ಎರಡು ಸಲ ಪೆಟ್ಟು ಬಿದ್ದಿದೆ, ಮೂರನೇ ಸಲ ಹೆಚ್ಚು ಕಡಿಮೆ ಆದ್ರೆ… ಎಂದ ನಿಖಿಲ್!
ಎನ್ ಡಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಜಾತ್ಯಾತೀತ ಜನತಾದಳಕ್ಕೆ ಅಳೆದು ತೂಗಿ ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರಗಳನ್ನು ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ ಬಿಟ್ಟುಕೊಟ್ಟಿದೆ. ಆರಂಭದಲ್ಲಿ ಹಾಸನ ಮತ್ತು ಮಂಡ್ಯ ಕ್ಷೇತ್ರ ಮಾತ್ರ ನೀಡುವ ಬಗ್ಗೆ ವದಂತಿ ಹರಡಿತ್ತು. ಕೇವಲ ಎರಡು ಸ್ಥಾನಗಳಿಗಾಗಿ ಮೈತ್ರಿ ಬೇಕಿತ್ತಾ? ಅಲ್ಲಿ ಎರಡೂ ಕಡೆ ನಾವು ಹೇಗಾದರೂ ಮಾಡಿ ಗೆಲ್ಲುತ್ತೇವೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದಂತೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ಮುಖಂಡರು ಕೋಲಾರವನ್ನು ಕೂಡ ಬಿಟ್ಟುಕೊಡುವ ಬಗ್ಗೆ ಚಿಂತನೆ ನಡೆಸಿದರು. ಪ್ರಸ್ತುತ ಎಲ್ಲರ ನಿರೀಕ್ಷೆಯಂತೆ ಹಾಸನದಲ್ಲಿ ದೇವೆಗೌಡರ ಮೊಮ್ಮೊಗ ಪ್ರಜ್ವಲ್ ರೇವಣ್ಣ ಹಾಗೂ ಕೋಲಾರದಲ್ಲಿ ಮಲ್ಲೇಶ್ ಬಾಬು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇನ್ನು ಮಂಡ್ಯದಲ್ಲಿ ಸಿ.ಎಸ್.ಪುಟ್ಟರಾಜು ಹಾಗೂ ನಿಖಿಲ್ ಕುಮಾರಸ್ವಾಮಿಯವರಲ್ಲಿ ಯಾರಾದರೂ ಒಬ್ಬರು ಸ್ಪರ್ಧಿಸಲಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಆದರೆ ಅಂತಿಮವಾಗಿ ಕುಮಾರಸ್ವಾಮಿಯವರೇ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೆಗೌಡರು ಸ್ವಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ಕುಮಾರಸ್ವಾಮಿಯವರು ಸ್ಪರ್ಧಿಸಿದರೆ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎನ್ನುವ ಗುಪ್ತಚರ ಮಾಹಿತಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರ ಕೈತಲುಪಿತ್ತು. ಆದ್ದರಿಂದ ಮಂಡ್ಯದಲ್ಲಿ ಕುಮಾರಸ್ವಾಮಿಯವರೇ ನಿಲ್ಲಬೇಕು ಎನ್ನುವುದು ಬಿಜೆಪಿ ಕೇಂದ್ರ ಸಮಿತಿಯ ಆಶಯವೂ ಆಗಿತ್ತು. ಆದರೆ ಕುಮಾರಸ್ವಾಮಿಯವರಿಗೆ ಹೇಗಾದರೂ ಮಾಡಿ ಮಗನ ರಾಜಕೀಯ ಭವಿಷ್ಯ ಭದ್ರಗೊಳಿಸಬೇಕೆಂಬ ಆಸೆ ಗಟ್ಟಿಯಾಗಿತ್ತು. ಅದಕ್ಕಾಗಿ ನಿಖಿಲ್ ಅವರನ್ನು ಮಂಡ್ಯದಿಂದ ಮತ್ತೆ ಕಣಕ್ಕೆ ಇಳಿಸಬೇಕೆಂದು ಅವರು ಯೋಜನೆ ಹಾಕಿಕೊಂಡಿದ್ದರು. ಆದರೆ ನಿಖಿಲ್ ಅದಕ್ಕೆ ಒಪ್ಪಲಿಲ್ಲ. ಈಗಾಗಲೇ 2019 ರಲ್ಲಿ ಮಂಡ್ಯದಿಂದ ಹಾಗೂ 2023 ರಲ್ಲಿ ರಾಮನಗರದಿಂದ ಸೋತಿರುವುದರಿಂದ ಈಗ ಮತ್ತೆ ಏನಾದರೂ ಹೆಚ್ಚು ಕಡಿಮೆ ಆಗಿ ಮತ್ತೆ ಮಂಡ್ಯದಲ್ಲಿ ಸೋತರೆ ಅದನ್ನು ರಾಜಕೀಯವಾಗಿ ಸಹಿಸಿಕೊಳ್ಳುವ ಶಕ್ತಿ ಇಲ್ಲ ಎಂದು ನಿಖಿಲ್ ಹೇಳಿದ್ದಾಗಿ ಕುಮಾರಸ್ವಾಮಿ ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಪಕ್ಷದ ಏಳಿಗೆಗಾಗಿ ತಾನು ತಲೆಕೊಡಬೇಕಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ಸಿನಿಂದ ಸ್ಟಾರ್ ಚಂದ್ರು ಎದುರಾಳಿಯಾಗಿದ್ದಾರೆ. ಸುಮಲತಾ ಏನು ಮಾಡುತ್ತಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.
Leave A Reply