ವಿತ್ತ ಸಚಿವೆ ಸ್ಪರ್ಧಿಸಲು ಹಣ ಇಲ್ಲ ಎಂದದ್ದಕ್ಕೆ ಸಿಪಿಐ ರಾಜಾ ವ್ಯಂಗ್ಯ!
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಯಾವುದಾದರೂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ವರಿಷ್ಟರು ಸಲಹೆ ನೀಡಿದ್ದರು. ಅವರು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಯಾವುದಾದರೂ ಒಂದು ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವದಂತಿ ಕೂಡ ಹರಡಿತ್ತು. ಈ ಬಗ್ಗೆ ಮಾಧ್ಯಮದವರು ಕೇಂದ್ರ ಸಚಿವೆಯನ್ನು ಕೇಳಿದಾಗ ಚುನಾವಣೆಗೆ ಸ್ಪರ್ಧಿಸಲು ತಮ್ಮ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಈ ಉತ್ತರ ಈಗ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಸರಕಾರದ ಬಳಿ ಇರುವ ಆರ್ಥಿಕ ಸಂಪನ್ಮೂಲ ಕೇಂದ್ರ ವಿತ್ತ ಸಚಿವೆಯದ್ದು ಅಲ್ಲವಾದರೂ ಒಬ್ಬರು ಕೇಂದ್ರ ಸಚಿವರಾಗಿ ತಮ್ಮ ಬಳಿ ಲೋಕಸಭೆಗೆ ಸ್ಪರ್ಧಿಸಲು ಹಣ ಇಲ್ಲ ಎನ್ನುವ ಹೇಳಿಕೆ ಅವರಿಗೆ ಒಪ್ಪುವುದಿಲ್ಲ ಎನ್ನುವುದು ಹಲವರ ಅಭಿಪ್ರಾಯ. ಯಾಕೆಂದರೆ ಬಿಜೆಪಿಯಿಂದ ಎಂತೆಂತವರೋ ಸ್ಪರ್ಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಉದಾಹರಣೆಗೆ ಪ್ರತಾಪ ಚಂದ್ರ ಸಾರಂಗಿ. ಅವರು ಮೋದಿ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸೈಕಲಿನಲ್ಲಿಯೇ ಪ್ರಯಾಣಿಸಿ ತಮ್ಮ ದಿನಚರಿ ನಡೆಸುತ್ತಿದ್ದ ಸಾರಂಗಿಯವರನ್ನು ಮಾದರಿಯಾಗಿ ತೆಗೆದುಕೊಂಡರೆ ಚುನಾವಣೆಗೆ ತುಂಬಾ ಹಣವೇ ಬೇಕು ಎಂದು ಅಂದುಕೊಳ್ಳುವ ಚಾನ್ಸೇ ಇಲ್ಲ. ಓಡಿಶಾ ತನಕ ಹೋಗಬೇಕಂತಿಲ್ಲ. ಕರ್ನಾಟಕದಲ್ಲಿ ಅದರಲ್ಲಿಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಿರಂತರವಾಗಿ ಗೆಲ್ಲುತ್ತಾ ಈಗ ಉಡುಪಿ – ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಕೋಟಾ ಶ್ರೀನಿವಾಸ ಪೂಜಾರಿಯವರನ್ನೇ ತೆಗೆದುಕೊಂಡರೂ ಸಾಕು. ಹಣವನ್ನು ಚೆಲ್ಲದೇ ಅವರು ಜನರಿಂದಲೇ ಹಣ ಪಡೆದುಕೊಂಡು ಗೆಲ್ಲುವ ವರ್ಚಸ್ಸು ಉಳಿಸಿಕೊಂಡಿರುವ ಅಪರೂಪದ ರಾಜಕಾರಣಿ. ಅಲ್ಲಿ ಸಂದೇಶ್ ಖಾಲಿಯಲ್ಲಿ ಬಿಜೆಪಿ ಚುನಾವಣೆಗೆ ನಿಲ್ಲಿಸಿರುವ ರೇಖಾ ಪತ್ರ ಅವರ ಬಳಿ ಏನಿದೆ?
ಹೀಗೆ ಮೋದಿಯವರ ಯುಗದಲ್ಲಿ ಎಲ್ಲಾ ಕಡೆ ಚುನಾವಣೆಗೆ ತುಂಬಾ ಹಣ ಬೇಕು ಎಂದು ಹೇಳುವುದು ಸರಿಯಾಗುವುದಿಲ್ಲ. ಅದನ್ನೇ ವ್ಯಾಖ್ಯಾನಿಸಿರುವ ಸಿಪಿಐ ಮುಖಂಡ ಎ ರಾಜಾ ಅವರು ” ಒಂದೋ ಏನೂ ಕೆಲಸ ಮಾಡದೇ ಇರುವುದರಿಂದ ಜನ ಮತ ಹಾಕಲಿಕ್ಕಿಲ್ಲ ಎನ್ನುವ ಆತಂಕದಿಂದ ಚುನಾವಣೆಗೆ ನಿಂತಿರಲಿಕ್ಕಿಲ್ಲ. ಹಣ ಇಲ್ಲ ಎನ್ನುವ ಕಾರಣಕ್ಕೆ ಚುನಾವಣೆಗೆ ನಿಂತಿಲ್ಲ ಎನ್ನುವುದಾದರೆ ಮೋದಿ, ಗಡ್ಕರಿ, ರಾಜನಾಥ ಸಿಂಗ್, ಅಮಿತ್ ಶಾ ಅವರೆಲ್ಲಾ ತುಂಬಾ ಹಣವಂತರು ಎನ್ನುವ ಕಾರಣಕ್ಕೆ ನಿಂತಿದ್ದಾರೆ ಎನ್ನುವ ಸಂದೇಶವನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.
ಕರ್ಮಾಟಕದ ಟಿಕೆಟ್ ಘೋಷಣೆಯಾಗುವ ಮೊದಲು ವಿತ್ತ ಸಚಿವೆ ದಕ್ಷಿಣ ಕನ್ನಡದಿಂದ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹ ಕೂಡ ಹರಿದಾಡುತ್ತಿತ್ತು. ಬಿಜೆಪಿಯ ಮಟ್ಟಿಗೆ ಬಹಳ ಸುರಕ್ಷಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಗೆ ಮಾಜಿ ಯೋಧ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
Leave A Reply