ಈಶ್ವರಪ್ಪ ಹಿಂದೆ ಎಲ್ಲಾ ಸಾಧು ಸಂತರು, ಮಠಾಧೀಶರು ಇದ್ದೇವೆ ಎಂದ ಆನಂದ ಗುರೂಜಿ
ಪುತ್ರ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಲಿಲ್ಲ ಎನ್ನುವ ಕಾರಣಕ್ಕೆ ತೀವ್ರ ಬೇಸರಗೊಂಡಿರುವ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪನವರ ಮನೆಗೆ ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಭೇಟಿ ನೀಡಿದರು. ಈ ಬಗ್ಗೆ ಮಾತನಾಡಿದ ಅವರು ಧರ್ಮ ಸಂಘಟನೆ ಮಾಡುತ್ತಾ, ಶ್ರೀರಾಮ ನಾಮವನ್ನು ನಿರಂತರವಾಗಿ ಪಠಣ ಮಾಡುತ್ತಾ ಇರುವ ಇಂತಹ ನಾಯಕ ನಮ್ಮ ದೇಶಕ್ಕೆ, ವಿಶೇಷವಾಗಿ ನಮ್ಮ ರಾಜ್ಯಕ್ಕೆ ಬೇಕು ಎಂದು ಆನಂದ ಗುರೂಜಿ ಹೇಳಿದರು.
ಇನ್ನು ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿಯೂ ಈಶ್ವರಪ್ಪ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಅವರಿಗಾಗಿ ವೇದಿಕೆಯಲ್ಲಿಯೂ ಕುರ್ಚಿ ಮೀಸಲಿಟ್ಟಿರಲಿಲ್ಲ ಎಂದು ಹೇಳಲಾಗಿದೆ. ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಚುನಾವಣಾ ಉಸ್ತುವಾರಿ, ತೀರ್ಥಹಳ್ಳಿ ಶಾಸಕ, ವಿಧಾನಪರಿಷತ್ ಮುಖ್ಯ ಸಚೇತಕರ ಸಹಿತ ಪಕ್ಷದ ವಿವಿಧ ಪದಾಧಿಕಾರಿಗಳು ಈಶ್ವರಪ್ಪನವರ ಮನೆಗೆ ಆಗಮಿಸಿ ಅವರನ್ನು ಸಂತೈಸುವ ಕೆಲಸ ಮಾಡಿದರೂ ಈಶ್ವರಪ್ಪ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಮಗನಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಟಿಕೆಟ್ ಕೊಡುತ್ತೇವೆ ಎಂದು ಭರವಸೆ ನೀಡಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಈಶ್ವರಪ್ಪನವರಿಲ್ಲ.
ಇನ್ನು ಹಾವೇರಿಯಲ್ಲಿ ನಿಮ್ಮ ಮಗನಿಗೆ ಟಿಕೆಟ್ ಸಿಗುವಂತೆ ಮಾಡಲಾಗುವುದು, ಆತನಿಗೆ ಅಲ್ಲಿ ಕೆಲಸ ಮಾಡಲು ಹೇಳಿ ಎಂದು ಯಡ್ಯೂರಪ್ಪನವರು ವರ್ಷದ ಹಿಂದೆ ಭರವಸೆ ನೀಡಿದ ಕಾರಣ ಈಶ್ವರಪ್ಪ ಪುತ್ರ ಕಾಂತೇಶ್ ಅಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಈಗ ಎಲ್ಲಾ ಸಿದ್ಧತೆ ನಡೆದು ಟಿಕೆಟ್ ಘೋಷಣೆಯಾಗಬೇಕು ಎನ್ನುವಾಗ ಆ ಟಿಕೆಟ್ ಯಡ್ಯೂರಪ್ಪನವರು ತಮ್ಮ ಆಪ್ತ ಬಸವರಾಜ್ ಬೊಮ್ಮಾಯಿಯವರಿಗೆ ಕೊಡಿಸಿದ್ದು ಈಶ್ವರಪ್ಪನವರಿಗೆ ನುಂಗಲಾರದ ತುತ್ತಾಗಿದೆ. ಹೀಗಿರುವಾಗ ಅವರು ಬಂಡಾಯ ಸ್ಪರ್ಧಿಯಾಗಿ ನಿಂತು ಶಿವಮೊಗ್ಗದಲ್ಲಿ ಯಡ್ಯೂರಪ್ಪ ಹಿರಿಯ ಪುತ್ರ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಅವರ ಸಿಟ್ಟು ಶಿವಮೊಗ್ಗ ಫಲಿತಾಂಶದಲ್ಲಿ ಬದಲಾವಣೆ ತರುತ್ತಾ ಅಥವಾ ಕೊನೆಯ ಹಂತದಲ್ಲಿ ಸಿಟ್ಟು ಕರಗಿ ಅವರು ರಾಘವೇಂದ್ರ ವಿಜಯಕ್ಕೆ ಶ್ರಮಿಸುತ್ತಾರಾ ಎನ್ನುವುದಕ್ಕೆ ಎರಡ್ಮೂರು ವಾರ ಕಾಯಬೇಕು.
Leave A Reply