ಆಗ ಗುತ್ತಿಗೆದಾರರಿಗೆ ಸಿದ್ದು, ಡಿಕೆಶಿ, ಈಗ ಬಿಎಸ್ ವೈ, ಎಚ್ ಡಿಕೆ!
ಗುತ್ತಿಗೆದಾರ ಎನ್ನಲಾಗುತ್ತಿದ್ದ ಗೌತಮ್ ಆತ್ಮಹತ್ಯೆ ಮಾಡಿಕೊಂಡ ಎನ್ನುವ ವಿಷಯ ವೈರಲ್ ಆಗುತ್ತಿದೆ. ಭಾರತೀಯ ಜನತಾ ಪಾರ್ಟಿಯವರು ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಂತೆ ಗೌತಮ್ ಗುತ್ತಿಗೆದಾರ ಅಲ್ಲ ಎಂದು ಆತನ ಮನೆಯವರು ಹೇಳಿದ್ದಾರೆ ಎನ್ನುವ ಮಾಹಿತಿ ಹೊರಹಾಕಲಾಗಿದೆ. ಈ ಮೂಲಕ ಕಾಂಗ್ರೆಸ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತದೆಯಾ ನೋಡಬೇಕು. ಸದ್ಯ ಗೌತಮ್ ಕಾಮಗಾರಿಯ ಬಿಲ್ ಸಿಗದೇ ಇದ್ದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರೋ ಇಲ್ವೋ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇನೆ ಇದ್ದರೂ ಬಿಜೆಪಿ ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಒಂದಿಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವಿಷಯದಲ್ಲಿ ಕಾಂಗ್ರೆಸ್ ಹೋರಾಟ ಮಾಡಿ, ಕೆಂಪಣ್ಣ ಎನ್ನುವವರು ನೀಡಿದ 40% ಎನ್ನುವ ವಿಷಯವನ್ನೇ ಮುಂದಿಟ್ಟು ಸರಕಾರವನ್ನು ಹಣಿದಿತ್ತು. ಈ ವಿಷಯದಲ್ಲಿ ಆಲಿಬಾಬಾ ಮತ್ತು ನಲ್ವತ್ತು ಕಳ್ಳರಂತೆ ಬಿಜೆಪಿ ಕುಂಬಳಕಾಯಿ ಕಳ್ಳ ಎಂದದ್ದಕ್ಕೆ ಹೆಗಲು ಮುಟ್ಟಿ ನೋಡಿಕೊಂಡು ಜನರ ಮುಂದೆ ವಾಸ್ತವ ಸಂಗತಿ ಇಡುವಲ್ಲಿ ಸೋತಿತ್ತು. ಸೂಕ್ತ ಉತ್ತರ ನೀಡಲು ವಿಫಲವಾಗಿದ್ದ ಕಾರಣ, ಕೇವಲ ಸಾಕ್ಷ್ಯ ನೀಡಿ ಎಂದು ಬಿಜೆಪಿ ಅರಚಿದ್ದನ್ನು ಜನ ಕೂಡ ಒಪ್ಪದೇ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ಸಿಗೊಂದು ಅವಕಾಶ ನೀಡಿದ್ದರು.
ರಾಜಕೀಯದವರು ನಂಬಬಾರದು ಎಂದ್ರಾ ಗುತ್ತಿಗೆದಾರರು!
ನೀವು ನಮ್ಮ ಜೊತೆ ಬನ್ನಿ, ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ನಿಮ್ಮ ಎಲ್ಲಾ ಬಿಲ್ ಸೆಟಲ್ ಎಂದು ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದನ್ನು ನಂಬಿದ ಗುತ್ತಿಗೆದಾರರು ಬಿಜೆಪಿಯನ್ನು ಹಣ್ಣುಗಾಯಿ, ನೀರುಗಾಯಿ ಮಾಡಿದ್ದರು. ಇವರನ್ನೆಲ್ಲ ಬಳಸಿ, ಇವರ ಹೆಗಲ ಮೇಲೆ ಕಾಲಿಟ್ಟು, ಗೋಡೆ ಹತ್ತಿ ಇನ್ನೊಂದು ಬದಿಯಲ್ಲಿದ್ದ ಅಧಿಕಾರದ ಹುಲ್ಲುಗಾವಲಿನಲ್ಲಿ ಕಾಲಿಟ್ಟಿರುವ ಕಾಂಗ್ರೆಸ್ಸಿಗೆ ಈಗ ಗುತ್ತಿಗೆದಾರರು ಮಗ್ಗುಲ ಮುಳ್ಳಾಗಿದ್ದಾರೆ. ಈಗ ಬಿಲ್ ಪಾಸ್ ಮಾಡಿ ಎಂದರೆ ನೀವು ಆ ಸಂಬಂಧಪಟ್ಟ ಇಲಾಖೆಯ ಸಚಿವರ ಬಳಿ ಮಾತನಾಡಿ ಎಂದು ಉಪಮುಖ್ಯಮಂತ್ರಿ ಡಿಕೆಶಿ ಹೇಳುತ್ತಿರುವುದು ಗುತ್ತಿಗೆದಾರರಿಗೆ ಮುಳ್ಳು ಕುತ್ತಿಗೆಯಲ್ಲಿ ಸಿಲುಕಿದ ಹಾಗೆ ಆಗಿದೆ.
ಅಷ್ಟಕ್ಕೂ ಒಂದು ಕಾಮಗಾರಿಯ ಮಂಜೂರಾಗಿ, ಡಿಪಿಆರ್ ಅಂದರೆ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧವಾಗಿ ಟೆಂಡರ್ ಕರೆದು, ಅಗ್ರಿಮೆಂಟ್ ಮುಗಿದು, ಕಾಮಗಾರಿಯ ಆದೇಶ ಪತ್ರಿ ಗುತ್ತಿಗೆದಾರರನಿಗೆ ನೀಡಿ, ಕಾಮಗಾರಿ ಮುಗಿದ ಬಳಿಕ ಅಳತೆ ಸಹಿತ ಇನ್ನಿತರ ಪ್ರಕ್ರಿಯೆ ಮುಗಿದರೆ ನಂತರ ಬಿಲ್ ಆಗಿ ಹಣ ಪಾವತಿ ಆಗುವುದು ಮಾತ್ರ ಬಾಕಿ. ಇಷ್ಟೆಲ್ಲಾ ಮುಗಿದು ಇನ್ನೆನೂ ಬಿಲ್ ಮಾತ್ರ ಪಾಸ್ ಆಗಬೇಕು ಎಂದು ಇರುವಾಗ ನೀವು ಆ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಹೋಗಿ ಎಂದರೆ ಅದರ ಅರ್ಥ ಏನು? ಇಷ್ಟು ಬಿಲ್ ಪಾಸ್ ಮಾಡುತ್ತೇವೆ. ಇಷ್ಟು ಕಮೀಷನ್ ಇಂತಿಂತವರ ಹತ್ತಿರ ನೀಡಿ ಎಂದು ಸಚಿವರು ಹೇಳುವುದು ಮಾತ್ರ ಬಾಕಿ ಇದೆಯಾ? ಯಾವುದೇ ಒಂದು ಕಾಮಗಾರಿ ಮುಗಿದ ಬಳಿಕ ಹಣ ಬರುವುದು ಆ ಸಂಬಂಧಪಟ್ಟ ಇಲಾಖೆಯಿಂದಲೇ ಆಗಿದ್ದರೂ ಅದಕ್ಕಾಗಿ ಯಾವುದೇ ಸಚಿವರ ಬಳಿ ಹೋಗಿ ಮಾತನಾಡಬೇಕಾಗಿರುವುದಿಲ್ಲ. ಈ ನಡುವೆ ಗುತ್ತಿಗೆದಾರರು ಆಣೆ, ಪ್ರಮಾಣ ಎಂದೆಲ್ಲಾ ಹೇಳಲು ಹೋಗಿ ಅದಕ್ಕೆ ಡಿಕೆಶಿ ಕ್ಯಾರ್ ಮಾಡದೇ ಇದ್ದಾಗ ಕೊನೆಯ ಅಸ್ತ್ರವಾಗಿ ಗುತ್ತಿಗೆದಾರರು ಈಗ ಮಾಜಿ ಸಿಎಂ ಯಡ್ಡಿ ಬಳಿಗೆ ದು:ಖ ತೋಡಿಕೊಂಡಿದ್ದಾರೆ. ಅದೇ ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಗುತ್ತಿಗೆದಾರರು ಯಡ್ಡಿಜಿ ಬಳಿ ಹೋಗಿರಲಿಲ್ಲ. ಆಗ ಸಿದ್ದಣ್ಣ, ಡಿಕೆಶಿಯವರು ಈ ಗುತ್ತಿಗೆದಾರರಿಗೆ ದೇವರಾಗಿ ಕಾಣಿಸುತ್ತಿದ್ದರು. ಈಗ ಅಧಿಕಾರಕ್ಕೆ ಬಂದು ಮೂರು ತಿಂಗಳು ಆಗುತ್ತಾ ಇದ್ದರೂ ಬಿಲ್ ಪಾಸ್ ಆಗದೇ ಇರುವುದರಿಂದ ವಿಲನ್ ತರಹ ಕಾಣಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಇವರ ಬಳಿ ಹೋಗುವುದು, ಇವರು ಅಧಿಕಾರದಲ್ಲಿದ್ದಾಗ ಅವರ ಬಳಿ ಹೋಗಿಯೂ ಏನೂ ಗಿಟ್ಟಲಿಲ್ಲ ಎನ್ನುವ ಕಥೆ ಈಗ ಗುತ್ತಿಗೆದಾರರದ್ದು. ರಾಜ್ಯಪಾಲರಿಗೆ ದೂರು ಕೊಟ್ಟರೂ ಏನೂ ಆಗುವುದಿಲ್ಲ ಎನ್ನುವುದು ಗುತ್ತಿಗೆದಾರರಿಗೂ ಗೊತ್ತಿದೆ.
ಸದ್ಯ ಅಭಿವೃದ್ಧಿಗೆ ಹಣ ಇಲ್ಲ!
ಇತ್ತ ಸಾವಿರಾರು ಕೋಟಿ ಹಣ ಗುತ್ತಿಗೆದಾರರಿಗೆ ಬಾಕಿ ಇದ್ದರೂ ನಮ್ಮಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳಿ ಮುಂದಿನ ದಿನಗಳಲ್ಲಿ ಗುತ್ತಿಗೆದಾರರ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಲಿದೆ ಎನ್ನುವ ಸಂದೇಶವನ್ನು ಡಿಸಿಎಂ ನೀಡಿದ್ದಾರೆ. ಒಂದು ಸರಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಅದರ ಡಿಸಿಎಂ ಹೇಳುವುದೇ ರಾಜ್ಯದ ದೃಷ್ಟಿಯಿಂದ ಒಳ್ಳೆಯ ಸೂಚನೆ ಅಲ್ಲ. ಇದ್ದಬದ್ದ ಹಣವನ್ನು ಗ್ಯಾರಂಟಿಗಳಿಗೆ ನೀಡಬೇಕಾಗಿರುವುದರಿಂದ ಅಭಿವೃದ್ಧಿ ಎನ್ನುವುದು ಇನ್ನು ಮರೀಚಿಕೆ ಆಗಲಿದೆ. ಪರಿಶಿಷ್ಟ ನಿಧಿಯನ್ನು ಕೂಡ ಆ ಸಮುದಾಯದ ಗ್ಯಾರಂಟಿಗೆ ಬಳಸುವುದಾಗಿದ್ದರೆ ಇವರ ಘೋಷಣೆಗಳಿಗೆ ಅರ್ಥ ಏನಿತ್ತು?
Leave A Reply