ಟಿಪ್ಪು ಮತ್ತೆ ರಾಜಕೀಯ ದಾಳವಾಗಲು ವಿಮಾನ ನಿಲ್ದಾಣ ನೆಪ!
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಬೇಕೋ ಅಥವಾ ಮೈಸೂರಿನ ಮಹಾರಾಜರ ಹೆಸರು ಇಡಬೇಕೋ ಎನ್ನುವುದರ ಬಗ್ಗೆ ರಾಜ್ಯದಲ್ಲಿ ಚರ್ಚೆ ಶುರುವಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಯಾವುದೇ ಒಂದು ಸರಕಾರಿ ಕಟ್ಟಡ ಅಥವಾ ನಿರ್ಮಾಣಕ್ಕೆ ಹೆಸರು ಇಡಲು ಕೇಂದ್ರ ಸರಕಾರದ ಅನುಮತಿ ಬೇಕು. ಅದು ವಿಮಾನ ನಿಲ್ದಾಣವಾಗಲಿ ಅಥವಾ ರೈಲ್ವೆ ನಿಲ್ದಾಣವಾಗಲಿ ಕೇಂದ್ರ ಸರಕಾರದ ಅನುಮತಿ ದೊರೆತ ಮೇಲೆಯೇ ಹೆಸರಿಡುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಯಾವ ಹೆಸರುಗಳನ್ನು ಇಡಬೇಕು ಎನ್ನುವುದರ ಬಗ್ಗೆ ರಾಜ್ಯ ಸರಕಾರ ಶಿಫಾರಸ್ಸು ಕಳುಹಿಸಿಕೊಡಬಹುದು. ಆ ಪ್ರಕಾರವಾಗಿ ಅಂತಿಮವಾಗಿ ರಾಜ್ಯ ಸರಕಾರ ಕಳುಹಿಸಿಕೊಟ್ಟಿರುವಂತಹ ಹೆಸರನ್ನು ಅಂತಿಮಗೊಳಿಸಬೇಕೆ ಅಥವಾ ಬೇರೆ ಹೆಸರು ಶಿಫಾರಸ್ಸು ಮಾಡುವಂತೆ ಸೂಚಿಸಬೇಕೆ ಎನ್ನುವುದು ಕೇಂದ್ರ ಸರಕಾರ ತೀರ್ಮಾನಿಸುತ್ತಾರೆ.
ರಾಜ್ಯದ ಕಾಂಗ್ರೆಸ್ ಸರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಅಖೈರುಗೊಳಿಸಿ ಕಳುಹಿಸಿಕೊಟ್ಟಿದೆ. ಆದರೆ ಈ ಕುರಿತು ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿಯ ಶಾಸಕರ ನಡುವೆ ಆರೋಪ – ಪ್ರತ್ಯಾರೋಪಗಳು ಶುರುವಾಗಿದೆ.
ಮೈಸೂರಿನ ಮಹಾರಾಜರು ಮೈಸೂರಿನ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಅವರದ್ದೇ ಹೆಸರು ಇಡಬೇಕು ಎನ್ನುವುದು ಬಿಜೆಪಿಯ ಮುಖ್ಯ ಆಗ್ರಹ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಟಿಪ್ಪು ಹೆಸರನ್ನು ಕೇಂದ್ರ ಸರಕಾರ ಒಪ್ಪಿದರೂ ಲಾಭ, ಒಪ್ಪದಿದ್ದರೂ ಲಾಭ. ಅಂತಹ ಒಂದು ದಾಳವನ್ನು ಕಾಂಗ್ರೆಸ್ ಸರಕಾರ ಪ್ರಯೋಗಿಸಿದೆ. ಒಪ್ಪಿದರೆ ಈ ಹೆಸರು ಇಡಲು ನಾವೇ ಶಿಫಾರಸ್ಸು ಮಾಡಿದ್ದು ಎಂದು ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಸಿ ಖುಷಿಪಡಿಸಬಹುದು. ಅದೇ ಕೇಂದ್ರ ಒಪ್ಪದಿದ್ದಲ್ಲಿ ನಾವು ಶಿಫಾರಸ್ಸು ಮಾಡಿದ್ದೇವೆ. ಆದರೆ ಕೇಂದ್ರ ಒಪ್ಪಿಲ್ಲ. ನಮ್ಮ ಸರಕಾರ ಕೇಂದ್ರದಲ್ಲಿ ಬರುವಂತೆ ಮಾಡಿ. ಆಗ ಸುಲಭವಾಗಿ ನಮಗೆ ಬೇಕಾದ ಹೆಸರು ಇಡಬಹುದು ಎಂದು ಪ್ಲೇಟ್ ಬದಲಾಯಿಸಬಹುದು.
ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿರುವ ಹಳೆ ಮೈಸೂರು ಭಾಗದಲ್ಲಿ ಜಾತಿ ಸಮೀಕರಣವನ್ನು ಅಳೆದು ತೂಗಿ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. ಆದರೆ ಇತ್ತೀಚೆಗೆ ಯಾವುದೇ ವಿವಾದಾತ್ಮಕ ವ್ಯಕ್ತಿಗಳ ಹೆಸರನ್ನು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ಇಡಲು ಕೇಂದ್ರ ಅಷ್ಟು ಆಸಕ್ತಿ ತೊರುತ್ತಿಲ್ಲ. ಯಾಕೆಂದರೆ ಸುಮ್ಮನೆ ಕಾನೂನು ಪ್ರಕ್ರಿಯೆ, ಗಲಾಟೆ, ಪ್ರತಿಭಟನೆ ಎದುರಿಸುವುದು ಬೇಡಾ ಎನ್ನುವ ಅಭಿಪ್ರಾಯ ಕೂಡ ಅದರ ಹಿಂದಿದೆ. ಒಟ್ಟಿನಲ್ಲಿ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಕಾಂಗ್ರೆಸ್ ಇಂತಹ ಒಂದು ಬಾಣ ಹೂಡಿರುವುದು ಮಾತ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
Leave A Reply