ಸ್ಪೀಕರ್ ಮಾಡಿದ್ದು ಮುಸ್ಲಿಮರ ಮೇಲಿನ ಪ್ರೀತಿಯಿಂದ!
ಖಾದರ್ ಮುಸ್ಲಿಂ ಆಗಿರುವುದಕ್ಕೆ ಸ್ಪೀಕರ್ ಆಗಿದ್ದಾ ಜಮೀರ್!
ಕಾಂಗ್ರೆಸ್ 16 ಜನರಿಗೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡಿತ್ತು. ಅದರಲ್ಲಿ 9 ಜನ ಗೆದ್ದು ಬಂದಿದ್ದೇವೆ. ಅದರಲ್ಲಿ ಐದು ಜನರಿಗೆ ಉತ್ತಮ ಸ್ಥಾನಮಾನ ನೀಡಲಾಗಿದೆ. ಇಲ್ಲಿಯ ತನಕ ವಿಧಾನಸಭಾಧ್ಯಕ್ಷ ಸ್ಥಾನ ಯಾವ ಮುಸಲ್ಮಾನನಿಗೂ ಸಿಕ್ಕಿರಲಿಲ್ಲ. ಅದೀಗ ಯು.ಟಿ.ಖಾದರ್ ಅವರಿಗೆ ಸಿಕ್ಕಿದೆ. ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಯು.ಟಿ.ಖಾದರ್ ಎದುರು ಕೈ ಮುಗಿದು ನಮಸ್ಕಾರ ಮಾಡುತ್ತಾರೆ. ಇದಕ್ಕೆಲ್ಲಾ ಕಾಂಗ್ರೆಸ್ ಕಾರಣ ಎಂದು ಜಮೀರ್ ಅಹ್ಮದ್ ಖಾನ್ ತೆಲಂಗಾಣದಲ್ಲಿಯೋ ಎಲ್ಲಿಯೋ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ. ಅಲ್ಲಿಗೆ ಸಾಂವಿಧಾನಿಕ ಹುದ್ದೆ ಸಭಾಧ್ಯಕ್ಷ ಸ್ಥಾನಕ್ಕೂ ಕಾಂಗ್ರೆಸ್ ಸಚಿವ ಜಮೀರ್ ಧರ್ಮದ ಲೇಬಲ್ ಅಂಟಿಸಿಬಿಟ್ಟಿದ್ದಾರೆ.
ಖಾದರ್ ಗೆಲುವಿಗೆ ಮುಸ್ಲಿಮರು ಮಾತ್ರ ಕಾರಣಾನಾ?
ಬಹುಶ: ವೈಯಕ್ತಿಕವಾಗಿ ಯು.ಟಿ.ಖಾದರ್ ಅವರನ್ನು ಕೇಳಿದರೂ ಈ ಮಾತನ್ನು ಅವರು ಒಪ್ಪಲಿಕ್ಕಿಲ್ಲ. ಯಾಕೆಂದರೆ ಖಾದರ್ ಬರಿ ಮುಸ್ಲಿಮರ ವೋಟುಗಳನ್ನು ನಂಬಿ ಅವರ ಕ್ಷೇತ್ರ ಮಂಗಳೂರು ಅಂದರೆ ಹಿಂದಿನ ಉಳ್ಳಾಲದಲ್ಲಿ ರಾಜಕೀಯ ಮಾಡಿಲ್ಲ. ಹಾಗೆ ನೋಡಿದರೆ ಖಾದರ್ ಅವರನ್ನು ಅವರ ವಿಧಾನಸಭಾ ಕ್ಷೇತ್ರದಲ್ಲಿ ನಖಶಿಖಾಂತ ದ್ವೇಷಿಸುವ ಮುಸ್ಲಿಮರ ಸಂಘಟನೆಗಳಿವೆ. ಅವರ ವಿರುದ್ಧ ಪಕ್ಷೇತರರಾಗಿ ಮುಸ್ಲಿಮರೇ ಸ್ಪರ್ಧಿಸುತ್ತಾರೆ. ಎಸ್ ಡಿಪಿಐ ಈ ಚುನಾವಣೆಯಲ್ಲಿ ಖಾದರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಇಳಿಸಿತ್ತು. ಆದರೂ ಖಾದರ್ ಈ ಸಲವೂ ಸೇರಿದಂತೆ ಐದನೇ ಬಾರಿ ಗೆದ್ದಿದ್ದಾರೆ. ಹಾಗಾದರೆ ಇದಕ್ಕೆ ಕಾರಣ ಮುಸ್ಲಿಮರು ಮಾತ್ರಾನಾ?
ಖಾದರ್ ಅವರನ್ನು ಅವರ ಕ್ಷೇತ್ರದಲ್ಲಿ ಹಿಂದೂಗಳು ಕೂಡ ಅಷ್ಟೇ ಇಷ್ಟಪಡುತ್ತಾರೆ!
ಖಾದರ್ ಅವರನ್ನು ಉಳ್ಳಾಲದಲ್ಲಿ ಮುಸ್ಲಿಮರಾದಿಯಾಗಿ ಹಿಂದೂಗಳು ಕೂಡ ಅಷ್ಟೇ ಪ್ರೀತಿಸುತ್ತಾರೆ. ಕೆಲವೊಮ್ಮೆ ಖಾದರ್ ನಡೆಗಳು ಎಷ್ಟರಮಟ್ಟಿಗೆ ಹಿಂದೂಗಳಿಗೆ ಖುಷಿಯಾಗುತ್ತದೆ ಎಂದರೆ ಖಾದರ್ ದೈವಸ್ಥಾನಗಳಿಗೆ ಬಂದು ಪುರೋಹಿತರು ಕೊಡುವ ಕುಂಕುಮ ಹಚ್ಚಿದ್ದು ಇದೆ. ದೇವಸ್ಥಾನಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನವಿರಲಿ, ಅಲ್ಲಿ ಬಂದು ಅವರು ಪ್ರಸಾದ ಸ್ವೀಕರಿಸುವ ರೀತಿಯನ್ನು ಕಂಡು ಮೂಲಭೂತವಾದಿ ಮುಸ್ಲಿಮ್ ಸಂಘಟನೆಗಳು ಉರಿದುಕೊಳ್ಳುತ್ತವೆ. ಯಾವುದಕ್ಕೂ ಖಾದರ್ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರ ಹಿಂದೂಗಳ ಮನೆಯ ಗೃಹಪ್ರವೇಶದಿಂದ ಹಿಡಿದು ಸತ್ಯನಾರಾಯಣ ವ್ರತಕ್ಕೂ ಬಂದು ಶುಭ ಹಾರೈಸಿ ಹೋಗುತ್ತಾರೆ. ಇದರಿಂದಾಗಿ ಅವರ ವಿರುದ್ಧ ಎಂತಹುದೇ ಅಭ್ಯರ್ತಿಯನ್ನು ಬಿಜೆಪಿ ಕಣಕ್ಕೆ ಇಳಿಸಿದರೂ ಗೆಲುವು ಕಷ್ಟವಾಗುತ್ತಿರುವುದು ಇದೇ ಕಾರಣಕ್ಕೆ. ಅಲ್ಲಿ ಮುಸ್ಲಿಂ ಮತದಾರರು ಹಿಂದೂಗಳಷ್ಟೇ ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯಲ್ಲಿದ್ದಾರೆ ಎಂದುಕೊಂಡರೂ ಅದೊಂದೇ ಖಾದರ್ ಅವರನ್ನು ಗೆಲುವಿನ ದಡ ಮುಟ್ಟಿಸುತ್ತಿಲ್ಲ. ಇನ್ನು ಖಾದರ್ ತಮ್ಮ ತಂದೆಯಿಂದ ತೆರವಾದ ಸ್ಥಾನಕ್ಕೆ 2007 ರಲ್ಲಿ ನಡೆದ ಉಪಚುನಾವಣೆಯಿಂದಲೂ ಗೆಲ್ಲುತ್ತಾ ಬರುತ್ತಿದ್ದಾರೆ. ಅವರು ಅಲ್ಲಿನ ಏಕಮೇವ ಆಯ್ಕೆ. ಇನ್ನು ಅವರಿಗೆ ಸ್ಪೀಕರ್ ಮಾಡಿದ್ದು ಮುಸ್ಲಿಮರ ಮೇಲಿನ ಪ್ರೀತಿಯಿಂದ ಅಲ್ಲ ಎನ್ನುವುದು ಜಮೀರ್ ಅವರಿಗೆ ಗೊತ್ತಿರಬೇಕು. ಏಕೆಂದರೆ ಖಾದರ್ ಕೂಡ ಪ್ರಭಾವಶಾಲಿ ನಾಯಕರು. ಪ್ರತಿ ಬಾರಿ ಕಾಂಗ್ರೆಸ್ ಸರಕಾರ ಬಂದಾಗ ಅವರಿಗೆ ಸಚಿವಸ್ಥಾನ ಗ್ಯಾರಂಟಿ. ಮೈತ್ರಿ ಸರಕಾರದಲ್ಲಿಯೂ ಅವರಿಗೆ ಸಚಿವಗಿರಿ ಸಿಗುತ್ತದೆ. ಈ ಬಾರಿಯೂ ಗೆದ್ದಿರುವುದರಿಂದ ಪ್ರಭಾವಿ ಖಾತೆಯನ್ನೇ ಕೊಡಬೇಕಿತ್ತು. ಆದರೆ ನಿರೀಕ್ಷೆಗಿಂತ ಹೆಚ್ಚು ಸ್ಥಾನ ಬಂದಿರುವುದರಿಂದ ಸಿದ್ದು ಕೋಟಾದಲ್ಲಿ ಮುಸ್ಲಿಂ ಸಚಿವರಾಗಿ ಜಮೀರ್ ನೇಮಕವಾಗಲೇಬೇಕಿರುವುದರಿಂದ ಖಾದರ್ ಅವರನ್ನು ಹಾಗೇ ಬಿಡಬಾರದು ಎನ್ನುವ ಉದ್ದೇಶದಿಂದ ಸ್ಪೀಕರ್ ಸ್ಥಾನ ಕೊಟ್ಟು ಸಂಭಾಳಿಸಲಾಗಿದೆ. ಎರಡೂವರೆ ವರ್ಷಗಳ ಬಳಿಕ ಏನಾದರೂ ಬದಲಾವಣೆ ಆದರೂ ಆಗಬಹುದು. ವಿಷಯ ಹೀಗಿರುವಾಗ ಜಮೀರ್ ತಮ್ಮ ಸಮುದಾಯದವರನ್ನು ಖುಷಿಗೊಳಿಸುವುದಕ್ಕಾಗಿ ಯಾರಿಗೂ ಏನೂ ಗೊತ್ತಾಗುವುದಿಲ್ಲ ಎನ್ನುವ ಕಾರಣಕ್ಕೆ ಖಾದರ್ ಅವರನ್ನು ಕೂಡ ಮತೀಯವಾದಕ್ಕೆ ಎಳೆದು ತಂದುಬಿಟ್ಟರು!
Leave A Reply