ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಜೋರು ಮಾಡಬಾರದಾ?
ಒಂದೇ ದಿನ ಅಕ್ಕಪಕ್ಕದ ಎರಡು ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡುವೆ ತಿಕ್ಕಾಟ ನಡೆದಿರುವುದನ್ನು ಅವಿಭಜಿತ ಜಿಲ್ಲೆಯ ಜನ ಸಾಮಾಜಿಕ ಜಾಲತಾಣಗಳ ಮೂಲಕ ನೋಡಿದ್ದಾರೆ. ಒಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ಜಲಸಿರಿ ಯೋಜನೆಯ ಇಂಜಿನಿಯರ್ ಹಾಗೂ ನಗರಾಭಿವೃದ್ಧಿ ಸಚಿವ ಮತ್ತೊಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಮಾಜಿ ಉಸ್ತುವಾರಿ ಸಚಿವರ ನಡುವೆ ನಡೆದ ತಿಕ್ಕಾಟ.
ಭೈರತಿ ಸುರೇಶ್ ಜೋರು ಮಾಡಿದ್ದು ಯಾರಿಗೆ?
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತುಂಬಿದ ಸಭೆಯಲ್ಲಿ ಹಿರಿಯ ಇಂಜಿನಿಯರ್ ಒಬ್ಬರನ್ನು ತರಾಟೆ ತೆಗೆದುಕೊಂಡು ಅಷ್ಟೂ ಅಧಿಕಾರಿಗಳ ಮುಂದೆ ಜೋರಾಗಿ ಮಾತನಾಡಿದರು. ಯಾವುದೇ ಅಧಿಕಾರಿಯ ವಿರುದ್ಧ ಸಚಿವರು ಮಾತನಾಡಬಾರದು, ಅಧಿಕಾರಿಗಳು ಹೇಳಿದ್ದನ್ನೇ ಒಪ್ಪಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಸಚಿವ ಸುರೇಶ್ ಲೆಫ್ಟ್, ರೈಟ್ ಮಾಡಿದ್ದು ಒಬ್ಬ ನಿಷ್ಠಾವಂತ ಇಂಜಿನಿಯರ್ ಜಯರಾಮ್ ಅವರನ್ನು. ಜಯರಾಮ್ ನಿವೃತ್ತಿಯಾಗಿದ್ದರೂ ಪ್ರಾಮಾಣಿಕರು, ಒಳ್ಳೆಯ ಕೆಲಸಗಾರ ಎನ್ನುವ ಕಾರಣಕ್ಕೆ ಅವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿ ಮುಂದುವರೆಸಲಾಗಿತ್ತು. ಅವರು ಕೂಡ ಸಮರ್ಪಕವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು. ಆದರೆ ಪಾಲಿಕೆ ಸಭೆಯಲ್ಲಿ ಸಚಿವರ ಪ್ರಶ್ನೆಗೆ ಅವರು ಉತ್ತರ ಕೊಡುವಾಗಲೂ ಸಚಿವರು ಅದನ್ನು ಕೇಳದೇ ಇಂಜಿನಿಯರ್ ಅವರದ್ದೇ ತಪ್ಪು ಎಂದು ಮೇಲಿನಿಂದ ಮೇಲೆ ವಾದಿಸಿ ಎಲ್ಲರ ಮುಂದೆ ಅವಮಾನ ಮಾಡಿದ್ದರು. ಆದರೆ ಜಯರಾಮ್ ಅವರಿಗೆ ತಾವು ವೈಯಕ್ತಿಕವಾಗಿ ಸರಿ ಇದ್ದರೂ ಹೀಗೆ ತಮ್ಮದೇ ತಪ್ಪು ಎಂದು ಸಚಿವರು ದೂರಿದ್ದು ಬೇಸರವಾಗಿದೆ. ಅದಕ್ಕೆ ಅವರು ಈ ಕೆಲಸವೇ ಬೇಡಾ ಎಂದು ಸಭೆಯಲ್ಲಿಯೇ ಹೇಳಿ ಹೊರನಡೆದಿದ್ದಾರೆ. ಜಯರಾಮ್ ಅವರು ಭ್ರಷ್ಟತೆಯನ್ನು ಮೈಗೂಡಿಸಿಕೊಂಡು ಇದ್ದಿದ್ದರೆ ಅವರು ಸಚಿವರ ಮಾತಿಗೆ ದೂಸರಾ ಹೇಳದೇ ತಲೆ ಅಲ್ಲಾಡಿಸಿಕೊಂಡು ಇದ್ದುಬಿಡುತ್ತಿದ್ದರು. ಆದರೆ ತಾವು ಸರಿಯಿದ್ದಾಗ ಯಾವುದೋ ವ್ಯವಸ್ಥೆಯ ತಪ್ಪಿಗೆ ತಮ್ಮನ್ನು ಹೊಣೆಗಾರನಾಗಿ ಮಾಡುವುದು ಇಂಜಿನಿಯರ್ ಜಯರಾಮ್ ಅವರಿಗೆ ಆ ಕೆಲಸದ ಮೇಲೆ ಜಿಗುಪ್ಸೆ ತಂದುಬಿಟ್ಟಿತ್ತು. ಹಾಗೆ ಅವರು ಸಭೆಯಿಂದ ಹೊರನಡೆದಿದ್ದಾರೆ.
ಎಸ್ ಪಿಯ ಜೊತೆಗೆ ಗಲಾಟೆ ಯಾಕೆ?
ಇನ್ನೊಂದು ವಿಷಯ ಉಡುಪಿಯಲ್ಲಿ ನಡೆದಿರುವುದು. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅಲ್ಲಿ ಚಾರ್ಜ್ ತೆಗೆದುಕೊಂಡ ದಿನದಿಂದ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುತ್ತಿಲ್ಲ. ಅದರಿಂದ ಸಹಜವಾಗಿ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿಯ ಮುಖಂಡರಿಗೆ ಅಲ್ಲಿ ಕಿರಿಕಿರಿಯಾಗುತ್ತಿದೆ. ಈ ಎಸ್ ಪಿ ಎರಡೂ ಪಕ್ಷದವರಿಗೂ ಬೇಕಾಗಿಲ್ಲ. ಪಕ್ಷಗಳ ಮುಖಂಡರು ಇದನ್ನು ತಮ್ಮ ಶಾಸಕರಿಗೆ, ಸಚಿವರಿಗೆ ಹೇಳಿದ್ದಾರೆ. ಇದರಿಂದ ಎಸ್ ಪಿ ಮೇಲೆ ಜನಪ್ರತಿನಿಧಿಗಳಿಗೆ ಒಂದು ಕೋಪ ಇದ್ದೇ ಇದೆ. ಅದು ಮೊನ್ನೆ ಕೆಡಿಪಿ ಸಭೆಯಲ್ಲಿ ಸ್ಫೋಟಗೊಂಡಿದೆ.
ಯಾವುದೇ ಅಧಿಕಾರಿ ಕೆಲಸಗಳ್ಳರಾಗಿದ್ದರೆ ಅಥವಾ ತನಗೆ ಫಲವತ್ತಾದ ಹೊಲ, ಗದ್ದೆಯಂತಹ ಹುದ್ದೆ ಸಿಕ್ಕಿದರೆ ಅದನ್ನು ಬಿಟ್ಟು ಹೋಗಲು ಮನಸ್ಸು ಮಾಡುವುದಿಲ್ಲ. ಅಂತಹ ಸಂದರ್ಭದಲ್ಲಿ ಸಚಿವರು ಏನು ಬೈದರೂ ಹೇಳಿದ್ದು ಕೇಳಿ ತಲೆ ಅಲ್ಲಾಡಿಸುತ್ತಾರೆ. ಆದರೆ ತಮ್ಮ ಕೆಲಸ ಸಮರ್ಪಕವಾಗಿ ಮಾಡುತ್ತಾ ಬರುವವರಿಗೆ ಅದು ಒಪ್ಪಿತವಾಗುವುದಿಲ್ಲ. ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಇಟ್ಟಂತೆ ನೋಡಿ ಸುಮ್ಮನೆ ಏನೇನೋ ಹೇಳಿ ಫೋಸ್ ಕೊಡುವ ಪ್ರಯತ್ನ ಜನಪ್ರತಿನಿಧಿಗಳು ಮಾಡುತ್ತಾ ಹೋದರೆ ಅಂತಹ ಸಂದರ್ಭದಲ್ಲಿ ಒಂದಾ ಅಧಿಕಾರಿಗಳು ರಾಜೀನಾಮೆ ಕೊಡುತ್ತಾರೆ ಅಥವಾ ಮುಖದ ಮೇಲೆಯೇ ಮಾತನಾಡಿಬಿಡುತ್ತಾರೆ. ಇನ್ನು ಹೀಗೆ ಅಧಿಕಾರಿಗಳು ರಾಜೀನಾಮೆ ಕೊಟ್ಟರೆ, ವರ್ಗಾವಣೆ ಆದರೆ ಸಚಿವರುಗಳಿಗೆ ಲಾಭ. ಯಾಕೆಂದರೆ ಹೊಸಬರು ಬಂದಾಗ ಆ ಹುದ್ದೆ ಪೇಮೆಂಟ್ ಸೀಟ್ ಆಗಿದ್ದರೆ ಯಾರಿಗೆ ಖುಷಿ ಹೇಳಿ ನೋಡೋಣ!
Leave A Reply