ಗಿರೀಶ್ ಭಾರದ್ವಾಜ್ ಅರ್ಜಿ, ಅರುಣ್ ಶ್ಯಾಮ್ ವಾದ
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಮೂರನೇ ಬಾರಿ ಅಧಿಕಾರಕ್ಕೆ ಏರುವುದನ್ನು ತಪ್ಪಿಸಲು ನಿತಿಶ್ ಕುಮಾರ್ ನೇತೃತ್ವದ ಕಾಂಗ್ರೆಸ್ ಒಳಗೊಂಡ ಸಮಾನ ಮನಸ್ಕ ಪಕ್ಷಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಅವರು ಇಂಡಿಯನ್ ನ್ಯಾಶನಲ್ ಡೆವಲಪಮೆಂಟ್ ಇನ್ಕೂಸಿವ್ ಅಲೆಯನ್ಸ್ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಆಂಗ್ಲಭಾಷೆಯಲ್ಲಿ ಇದನ್ನು ಕಿರಿದು ಮಾಡಿ ಓದುವಾಗ ಅದು ಇಂಡಿಯಾ ಎಂದು ಆಗುತ್ತದೆ. ಜನರು ಓದುವಾಗ ಇಂಡಿಯಾ ಒಕ್ಕೂಟ ಎಂದು ಫೀಲ್ ಆಗುತ್ತದೆ. ನಮ್ಮ ದೇಶವನ್ನು ನಮ್ಮವರು ಹಿಂದೂಸ್ತಾನ್, ಭಾರತ್ ಎಂದು ಹಿಂದಿ ಭಾಷೆಯಲ್ಲಿ ಸಂಭೋದಿಸಿದರೆ ಆಂಗ್ಲರು ಇಂಡಿಯಾ ಎಂದು ಕರೆದರು. ಇವತ್ತಿಗೂ ಜಗತ್ತಿನಲ್ಲಿ ಇಂಡಿಯಾ ಎನ್ನುವ ಶಬ್ದವೇ ಹೆಚ್ಚು ಬಳಕೆಯಲ್ಲಿದೆ. ಉದಾಹರಣೆಗೆ ಇಂಡಿಯನ್ ಹೋಂ ಮಿನಿಸ್ಟರ್ ಎಂದು ಹೇಳಲಾಗುತ್ತದೆ ವಿನ: ಭಾರತ್ ಹೋಂ ಮಿನಿಸ್ಟರ್ ಎಂದು ಹೇಳಲಾಗುವುದಿಲ್ಲ. ಆಂಗ್ಲ ಮಾಧ್ಯಮಗಳಲ್ಲಿಯೂ ಭಾರತವನ್ನು ಇಂಡಿಯಾ ಎಂದೇ ಕರೆಯಲಾಗುವುದರಿಂದ ಪುಟ್ಟ ಮಕ್ಕಳಿಂದ ವೃದ್ಧರ ತನಕ ಎಲ್ಲಾ ಕಡೆ ಇಂಡಿಯಾ ಎನ್ನುವುದೇ ಜನಜನಿತವಾಗಿದೆ. ಯಾವಾಗ ವಿಪಕ್ಷಗಳು ಚುನಾವಣೆಗಾಗಿ ಒಟ್ಟು ಸೇರಿ ಒಕ್ಕೂಟ ರಚಿಸಿದವೋ ಅದಕ್ಕೊಂದು ಹೆಸರಿಡಬೇಕಲ್ಲ. ಅದಕ್ಕಾಗಿ ರಣತಂತ್ರಗಾರರು “ಕ್ಯಾಚಿ” ಶಬ್ದದ ಹುಡುಕಾಟದಲ್ಲಿದ್ದರು. ಆವಾಗಲೇ ಅವರ ಕಣ್ಣಿಗೆ ಬಿದ್ದದ್ದು ಇಂಡಿಯಾ ಎನ್ನುವ ಶಬ್ದ. ಆ ಬಳಿಕ ಅದರ ವಿಸ್ತ್ರತ ರೂಪದ ಚರ್ಚೆಯಾಗಿದೆ. ಐ, ಎನ್, ಡಿ, ಐ, ಎ ಹೀಗೆ ಅದರ ವಿಸ್ತ್ರತ ರೂಪವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಈ ಒಕ್ಕೂಟದ ಪ್ರಮುಖರಿಗೆ ಬೇಕಾಗಿರುವುದು ವಿಸ್ತ್ರತ ರೂಪ ಅಲ್ಲವೇ ಅಲ್ಲ. ಮಾಧ್ಯಮ, ಜನರ ಮನಸ್ಸಿನಲ್ಲಿ ಶಾರ್ಟ್ ಆಗಿ ಹೇಳುವಾಗ ಸುಲಭವಾಗಿ ಓದಲು, ಬರೆಯಲು, ಕೇಳಲು ಅನುಕೂಲವಾದ ಶಬ್ದ ಬೇಕಿತ್ತು. ಅನಾಯಾಸವಾಗಿ “ಇಂಡಿಯಾ” ರೂಪದಲ್ಲಿ ಅದು ಸಿಕ್ಕಿದೆ.
ಇದರಿಂದ ತೊಂದರೆ ಏನು?
ಒಂದು ದೇಶದ ಹೆಸರನ್ನು ರಾಜಕೀಯ ಸಂಸ್ಥೆ, ಒಕ್ಕೂಟಕ್ಕೆ ಇಡುವುದರಿಂದ ರಾಷ್ಟ್ರದ ಘನತೆ, ಹಿರಿಮೆಯನ್ನು ರಾಜಕೀಯವಾಗಿ ಬಳಸಿದ ಹಾಗೆ ಆಗುತ್ತದೆ. ಯಾಕೆಂದರೆ ಲೋಕಸಭಾ ಚುನಾವಣೆಗೆ ಎಂಟ್ಹತ್ತು ತಿಂಗಳು ಇದೆ. ಇಂತಹ ಒಂದು ಕಾಲಘಟ್ಟದಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡುವುದು ಸರ್ವೆ ಸಾಮಾನ್ಯ. ಈಗ ವಿಪಕ್ಷಗಳು ಭಾರತೀಯ ಜನತಾ ಪಾರ್ಟಿ ಅಥವಾ ಎನ್ ಡಿಎ ಮೈತ್ರಿಕೂಟದ ವಿರುದ್ಧ ಮಾತನಾಡುವಾಗ ಸಹಜವಾಗಿ ಬಿಜೆಪಿ ಅಥವಾ ಎನ್ ಡಿಎ ಮೈತ್ರಿಕೂಟದ ಮುಖಂಡರು ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಮಾತನಾಡಬೇಕಾಗುತ್ತದೆ. ಆಗ ಇಂಡಿಯಾ ಎನ್ನುವ ಶಬ್ದವನ್ನು ತೆಗೆಯಲೇಬೇಕಾಗುತ್ತದೆ. “ಇಂಡಿಯಾ” ಒಕ್ಕೂಟದ ಬಗ್ಗೆ ಟೀಕೆ ಮಾಡುವಾಗ ಜನರಿಗೆ ಮೋದಿ ಅಥವಾ ಎನ್ ಡಿಎ ನಾಯಕರು ನಮ್ಮ ದೇಶಕ್ಕೆ ಟೀಕೆ, ವ್ಯಂಗ್ಯ ಮಾಡಿದಂತೆ ಜನರಿಗೆ ಭಾಸವಾಗುವ ಸಾಧ್ಯತೆ ಇದೆ. “ಇಂಡಿಯಾ” ಶಬ್ದ ಬಳಸಿ ಟೀಕೆ ಮಾಡಿದ್ದನ್ನೇ ವಿಘ್ನ ಸಂತೋಷಿಗಳು ಟ್ರಾಲ್ ಮಾಡಿ ಮೋದಿ ವಿರುದ್ಧ ಬಳಸುವ ಸಾಧ್ಯತೆ ಇದೆ. ಅದು ಜಾಗತಿಕವಾಗಿಯೂ ದೇಶದ ಇಮೇಜಿಗೆ ಒಳ್ಳೆಯ ಸೂಚನೆ ಅಲ್ಲ. ಅದರೊಂದಿಗೆ ಇಂಡಿಯಾ ವಿರುದ್ಧ ಮತ ಚಲಾಯಿಸಿ ಎನ್ನುವ ಘೋಷಣೆಗಳು ಕೂಡ ಜನಮಾನಸದಲ್ಲಿ ದೇಶದ ಬಗ್ಗೆ ಕೀಳರಿಮೆ ತರುವ ಸಂಭವ ಇದೆ. ಈ ಎಲ್ಲಾ ವಿಷಯಗಳನ್ನು ನೋಡಿ ಚುನಾವಣಾ ಆಯೋಗವು ವಿಪಕ್ಷಗಳಿಗೆ ತಮ್ಮ ಒಕ್ಕೂಟಕ್ಕೆ ಬೇರೆ ಹೆಸರು ಇಡಲು ಸೂಚಿಸುವ ಅಗತ್ಯ ಇದೆ.
ವಿಪಕ್ಷ ನಾಯಕರ ಹೇಳಿಕೆ ಉಲ್ಲೇಖ!
ಈ ನಿಟ್ಟಿನಲ್ಲಿ ಸಾಮಾಜಿಕ ಚಿಂತಕ ಗಿರೀಶ್ ಭಾರದ್ವಾಜ್ ಅವರು ದೆಹಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾರೆ.
ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರು ಅರ್ಜಿದಾರರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 31 ಕ್ಕೆ ಮುಂದೂಡಿದೆ. ಈ ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆನ್ನುವ ಮನವಿಯ ಬಗ್ಗೆ ನ್ಯಾಯಮೂರ್ತಿಗಳಾದ ಜಸ್ಟೀಸ್ ಸತೀಶ್ ಚಂದ್ರ ಶರ್ಮಾ ಹಾಗೂ ಜಸ್ಟೀಸ್ ಸಂಜೀವ್ ನಾರೂಲಾ ಅವರು ಈ ಪ್ರಕರಣ ಗಂಭೀರ ಸ್ವರೂಪದಾಗಿದ್ದು, ಚುನಾವಣಾ ಆಯೋಗ ಹಾಗೂ 26 ಪಕ್ಷಗಳಿರುವ ಮೈತ್ರಿಕೂಟಕ್ಕೂ ಅಗತ್ಯ ಸಮಯಾವಕಾಶ ನೀಡಿ ತಮ್ಮ ವಿಷಯವನ್ನು ಮಂಡಿಸಲು ತಿಳಿಸಬೇಕಾಗಿದೆ ಎಂದು ಹೇಳಿದರು.
ಭಾರತದ ರಾಷ್ಟ್ರೀಯ ಚಿನ್ನೆಗಳನ್ನು ಮತ್ತು ಹೆಸರುಗಳನ್ನು ಅಸಮರ್ಪಕವಾಗಿ ಬಳಸುವುದರ ವಿರುದ್ಧ ಕಾಯ್ದೆ 1950 ಸೆಕ್ಷನ್ 2 ಮತ್ತು 3ರ ಪ್ರಕಾರ ಇಂಡಿಯಾ ಎನ್ನುವ ಶಬ್ದವನ್ನು ಬೇಕಾಬಿಟ್ಟಿ ಬಳಸುವುರ ವಿರುದ್ಧ ನಿರ್ಭಂದನೆಗಳನ್ನು ಹೇರಲಾಗಿದೆ. ಇನ್ನು ಗಿರೀಶ್ ಭಾರದ್ವಾಜ್ ಅವರು ತಮ್ಮ ಅರ್ಜಿಯಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿ ನಮ್ಮ ಒಕ್ಕೂಟ ಮತ್ತು ದೇಶದ ಹೆಸರು ಒಂದೇ ಇರುವುದರಿಂದ ಇನ್ನು ಮುಂದೆ ಎನ್ ಡಿಎ, ಬಿಜೆಪಿ ಹಾಗೂ ಪ್ರಧಾನಿ ಮೋದಿಯವರು ಹೇಗೆ ದೇಶದ ವಿರುದ್ಧ ಮಾತನಾಡುತ್ತಾರೆ, ನೋಡೋಣ ಎಂದು ಸವಾಲೆಸೆದಿರುವುದನ್ನು ದಾಖಲಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆ ಎನ್ ಡಿಎ ಒಕ್ಕೂಟ ಮತ್ತು ಇಂಡಿಯಾ ಒಕ್ಕೂಟದ ನಡುವೆ ನಡೆಯಲಿದೆ ಎಂದು ರಾಹುಲ್ ಗಾಂಧಿಯವರು ಕೊಟ್ಟ ಇಂತಹ ಹೇಳಿಕೆಗಳು ಜನಸಾಮಾನ್ಯರ ಮನಸ್ಸಿನಲ್ಲಿ ಯಾವ ಪರಿಣಾಮ ಬೀರುತ್ತವೆ ಎನ್ನುವುದರ ಬಗ್ಗೆ ಗಿರೀಶ್ ಭಾರದ್ವಾಜ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಅರ್ಜಿದಾರರು ತಮ್ಮ ಮನವಿಯಲ್ಲಿ ತಾವು ಈ ವಿಷಯದಲ್ಲಿ ಚುನಾವಣಾ ಆಯೋಗದ ಬಾಗಿಲು ತಟ್ಟಿದ್ದು, ಅಲ್ಲಿ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಸಿಗದೇ ಇದ್ದಾಗ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಬಂದಿರುವುದಾಗಿ ತಿಳಿಸಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಇಂಡಿಯಾ ಪ್ರಕರಣ ನಡೆಯಲಿದ್ದು, ಸೂಕ್ತ ತೀರ್ಪು ದೊರಕಲಿದೆ ಎಂದು ಅರ್ಜಿದಾರರು ಆಶಯ ವ್ಯಕ್ತಪಡಿಸಿದ್ದಾರೆ
Leave A Reply