ಕರ್ನಾಟಕದ ಕಾಂಗ್ರೆಸ್ ಫಾರ್ಮುಲ ಮಧ್ಯಪ್ರದೇಶದಲ್ಲಿ ಠುಸ್!
ಎಲ್ಲಾ ಪಿಚ್ ಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಪಿಚ್ ಗಳು ಟೆಸ್ಟ್ ಮ್ಯಾಚಿಗಾಗಿಯೇ ಇದ್ದರೆ, ಕೆಲವು ಪಿಚ್ ಗಳು ಟೆಂಟ್ವಿ ಟೆಂಟ್ವಿ ಪಂದ್ಯಾಟಗಳಿಗೆಂದೆ ಮಾಡಲ್ಪಟ್ಟಿರುತ್ತವೆ. ಈ ಹೋಲಿಕೆಯನ್ನು ಕರ್ನಾಟಕ ಮತ್ತು ಮಧ್ಯಪ್ರದೇಶದ ಸಮರಾಂಗಣಕ್ಕೆ ಹೋಲಿಸಬಹುದು. ನಿಮ್ಮದು 40% ಸರಕಾರ ಎಂದು ಕರ್ನಾಟಕದಲ್ಲಿದ್ದ ಭಾರತೀಯ ಜನತಾ ಪಾರ್ಟಿಯ ಸರಕಾರದ ಮೇಲೆ ಆಗಿನ ವಿಪಕ್ಷ ಕಾಂಗ್ರೆಸ್ ಗೂಬೆ ಕೂರಿಸುತ್ತಿದ್ದಂತೆ ಕರ್ನಾಟಕದ ಬಿಜೆಪಿ ಇವರಿಗೆ ಹೇಗೆ ಗೊತ್ತಾಯಿತು ಎಂದು ಗರಬಡಿದವರಂತೆ ನಿಂತಿತು. “ಇರಬಹುದೇನೋ, ಯಾರಾದರೂ ಸಿಕ್ಕಿಬಿದ್ದರೆ ಬೀಳಲಿ ನನ್ನ ದಾರಿ ಸುಗಮವಾಗುತ್ತೆ” ಎಂದು ರಾಜ್ಯ ನಾಯಕರು ಕೊನೆಗೂ ಒಂದು ತಂಡವಾಗಿ ಹೋರಾಡಲೇ ಇಲ್ಲ. ಆದ್ದರಿಂದ ಆಡಳಿತ ಪಕ್ಷದ ವಿರುದ್ಧ ಆಗಿನ ವಿಪಕ್ಷ ಕಾಂಗ್ರೆಸ್ಸಿಗರು ಒಂದು ನರೆಟಿವ್ ಸೃಷ್ಟಿಸುವಲ್ಲಿ ಯಶಸ್ವಿಯಾದರು. ಯಾವಾಗ ಈ ರಣತಂತ್ರ ಯಶಸ್ವಿಯಾಯಿತೋ ಅದೇ ಚೆಂಡನ್ನು ತೆಗೆದುಕೊಂಡು ಬೇರೆ ಪಿಚ್ ನಲ್ಲಿ ಆಡಲು ಕಾಂಗ್ರೆಸ್ಸಿಗರು ಹೊರಟುಬಿಟ್ಟರು. ಆಗ ಅವರ ಎದುರಿನಲ್ಲಿ ಇದ್ದದ್ದು ಮಧ್ಯಪ್ರದೇಶದ ಆಟದ ಬಯಲು.
ವರ್ಷಾಂತ್ಯಕ್ಕೆ ಮಧ್ಯಪ್ರದೇಶ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಂತದಲ್ಲಿ ಅಲ್ಲಿನ ಆಡಳಿತ ಪಕ್ಷ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷ ಕಾಂಗ್ರೆಸ್ ಹೆಣೆದಿರುವ ತಂತ್ರವೇ ಕಾಮಗಾರಿಯಲ್ಲಿ ಕಮಿಷನ್. ಕರ್ನಾಟಕದಲ್ಲಿ 40% ಎನ್ನುವ ಟ್ಯಾಗ್ ಲೈನ್ ಕೊಟ್ಟು ಪೇಸಿಎಂ ಎನ್ನುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿ ಗೆದ್ದಿರುವ ಕಾಂಗ್ರೆಸ್ ಅದಕ್ಕೆ ಒಂದಿಷ್ಟು ನೀರು ಸೇರಿಸಿ 50% ಕಮೀಷನ್ ಎಂದು ಚಿಂತನೆ ನಡೆಸಿತು. ಒಂದು ಫಾರ್ಮುಲ ಒಂದು ಕಡೆ ಯಶಸ್ವಿಯಾದರೆ ಅದನ್ನೇ ಎಲ್ಲಾ ಕಡೆ ಬಳಸುವ ತಂತ್ರವನ್ನು ಕಾಂಗ್ರೆಸ್ ಅನುಸರಿಸಿತು. 50% ಕಮೀಷನ್ ನಮ್ಮಿಂದ ತೆಗೆದುಕೊಳ್ಳಲಾಗುತ್ತದೆ ಎಂದು ಗುತ್ತಿಗೆದಾರರು ಬರೆದು ಹೈಕೋರ್ಟಿಗೆ ಸಲ್ಲಿಸಿದ್ದಾರೆ ಎನ್ನಲಾದ ಒಂದು ಅರ್ಜಿಯನ್ನು ಹಿಡಿದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಟ್ವೀಟ್ ಮಾಡಿದ್ರು. ಇನ್ನು ಕಾಂಗ್ರೆಸ್ಸಿನ ದೊಡ್ಮನೆಯವರೇ ಟ್ವೀಟ್ ಮಾಡಿದ ಮೇಲೆ ನಾವು ಯಾವ ಲೆಕ್ಕ ಎಂದು ಕಾಂಗ್ರೆಸ್ ಮುಖಂಡರಾದ ಕಮಲನಾಥ್ ತರದವರು ತಾವು ಕೂಡ ಟ್ವೀಟ್ ಮಾಡಿದರು.
ಆಕ್ಟಿವ್ ಟೀಮ್ ಅಲ್ಲಿದ್ದ ಕಾರಣ ಎಂಪಿ ಸೇಫ್!
ಬಹುಶ: ಕರ್ನಾಟಕ ಬಿಜೆಪಿಯ ಸಾಮಾಜಿಕ ಜಾಲತಾಣ ಮುಖಂಡರು ಆಗಿದ್ದರೆ ಇವರು ನಿದ್ರೆಯಿಂದ ಎದ್ದು, ಮುಖ ತೊಳೆದು, ಚಾ ಕುಡಿದು, ಎಲ್ಲಾ ಪ್ರಾತ:ವಿಧಿ ಮುಗಿಸುವಷ್ಟರಲ್ಲಿ ಕಾಂಗ್ರೆಸ್ ಅರ್ಧಯುದ್ಧ ಗೆದ್ದಾಗುತ್ತಿತ್ತೇನೋ. ಆದರೆ ಪ್ರಿಯಾಂಕಾ ಮತ್ತು ತಂಡ ಮಧ್ಯಪ್ರದೇಶದ ಜನರ ಮನಸ್ಸಿನಲ್ಲಿ 50% ಕಮೀಷನ್ ಎನ್ನುವುದನ್ನು ಅಚ್ಚೊತ್ತಿಬಿಡುವುದು ಅಷ್ಟು ಸುಲಭವಾಗಿರಲಿಲ್ಲ. ಮಧ್ಯಪ್ರದೇಶದ ಬಿಜೆಪಿಯ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಪ್ರಮುಖ್ ನಿಮೋಷ್ ಪಾಠಕ್ ಈಗಾಗಲೇ ಮೈಗೆ ಮತ್ತು ಕೈಗೆ ಎಣ್ಣೆ ಬಿಟ್ಟು ಪಕ್ಷದ ಬೇಲಿಗಳನ್ನು ಭದ್ರಪಡಿಸಲು ಇಳಿದಾಗಿದೆ. ಈಗೊಂದು ಟ್ವಿಟ್ ಮೇಸೆಜ್ ವೈರಲ್ ಆಗುತ್ತಿರುವುದನ್ನು ನೋಡುತ್ತಿದ್ದ ಹಾಗೆ ಅವರು ಇಳಿರಾತ್ರಿಯಲ್ಲಿ ಕೂಡ ಎಚ್ಚೆತ್ತುಕೊಂಡಿದ್ದಾರೆ. ಅಂತಹ ಅರ್ಜಿಯನ್ನು ಬರೆದು ಹೈಕೋರ್ಟ್ ಮೆಟ್ಟಲೇರಿದ್ದು ಯಾರೆಂದು ನೋಡಲು ಅವರು ಕಾರ್ಯಾಚರಣೆಗೆ ಇಳಿದಿದ್ದಾರೆ. ಅದರ ಮೂಲವನ್ನು ಹಿಡಿದು ಹೊರಟರೆ ಅದು ಅಪ್ಪಟ ಸುಳ್ಳು ಅರ್ಜಿ ಎಂದು ಗೊತ್ತಾಗಿದೆ. ತಕ್ಷಣ ಬಿಜೆಪಿ ಮುಖಂಡರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸ್ವತ: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಗೃಹಸಚಿವ ಸರ್ವೋತ್ತಮ್ ಮಿಶ್ರಾ ಹಾಗೂ ಬಿಜೆಪಿ ಮುಖಂಡರು ಪ್ರಿಯಾಂಕಾ ವಾದ್ರಾ, ಕಮಲನಾಥ್ ಹಾಗೂ ಕೆಲವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶದ ಸುಮಾರು 40 ಕಡೆಗಳಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. ಈಗ ವಿಚಾರಣೆ ಆರಂಭವಾಗಿದೆ.
ಕೇಸು ದಾಖಲಿಸಿದ ಸಿಎಂ, ಹೋಂ ಮಿನಿಸ್ಟರ್!
ಈಗ ಚೆಂಡು ಕಾಂಗ್ರೆಸ್ ಅಂಗಳದಲ್ಲಿ ಬಿದ್ದಿದೆ. ಅವರೀಗ ಬಿಜೆಪಿ ಸರಕಾರ 50% ಕಮೀಷನ್ ಪ್ರೂವ್ ಮಾಡಬೇಕಿದೆ. ಅದರೊಂದಿಗೆ ಬಹಳ ಪ್ರಮುಖವಾಗಿ ಗುತ್ತಿಗೆದಾರರು ಕಮೀಷನ್ ಆರೋಪ ಮಾಡಿದ ಅರ್ಜಿಯ ಸತ್ಯಾಸತ್ಯತೆಯನ್ನು ಸಾಬೀತುಪಡಿಸಬೇಕಾಗಿದೆ. ಅದರೊಂದಿಗೆ ಗುತ್ತಿಗೆದಾರರು ಅಂತಹ ಅರ್ಜಿಯನ್ನು ಹೈಕೋರ್ಟಿನಲ್ಲಿ ಸಲ್ಲಿಸಿದ್ದಾರೆ ಎನ್ನುವುದನ್ನು ಕೂಡ ಈ ಕಾಂಗ್ರೆಸ್ಸಿಗರು ಸಾಬೀತುಪಡಿಸಬೇಕಿದೆ. ಯಾಕೆಂದರೆ ಎಂಪಿ ಸಿಎಂ ಚೌಹಾಣ್ ಕಾಂಗ್ರೆಸ್ಸಿನ ಪ್ರಿಯಾಂಕಾ ವಾದ್ರಾ, ಕಮಲನಾಥ್ ಮತ್ತಿತ್ತರರ ಮೇಲೆ ವಂಚನೆ ಕೇಸು ದಾಖಲಿಸಿದ್ದಾರೆ. ಈ ಒಟ್ಟು ಪ್ರಕರಣದಿಂದ ಕರ್ನಾಟಕದ ಬಿಜೆಪಿ ಕಲಿಯಬೇಕಾಗಿರುವುದು ಏನು? ನಮ್ಮ ಪಕ್ಷದ ಆಡಳಿತದ ಮೇಲೆ ಆರೋಪಗಳು ಬಂದಾಗ ಎಲ್ಲರೂ ಒಟ್ಟಿಗೆ ಸೇರಿ ಆರೋಪ ಮಾಡಿದವರ ಮೇಲೆ ಮುಗಿಬೀಳಬೇಕು. ಆದರೆ ಕರ್ನಾಟಕಕ್ಕೂ, ಮಧ್ಯಪ್ರದೇಶಕ್ಕೂ ಇರುವ ವ್ಯತ್ಯಾಸ ಏನೆಂದರೆ ಕರ್ನಾಟಕದಲ್ಲಿ ಬಿಜೆಪಿ ಗ್ರಹಚಾರಕ್ಕೆ ಕೆಂಪಣ್ಣ ಕಾರಣೀಕರ್ತರಾಗಿದ್ದರು. ಆದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಅರ್ಜಿಯನ್ನು ಹಿಡಿದು ಆಡಲು ಹೊರಟಿದ್ದರು. ಈಗ ಸಿಕ್ಕಿಬಿದ್ದಿದ್ದಾರೆ. ಸುನೀಲ್ ಕನಗೋಳ್ ಅದೃಷ್ಟ ಚೆನ್ನಾಗಿತ್ತು. ಕರ್ನಾಟಕದಲ್ಲಿ ಫಿಕ್ಸೆಡ್ ಸೂತ್ರ ಕ್ಲಿಕ್ ಆಯಿತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗರೇ ಗುಂಡಿಗೆ ಬಿದ್ದಿದ್ದಾರೆ!
Leave A Reply