ಒಂದೂವರೆ ಕೋಟಿ ರೂ ಬಿಲ್ ಬರುವ ಹಿಂದಿನ ಲಾಜಿಕ್!
ದಸರಾದ ಈ ಸಮಯದಲ್ಲಿಯೂ ನಮ್ಮ ವಾರ್ಡುಗಳು ಕ್ಲೀನ್ ಆಗಿ ಇರಬೇಕು ಎಂದು ಅಂದುಕೊಳ್ಳದ ಕಾರ್ಪೋರೇಟರ್ ಗಳು ತಮ್ಮ ವಾರ್ಡಿಗೆ ಮಾತ್ರ ಮೋಸ ಮಾಡುವುದಲ್ಲ, ಅವರು ತಮ್ಮ ಆತ್ಮಸಾಕ್ಷಿಗೂ ದ್ರೋಹ ಬಗೆಯುತ್ತಿದ್ದಾರೆ. ಅಂತವರು ಮುಂದಿನ ವಾರ ಯಾವುದಾದರೂ ಸಂಘ, ಸಂಸ್ಥೆಯ ಶಾರದಾ ಮಹೋತ್ಸವದಲ್ಲಿ ವೇದಿಕೆಯ ಮೇಲೆ ಕುಳಿತು ನಗೆ ಬೀರುತ್ತಾ ಇರುತ್ತಾರೆ. ಇಂತವರನ್ನು ಆರಿಸಿ ಕಳುಹಿಸಿದ ಮಹಾನುಭಾವ ಮತದಾರ ನವರಾತ್ರಿಯ ಈ ಸಮಯದಲ್ಲಿಯೂ ತನ್ನ ವಾರ್ಡು ಗಲೀಜು ಇರುವುದನ್ನು ಕಣ್ಣಾರೆ ಕಂಡು ತನ್ನ ತೆರಿಗೆಯ ಹಣ ಒಂದೂವರೆ ಕೋಟಿ ರೂಪಾಯಿ ಯಾರದ್ದೋ ತೆವಲಿಗೆ ಪೋಲಾಗುತ್ತಿರುವುದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾಗಿದೆ. ಯಾಕೆಂದರೆ ಮತ ಕೊಟ್ಟು ತನ್ನ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮೂರುವರೆ ವರ್ಷವಾಯಿತು. ಆವತ್ತಿನಿಂದ ಇವತ್ತಿನ ವಾರ್ಡು ಆವತ್ತು ಹೇಗೆ ಇತ್ತೋ ಇವತ್ತಿಗೂ ಹಾಗೆ ಇದೆ. ಆದರೆ ತಿಂಗಳು ತಿಂಗಳು ಮಾತ್ರ ಒಂದೂವರೆ ಕೋಟಿ ಆತ ತನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಜನಸಾಮಾನ್ಯ ಪಾವತಿಸುತ್ತಿದ್ದಾನೆ.
ಬೇಕಾದರೆ ಇವತ್ತಿನ ಜಾಗೃತ ಅಂಕಣದಲ್ಲಿ ನಾನು ಪೋಸ್ಟ್ ಮಾಡಿದ ಫೋಟೋಗಳನ್ನೇ ನೋಡಿ. ಇದೇನೂ ಪಾಲಿಕೆಯ ಯಾವುದೋ ಮೂಲೆಯ ವಾರ್ಡ್ ಅಲ್ಲ. ಇದು ಮಣ್ಣಗುಡ್ಡೆಯ ಗುರ್ಜಿಯಿಂದ ಕೆನರಾ ಹೈಸ್ಕೂಲ್ ಉರ್ವಾ ತನಕ ನೂರು ಮೀಟರ್ ಒಳಗಿನ ಏರಿಯಾದಲ್ಲಿ ತೆಗೆದ ಫೋಟೋ. ಇಲ್ಲಿಯೇ ಆಸುಪಾಸಿನಲ್ಲಿ ಪಾಲಿಕೆಯ ಕಮೀಷನರ್ ಬಂಗ್ಲೆ ಇದೆ. ಘಟಾನುಘಟಿಗಳ ಮನೆಗಳಿವೆ. ಇಲ್ಲಿಯೇ ಈ ಪರಿಸ್ಥಿತಿ ಇದ್ರೆ ಉಳಿದ 59 ವಾರ್ಡುಗಳ ಕಥೆ ಏನು?
ಒಂದೂವರೆ ಕೋಟಿ ರೂ ಬಿಲ್ ಬರುವ ಹಿಂದಿನ ಲಾಜಿಕ್!
ಹಾಗಾದರೆ ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರು ಏನು ಮಾಡ್ತಾ ಇದ್ದಾರೆ. ನಿಮಗೆ ಅರ್ಥವಾಗುವ ಒಂದು ಸಿಂಪಲ್ ಲಾಜಿಕ್ ಹೇಳುತ್ತೇನೆ. ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲವು ನಗರ ಭಾಗದ ಹೃದಯದಂತಿರುವ ವಾರ್ಡುಗಳಲ್ಲಿ ನಿತ್ಯ ಕಸ ಗುಡಿಸಬೇಕು ಎನ್ನುವ ನಿಯಮ ಇದೆ. ಉದಾಹರಣೆಗೆ ಹಿಂದಿನ ಬಾಲಾಜಿ ಟಾಕೀಸಿನಿಂದ ಲೇಡಿಹಿಲ್, ಲೇಡಿಹಿಲ್ ನಿಂದ ಪಿವಿಎಸ್, ಪಿವಿಎಸ್ ನಿಂದ ಹಂಪನಕಟ್ಟೆ, ಹಂಪನಕಟ್ಟೆಯಿಂದ ರಥಬೀದಿ. ಒಂದು ರಸ್ತೆಯನ್ನು ನಿತ್ಯ ಗುಡಿಸಲು ಇಂತಿಷ್ಟು ಜನ ಕಾರ್ಮಿಕರು ಬೇಕಾಗುತ್ತಾರೆ ಎನ್ನುವ ಕಾರಣಕ್ಕೆ ಕಾರ್ಮಿಕರ ಸಂಖ್ಯೆಯನ್ನು ನಿಗದಿಪಡಿಸಿರುತ್ತಾರೆ. ಅಷ್ಟೂ ಸಿಬ್ಬಂದಿಗಳಿಗೆ ಕನಿಷ್ಟ ವೇತನ ನಿಯಮಾವಳಿಗಳ ಪ್ರಕಾರ ವೇತನ ನಿಗದಿಪಡಿಸಲಾಗಿರುತ್ತದೆ. ಉದಾಹರಣೆಗೆ ಪ್ರತಿ ನಿತ್ಯ ಒಬ್ಬರಿಗೆ 600 ಎಂದೇ ಇಟ್ಟುಕೊಳ್ಳೋಣ. ಅದನ್ನೆಲ್ಲಾ ಲೆಕ್ಕ ಹಾಕಿ ಒಟ್ಟು ಬಿಲ್ ತಿಂಗಳಿಗೆ ರೆಡಿ ಇರುತ್ತದೆ. ಈ ಪ್ರಮುಖ ರಸ್ತೆಗಳನ್ನು ನಿತ್ಯ ಗುಡಿಸದಿದ್ದರೆ ಯಾರಾದರೂ ಕೇಳಬಹುದು ಎನ್ನುವ ಹೆದರಿಕೆಯಿಂದ ಬೇರೆ ರಸ್ತೆ ಅಲ್ಲದಿದ್ದರೂ ಈ ರಸ್ತೆಯನ್ನಾದರೂ ಕ್ಲೀನ್ ಮಾಡಿಟ್ಟುಕೊಳ್ಳುತ್ತಾರೆ ಎಂದರೆ ಆಂಟೋನಿ ವೇಸ್ಟ್ ನಾವು ಯಾರಿಗೂ ಕೇರ್ ಮಾಡುವುದಿಲ್ಲ ಎಂದು ಏಳೆಂಟು ವರ್ಷಗಳಿಂದ ತೋರಿಸುತ್ತಾ ಬರುತ್ತಿದೆ. ಪ್ರಮುಖ ರಸ್ತೆಗಳ ಕಥೆಯೇ ಹೀಗಾದರೆ ಇನ್ನು ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಗುಡಿಸುವ ರಸ್ತೆಗಳನ್ನು ಕೇಳುವವರು ಯಾರು?
ಇಚ್ಚಾಶಕ್ತಿಯೇ ಸತ್ತು ಹೋಗಿರುವಾಗ ಏನು ಮಾಡುವುದು?
ಆಂಟೋನಿಯಿಂದ ಕೆಲಸ ಮಾಡಿಸಲು ಧಮ್ ಇಲ್ಲದವರು ಮುಂದಿನ ಬಾರಿ ಕಾರ್ಪೋರೇಟರ್ ಆಗುವುದು ಬಿಟ್ಟು ಬೇರೆ ಕೆಲಸ ನೋಡುವುದು ಉತ್ತಮ. ಈಗ ಆಂಟೋನಿ ವೇಸ್ಟ್ ನವರು ಬಿಡಿ, ಅವರಿಗೆ ನಮ್ಮ ಪಾಲಿಕೆಯ ಸ್ವಚ್ಚತೆಯ ಬಗ್ಗೆ ಬಿದ್ದು ಹೋಗಿಲ್ಲ, ಅವರು ಹಣ ಮಾಡಲು ಮಾತ್ರ ಬಂದಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆದರೆ ಬಿಳಿಯಾನೆಯಂತಿರುವ ಆರೋಗ್ಯ ವಿಭಾಗದವರು ಏನು ಮಾಡುತ್ತಿದ್ದಾರೆ. ನಗರ ಸ್ವಚ್ಚವಾಗಿಟ್ಟುಕೊಳ್ಳುವುದು ಅವರಿಗೆ ಬೇಡವೇ? ಸರಿ, ಅವರು ಸಂಬಳಕ್ಕಾಗಿ ದಿನದೂಡುತ್ತಿದ್ದಾರೆ ಎಂದೇ ಅಂದುಕೊಳ್ಳೋಣ. ಮನಪಾ ಸದಸ್ಯರು. ಅವರ ಬಾಯಲ್ಲಿ ಅವಲಕ್ಕಿ ತುಂಬಿದೆಯಾ? ನವರಾತ್ರಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ರಥಬೀದಿ, ಕುದ್ರೋಳಿ ದೇವಸ್ಥಾನದ ಶಾರದಾ ಮಹೋತ್ಸವಕ್ಕೆ ದೇಶ, ವಿದೇಶದಿಂದ ಭಕ್ತರು ಆಗಮಿಸುತ್ತಾರೆ. ಹೀಗಿರುವಾಗ ಇಲ್ಲಿರುವ ರಸ್ತೆಗಳು ಹೀಗೆ ಆದರೆ ಹೇಗೆ? ಇನ್ನು ಮಂಗಳಾದೇವಿ, ಮಾರಿಗುಡಿ ದೇವಸ್ಥಾನಕ್ಕೂ ಜನಸಾಗರ ಹರಿದು ಬರುತ್ತದೆ. ಅಲ್ಲಿಗೆ ಹೋಗುವ ರಸ್ತೆಗಳು ಕೂಡ ಸ್ವಚ್ಚತೆ ಕಾಣದಿದ್ದರೆ ಹೇಗೆ? ನವರಾತ್ರಿಯಲ್ಲಿಯೇ ಈ ಪರಿಸ್ಥಿತಿ ಆದರೆ ಮೆಚ್ಚುತ್ತಾನಾ ಪರಮಾತ್ಮ.!!
Leave A Reply