ಒಂದು ವರ್ಷ ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ!
ಇಂತಹ ಸಾಧ್ಯತೆಯ ಬಗ್ಗೆ ಚುನಾವಣೆಯ ಮೊದಲು ಎಲ್ಲರಿಗೂ ಅನುಮಾನ ಇತ್ತು. ಅಷ್ಟು ಸುಲಭವಾಗಿ ಐದು ಗ್ಯಾರಂಟಿಗಳನ್ನು ಇಡೀ ರಾಜ್ಯದಲ್ಲಿ ಜಾರಿಗೆ ತಂದು ಅದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೂಡ ನಡೆಸುವುದು ಎಂದರೆ ಅದು ಅಸಾಧ್ಯ ಎಂದು ಭಾರತೀಯ ಜನತಾ ಪಾರ್ಟಿ ಮುಖಂಡರು ಹೇಳುತ್ತಾ ಬರುತ್ತಿದ್ದರು. ಆದರೆ ಕಾಂಗ್ರೆಸ್ಸಿಗೆ ಜನಸಾಮಾನ್ಯರನ್ನು ಮರಳು ಮಾಡಲು ಪಂಚಉಚಿತ ಭಾಗ್ಯಗಳನ್ನು ಘೋಷಿಸುವುದರ ಬದಲು ಬೇರೆ ದಾರಿ ಇರಲಿಲ್ಲ. ಅಂತಿಮವಾಗಿ ಉಚಿತ ಗ್ಯಾರಂಟಿಗಳ ಚೊಂಗು ಹಿಡಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆಗಿದೆ. ಮಹಿಳೆಯರಿಗೆ ಉಚಿತ ಕೆಂಪು ಬಸ್ ಸೇವೆ ಬಿಟ್ಟರೆ ಬೇರೆ ಯೋಜನೆಗಳು ಇನ್ನು ಕೂಡ ಸರಿಯಾಗಿ ಟೇಕಾಫ್ ಆಗಿಲ್ಲ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಪಂಚಗ್ಯಾರಂಟಿಗಳನ್ನು ಜಾರಿಗೆ ತರುವ ಭರವಸೆ ನೀಡಿದ ಕಾಂಗ್ರೆಸ್ ಈಗಲೂ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಮನೆಯ ಯಜಮಾನಿಗೆ 2000 ರೂಪಾಯಿ ಪ್ರತಿ ತಿಂಗಳು ಕೊಡುವ ಯೋಜನೆ ಬಗ್ಗೆ ಕುಂಟುಗಾಲು ಹಾಕುತ್ತಾ ಸಾಗುತ್ತಿದೆ. ಪದವೀಧರರಿಗೆ ಭತ್ಯೆ ಎಲ್ಲವೂ ಸದ್ಯಕ್ಕೆ ಇಲ್ಲ. ಅನ್ನಭಾಗ್ಯ ಕೇಂದ್ರದಿಂದ ಬರುವ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಇವರು ಕೊಡಬೇಕಾಗಿದ್ದ ಅಕ್ಕಿ ಬದಲಿಗೆ 170 ರೂಪಾಯಿ ಹಣ ನೀಡುವ ಯೋಜನೆಗೆ ಚಾಲನೆ ಇತ್ತೀಚೆಗೆ ಸಿಎಂ ನೀಡಿದ್ದಾರೆ. ಹೀಗೆ ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ಮದ್ಯದಿಂದ ಹಾಲಿನ ತನಕ ರೇಟು ಜಾಸ್ತಿಯಾಗುತ್ತಿದೆ. ಅತ್ತ ಹೈಟೆಕ್ ಸರಕಾರಿ ಬಸ್ಸುಗಳಿಗೂ ಟಿಕೆಟ್ ದರ ಜಾಸ್ತಿಯಾಗಿದೆ. ಈ ನಡುವೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತಿದ್ದಾರೆ. ನಮ್ಮನ್ನು ಸಚಿವರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯನವರು ಶಾಸಕಾಂಗ ಸಭೆ ಕರೆದು ಶಾಸಕರ ನೋವನ್ನು ಆಲಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಅವಲತ್ತುಕೊಂಡಿದ್ದಾರೆ. ಈ ಬಗ್ಗೆ ಶಾಸಕರಿಗೆ ಸೃಷ್ಟೀಕರಣ ಕೊಟ್ಟ ಡಿಸಿಎಂ ಶಿವಕುಮಾರ್ ಅವರು ಒಂದು ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಕೊಡಲು ಸಾಧ್ಯವಾಗುವುದಿಲ್ಲ ಎಂದು ನೇರವಾಗಿ ತಿಳಿಸಿದ್ದಾರೆ. ಯಾವಾಗ ಉಪಮುಖ್ಯಮಂತ್ರಿಯವರೇ ಹೀಗೆ ಹೇಳಿದ್ರೋ ಕಾಂಗ್ರೆಸ್ ಶಾಸಕರು ತಲೆಯ ಮೇಲೆ ಕೈ ಇಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಶಾಸಕರು ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಕ್ಷೇತ್ರದಲ್ಲಿ ಮುಖ ತೋರಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಗ್ಯಾರಂಟಿಗೆ ಹಣ ಇಟ್ಟರೆ ಅಭಿವೃದ್ಧಿಗೆ ಇಲ್ಲ, ಅಭಿವೃದ್ಧಿಗೆ ನೀಡಿದರೆ ಗ್ಯಾರಂಟಿಗೆ ಇಲ್ಲ ಎನ್ನುವ ಸ್ಥಿತಿ ಕರ್ನಾಟಕದ್ದು. ಈ ಕುರಿತು ಭಾರತೀಯ ಜನತಾ ಪಾರ್ಟಿ ಹಾಗೂ ಶಾಸಕ ಬಸವಗೌಡ ಯತ್ನಾಳ್ ಟ್ವಿಟರ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
Leave A Reply