ಕನ್ನಡದಲ್ಲಿ ಕಲಿತು ಇಸ್ರೋದಲ್ಲಿ ವಿಜ್ಞಾನಿಯಾದ ಸುಧೀಂದ್ರ!

ಕನ್ನಡ ಮಾಧ್ಯಮದಲ್ಲಿ ಮಕ್ಕಳು ಕಲಿತರೆ ಪ್ರಯೋಜನ ಏನು ಎಂದು ಯೋಚಿಸುವ ಪೋಷಕರೇ ಇವತ್ತಿನ ದಿನಗಳಲ್ಲಿ ಹೆಚ್ಚು. ಆದ್ದರಿಂದ ಕೆಳಮಧ್ಯಮ ವರ್ಗದ ಪೋಷಕರು ಕೂಡ ಎಷ್ಟೇ ಕಷ್ಟವಾದರೂ ಸಾಲಸೋಲ ಮಾಡಿ ಮಕ್ಕಳನ್ನು ಇಂಗ್ಲೀಷ್ ಮೀಡಿಯಂಗೆ ಸೇರಿಸುತ್ತಾರೆ. ಅದರಲ್ಲಿಯೂ ದೊಡ್ಡ ಹೆಸರಿರುವ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಕಲಿತರೆ ಮಾತ್ರ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಲು ಸಾಧ್ಯ ಎಂದು ನಂಬಿರುವ ಪೋಷಕ ವರ್ಗ ನಮ್ಮಲ್ಲಿ ದೊಡ್ಡದಿದೆ. ಆದರೆ ಬಾಲ್ಯದಲ್ಲಿ ಕಲಿಯುವ ವಿದ್ಯಾಭ್ಯಾಸಕ್ಕೂ ನಮ್ಮ ಸಾಧನೆಗೂ ತಾಳೆ ಹಾಕಲು ಸಾಧ್ಯವಿಲ್ಲ ಎಂದು ಇಸ್ರೋ ವಿಜ್ಞಾನಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಅವರ ಪೂರ್ಣ ಹೆಸರು ಸುಧೀಂದ್ರ ವೆಂಕಣ್ಣಚಾರ್ಯ ಬಿಂದಗಿ.
ಇವರು ಮೂಲತ: ಗದಗ ಜಿಲ್ಲೆಯ ಸೊರಟೂರು ಗ್ರಾಮದವರು. ಗದಗ ನಗರದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದ್ದಾರೆ. ಶಾಲಾ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದು, ವಿಷಯಗಳನ್ನು ಆಳವಾಗಿ ಮನವರಿಕೆ ಮಾಡಲು ಸಹಾಯವಾಯಿತು ಎಂದು ಹೇಳುವ ಇವರು ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ಆಗಬೇಕು ಎಂದು ಪ್ರತಿಪಾದಿಸುತ್ತಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ಬಿಟೆಕ್ ಪದವಿಯನ್ನು ಪಡೆದು 1986 ರಲ್ಲಿ ಇಸ್ರೋ ಸೇರಿಕೊಂಡಿದ್ದರು. ಜುಲೈ 14 ರಂದು ಚಂದ್ರಯಾನ -3 ಉಡಾವಣೆಯಾದ ವಾರದ ಬಳಿಕ ಸುಧೀಂದ್ರ ಇಸ್ರೋದಲ್ಲಿ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
ಗದಗದ ವೀರನಾರಾಯಣ ದೇವಸ್ಥಾನದ ಅಗ್ರಹಾರದಲ್ಲಿ ಬೆಳೆದಿರುವ ಸುಧೀಂದ್ರ ಅವರಿಗೆ ದೈವ ಬಲವೂ ಸಾಥ್ ನೀಡಿದೆ. ದೇವಸ್ಥಾನದ ವಾತಾವರಣ ಬದುಕಿನಲ್ಲಿ ಶಿಸ್ತು ಕಲಿಸಿತು ಎಂದು ಸುಧೀಂದ್ರ ಹೇಳುತ್ತಾರೆ. ಒಟ್ಟಿನಲ್ಲಿ ಚಂದ್ರಯಾನದ ಯಶಸ್ಸಿನಲ್ಲಿ ಸುಧೀಂದ್ರ ಅವರ ಪಾಲು ಕೂಡ ಇದೆ. ಆದರೆ ಈ ಸಾಧನೆಗೆ ಬಾಲ್ಯದ ಕನ್ನಡ ಶಿಕ್ಷಣ ಪೂರಕವಾಯಿತು ಎನ್ನುವುದು ಮಾತ್ರ ಕನ್ನಡಿಗರಿಗೂ ಹೆಮ್ಮೆಯ ಸಂಗತಿ.
Leave A Reply