ಇಚ್ಚಾಶಕ್ತಿ, ದೂರದೃಷ್ಟಿ ಮತ್ತು ಸೇವಾ ಕಾರ್ಯ ಎಂಬ ಮೂರು ಬಿಟ್ಟ ಪಾಲಿಕೆ!
ಒಂದು ಸಂಭ್ರಮ ಎಂದರೆ ಅದರ ಜೊತೆ ಆ ಸಂಭ್ರಮ ನಡೆಯುತ್ತಿರುವ ಪ್ರದೇಶದ ಆಡಳಿತ ನಡೆಸುವವರಿಗೂ ಒಂದು ಜವಾಬ್ದಾರಿ ಎಂದು ಇರುತ್ತದೆ. ಮೇಯರ್ ಅಥವಾ ಕಮೀಷನರ್ ಸ್ಥಾನಕ್ಕೆ ಗೌರವ ಹೆಚ್ಚಾಗುವುದು ಅದರಕ್ಕಿರುವ ಜವಾಬ್ದಾರಿಯನ್ನು ಅವರು ನಿರ್ವಹಿಸಿದಾಗ ಮಾತ್ರ. ನಾವು ಹೆಮ್ಮೆಯಿಂದ ಮಂಗಳೂರು ದಸರಾ ಎಂದು ಹೇಳುತ್ತೇವೆ. ಅದಕ್ಕಾಗಿ ಪಾಲಿಕೆ ಕಡೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದಕ್ಕಾಗಿ ಪ್ರಚಾರ ನೀಡಲಾಗುತ್ತದೆ. ಅಧಿಕಾರದಲ್ಲಿರುವ ಪಕ್ಷ ಅಷ್ಟಕ್ಕೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಎದೆಯುಬ್ಬಿಸಿ ನಡೆದರೆ ಸಾಕಾ? ಮೇಲೆ ಬಲ್ಬ್ ಗಳು ಉರಿದು ಕೆಳಗೆ ಕಸ ರಾಶಿ ಬಿದ್ದರೆ ಅದನ್ನು ನೋಡಬೇಕಾಗಿರುವುದು ಪಾಲಿಕೆ ಜವಾಬ್ದಾರಿ ಅಲ್ಲವೇ?
ಕಸ ತೆಗೆಯುವವರು ಗತಿ ಇಲ್ಲವೇ?
ಈಗ ಮಂಗಳೂರು ನಗರದ ಮುಖ್ಯಭಾಗವನ್ನೇ ತೆಗೆದುಕೊಳ್ಳಿ. ಒಂದು ಕಡೆ ಕುದ್ರೋಳಿ ದೇವಸ್ಥಾನದಲ್ಲಿ ಮಹೋತ್ಸವ. ಇನ್ನೊಂದೆಡೆ ರಥಬೀದಿಯ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಆಚಾರ್ಯ ಮಠದ ಎದುರು ಶಾರದಾ ದೇವಿಯ ಅದ್ದೂರಿ ಉತ್ಸವ. ಇತ್ತ ಕಟ್ಟೆಮಾರ್ ಶಾರದೆಗೆ 50 ರ ಸಂಭ್ರಮ, ಈ ಕಡೆ ವಿ.ಟಿ.ರಸ್ತೆಗೆ ಬಂದರೆ ಕೃಷ್ಣ ಮಂದಿರದ ಶಾರದೆಗೆ 25 ರ ಸಡಗರ. ಅಲ್ಲಲ್ಲಿ ಶಾರದಾ ದೇವಿಯನ್ನು ಪೂಜಿಸಿ ಸಂಭ್ರಮಿಸುವ ಕಾಲಘಟ್ಟದಲ್ಲಿ ಆಯಾ ವಾರ್ಡಿನ ಕಾರ್ಪೋರೇಟರ್ ಗಳಿಗೆ ಒಂದು ಜವಾಬ್ದಾರಿ ಎನ್ನುವುದು ಬೇಡವೇ? ಈ ಎಲ್ಲಾ ಶಾರದಾ ಮಾತೆಯ ದರ್ಶನಕ್ಕೆ ಜಿಲ್ಲೆ, ರಾಜ್ಯ, ರಾಷ್ಟ್ರದಿಂದಲೂ ಜನರು ಬರುತ್ತಾರೆ. ಈ ಸಂದರ್ಭದಲ್ಲಿ ಜಾತ್ರೆ, ಉತ್ಸವ ಎಂದು ಸಂಭ್ರಮದಲ್ಲಿ ಕಸದ ರಾಶಿ ಸಹಜವಾಗಿ ಈ ರಸ್ತೆಗಳಲ್ಲಿ ಕಾಣುತ್ತದೆ. ಆಗ ಆಯಾ ವಾರ್ಡಿನಲ್ಲಿ ಪಾಲಿಕೆ ಸದಸ್ಯರು ಏನು ಮಾಡಬೇಕು. ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರಿಗೆ ಹೇಳಿ ನಿತ್ಯ ಬೆಳಿಗ್ಗೆ, ಸಂಜೆ ಕಸ ತೆಗೆಸುವಂತಹ ವ್ಯವಸ್ಥೆ ಮಾಡಬೇಕು. ಆಗಿದೆಯಾ? ಇಲ್ಲ. ಆಗಿದ್ದರೆ ಇದೇ ಜಾಗೃತ ಅಂಕಣದಲ್ಲಿ ಮೇಯರ್, ಪಾಲಿಕೆ ಸದಸ್ಯರನ್ನು ಹೊಗಳುತ್ತಿದ್ದೆ. ಆದರೆ ಹಾಗೇ ಆಗುತ್ತಿಲ್ಲವಲ್ಲ. ಹಾಗಾದರೆ ಪಾಲಿಕೆಯಲ್ಲಿ ಆಡಳಿತ ಎನ್ನುವುದು ಇದೆಯಾ ಅಥವಾ ಮಲಗಿದೆಯಾ ಎನ್ನುವುದನ್ನು ಅವರೇ ಹೇಳಬೇಕು.
ಫ್ಲೆಕ್ಸ್ ಹಾಕಿ ಹೈಕೋರ್ಟ್ ಆದೇಶ ಉಲ್ಲಂಘನೆ…
ಎರಡನೇಯದಾಗಿ ಕರ್ನಾಟಕದ ಹೈಕೋರ್ಟ್ ರಾಜ್ಯದಲ್ಲಿ ಫ್ಲೆಕ್ಸ್ ಇದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನೀವು ಪಾಲಿಕೆಗೆ ಹಣ ಕಟ್ಟಿದರೂ ಫೆಕ್ಸ್ ಹಾಕಲು ಪಾಲಿಕೆ ಅನುಮತಿ ನೀಡುವಂತಿಲ್ಲ. ಆದರೆ ಒಮ್ಮೆ ಮಂಗಳೂರು ನಗರದೊಳಗೆ ಸುತ್ತಾಡಿ ಬನ್ನಿ. ಫೆಕ್ಸ್ ಗಳ ಅಬ್ಬರ ಕಾಣಿಸುತ್ತದೆ. ಎಲ್ಲಿಯ ತನಕ ಫುಟ್ ಪಾತ್ ಮೇಲೆಯೂ ನಿಲ್ಲಿಸಿದ್ದಾರೆ. ಮೊದಲೇ ರಸ್ತೆಯಲ್ಲಿ ಕಾಲಿಡಲಾಗದಷ್ಟು ವಾಹನಗಳು ನವರಾತ್ರಿಯ ದಿನಗಳಂದು ಓಡಾಡ್ತಾ ಇರುತ್ತವೆ. ಜನರು ಫುಟ್ ಪಾತ್ ಮೇಲೆ ಹೋಗೋಣ ಎಂದರೆ ಅಲ್ಲಿ ಈ ಫ್ಲೆಕ್ಸ್ ಉಪಟಳ. ಹಾಗಾದ್ರೆ ಪಾಲಿಕೆ ನೇರವಾಗಿ ಹೈಕೋರ್ಟ್ ಆದೇಶವನ್ನು ಕ್ಯಾರೇ ಮಾಡುತ್ತಿಲ್ಲವೇ? ಫ್ಲೆಕ್ಸ್ ಹಾಕುವವರ ಮತ್ತು ಪಾಲಿಕೆಯ ಕಂದಾಯ ವಿಭಾಗದವರ ಅಪವಿತ್ರ ಮೈತ್ರಿಯ ಎದುರು ಪಾಲಿಕೆ ಆಡಳಿತ ಮಂಡಿಯೂರಿದೆಯಾ?
ಪೇಂಟಾ ಅಥವಾ ವಾಟರ್ ಕಲ್ಲಾರಾ ಡಿವೈಡರ್ ಗಳಿಗೆ!
ಇನ್ನು ಇವತ್ತಿನ ಅಂಕಣದ ಮೂರನೇ ವಿಷಯ. ಕುದ್ರೋಳಿ ಶಾರದಾ ಮಾತೆಯ ಶೋಭಾಯಾತ್ರೆ ಸಾಗುವ ದಾರಿಯಲ್ಲಿರುವ ಡಿವೈಡರ್ ಗಳಿಗೆ ನವರಾತ್ರಿಯ ಸಮಯದಲ್ಲಿ ಪೇಂಟ್ ಹೊಡೆಯಲಾಗಿದೆ. ಅದು ಪೇಂಟಾ ಅಥವಾ ವಾಟರ್ ಕಲ್ಲರಾ ಎಂದು ಗುತ್ತಿಗೆದಾರರೇ ಹೇಳಬೇಕು. ಪೇಟಿಂಗ್ ಗಾಗಿ ಪಾಲಿಕೆ ನಮ್ಮ ನಿಮ್ಮ ತೆರಿಗೆಯ ಹಣದಿಂದ ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ. ಹಾಗಿರುವಾಗ ಪೇಟಿಂಗ್ ಮಾಡಬೇಕೆ ವಿನ: ಕಾಟಾಚಾರದ ಕೆಲಸ ಮಾಡಬಾರದು. ಒಟ್ಟಿನಲ್ಲಿ ಈ ಮೂರು ವಿಷಯಗಳು ಈ ನವರಾತ್ರಿಯಲ್ಲಿ ಪಾಲಿಕೆಯ ಮುಂದೆ ಇಟ್ಟಿದ್ದೇನೆ. ಮಲಗಿರುವವರನ್ನು ಎಬ್ಬಿಸಬಹುದು. ಆದರೆ ಇಚ್ಚಾಶಕ್ತಿ, ದೂರದೃಷ್ಟಿ ಮತ್ತು ಸೇವಾ ಕಾರ್ಯವನ್ನು ಮರೆತು ಮಲಗಿದವರನ್ನು ಎಬ್ಬಿಸುವುದೇ ವೇಸ್ಟ್, ಮಲಗಲಿಬಿಡಿ!
Leave A Reply