ಮನೆ ಗೇಟ್ ಬಳಿ ಅರ್ಧ ಗಂಟೆ ಕಾದರೂ ಹೆಗ್ಡೆ ಡೋಂಟ್ ಕೇರ್!
ಪಕ್ಷದ ಸಭೆಯಲ್ಲಿ ಕುರ್ಚಿಯೊಂದನ್ನು ಟೇಬಲ್ ಮೇಲಿಟ್ಟು ಧಮ್ ಇದ್ದವರು ಬಂದು ಕುಳಿತುಕೊಳ್ಳಿ ಎಂದು ಸವಾಲೆಸೆದು ಸುದ್ದಿಯಾಗಿದ್ದ ಉತ್ತರ ಕನ್ನಡ ಲೋಕಸಭಾ ಸದಸ್ಯ ಅನಂತ ಕುಮಾರ್ ಹೆಗ್ಡೆ ಪಕ್ಷದಿಂದ ಟಿಕೆಟ್ ನಿರಾಕರಿಸಲ್ಪಟ್ಟ ನಂತರ ಈಗ ಮೌನಕ್ಕೆ ಶರಣಾಗಿದ್ದಾರೆ. ಅವರ ಮೌನ ಅಲ್ಲಿನ ಹಾಲಿ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ನಿದ್ರೆಯನ್ನೇ ಕಸಿದುಬಿಟ್ಟಿದೆ. ಅವರು ಸಂಸದ ಅನಂತ ಕುಮಾರ್ ಹೆಗ್ಡೆಯವರ ಮನೆಗೆ ಹೋಗಿ ಅವರನ್ನು ಮಾತನಾಡಿಸಿ ಬರೋಣ ಎಂದು ಅಂದುಕೊಂಡಿದ್ದರು. ಆದರೆ ಹೆಗ್ಡೆ ಮನೆಯ ಹೊರಗಿನಿಂದಲೇ ಅರ್ಧ ಗಂಟೆ ಕಾದು ಬಂದ ದಾರಿಗೆ ಸುಂಕವಿಲ್ಲದೇ ಹಿಂತಿರುಗಿ ಬರಬೇಕಾಯಿತು. ಹಾಲಿ ಸಂಸದರ ಬೆಂಬಲವಿಲ್ಲದೇ ತಾವು ದಡ ಸೇರುವುದು ಹೇಗೆ ಎನ್ನುವುದು ಕಾಗೇರಿಯವರಿಗೆ ಈಗ ಚಿಂತೆಯಾಗಿದೆ.
ಅನಂತ ಕುಮಾರ್ ಹೆಗ್ಡೆಯವರು ಕಾಗೇರಿಯವರನ್ನು ಬೆಂಬಲಿಸದೇ ಹೋದರೆ ಅಲ್ಲಿ ಭಾರತೀಯ ಜನತಾ ಪಾರ್ಟಿಯ ಗೆಲುವು ಅಷ್ಟು ಸುಲಭವಲ್ಲ. ಅದು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿಯೇ ಸಾಬೀತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿಯ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ರಚನೆಯಾಗಿದೆ. ಒಟ್ಟು ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಅವರು ಈಗಾಗಲೇ ಬಿಜೆಪಿಯಿಂದ ಎರಡೂ ಕಾಲುಗಳನ್ನು ಹೊರಗೆ ಇಟ್ಟಾಗಿದೆ. ಇನ್ನು ಕುಮಟಾದಿಂದ ದಿನಕರ ಶೆಟ್ಟಿ ಬಿಜೆಪಿಯಿಂದ ಗೆದ್ದಿದ್ದರೂ ಗೆದ್ದ ಅಂತರ ಕೇವಲ 676 ಮತಗಳು. ಇನ್ನು ಖಾನಾಪುರದಿಂದ ವಿಠಲ ಹಲಗೇಕರ್ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದರೂ ಅವರ ವಿರುದ್ಧ ಸೋತಿದ್ದ ಅಂಜಲಿ ನಿಂಬಾಳ್ಕರ್ ಈ ಬಾರಿ ಕಾಂಗ್ರೆಸ್ಸಿನಿಂದ ಲೋಕಸಭೆಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಅವರು ಅಲ್ಲಿ 2018 ರಲ್ಲಿ ಶಾಸಕಿಯಾಗಿದ್ದರು.
ಒಟ್ಟಿನಲ್ಲಿ ಎಲ್ಲಾ ಕಡೆ ರಾಜಕೀಯ ಲೆಕ್ಕಾಚಾರಗಳನ್ನು ನೋಡುವಾಗ ಕಾಗೇರಿಯವರಿಗೆ ಗೆಲುವು ಅಷ್ಟು ಸುಲಭವಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಜನರು ಕಣ್ಣುಮುಚ್ಚಿ ನರೇಂದ್ರ ಮೋದಿಯವರಿಗೆ ಮತ ಹಾಕುತ್ತಾರೆ ಎಂದಾದರೆ ಕಾಗೇರಿಯವರು ಹೆದರಬೇಕಾಗಿಲ್ಲ. ಆದರೆ ಕಳೆದ ಏಳು ಬಾರಿ ಸ್ಪರ್ಧಿಸಿ ಆರು ಬಾರಿ ಗೆದ್ದಿದ್ದ ಅನಂತಕುಮಾರ್ ಹೆಗ್ಡೆಯವರನ್ನು ನೋಡಿ ಜನ ಮತ ಚಲಾಯಿಸುತ್ತಾರೆ ಎಂದಾದರೆ ಕಾಗೇರಿ ಇನ್ನಷ್ಟು ಬೆವರು ಸುರಿಸಬೇಕಾದಿತೇನೋ
Leave A Reply