ಕಂಗನಾ ವಿರುದ್ಧ ನೀವೆ ಸೂಕ್ತ ಎಂದ ಕಾಂಗ್ರೆಸ್ ಹೈಕಮಾಂಡ್!!
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಹಾಗೂ ಆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಘೋಷಿಸಿದ್ದರು. ಆದರೆ ಯಾವಾಗ ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ಖ್ಯಾತ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರಿಗೆ ಟಿಕೆಟ್ ಘೋಷಿಸಿತೋ ಅದರ ನಂತರ ಅಲ್ಲಿನ ರಾಜಕೀಯ ಚಿತ್ರಣವೇ ಬದಲಾಗಿದೆ. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಬಹಳ ಪ್ರಮುಖವಾದ ಕ್ಷೇತ್ರ. ಇಲ್ಲಿ ಸತತ ಎರಡೂ ಬಾರಿ ಒಂದು ಪಕ್ಷದ ಅಭ್ಯರ್ಥಿ ಗೆದ್ದರೆ ನಂತರ ಎರಡು ಬಾರಿ ಮತದಾರರು ಇನ್ನೊಂದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ನಂತರ ಮತ್ತೆ ವಿಪಕ್ಷದ ಅಭ್ಯರ್ಥಿಗೆ ನಾಗರಿಕರು ಮಣೆ ಹಾಕುತ್ತಾರೆ. ಈಗ ಪ್ರಸ್ತುತ ಈ ಕ್ಷೇತ್ರ ಕಾಂಗ್ರೆಸ್ ಕೈಯಲ್ಲಿದೆ.
ಹೀಗೆ ಇಲ್ಲಿನ ರಾಜಕೀಯ ಇತಿಹಾಸ ಸಾಗುತ್ತಿರುವುದರಿಂದ ಹಾಲಿ ಸಂಸದೆ ಪ್ರತಿಭಾ ಸಿಂಗ್ ಅವರನ್ನು ಮತದಾರ ಮತ್ತೊಂದು ಬಾರಿ ಗೆಲ್ಲಿಸಲಿದ್ದಾನೆ ಎನ್ನುವ ಆಶಾಭಾವನೆ ಕಾಂಗ್ರೆಸ್ಸಿನದ್ದು. ಆದರೆ ಯಾರೋ ನಿಂತು ಅದೃಷ್ಟ ಪರೀಕ್ಷೆಗೆ ಇಳಿಯುವ ಬದಲು 2004, 2013 ಹಾಗೂ 2021 (ಉಪಚುನಾವಣೆ) ರಲ್ಲಿ ಗೆದ್ದಿರುವ ಪ್ರತಿಭಾ ಸಿಂಗ್ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಚಿಂತಿಸಿದೆ. ಇದೇ ಕ್ಷೇತ್ರದಲ್ಲಿ 2014 ಮತ್ತು 2019 ರಲ್ಲಿ ಬಿಜೆಪಿಯ ರಾಮ್ ಸ್ವರೂಪ್ ಶರ್ಮಾ ಗೆದ್ದಿದ್ದರು. ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ 2021 ರಲ್ಲಿ ಉಪಚುನಾವಣೆ ನಡೆದಿತ್ತು. ಆಗ ಮತ್ತೊಮ್ಮೆ ರಾಜಮನೆತನದ ಹಿನ್ನಲೆಯ ಪ್ರತಿಭಾ ಸಿಂಗ್ ಅವರಿಗೆ ಅಭ್ಯರ್ಥಿಯನ್ನಾಗಿಸಿದ ಕಾಂಗ್ರೆಸ್ ಗೆಲುವಿನ ರುಚಿ ಸವಿದಿತ್ತು. ಆದರೆ ಈ ಬಾರಿ ಪ್ರತಿಭಾ ಸಿಂಗ್ ಚುನಾವಣೆಗೆ ನಿಲ್ಲಲು ಆಸಕ್ತಿ ತೋರಿಸದ ಹಿನ್ನಲೆಯಲ್ಲಿ ಕಾಂಗ್ರೆಸ್ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿತ್ತು.
ಪ್ರಸ್ತುತ ಕಂಗನಾ ಸ್ಪರ್ಧೆಯಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಅಲ್ಲಿರುವ ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಭಾರತೀಯ ಜನತಾ ಪಾರ್ಟಿಯ ಹಾಲಿ ಸಂಸದರಿದ್ದರೆ, ಮಂಡಿಯಲ್ಲಿ ಮಾತ್ರ ಕಾಂಗ್ರೆಸ್ ಸಂಸದರಿದ್ದಾರೆ. ಅಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಆದ್ದರಿಂದ ಹೇಗಾದರೂ ಮಾಡಿ ಕಂಗನಾರನ್ನು ಸೋಲಿಸಲು ವಿಪಕ್ಷಗಳ ಮೈತ್ರಿಕೂಟವೂ ಸಜ್ಜಾಗಲಿದೆ. ಕಮ್ಯೂನಿಸ್ಟ್ ಪಕ್ಷಗಳು ಕೂಡ ಒಂದಿಷ್ಟು ಅಸ್ತಿತ್ವವನ್ನು ಉಳಿಸಿಕೊಂಡಿರುವ ರಾಜ್ಯವಿದು. ಕಂಗನಾ ಹುಟ್ಟಿದ್ದು ಮಂಡಿ ಲೋಕಸಭಾ ವ್ಯಾಪ್ತಿಯ ಬಾಂಬ್ಲಾದಲ್ಲಿ. ತನ್ನ ಜನರ ಸೇವೆಗಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ ಎಂದಿರುವ ಕಂಗನಾ ಅವರಿಗೆ ಹೈಕಮಾಂಡ್ ಬೆಂಬಲ ಭರಪೂರ ಇದೆ. ಒಟ್ಟಿನಲ್ಲಿ ಮಂಡಿಯಲ್ಲಿ ಯಾರು ಮಂಡಿಯೂರಿ ಸೋಲನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಬಾರಿಯ ಚುನಾವಣೆ ರಂಗು ತುಂಬಲಿದೆ..
Leave A Reply