ಸೊಳ್ಳೆ ಹೊಡೆಯಲು ಗೊತ್ತಾ ಪಾಲಿಕೆ ಸದಸ್ಯರೇ?
ಡೆಂಗ್ಯೂ, ಮಲೇರಿಯಾ ಸೊಳ್ಳೆಗಳು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಫೊರೇಟರ್ ಗಳ ಗುಲಾಮರಲ್ಲ. ಇವರು ಫಾಗಿಂಗ್ ಮಾಡಲು ಕಳುಹಿಸಿದ ತಕ್ಷಣ ಹೆದರಿ ಓಡಿ ಹೋಗಿ ಇನ್ಯಾವತ್ತೂ ಅತ್ತ ಸುಳಿಯಲ್ಲ ಎಂದು ಹೇಳೊದಕ್ಕೆ. ಸೊಳ್ಳೆಗಳನ್ನು ಓಡಿಸಲು ಕೂಡ ಒಂದು ನಿರ್ದಿಷ್ಟ ಸಮಯ ಇದೆ ಎಂದು ಪಾಲಿಕೆಯಲ್ಲಿರುವ ಎಷ್ಟು ಸದಸ್ಯರಿಗೆ ಗೊತ್ತಿದೆ. ಯಾವ ಕಾಮಗಾರಿಯಲ್ಲಿ ಎಷ್ಟು ಕಮೀಷನ್ ಸಿಗುತ್ತದೆ? ಅದು ಎಷ್ಟೊತ್ತಿಗೆ ಯಾವ ಅಡ್ಡಾದಲ್ಲಿ ಹೋಗಿ ತೆಗೆದುಕೊಳ್ಳುವುದು ಎಂದು ಕರೆಕ್ಟಾಗಿ ಹೇಳುವ ಇವರಿಗೆ ಯಕಶ್ಚಿತ್ ಡೆಂಗ್ಯೂ, ಮಲೇರಿಯಾದ ಸೊಳ್ಳೆಗಳ ಬಗ್ಗೆ ಜ್ಞಾನವಿಲ್ಲ. ಯಾಕೆಂದರೆ ಸೊಳ್ಳೆಗಳು ಕಮೀಷನ್ ಕೊಡುವುದಿಲ್ಲ. ಆದ್ದರಿಂದ ತಮ್ಮ ಏರಿಯಾಗಳಲ್ಲಿ ಯಾರಾದರೂ ಸ್ವಲ್ಪ ಫಾಗಿಂಗ್ ಮಾಡಿಸಿ ಎಂದ ಕೂಡಲೇ ಇವರು ಪಾಲಿಕೆಯಲ್ಲಿ ಸಂಬಂಧಪಟ್ಟವರಿಗೆ ಹೇಳಿ ಫಾಗಿಂಗ್ ಮಾಡುವವರನ್ನು ಕಳುಹಿಸಿಕೊಡುತ್ತಾರೆ. ಅಲ್ಲಿ ಪಾಲಿಕೆಯಲ್ಲಿ ಬಿಲ್ ಆಗುತ್ತದೆ.
ಫಾಗಿಂಗ್ ಮಾಡುವುದಕ್ಕೂ ಕ್ರಮ ಇದೆ!
ಫಾಗಿಂಗ್ ಮಾಡುವವರು ಪೆಟ್ರೋಲ್ ಪಂಪಿಗೆ ಹೋಗಿ ಅಲ್ಲಿ ಪೆಟ್ರೋಲ್, ಡಿಸೀಲ್ ಖರೀದಿಸಿ ಯಾವ ವಾರ್ಡಿಗೆ ಹೇಳಿದ್ದಾರೋ ಅಲ್ಲಿ ಹೆಗಲಿಗೆ ಬೈರಾಸ್ ಹಾಕಿ ಹೊರಟುಬಿಡುತ್ತಾರೆ. ಫಾಗಿಂಗ್ ಮಾಡುವ ಕೆಲಸ ಹೊರಗುತ್ತಿಗೆಗೆ ಕೊಟ್ಟಿರುವುದರಿಂದ ಅವರಿಗೆ ಫಾಗಿಂಗ್ ಮಾಡಿದರೆ ಮುಗಿಯಿತು. ಕಾರ್ಪೋರೇಟರ್ ಅವರಿಗೆ ಜನರಿಗೆ ಕೆಲಸ ಮಾಡಿಕೊಟ್ಟೆ ಎಂಬ ಫೋಸ್ ನೀಡುವುದು ಮತ್ತು ಅಲ್ಲಿ ವಾರ್ಡಿನ ಜನರಿಗೆ ಓ ಫಾಗಿಂಗ್ ಆಯಿತು, ಇನ್ನು ಡೆಂಗ್ಯೂ, ಮಲೇರಿಯಾ ಬರುವುದಿಲ್ಲ ಎನ್ನುವ ಮಾನಸಿಕ ಭ್ರಮೆ. ಹೀಗೆ ಎಲ್ಲರೂ ಸಂತೃಪ್ತಿ, ಬಿಲ್ ಪಾಸ್ ಮಾಡಿ ಇನ್ಯಾರೋ ಖುಷಿಪಟ್ಟರೆ ಇತ್ತ ಸೊಳ್ಳೆಗಳು ಮುಸಿಮುಸಿ ನಗುತ್ತಾ ನಿಮ್ಮ ಮನೆಯನ್ನು ದಿಟ್ಟಿಸಿ ನೋಡುತ್ತಿರುತ್ತವೆ.
ಹಾಗಾದರೆ ನಿಜಕ್ಕೂ ಆಗ ಬೇಕಾಗಿರುವುದು ಏನು?
ಫಾಗಿಂಗ್ ಮಾಡುವ ಮಿಶಿನ್ ಸ್ಟಾರ್ಟ್ ಆಗಬೇಕಾದರೆ ಅದಕ್ಕೆ ಪೆಟ್ರೋಲ್ ಹಾಕಬೇಕು, ಅದೇ ಫಾಗಿಂಗ್ ಮಾಡಬೇಕಾದರೆ ಮಿಶಿನ್ ಒಳಗೆ ಕೆಮಿಕಲ್ ಹಾಕಿ ಅದಕ್ಕೆ ಡಿಸೀಲ್ ಮಿಕ್ಸ್ ಮಾಡಬೇಕು. ಇನ್ನು ಫಾಗಿಂಗ್ ಮಾಡುವುದು ಮನೆಗಳ ಒಳಗೆನಾ ಅಥವಾ ಹೊರಗೆನಾ ( ಇನಡೋರ್ ಅಥವಾ ಔಟ್ ಡೋರ್) ಎಂದು ಮೊದಲೇ ನಿರ್ಧರಿಸಿ ಅದಕ್ಕೆ ತಕ್ಕಂತೆ ಕೆಮಿಕಲ್ ಮಿಶಿನ್ ಒಳಗೆ ಹಾಕಿ ಡಿಸೀಲ್ ಜೊತೆ ಮಿಕ್ಸ್ ಮಾಡಬೇಕು. ಎಲ್ಲಾ ಕಡೆ ಒಂದೇ ಕೆಮಿಕಲ್ ವರ್ಕ್ ಆಗಲ್ಲ. ಇನ್ನು ಫಾಗಿಂಗ್ ಮಾಡಲು ಹೋಗುವಾಗ ಗುತ್ತಿಗೆದಾರನ ಕೆಲಸದವರು ತಾವು ಫ್ರೀ ಇರುವಾಗ ಹೋಗುವುದಲ್ಲ. ಉದಾಹರಣೆಗೆ ಫಾಗಿಂಗ್ ಮಾಡಲು ಸೂಕ್ತ ಸಮಯ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯಿಂದ 8 ಗಂಟೆಯ ತನಕ ಮಾತ್ರ. ಫಾಗಿಂಗ್ ಮಾಡುವವರು ಬೆಳಿಗ್ಗೆ ಚಾ ಕುಡಿದು ಹತ್ತೂವರೆಗೆ ಬಂದು ಫಾಗಿಂಗ್ ಮಾಡಿ ಹೋದರೆ ಅದರಿಂದ ಆಗುವುದು ಏನೂ ಇಲ್ಲ. ಅದೇ ರೀತಿ ಸಂಜೆ 4 ಗಂಟೆಗೆ ಬಂದು ಸ್ವಲ್ಪ ಫಾಗಿಂಗ್ ಮಾಡಿ ಹೋದರೆ ಅದರಿಂದ ಆಗುವುದು ಶೂನ್ಯ ಲಾಭ. ಆದರೆ ಇದು ತುಂಬಾ ಜನರಿಗೆ ಗೊತ್ತೆ ಇಲ್ಲ. ಹಾಗಂತ ಯಾವ ಫಾಗಿಂಗ್ ಮಾಡುವವನು ಕೂಡ ಕತ್ತಲಾದ ನಂತರ ಕೆಲಸಕ್ಕೆ ಬರುವುದಿಲ್ಲ. ಇದು ಯಾವ ಕಾರ್ಪೋರೇಟರ್ ಅವರಿಗೂ ಬಿದ್ದು ಹೋಗಿಲ್ಲ. ಒಟ್ಟಿನಲ್ಲಿ ಫಾಗಿಂಗ್ ಮಾಡಿದರೆ ಮುಗಿಯಿತಾ? ಡೆಂಗ್ಯೂ, ಮಲೇರಿಯಾ ನಾಶವಾಗುವುದು ಬೇಡ್ವಾ? ಒಟ್ಟಿನಲ್ಲಿ ಅತ್ತ ಕಾಟಾಚಾರದ ಫಾಗಿಂಗ್, ಇತ್ತ ಸಿಂಪ್ಲಿ ಬಿಲ್ಲಿಂಗ್, ಒಟ್ಟಿನಲ್ಲಿ ಸೊಳ್ಳೆ, ನುಸಿಗಳು ಫುಲ್ ಖುಷಿ!
Leave A Reply