ಸ್ಮೋಕ್ ಬಾಂಬ್ ಹಿಡಿದು ರಕ್ಷಣಾ ಸಚಿವರತ್ತ ನುಗ್ಗುತ್ತಿದ್ದರು – ಸಂಸದ ಹನುಮಾನ್
ಲೋಕಸಭೆಯ ಅಧಿವೇಶನ ನಡೆಯುತ್ತಿರುವಾಗಲೇ ವಿಸಿಟರ್ ಗ್ಯಾಲರಿಯಿಂದ ಒಳಗೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಇಬ್ಬರನ್ನು ಅಲ್ಲಿದ್ದ ಸಂಸದರಾದ ನಳಿನ್ ಕುಮಾರ್ ಕಟೀಲ್, ಮುನಿಸ್ವಾಮಿ ಸಹಿತ ಕೆಲವು ಸಂಸದರು ಹಿಡಿದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದು ವೇಳೆ ಆಗಂತುಕರ ಕೈಯಲ್ಲಿ ಗನ್ ಇದ್ದರೂ ತಾನು ಅವರನ್ನು ಹಿಡಿಯುತ್ತಿದ್ದೆ ಎಂದು ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ ಸಂಸದ ಹನುಮಾನ್ ಬೆನಿವಾಲ್ ಅವರು ಹೇಳಿದ್ದಾರೆ.
ಒಳಗೆ ನುಗ್ಗಿದ ಇಬ್ಬರು ಯುವಕರನ್ನು ಸೆರೆಹಿಡಿಯುವಲ್ಲಿ ಹನುಮಾನ್ ಬೆನಿವಾಲ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಸ್ಮೋಕ್ ಬಾಂಬ್ ಹಿಡಿದು ಸದನದಲ್ಲಿ ನೆಗೆಯುತ್ತಿದ್ದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಅವರನ್ನು ಹಿಡಿದು ಕೆಲವು ಸಂಸದರು ತಕ್ಕ ಶಾಸ್ತ್ರಿ ಮಾಡಿದ್ದರು. ಸ್ಮೋಕ್ ಬಾಂಬ್ ಆದ ಕಾರಣ ಅಂತಹ ದೊಡ್ಡ ಅಪಾಯ ಸಂಭವಿಸಿರಲಿಲ್ಲ. ಆದರೆ ಒಂದು ವೇಳೆ ಗನ್ ಹಿಡಿದು ಒಳಗೆ ನುಗ್ಗುತ್ತಿದ್ದರೂ ತಾನು ಹಿಡಿದು ಹಾಕುತ್ತಿದ್ದೆ ಎಂದು ಹನುಮಾನ್ ಬೆನಿವಾಲ್ ಹೇಳಿ ತಮ್ಮ ಸಹಸಂಸದರಲ್ಲಿ ಧೈರ್ಯ ತುಂಬಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ನೊಂದು ಆಘಾತಕಾರಿ ಸುದ್ದಿಯನ್ನು ಕೂಡ ಸಂಸದ ಹನುಮಾನ್ ಹೊರಹಾಕಿದ್ದು, ಕೈಯಲ್ಲಿ ಸ್ಮೋಕ್ ಬಾಂಬ್ ಹಿಡಿದಿದ್ದ ಆರೋಪಿಗಳು ನಮ್ಮ ರಕ್ಷಣಾ ಸಚಿವರತ್ತ ಧಾವಿಸುತ್ತಿದ್ದರು. ಅವರ ಉದ್ದೇಶ ಏನಾಗಿತ್ತು ಎನ್ನುವುದು ಕೂಡ ತನಿಖೆಯಿಂದ ಪತ್ತೆಹಚ್ಚಬೇಕಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಲೋಕಸಭಾ ಸೆಕ್ರೆಟರಿಯವರು ರಕ್ಷಣಾ ವ್ಯವಸ್ಥೆಯಲ್ಲಿ ಆಗಿರುವ ಲೋಪದ ವಿಚಾರಣೆಯ ಅಂಗವಾಗಿ ಈಗಾಗಲೇ ಏಳು ಜನರನ್ನು ಅಮಾನತುಗೊಳಿಸಿದ್ದಾರೆ.
Leave A Reply