ಪಲ್ಲವಿ ಡೆಂಪೊ: ದಕ್ಷಿಣ ಗೋವಾದಲ್ಲಿ ಬಿಜೆಪಿ ಮಾಸ್ಟರ್ ಸ್ಟೋಕ್!
ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ಐದನೇ ಪಟ್ಟಿಯಲ್ಲಿ ದಕ್ಷಿಣ ಗೋವಾದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಬಿಜೆಪಿಯಿಂದ ಖ್ಯಾತ ಉದ್ಯಮಿ ಶ್ರೀನಿವಾಸ್ ಡೆಂಪೊ ಅವರ ಪತ್ನಿ 49 ವರ್ಷ ವಯಸ್ಸಿನ ಪಲ್ಲವಿ ಡೆಂಪೊ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಪಲ್ಲವಿ ಡೆಂಪೊ ಗೋವಾ ಚುನಾವಣಾ ಇತಿಹಾಸದಲ್ಲಿ ಮೊದಲ ಮಹಿಳಾ ಅಭ್ಯರ್ಥಿಯಾಗಿಯೂ ದಾಖಲೆ ಬರೆದಿದ್ದಾರೆ. ಗೋವಾ ರಾಜ್ಯದಲ್ಲಿ ಕೇವಲ ಎರಡು ಲೋಕಸಭಾ ಸ್ಥಾನಗಳಿದ್ದು, ದಕ್ಷಿಣ ಗೋವಾದಲ್ಲಿ ಕಾಂಗ್ರೆಸ್ಸಿನ ಫ್ರಾನ್ಸಿಸ್ ಸರ್ದಿನ್ನಾ ಹಾಲಿ ಸಂಸದರಾಗಿದ್ದಾರೆ. 1999 ರಲ್ಲಿ ಬಿಜೆಪಿಯಿಂದ ರಮಾಕಾಂತ್ ಅನ್ಗಲೆ ಹಾಗೂ 2014 ರಲ್ಲಿ ನರೇಂದ್ರ ಸವೈಕರ್ ಮಾತ್ರ ಇಲ್ಲಿಯ ತನಕ ಈ ಕ್ಷೇತ್ರದಿಂದ ಗೆದ್ದಿರುತ್ತಾರೆ.
ದಕ್ಷಿಣ ಗೋವಾ ಜನಸಂಖ್ಯಾ ಆಧಾರಿತವಾಗಿ ನೋಡಿದ್ರೆ ಇಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಎಲ್ಲಾ ಸಮುದಾಯಗಳ ಪ್ರೀತಿ, ವಿಶ್ವಾಸ ಗಳಿಸಿರುವುದರಿಂದ ಚುನಾವಣೆಗೆ ನಿಂತರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಯಾಕೆಂದರೆ ಜಿಎಸ್ ಬಿಗಳು ಕೊಂಕಣಿ ಮಾತನಾಡುವುದರಿಂದ ಬೇರೆ ಸಮುದಾಯದ ವೋಟುಗಳನ್ನು ಕೂಡ ಸೆಳೆಯುವ ಅವಕಾಶವಿದೆ. ಇನ್ನು ಮಹಿಳಾ ಮತದಾರರು ಕೂಡ ನಿರ್ಣಾಯಕರಾಗಿರುವುದರಿಂದ ಬಿಜೆಪಿ ಇಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಮಹಿಳೆಯರ ಮತಗಳನ್ನು ಬಿಜೆಪಿಗೆ ಆಕರ್ಷಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇನ್ನು ಪಲ್ಲವಿ ಹಾಗೂ ಅವರ ಪತಿ ಖ್ಯಾತ ಉದ್ಯಮಿಗಳು ಕೂಡ ಆಗಿದ್ದು, ಆರ್ಥಿಕವಾಗಿಯೂ ಚುನಾವಣೆಗೆ ಇದು ಸಹಕಾರಿಯಾಗಿದೆ. ಇನ್ನು ಪಲ್ಲವಿ ಕುಟುಂಬಕ್ಕೆ ಗೋವಾದಲ್ಲಿ ಬಹಳ ದೊಡ್ಡ ನೆಟ್ ವರ್ಕ್ ಇದ್ದು, ಅವರ ಪತಿ ಶ್ರೀನಿವಾಸ್ ಡೆಂಪೊ ಅವರು ಗೋವಾದ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಪ್ರಮುಖರಾಗಿದ್ದಾರೆ. ಇದು ಮಾಧ್ಯಮ ನಿರ್ವಹಣೆಯಲ್ಲಿ ಪಲ್ಲವಿಯವರ ಗೆಲುವಿಗೆ ಸಹಕಾರಿಯಾಗಲಿದೆ. ಇನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಆಡಳಿತದಲ್ಲಿ ಜಿಎಸ್ ಬಿ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪವನ್ನು ಇದು ಹೋಗಲಾಡಿಸಲಿದೆ.
ಪಲ್ಲವಿಯವರ ಗೆಲುವಿನ ಸಾಧ್ಯತೆ ಹೆಚ್ಚಾಗಿರುವುದರಿಂದ ಗೋವಾ ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳಿಗೂ ಇಲ್ಲಿ ಅವಕಾಶ ನೀಡಿದಂತೆ ಆಗುತ್ತದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮರಾಠಾ ಕುಂಬಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರದ್ದೇ ಪಂಗಡದವರು ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಭಂಡಾರಿ ಸಮುದಾಯಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಅನೇಕ ಕ್ರೈಸ್ತರು ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನಪಡೆದಿದ್ದಾರೆ. ಇನ್ನು ಪಲ್ಲವಿ ಕುಟುಂಬಕ್ಕೆ ಗೋವಾದ ಎಲ್ಲಾ ಪಕ್ಷದವರೊಂದಿಗೂ ಸೌಹಾರ್ದ ಬಾಂಧವ್ಯ ಇರುವುದರಿಂದ ಅದು ಪಲ್ಲವಿ ಗೆಲುವಿಗೆ ಅನುಕೂಲವಾಗಲಿದೆ. ಬೇರೆ ಪಕ್ಷಗಳ ಮುಖಂಡರು ಪಲ್ಲವಿಯವರನ್ನು ಗೆಲ್ಲಿಸಲು ತಮ್ಮ ಸಹಕಾರ ನೀಡಲಿದ್ದಾರೆ. ಒಟ್ಟಿನಲ್ಲಿ ಗೋವಾದ ಎರಡೂ ಲೋಕಸಭಾ ಕ್ಷೇತ್ರಗಳು ಈ ಬಾರಿ ಬಿಜೆಪಿ ಪಾಲಾಗಲಿವೆ.
Leave A Reply