ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
ಜನಸಂಖ್ಯೆಗೆ ತಕ್ಕಂತೆ ಮದ್ಯದಂಗಡಿ ಇಲ್ಲ. ಅದಕ್ಕಾಗಿ ರಾಜ್ಯ ಸರಕಾರ ಜನರ ಮೇಲಿನ ಅತೀ ಪ್ರೀತಿಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಮದ್ಯದಂಗಡಿಗಳನ್ನು ತೆರೆಯಲು ಚಿಂತಿಸುತ್ತಿದೆ. ಇದನ್ನು ನೋಡಿದಾಗ ಮದ್ಯಪ್ರಿಯರಿಗೆ ರಾಜ್ಯ ಸರಕಾರಕ್ಕೆ ನಮ್ಮ ಮೇಲೆ ಅದೆಷ್ಟು ಪ್ರೀತಿ ಎಂದು ಅನಿಸದೇ ಇರುವುದಿಲ್ಲ. ಯಾಕೆಂದರೆ ಗ್ರಾಮಗಳ ಕುಡುಕರು ನಗರಕ್ಕೆ ಬಂದು ಹತ್ತು ರೂಪಾಯಿ ವಸ್ತುವನ್ನು ಹದಿನೈದು ರೂಪಾಯಿಗೆ ಖರೀದಿಸುವ ಅವಶ್ಯಕತೆ ಇದೆ. ಅವರಿಗೆ ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಮದ್ಯದಂಗಡಿ ತೆರೆಯುತ್ತಿದ್ದೇವೆ ಹೊರತು ಖಜಾನೆ ತುಂಬಿಸುವ ಐಡಿಯಾ ಏನಿಲ್ಲ ಎಂದು ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ತಮ್ಮ ಸರಕಾರ ಅದೆಷ್ಟು ಜನಪರವಾಗಿ ಯೋಚಿಸುತ್ತಿದೆ ಎಂದು ಅವರವರೇ ಬೆನ್ನುತಟ್ಟಿಕೊಳ್ಳಬೇಕೆ ವಿನ: ಜನಸಾಮಾನ್ಯರಿಗೆ ಇವರ ಬಂಡವಾಳ ಗೊತ್ತಿದೆ. ಒಂದು ವೇಳೆ ಇವರಿಗೆ ನಿಜವಾಗಲೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಇವರು ಸರಕಾರಿ ಶಾಲೆಗಳನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುತ್ತಿದ್ದರು. ಗ್ರಾಮ ಮಟ್ಟದಲ್ಲಿ ಉತ್ತಮ ಸರಕಾರಿ ಶಾಲೆಗಳನ್ನು ನಿರ್ಮಿಸಿ ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಲು ಯೋಜನೆ ರೂಪಿಸುತ್ತಿದ್ದರು. ರಾಜ್ಯದ ಎಷ್ಟೋ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರೇ ಇಲ್ಲ. ಇಡೀ ಶಾಲೆಗೆ ಒಂದಿಬ್ಬರು ಟೀಚರ್ ಗಳಿರುವ ಎಷ್ಟೋ ಶಾಲೆಗಳು ರಾಜ್ಯದ ಮೂಲೆ ಮೂಲೆಯಲ್ಲಿವೆ. ಹಾಗಾದರೆ ಮಕ್ಕಳ ಅನುಪಾತಕ್ಕೆ ಸರಿಯಾಗಿ ಶಿಕ್ಷಕರು ಬೇಡವೇ? ಈ ಬಗ್ಗೆ ಶಿಕ್ಷಣ ಸಚಿವರು ಯಾಕೆ ಯೋಚಿಸುವುದಿಲ್ಲ.
ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
ಇನ್ನು ಮಂಗಳೂರಿನಲ್ಲಿ ಪ್ರಯಾಣಿಕರಿಗೆ ಅನುಗುಣವಾಗಿ ಸರಕಾರಿ ಸಿಟಿ ಬಸ್ಸುಗಳು ಇಲ್ಲ. ಇರುವ ಬೆರಳೆಣಿಕೆಯ ನರ್ಮ್ ಬಸ್ಸುಗಳು ಯಾವುದಕ್ಕೂ ಸಾಕಾಗುವುದಿಲ್ಲ. ಹಾಗಾದರೆ ಅದನ್ನು ಸಾರಿಗೆ ಸಚಿವರು ಯಾಕೆ ಚಿಂತಿಸುವುದಿಲ್ಲ. ಸಕರಾತ್ಮಕವಾಗಿ ಯಾವುದನ್ನು ಮಾಡಬೇಕೋ ಅದನ್ನು ಮಾಡುವುದಿಲ್ಲ. ಬರಿ ಕುಡುಕರ ಕಷ್ಟಸುಖ ಮಾತ್ರ ಯೋಚಿಸುವುದು ಇವರ ಚಾಳಿಯಾಗಿ ಬಿಟ್ಟಿದೆ. ಇಲ್ಲಿಯ ತನಕ ಜನಸಾಮಾನ್ಯ ಮದ್ಯದಂಗಡಿ ದೂರ ಇದೆ ಎಂದು ಕುಡಿಯುವುದನ್ನು ಮುಂದೂಡುವ ಸಾಧ್ಯತೆ ಇತ್ತು. ಇನ್ನು ತಮ್ಮ ಗ್ರಾಮದಲ್ಲಿಯೂ ಮದ್ಯದಂಗಡಿ ಇದ್ರೆ ನಾಲ್ಕು ಹೆಜ್ಜೆ ಹಾಕಿ ಕುಡಿಯಲು ಕುಳಿತುಕೊಳ್ಳುತ್ತಾನೆ. ಒಂದು ಮನೆಯ ಯಜಮಾನ ಕುಡಿದರೆ ಲಾಭ ಆಗುವುದು ಸರಕಾರದ ಬೊಕ್ಕಸಕ್ಕೆ ಮಾತ್ರ. ಅದು ಬಿಟ್ಟು ಕುಡಿದವನ ತಾಯಿ, ಹೆಂಡತಿ, ತಂಗಿ, ಮಕ್ಕಳು ಸಹಿತ ಎಲ್ಲರಿಗೂ ಅದೊಂದು ಶಿಕ್ಷೆ. ನೆಮ್ಮದಿಗೆ ಭಂಗ. ಇದು ರಾಜ್ಯ ಸರಕಾರಕ್ಕೆ ಗೊತ್ತಿಲ್ಲ ಎಂದಲ್ಲ. ಆದರೆ ಬೊಕ್ಕಸ ಖಾಲಿಯಿದೆಯಲ್ಲ. ಮುಂದಿನ ಲೋಕಸಭಾ ಚುನಾವಣೆಯ ತನಕ ಉಚಿತ ಗ್ಯಾರಂಟಿಗಳನ್ನು ನೀಡಬೇಕಲ್ಲ. ಮೇಲಾಗಿ ಸರಕಾರಿ ನೌಕರರ ಸಂಬಳ, ಭತ್ಯೆ, ಸರಕಾರದ ಖರ್ಚು, ವೆಚ್ಚ, ಸಚಿವರುಗಳಿಗೆ ಹೊಸ ಇನೋವಾ ತೆಗೆದುಕೊಳ್ಳಲು ಹಣ ಹೀಗೆ ಫಂಡ್ ಎಷ್ಟು ಇದ್ದರೂ ಸಾಲುವುದಿಲ್ಲ. ಅದಕ್ಕೆಲ್ಲಾ ಹಣ ಎಲ್ಲಿಂದ ಹೊಂದಿಸುವುದು. ಅದಕ್ಕೆ ಕುಡುಕರನ್ನು ಇನ್ನಷ್ಟು ಕುಡುಕರನ್ನಾಗಿಸಬೇಕು. ಅವರು ಈ ಹಿಂದೆ ಕ್ವಾಟರ್ ಕುಡಿಯುತ್ತಿದ್ದರೆ ಇನ್ನು ಹಾಫ್ ಕುಡಿಯಬೇಕು. ಒಟ್ಟಿನಲ್ಲಿ ಅವರು ಬೆಳಗ್ಗಿನಿಂದ ಸಂಜೆ ತನಕ ದುಡಿದು ರಾತ್ರಿ ಮದ್ಯದಂಗಡಿಯಲ್ಲಿ ಹಣ ಪೋಲು ಮಾಡಬೇಕು. ಆ ಹಣದಿಂದ ರಾಜ್ಯ ಸರಕಾರ ನಡೆಯಬೇಕು.
ಖರ್ಚು ಯಾರಿಗೆ ಬೇಕ್ರಿ, ಆದಾಯ ಬರಲಿ!
ಮದ್ಯದಂಗಡಿಗಳು ಹೆಚ್ಚಾದರೆ ಸರಕಾರಕ್ಕೆ ಆದಾಯ. ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರನ್ನು ನೇಮಕ ಮಾಡಿದರೆ ಖರ್ಚು. ಇಲ್ಲಿ ಮೊದಲೇ ಇರುವ ಖರ್ಚುಗಳನ್ನು ತೂಗಿಸಿಕೊಂಡು ಹೋಗುವುದೇ ಸವಾಲಾಗಿರುವಾಗ ಇನ್ನಷ್ಟು ಖರ್ಚು ಯಾರಿಗೆ ಬೇಕು. ಆದ್ದರಿಂದ ಪಾಪ, ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿಗಳು ಹೆಚ್ಚಾಗಲಿವೆ. ತಿಮ್ಮಾಪುರ ಅವರ ಜನಪರ ಕಾಳಜಿ ಮೆಚ್ಚಿ ಅವರಿಗೆ ಉತ್ತಮ ಸಚಿವ ಬಿರುದು ಕೊಡಬೇಕು!
Leave A Reply