ಕಳಪೆ ಪೇಂಟ್, ಕೈ ತುಂಬಾ ಬಿಲ್!
ಲಾಭ ಇಲ್ಲ, ಆದ್ದರಿಂದ ಆಸಕ್ತಿ ಇಲ್ಲ!
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮನಪಾ ಸದಸ್ಯರು ತಮ್ಮ ವಾರ್ಡಿನಲ್ಲಿ ಆಗಬೇಕಾದ “ಲಾಭದಾಯಕ” ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಮಾಡುವಲ್ಲಿ ಆಸಕ್ತಿ ತೋರಿಸಿದರೆ ಸಾಕಾಗುವುದಿಲ್ಲ. ಎಲ್ಲದರಲ್ಲಿಯೂ ಅವರಿಗೆ ಒಂದೇ ತೆರನಾದ ಉಮ್ಮೇದು ಕೂಡ ಬೇಕಾಗುತ್ತದೆ. ಉದಾಹರಣೆಗೆ ಹಂಪ್ಸ್ ಗಳಿಗೆ ಬಣ್ಣ ಬಳಿಯುವುದು ಒಂದು. ಹಂಪ್ಸ್ ಗಳಿಗೆ ಬಣ್ಣ ಬಳಿಯುವುದು ಎಂದರೆ ಅದೇನೂ ದೊಡ್ಡ ಹಣಕಾಸಿನ ಕಾಮಗಾರಿಯಲ್ಲ. ಹಾಗಂತ ನಿರ್ಲಕ್ಷ್ಯ ಮಾಡಿದರೆ ಅದರಿಂದ ಆಗುವ ಅಪಾಯ ಸಣ್ಣದಲ್ಲ. ವಾಹನ ಸವಾರರು ಝೀಬ್ರಾ ಕ್ರಾಸ್ ಬಣ್ಣ ಬಳಿಯದ ಹಂಪ್ ಗಳನ್ನು ಕತ್ತಲಲ್ಲಿ ಗುರುತಿಸಲಾಗದೇ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದು ಇದೆ. ರಸ್ತೆ ಮೇಲೆ ಬಿದ್ದು ತರಚಿದ ಗಾಯಕ್ಕೆ ಒಳಗಾಗಿ ನರಳಿದ್ದು ಇದೆ. ಪ್ರಾಣಕ್ಕೆ ಸಂಚಕಾರ ತಂದದ್ದು ಇದೆ. ಹಂಪ್ಸ್ ಗಳಿಗೆ ಬಣ್ಣ ಬಳಿಯುವುದು ಎಂದರೆ ನಿರ್ಲಕ್ಷ್ಯ ಮಾಡುವ ಕಾರ್ಪೋರೇಟರ್ ಗಳ ಸ್ವಭಾವದ ಬಗ್ಗೆ ಈ ಗುತ್ತಿಗೆಯನ್ನು ಪಡೆದುಕೊಂಡವರಿಗೆ ಗೊತ್ತೆ ಇದೆ. ಆದ್ದರಿಂದ ಗುತ್ತಿಗೆದಾರರು ಅವರಿಗೆ ಸಿಕ್ಕಿದ ಕೆಲಸ ಏರಿಯಾದಲ್ಲಿ ಕಳಪೆ ಕೆಲಸ ಮಾಡಿ ಅದರ ಫೋಟೋ ಮಾತ್ರ ಚೆಂದವಾಗಿ ತೆಗೆದು ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಬಿಲ್ ಪಾಸ್ ಮಾಡಿಸಿಕೊಳ್ಳುತ್ತಾರೆ. ಅವರು ಹೊಡೆದ ಬಣ್ಣ ಅದು ಎಷ್ಟು ದಿನ ಬರುತ್ತದೆ ಎನ್ನುವುದು ಅವರಿಗೆ ಮಾತ್ರ ಗೊತ್ತು.
ಕಳಪೆ ಪೇಂಟ್, ಕೈ ತುಂಬಾ ಬಿಲ್!
ಇನ್ನು ಹಂಪ್ ನಿರ್ಮಿಸುವುದು ಮತ್ತು ಅದಕ್ಕೆ ಇಷ್ಟೇ ದಿನಗಳ ಒಳಗೆ ಪೆಂಟ್ ಹೊಡೆಯಬೇಕೆಂಬ ನಿರ್ಭಂದ ಕೂಡ ಇದೆ. ಇವತ್ತು ಹಂಪ್ ನಿರ್ಮಿಸಿದರೆ ಅದಕ್ಕೆ ನಾಳೆ ಪೆಂಟ್ ಹೊಡೆಯಬಹುದು. ಆದರೆ ಹೊಸ ಹಂಪ್ ನಿರ್ಮಿಸಲ್ಪಟ್ಟರೆ ಅದಕ್ಕೂ ಗುತ್ತಿಗೆದಾರರು ಪೇಂಟ್ ಹೊಡೆಯುವುದಿಲ್ಲ. ಅದೇ ರೀತಿ ಹಳೆ ಹಂಪ್ಸಿಗೆ ಹೇಗೂ ಇವರು ಕ್ಯಾರೇ ಎನ್ನುವುದಿಲ್ಲ. ಒಂದು ವೇಳೆ ಇವರು ಪೆಂಟ್ ಹೊಡೆದರೂ ಅದು ವಾರದಲ್ಲಿ ಅಳಸಿ ಹೋಗುತ್ತದೆ. ಯಾಕೆಂದರೆ ಹಂಪ್ಸಿಗೆ ಇವರು ಬಳಿಯುವ ಪೇಂಟ್ ನಿಜಕ್ಕೂ ಹೊಡೆಯುವಂತದ್ದೇ ಇಲ್ಲ. ಇವರು ಬಳಸುವ ಕಳಪೆ ವಸ್ತು ಹಂಪ್ಸಿಗೆ ಹೊಡೆಯುವಂತದ್ದೇ ಅಲ್ಲ. ಹಂಪ್ಸಿಗೆ ಹೊಡೆಯುವ ಬಣ್ಣಕ್ಕೆ ಥರ್ಮೋಪ್ಲಾಸ್ಟಿಕ್ ರಿಪ್ಲೆಕ್ಟಿವ್ ಪೇಂಟ್ ಎಂದು ಕರೆಯುತ್ತಾರೆ. ಇದನ್ನು ಬಳಿಯುವುದರಿಂದ ಬಹಳಷ್ಟು ಉಪಯೋಗವಿದೆ. ಇದು ರಸ್ತೆ ಸುರಕ್ಷತಾ ನಿಯಮಗಳ ಅಡಿಯಲ್ಲಿಯೂ ಬರುತ್ತದೆ. ಇದನ್ನು ಹಂಪ್ಸ್ ಗಳಿಗೆ ಬಳಸುವುದರಿಂದ ವಾಹನ ಸವಾರರು ರಾತ್ರಿ ಸಮಯದಲ್ಲಿಯೂ ಅನತಿ ದೂರದಿಂದ ಹಂಪ್ಸ್ ಗಳನ್ನು ಗುರುತಿಸಬಲ್ಲರು. ಇದು ಬಹಳ ಕಾಲದ ತನಕ ಬಾಳಿಕೆ ಕೂಡ ಬರುತ್ತದೆ. ಆದರೆ ಇದನ್ನು ಬಳಿಯುವ ಬಗ್ಗೆ ಪಾಲಿಕೆಯಲ್ಲಿ ಗುತ್ತಿಗೆದಾರರು ಮುಂದಾಗುವುದೇ ಇಲ್ಲ. ಅವರದ್ದೇನಿದ್ದರೂ ಕಳಪೆ ಪೇಂಟ್, ಕೈ ತುಂಬಾ ಬಿಲ್.
ಅರ್ಧ ಕೆಲಸ, ಫುಲ್ ಬಿಲ್!
ಇನ್ನು ಕುದ್ರೋಳಿಯ ನವರಾತ್ರಿಯ ಅಂಗವಾಗಿ ಮಂಗಳೂರು ದಸರಾವನ್ನು ಚೆಂದಗಾಣಿಸಬೇಕೆಂಬ ಕಾರಣಕ್ಕೆ ಶೋಭಾಯಾತ್ರೆ ಹೋಗುವ ದಾರಿಯಲ್ಲಿ ಡಿವೈಡರ್ ಹಾಗೂ ಫೂಟ್ ಪಾತ್ ಸೈಡಿನಲ್ಲಿ ಪೇಂಟ್ ಹೊಡೆಯಬೇಕೆಂಬ ಯೋಜನೆ ಹಾಕಲಾಗಿತ್ತು. ಅದಕ್ಕಾಗಿ ಗುತ್ತಿಗೆಯನ್ನು ಕೂಡ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಮಣ್ಣಗುಡ್ಡೆ ಗುರ್ಜಿಯಿಂದ ರಾಷ್ಟ್ರಕವಿ ಗೋವಿಂದ ಪೈ ವೃತ್ತದ ತನಕ ಮಾತ್ರ ಕೆಲಸ ನಿರ್ವಹಿಸಿದ್ದಾರೆ. ಹಾಗಾದರೆ ಅಷ್ಟೇ ಏರಿಯಾದಲ್ಲಿ ಶೋಭಾಯಾತ್ರೆ ಸಾಗುವುದಾ, ಇದ್ಯಾವುದನ್ನು ಯಾರೂ ನೋಡುವುದಿಲ್ವಾ? ಆಯಾ ವಾರ್ಡಿನ ಕಾರ್ಪೋರೇಟರ್ ಗಳಾದರೂ ಇದನ್ನು ನೋಡಬೇಕಲ್ಲ. ಅವರಿಗೆ ತಮ್ಮ ವಾರ್ಡ್ ಚೆಂದವಾಗಿ ಕಾಣುವುದು ಬೇಕಿಲ್ವಾ
Leave A Reply