ಕಿರುತೆರೆ ರಾಮನ ವಿರುದ್ಧ ಅಭ್ಯರ್ಥಿ ಬದಲಾಯಿಸಿದ ಸಮಾಜವಾದಿ ಪಾರ್ಟಿ!
ಅಭ್ಯರ್ಥಿ ಘೋಷಣೆ ಆಗಿ ನಾಮಪತ್ರ ಸಲ್ಲಿಕೆ ಆಗುವ ನಡುವಿನ ಅವಧಿಯಲ್ಲಿ ಅನೇಕ ಕಡೆ ಅಭ್ಯರ್ಥಿಯನ್ನು ಪಕ್ಷ ಬದಲಾಯಿಸಿದ ಇತಿಹಾಸ ಇದೆ. ಹೆಸರು ಘೋಷಣೆ ಆದ ಕೂಡಲೇ ಅಭ್ಯರ್ಥಿ ಫಿಕ್ಸ್ ಎಂದಲ್ಲ. ಬಿ – ಫಾರಂ ಕೈಗೆ ಸಿಗದೇ ತನಗೆ ಟಿಕೆಟ್ ಸಿಕ್ಕಿಬಿಟ್ಟಿದೆ, ತಾನು ಅಭ್ಯರ್ಥಿ ಆಗಿಬಿಟ್ಟೆ ಎಂದು ಅಭ್ಯರ್ಥಿ ಗ್ಯಾರಂಟಿಯಾಗಿ ಪ್ರತಿ ಬಾರಿ ಅಂದುಕೊಳ್ಳಬೇಕಾಗಿಲ್ಲ. ಕೆಲವೊಮ್ಮೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಿಸಿ ನಂತರ ಎದುರಾಳಿ ಪಕ್ಷದ ಅಭ್ಯರ್ಥಿಯ ವರ್ಚಸ್ಸು ನೋಡಿ ತಮ್ಮ ಅಭ್ಯರ್ಥಿಯನ್ನು ಬದಲಾಯಿಸಿದ್ದೂ ಇದೆ. ಅಂತಹುದೇ ಘಟನೆ ಈಗ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.
ಮೀರತ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿಯಿಂದ ಅದೇ ಜಿಲ್ಲೆಯ ಸರ್ದಾನ ವಿಧಾನಸಭಾ ಕ್ಷೇತ್ರದ ಶಾಸಕ ಅತುಲ್ ಪ್ರಧಾನ್ ಅವರನ್ನು ಲೋಕಸಭಾ ಕಣಕ್ಕೆ ಇಳಿಸಲು ಸಮಾಜವಾದಿ ಪಾರ್ಟಿ ಚಿಂತಿಸಿದೆ. ಇದಕ್ಕಿಂತ ಮೊದಲು ಮಾಜಿ ಎಡಿಜಿ ಭಾನು ಪ್ರತಾಪ್ ಸಿಂಗ್ ಅವರನ್ನು ಮೀರತ್ ಅಭ್ಯರ್ಥಿ ಎಂದು ಎಸ್ ಪಿಯಿಂದ ಘೋಷಿಸಲಾಗಿತ್ತು. ಆದರೆ ಮೀರತ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಅರುಣ್ ಗೋವಿಲ್ ಅವರಿಗೆ ಸಿಗುತ್ತಿರುವ ಸ್ಪಂದನೆ ಮತ್ತು ಕಿರುತೆರೆ ರಾಮನ ಜನಪ್ರಿಯತೆಯನ್ನು ನೋಡಿ ಕಂಗಾಲಾಗಿರುವ ಅಖಿಲೇಶ್ ಸಿಂಗ್ ಯಾದವ್ ಮೀರತ್ ಅಭ್ಯರ್ಥಿಯನ್ನು ಬದಲಾಯಿಸಿದ್ದಾರೆ.
ಹೊಸ ಅಭ್ಯರ್ಥಿ ಅತುಲ್ ಪ್ರಧಾನ ಬಹಳ ವರ್ಷಗಳಿಂದ ಸಮಾಜವಾದಿ ಪಾರ್ಟಿಯಲ್ಲಿದ್ದು, ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರೂ ಆಗಿರುವುದರಿಂದ ಜನ ಸಂಪರ್ಕವೂ ಚೆನ್ನಾಗಿದೆ. ಇನ್ನು ಭಾನು ಪ್ರತಾಪ್ ಸಿಂಗ್ ಅವರಿಗೆ ಜನಸಂಪರ್ಕ ಇಲ್ಲದಿರುವುದರಿಂದ ಅವರನ್ನು ನಿಲ್ಲಿಸಿದರೆ ಡೆಪಾಸಿಟ್ ಕೂಡ ಕಷ್ಟ ಎನ್ನುವುದು ಸಮಾಜವಾದಿ ಪಾರ್ಟಿಗೆ ಗೊತ್ತಾಗಿದೆ. ಆದ್ದರಿಂದ ಕಿರುತೆರೆ ರಾಮನ ಪ್ರಭಾವದ ಎದುರು ನಮ್ಮ ಅಭ್ಯರ್ಥಿ ಮಂಕಾಗಬಾರದು ಎನ್ನುವ ಕಾರಣಕ್ಕೆ ಅಭ್ಯರ್ಥಿ ಬದಲಾವಣೆ ಆಗಿದೆ.
Leave A Reply