿಗಳನ್ನು ಕರೆಯಿಸಿ, ಕೇಳೋಣ. ಪಾಲಿಕೆಗೆ ಸ್ವಲ್ಪ ಹಣ ಖರ್ಚಾದರೂ ಪರವಾಗಿಲ್ಲ. ಹೇಗೂ ಒಂದೊಂದು ಸ್ಪೆಶಲ್ ಗ್ಯಾಂಗಿಗೆ ಮೂರು ತಿಂಗಳಿಗೆ ಮೂರು ಲಕ್ಷ ಎಪ್ಪತ್ತು ಸಾವಿರ ಖರ್ಚಾಗುತ್ತದೆ. ಆದರೆ ಆ ಗ್ಯಾಂಗುಗಳು ಎಲ್ಲಿ ಕೆಲಸ ಮಾಡುತ್ತಾ ಇರುತ್ತವೆ ಎಂದು ಯಾರಿಗೂ ಗೊತ್ತಿಲ್ಲ. ಆದ್ದರಿಂದ ಹತ್ತಿಪ್ಪತ್ತು ಸಾವಿರ ಜ್ಯೋತಿಷಿಗಳಿಗೆ ಕೊಟ್ಟರೂ ಓಕೆ, ಈ ಅರವತ್ತು ವಾರ್ಡಿನ ಅರವತ್ತು ಗ್ಯಾಂಗುಗಳ ಬಗ್ಗೆ ಅವರು ತಮ್ಮ ಜ್ಞಾನ ಬಳಸಿ ಎಲ್ಲಿದ್ದಾರೆ ಎಂದು ಕಂಡುಹಿಡಿದು ಪಾಲಿಕೆಯ ವ್ಯಾಪ್ತಿಯ ಜನರಿಗೆ ತಿಳಿಸಿದರೆ ಒಳ್ಳೆಯದು. ಯಾಕೆಂದರೆ ಪಾಲಿಕೆಯ ಅಧಿಕಾರಿಗಳನ್ನು ಕೇಳಿದರೆ ಅವರು ಕಾರ್ಪೋರೇಟರ್ ಅವರನ್ನು ಕೇಳಿ ಎನ್ನುತ್ತಾರೆ. ಕಾರ್ಪೋರೇಟರ್ ಅವರನ್ನು ಕೇಳಿದರೆ ಅವರು ಆಕಾಶ ನೋಡುತ್ತಾರೆ. ಆ ಸ್ಪೆಶಲ್ ಗ್ಯಾಂಗಿನ ಗುತ್ತಿಗೆದಾರರು ಯಾರೆಂದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ಬಿಲ್ ಆಗುವಾಗ ಮಾತ್ರ ಎಲ್ಲರೂ ಸಮಾನಾಗಿ ಉಂಡು ಅವರವರ ದಿಕ್ಕಿನಲ್ಲಿ ಮಲಗಿಬಿಡುತ್ತಾರೆ. ಇದರಿಂದ ನಮ್ಮ ತೆರಿಗೆಯ ಹಣ ಕೋಟಿಯ ಲೆಕ್ಕದಲ್ಲಿ ಪೋಲಾಗುತ್ತಿದೆ. ಮೂರು ತಿಂಗಳಿಗೆ ಪ್ರತಿ ವಾರ್ಡಿಗೆ 3 ಲಕ್ಷ 70 ಎಪ್ಪತ್ತು ಸಾವಿರ ಎಂದರೆ ಚಿಕ್ಕ ಅಮೌಂಟಾ? ಅರವತ್ತು ವಾರ್ಡುಗಳಿಗೆ ಇದನ್ನು ಗುಣಿಸಿ ಹಾಕಿದರೆ ಎಷ್ಟಾಗುತ್ತದೆ. ಇದು ಜನರ ತೆರಿಗೆಯ ಹಣ ಅಲ್ಲವೇ?
ಆಯುಕ್ತರೇ ಸ್ಪೆಶಲ್ ಗ್ಯಾಂಗ್ ಎಲ್ಲಿದೆ?
ಹಾಗಾದರೆ ಇಂತಹ ಸೋರಿಕೆಯನ್ನು ನೋಡಬೇಕಾದವರು ಯಾರು? ಯಾರು ನೋಡದಿದ್ದರೂ ವಾರ್ಡ್ ಕಮಿಟಿ ಎನ್ನುವುದು ಇದೆಯಲ್ಲ, ಅದರ ಸದಸ್ಯರು ಎಂದು ಇದ್ದಾರಲ್ಲ, ಅವರೇನು ಮಾಡುತ್ತಿದ್ದಾರೆ. ಈಗ ಕಾರ್ಪೋರೇಟರ್ ಸರಿಯಿಲ್ಲ ಎಂದೇ ಇಟ್ಟುಕೊಳ್ಳೋಣ. ಅವರು ಅಡ್ಜಸ್ಟಮೆಂಟ್ ಗಿರಾಕಿಗಳು ಎಂದೇ ಅಂದುಕೊಳ್ಳೋಣ. ಆದರೆ ಕಾಡಿ ಬೇಡಿ ಹೋರಾಡಿ ಏನೇನೋ ಕೈ ಕಾಲು ಹೊಡೆದು ವಾರ್ಡ್ ಕಮಿಟಿ ಎಂದು ಮಾಡಲಾಗಿದೆಯಲ್ಲ, ಅದರಲ್ಲಿ ಇರುವವರಾದರೂ ಧ್ವನಿ ಎತ್ತಬೇಕಲ್ಲ. ಅವರಿಗೂ ಈ ಸ್ಪೆಶಲ್ ಗ್ಯಾಂಗ್ ಬಗ್ಗೆ ಗೊತ್ತಿಲ್ಲದಿದ್ದರೆ ಹೇಗೆ? ಅವರಾದರೂ ಕೇಳುವುದಿಲ್ಲವಾದರೆ ಏನು ಕಥೆ.
ಈಗ ಮಂಗಳೂರು ಮಹಾನಗರ ಪಾಲಿಕೆಗೆ ಹೊಸ ಆಯುಕ್ತರು ಬಂದಿದ್ದಾರೆ. ಅವರಿಗೆ ಕೆಲವು ದಿನ ಹೋದರೆ ಪಾಲಿಕೆಯ ಹಿರಿಯ ಬಿಳಿ ಶರ್ಟ್, ಬಿಳಿ ಪ್ಯಾಂಟಿನ ಸದಸ್ಯರುಗಳು ಹೋಗಿ ದಾರಿ ತಪ್ಪಿಸಿಬಿಡುತ್ತಾರೆ. ಅದರ ಮೊದಲು ಆಯುಕ್ತರು ಎಚ್ಚರಗೊಳ್ಳಬೇಕು. ಅವರು ಒಂದು ದಿನ ಬೆಳಿಗ್ಗೆ ಹಠಾತ್ತಾಗಿ ಅರವತ್ತು ವಾರ್ಡುಗಳಲ್ಲಿ ಯಾವುದಾದರೂ ಒಂದು ವಾರ್ಡಿಗೆ ಇಂಜಿನಿಯರ್ ಗಳ ಜೊತೆ ಹೋಗಿ ಕಾರಿನಿಂದ ಇಳಿಯಬೇಕು. ನಂತರ ಆ ವಾರ್ಡಿನಲ್ಲಿ ಸ್ಪೆಶಲ್ ಗ್ಯಾಂಗಿನ ಎಲ್ಲಾ ಸದಸ್ಯರನ್ನು, ತಮ್ಮ ವಾಹನ ಮತ್ತು ಉಪಯೋಗಿಸುವ ಅಷ್ಟೂ ವಸ್ತುಗಳೊಂದಿಗೆ ಹಾಜರಿರಲು ಹೇಳಬೇಕು. ಮೊದಲೇ ಹೇಳಿ ಹೋದರೆ ಅವರು ಎಚ್ಚರಗೊಂಡು ಬಿಡುತ್ತಾರೆ. ಆದ್ದರಿಂದ ಸರ್ಫೈಸ್ ವಿಸಿಟ್ ನೀಡಬೇಕು. ಅಕಸ್ಮಾತ್ ಆಗಿ ಆಯುಕ್ತರು ಹೋಗಿ ನೋಡಿದರೆ ಒಂದಂತೂ ಗ್ಯಾರಂಟಿ, ಒಂದೇ ಒಂದು ಸ್ಪೆಶಲ್ ಗ್ಯಾಂಗ್ ಇವರಿಗೆ ನೋಡಲು ಸಿಗಲಿಕ್ಕಿಲ್ಲ. ಆಯುಕ್ತರ ದಿಢೀರ್ ದಾಳಿಯಿಂದ ಪಾಲಿಕೆಯ ಹಣೆಬರಹ ಬೆಳಕಿಗೆ ಬರುತ್ತದೆ. ಅದು ಬಹಿರಂಗವಾದ ಕೂಡಲೇ ಮಾಧ್ಯಮಗಳಲ್ಲಿ ಬರುತ್ತದೆ. ಅದರಿಂದ ಪಾಲಿಕೆಯ ಆಡಳಿತ ಪಕ್ಷಕ್ಕೆ ಮುಜುಗರವಾಗಬಹುದು. ಆದರೆ ಜನರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ. ಯಾಕೆಂದರೆ ಇದರಿಂದ ಪಾಲಿಕೆಯ ಮಳೆಗಾಲದ ದೊಡ್ಡ ಸವಾಲಾಗಿರುವ ಕೃತಕ ನೆರೆ ಮತ್ತು ಚರಂಡಿಗಳಲ್ಲಿ ನೀರು ತುಂಬಿ ಆಗುವ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಪಾಲಿಕೆ ಎಚ್ಚರಗೊಳ್ಳಬಹುದು.
ಪಕ್ಷಾತೀತವಾಗಿ ಎಲ್ಲರೂ ಪಾಲುದಾರರು!
ನಾನು ಈ ವಿಷಯದಲ್ಲಿ ಈ ಹಿಂದೆಯೂ ಹಲವು ಬಾರಿ ಧ್ವನಿ ಎತ್ತಿದ್ದೇನೆ. ಟಿವಿ ಡಿಬೇಟಿನಲ್ಲಿ ಕುಳಿತು ಮಾತನಾಡಿದ್ದೇನೆ. ಇದರಿಂದ ಪಾಲಿಕೆಯ ಸದಸ್ಯರುಗಳಿಗೆ ಮುಜುಗರವಾಗಿರಬಹುದು. ನನ್ನ ಮೇಲೆ ಸಿಟ್ಟು ಬಂದಿರಬಹುದು. ನನ್ನ ಬಗ್ಗೆ ಯಾರ್ಯಾರ ಬಳಿಯೋ ದೂರು ನೀಡಿರಬಹುದು. ಆದರೆ ಸ್ಪೆಶಲ್ ಗ್ಯಾಂಗಿನ ಈ ವಿಷಯ ಮಾತ್ರ ಇಲ್ಲಿಯ ತನಕ ಪರಿಹಾರವಾಗಿಲ್ಲ. ಈಗ ಹೊಸ ಆಯುಕ್ತರು ಬಂದಿರುವುದರಿಂದ ಅವರಾದರೂ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ತುಂಬಾ ಕಠಿಣ ನಿರ್ಧಾರ ತೆಗೆದುಕೊಂಡರೆ ಅಂತಹ ಆಯುಕ್ತರು ತುಂಬಾ ದಿನ ಇಲ್ಲಿ ಇರದ ಹಾಗೆ ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಪ್ರಯತ್ನ ಮಾಡುತ್ತಾರೆ. ಅದು ಈ ಹಿಂದೆನೂ ಬೇರೆ ಬೇರೆ ಸಂದರ್ಭಗಳಲ್ಲಿ ಸಾಬೀತಾಗಿದೆ. ಯಾಕೆಂದರೆ ಕೊಬ್ಬಿದ ಹೆಗ್ಗಣಗಳಿಗೆ ಯಾವತ್ತೂ ಬೆಕ್ಕು ಕಂಡರೆ ಕೋಪ ಇರುವುದು ಸಹಜ. ಹಾಗಂತ ಹೆಗ್ಗಣಗಳು ನಮ್ಮದೇ ಮನೆಯ ಅಕ್ಕಿಯ ಗೋಣಿಗೆ ತೂತು ಕೊರೆದು ವಸ್ತುಗಳನ್ನು ನಾಶ ಮಾಡುತ್ತಾ ಹೋದರೆ ಆಗ ಬೆಕ್ಕಿಗೆ ಕೆಲಸ ಕೊಡಬೇಕಾಗಿರುವುದು ಕರ್ತವ್ಯ. ಈ ವಿಷಯದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಎನ್ನುವ ಭೇದವಿಲ್ಲ. ಎಲ್ಲರೂ ಸ್ಪೆಶಲ್ ಗ್ಯಾಂಗಿನ ವಿಷಯದಲ್ಲಿ ಸಮಾನ ಪಾಲುದಾರರು. ಅಷ್ಟಕ್ಕೂ ಚಿನ್ನದ ಮೊಟ್ಟೆಯನ್ನು ಯಾರಾದರೂ ಬೇಡಾ ಎನ್ನುತ್ತಾರಾ?
Leave A Reply