ಸಮಾಜ ಕಲ್ಯಾಣ ಸಚಿವರಿಂದಲೇ ಮಾಹಿತಿ

ರಾಜ್ಯ ಸರಕಾರ ತನ್ನ ಗ್ಯಾರಂಟಿಗಳಿಗೆ ಬೇಕಾಗುವ ಸಾವಿರಾರು ಕೋಟಿ ರೂಪಾಯಿ ಹಣವನ್ನು ಎಲ್ಲಿಂದ ಹೊಂದಿಸುತ್ತದೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿತ್ತು. ಕೊನೆಗೂ ಸಿದ್ಧರಾಮಯ್ಯ ನೇತೃತ್ವದ ಸರಕಾರ ಎಲ್ಲೆಲ್ಲಿ ಸಾಧ್ಯವಿದೆಯೋ ಎಲ್ಲಾ ಇಲಾಖೆಗಳ ನಿಧಿಗೆ ಕೈ ಹಾಕುವ ಕೆಲಸಕ್ಕೆ ಮುಂದಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನ (ಎಸ್ ಸಿಎಸ್ ಪಿ-ಟಿಎಸ್ ಪಿ) ವನ್ನು ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಗ್ಯಾರಂಟಿ ಘೋಷಣೆಗಳ ಅನುಷ್ಠಾನಕ್ಕೆ ಬಳಸಲು ಮುಂದಾಗಿದೆ. ಇದನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ತಿಳಿಸಿದ್ದಾರೆ. ಸುಮಾರು 11 ಸಾವಿರ ಕೋಟಿ ರೂಪಾಯಿಯನ್ನು ಈ ಗ್ಯಾರಂಟಿಗಳ ಜಾರಿಗಾಗಿ ಬಳಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಅವರು ಮಾಹಿತಿ ನೀಡಿದರು.
ಎಸ್ ಸಿಎಸ್ ಪಿಯಿಂದ 7,570 ಕೋಟಿ ಮತ್ತು ಟಿಎಸ್ ಪಿಯಿಂದ 3,430 ಕೋಟಿಯನ್ನು ಬಳಕೆ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗಾಗಿ ಮಾತ್ರವೇ ಈ ಹಣವನ್ನು ಬಳಸಲಾಗುವುದು. ಬೇರೆಯವರಿಗೆ ಬಳಸುವ ಪ್ರಶ್ನೆ ಇಲ್ಲ ಎಂದು ಸಮಜಾಯಿಷಿ ನೀಡಲು ಸಚಿವರು ಪ್ರಯತ್ನಪಟ್ಟರು. ಎಲ್ಲಾ ಉಚಿತ ಗ್ಯಾರಂಟಿ ಯೋಜನೆಗಳಿಗೆ ಒಟ್ಟು ಎಷ್ಟು ಹಣ ಬೇಕಾಗಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಕೆಲವು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಹಣ ಬೇಕಾಗಬಹುದು. ಕೆಲವು ಗ್ಯಾರಂಟಿ ಯೋಜನೆಗಳಿಗೆ ಕಡಿಮೆ ಹಣ ಬೇಕಾಗಬಹುದು. ಶಕ್ತಿ ಗ್ಯಾರಂಟಿಯಲ್ಲಿ ಓರ್ವ ಮಹಿಳೆ ತಿಂಗಳಿಗೆ ಒಂದು ಸಲ ಪ್ರಯಾಣ ಮಾಡಬಹುದು. ಅದೇ ಇನ್ನೊಬ್ಬ ಮಹಿಳೆ ತಿಂಗಳಿಗೆ 30 ಸಲ ಪ್ರಯಾಣ ಮಾಡಬಹುದು. ಆದ್ದರಿಂದ ಸರಕಾರ ವಿನಿಯೋಗಿಸುವ ಅನುದಾನದಲ್ಲಿ ಹೆಚ್ಚು ಕಡಿಮೆ ಆಗಬಹುದು.
Leave A Reply