ಕರ್ನಾಟಕದಿಂದ ಸ್ಪರ್ಧಿಸಲಿರುವ ಗಾಂಧಿ ಕುಡಿ ಯಾರು?
2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಗಾಂಧಿ ಕುಟುಂಬದ ಯಾರಾದರೂ ಒಬ್ಬರು ಚುನಾವಣೆಗೆ ಸ್ಪರ್ಧಿಸುವುದು ಪಕ್ಕಾ ಎನ್ನಲಾಗಿದೆ. ಅದು ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಮೂವರಲ್ಲಿ ಯಾರಾದರೂ ಒಬ್ಬರು ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ವದಂತಿಯ ನಡುವೆ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನುವುದು ಈಗ ಬಂದಿರುವ ಮಾಹಿತಿ. ಯಾಕೆಂದರೆ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ಸಿನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ರಾಜ್ಯದ ಚುನಾವಣಾ ಉಸ್ತುವಾರಿ ಹೊಣೆಯಿಂದ ಕೈಬಿಡಲಾಗಿದೆ. ಇದು ಅವರ ಚುನಾವಣಾ ಸ್ಪರ್ಧೆಯ ಸಂಕೇತ ಎಂದು ಕಾಂಗ್ರೆಸ್ ದೆಹಲಿ ಪಡಸಾಲೆಯಿಂದ ಬಂದಿರುವ ಸುದ್ದಿ. ಆದರೆ ಪ್ರಿಯಾಂಕಾ ಅವರನ್ನು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸುವಂತೆ ಇ.0.ಡಿ.ಯಾ ಮೈತ್ರಿಕೂಟದ ಪ್ರಮುಖ ಅಂಗಪಕ್ಷದ ನಾಯಕಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ.
ಆದರೆ ಈ ಸಲಹೆಯನ್ನು ಕಾಂಗ್ರೆಸ್ ಪಕ್ಷದ ಹೆಡ್ ಆಫೀಸ್ ಗಾಂಧಿ ಕುಟುಂಬ ಒಪ್ಪಿಲ್ಲ. ಯಾಕೆಂದರೆ ಮೋದಿ ವಿರುದ್ಧ ಸ್ಪರ್ಧಿಸುವುದು ಎಂದರೆ ಅದು ಸುಲಭದ ಮಾತಲ್ಲ. ಇನ್ನು ಕಾಟಾಚಾರಕ್ಕೆ ಸ್ಪರ್ಧಿಸಿ ಸೋತರೆ ಮುಂದೆ ಬೇರೆ ಪಕ್ಷಗಳಿಗೆ ಟೀಕಿಸಲು ಒಂದು ವಿಷಯ ಸಿಕ್ಕಿದಂತೆ ಆಗುತ್ತದೆ. ಅದರೊಂದಿಗೆ ಪ್ರಿಯಾಂಕಾ ಅಲ್ಲಿ ಬೆವರು ಸುರಿಸಿ ಗೆಲ್ಲುವ ಶತಪ್ರಯತ್ನ ಮಾಡಿದರೆ ಅವರು ಬೇರೆ ಕಡೆ ಪ್ರಚಾರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ಪಕ್ಷಕ್ಕೆ ಒಬ್ಬರು ಸ್ಟಾರ್ ಪ್ರಚಾರಕರು ಕೂಡ ಕಡಿಮೆಯಾಗುತ್ತಾರೆ.
ಆದ್ದರಿಂದ ಎಲ್ಲವನ್ನು ಅಳೆದು ತೂಗಿ ಸೋನಿಯಾ ಗಾಂಧಿ ಮಗಳನ್ನು ಸುರಕ್ಷಿತ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಚಿಂತನೆ ನಡೆಸುತ್ತಿದ್ದಾರೆ. ಹಾಗಿರುವಾಗ ಅವರ ಕಣ್ಣಿಗೆ ಬಿದ್ದದ್ದು ಕರ್ನಾಟಕ. ಸೋನಿಯಾ ಈಗಾಗಲೇ ಹಿಂದೆ ಒಂದು ಬಾರಿ ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಅದು ಕೂಡ ಭಾರತೀಯ ಜನತಾ ಪಾರ್ಟಿಯ ಆಗಿನ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ.
ಹೀಗಿರುವಾಗ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ಸಿನ ಸಂಸದ ಡಿಕೆ ಸುರೇಶ್ ಇದ್ದಾರೆ. ಅಲ್ಲಿ ಪ್ರಿಯಾಂಕಾರನ್ನು ಕಣಕ್ಕೆ ಇಳಿಸಿ ಡಿಕೆ ಸುರೇಶ್ ಅವರನ್ನು ಬೇರೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳಿದರೆ ಮುಗಿಯಿತು. ಈ ಚಿಂತನೆ ಅನುಷ್ಟಾನಕ್ಕೆ ಬಂದರೆ ಇನ್ನೊಂದು ಸಮಸ್ಯೆ ಇದೆ. ಅದೇನೆಂದರೆ ರಾಹುಲ್ ಗಾಂಧಿ ಅವರು ಮುಂದಿನ ಬಾರಿ ಎಲ್ಲಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಪ್ರಶ್ನೆ. ಅವರು ಕಳೆದ ಬಾರಿ ಎರಡು ಕಡೆ ನಿಂತು ಅಮೇಠಿಯಲ್ಲಿ ಸೋತು ವಯನಾಡಿನಲ್ಲಿ ಗೆದ್ದಿದ್ದರು. ಈ ಬಾರಿ ವಯನಾಡು ಸೇಫ್ ಅಲ್ಲ ಎನ್ನುವ ಅಭಿಪ್ರಾಯ ಕಾಂಗ್ರೆಸ್ ಪಾಳಯದಲ್ಲಿದೆ. ಅದರೊಂದಿಗೆ ಅವರು ಕೇರಳ ಬಿಟ್ಟರೆ ಬೇರೆ ಎಲ್ಲಿಂದ ಸ್ಪರ್ಧಿಸಬಹುದು ಎನ್ನುವ ಪ್ರಶ್ನೆ ಮೂಡುತ್ತದೆ. ಅವರು ಕರ್ನಾಟಕದಿಂದ ಸ್ಪರ್ಧಿಸಿದರೆ ಪ್ರಿಯಾಂಕಾ ಕರ್ನಾಟಕದಿಂದ ಸ್ಪರ್ಧಿಸಲು ಸಾಧ್ಯವಿಲ್ಲ. ಯಾಕೆಂದರೆ ಇಬ್ಬರೂ ಒಂದೇ ರಾಜ್ಯದಿಂದ ಸ್ಪರ್ಧಿಸಿದರೆ ಅದು ದೇಶವ್ಯಾಪಿ ಉತ್ತಮ ಸಂದೇಶ ನೀಡುವುದಿಲ್ಲ. ಇನ್ನು ಸೋನಿಯಾ ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಾರಾ ಅಥವಾ ಬೇರೆಡೆಯಿಂದ ಸ್ಪರ್ಧಿಸಬೇಕಾಗುತ್ತದೆಯಾ ಅಥವಾ ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಸ್ಪರ್ಧಿಸಲು ಹಿಂದೇಟು ಹಾಕಿದರೆ ಆಗ ರಾಯಬರೇಲಿಯಿಂದ ಪ್ರಿಯಾಂಕಾ ಸ್ಪರ್ಧಿಸಿ ಕರ್ನಾಟಕದಿಂದ ರಾಹುಲ್ ಕಣಕ್ಕೆ ಇಳಿಯಬಹುದು.
Leave A Reply