ಹೆದರಿಕೆ ಇಲ್ಲದಿದ್ದಲ್ಲಿ ನೀತಿ ನಿಯಮಗಳಿರಲು ಸಾಧ್ಯವಿಲ್ಲ!
ಪ್ರಜೆಯ ಮೊದಲ ಹಕ್ಕು ನಿರ್ಬಂಧಿತವಾಗಬೇಕು
ದೇಶದಲ್ಲಿ ಹಲವಾರು ಕಾನೂನುಗಳು ಕಡ್ಡಾಯವಾಗಿ ಅನ್ವಯಿಸುತ್ತದೆ. ಅದನ್ನು ಮೀರಿದರೆ ಅದಕ್ಕೆ ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ. ಆದರೆ ಪ್ರಜಾಪ್ರಭುತ್ವದ ಹಬ್ಬವಾದ ದೇಶದ ಪ್ರಧಾನ ಸೇವೆಯಾದ ಮತದಾನ ಹೀಗೆ ಯಾವುದೇ ನೀತಿ ನಿಯಮಗಳಿಲ್ಲದೆ ನಡೆಯುತ್ತಿರುವುದು ಬೇಸರದ ಸಂಗತಿ. ಇವತ್ತು ಪ್ರಜಾಪ್ರಭುತ್ವಕ್ಕೆ ಕೇಂದ್ರಿತವಾದ ಪ್ರಧಾನ ಕಾರ್ಯ ಮತದಾನ. ಮತದಾನವನ್ನು ಬಿಟ್ಟು ದೇಶ ಸೇವೆಯ ಮೊದಲ ಹೆಜ್ಜೆಯನ್ನು ಒಬ್ಬ ಭಾರತೀಯನಾಗಿ ಈ ದೇಶದಲ್ಲಿ ಇಡಲು ಸಾಧ್ಯವಿಲ್ಲ. ಅಂತದ್ದರಲ್ಲಿ ಇದನ್ನು ನಡೆಸದೆ ಇರುವವನಿಗೆ ಈ ದೇಶದ ಪೌರತ್ವವನ್ನು ಪಡೆದುಕೊಳ್ಳುವ ಯೋಗ್ಯತೆ ಇಲ್ಲ ಎನ್ನುವುದು ಖಾತರಿಯಾದ ಹಾಗೆ. ಆದ್ದರಿಂದ ಅಂತಹ ಪ್ರತಿಯೊಂದು ವ್ಯಕ್ತಿಯನ್ನು ಕೂಡ ನಿರ್ದಾಕ್ಷಿಣ್ಯವಾಗಿ ಅಪರಾಧಿ ಎನ್ನುವ ನೆಲೆಯಲ್ಲಿ ಶಿಕ್ಷೆ ಕೊಡ ಬೇಕಾದದ್ದು ಸರ್ಕಾರದ ಕರ್ತವ್ಯ. ಹೆದರಿಕೆ ಇಲ್ಲದಿದ್ದಲ್ಲಿ ನೀತಿ ನಿಯಮಗಳಿರಲು ಸಾಧ್ಯವಿಲ್ಲ.
ನೀವು ಒಂದಷ್ಟು ತಿಂಗಳು ಸರ್ಕಾರದಿಂದ ಸೌಲಭ್ಯವನ್ನು ಸ್ವೀಕರಿಸದಿದ್ದರೆ ನಿಮ್ಮ ಸೌಲಭ್ಯ ತನ್ನಿಂದ ತಾನೇ ನಿಂತು ಹೋಗುತ್ತದೆ. ಅಪರಾಧಿಯನ್ನು ಎರಡು ಮೂರು ಬಾರಿ ಕೋರ್ಟಿಗೆ ಕರೆದಾಗ ಆತ ಬಾರದಿದ್ದರೆ ಮತ್ತೆ ಆತನನ್ನು ನೇರವಾಗಿ ಬಂಧಿಸುವ ಅಧಿಕಾರ ಸಿಗುತ್ತದೆ. ಇನ್ನು ಸಂಚಾರ ನಿಯಮವಂತು ಸರಕಾರದ ಅಧಿಕಾರದ ಪರಮಾವಧಿತನವನ್ನು ತೋರಿಸುತ್ತದೆ. ಎಲ್ಲದರಲ್ಲಿಯೂ ಅದಕ್ಕೆ ಸಂಬಂಧಿಸಿದ ರೀತಿ ನಿಯಮಗಳಿರುವಾಗ ಅದನ್ನು ಆ ಮೂಲಕ ನಿಯಮ ಬದ್ಧವಾಗಿ ನಡೆಸುತ್ತಿರುವಾಗ ಈ ಮತದಾನ ಯಾಕೆ ಇಷ್ಟು ನಿರ್ಲಕ್ಷ್ಯವಾಗಿ ನಡೆಯುತ್ತಿದೆ ಎನ್ನುವುದನ್ನು ಕಂಡಾಗ ಈ ಬಗ್ಗೆ ಬೇಸರವಾಗುತ್ತದೆ.
ಎರಡು ಮೂರು ಸಲ ಮತದಾನ ಮಾಡದಿದ್ದರೆ ಆತನ ಈ ದೇಶದ ಪ್ರಜಾಧಿಕಾರವನ್ನು ತೆಗೆಯಬೇಕು. ಆತನಿಗೆ ಈ ದೇಶದಲ್ಲಿ ಸಿಗುವ ಸೌಲಭ್ಯಗಳನ್ನು ನಿಲ್ಲಿಸಬೇಕು. ಆತನ ಆಧಾರ್ ಕಾರ್ಡ್ ನಿಷ್ಕ್ರಿಯವಾಗಬೇಕು. ಹೀಗಾದಲ್ಲಿ ಯಾರು ಕೂಡ ಮತದಾನವನ್ನು ನಿರ್ಲಕ್ಷ ಮಾಡುವುದಿಲ್ಲ. ಇದಕ್ಕಿಂತ ಮೊದಲು ತಾವೆಲ್ಲಿದ್ದೇವೆಯೋ ಅಲ್ಲಿಯೇ ಮತದಾನ ನಡೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು. ಒಂದೋ ಆತನ ಹುಟ್ಟೂರಿನ ಕ್ಷೇತ್ರಕ್ಕೆ ಸಂಬಂಧಿಸಿದ ಮತದಾನವನ್ನು ಆನ್ಲೈನ ಮೂಲಕ ನಡೆಸುವ ವ್ಯವಸ್ಥೆಯನ್ನು ನಡೆಸಬೇಕು. ಇಲ್ಲದಿದ್ದಲ್ಲಿ ಆತನು ಇರುವ ಕ್ಷೇತ್ರಕ್ಕೆ ಸಂಬಂಧಿಸಿದ ಮತದಾನವನ್ನಾದರೂ ಮಾಡಿಸಬೇಕು. ಹಾಗೂ ಇದು ದೇಶಕ್ಕೆ ಸಂಬಂಧಿಸಿದ ಅತಿ ಮಹತ್ವವಾದ ಕಾರ್ಯವಾದ್ದರಿಂದ ಇನ್ನೊಂದು ದಿವಸದ ಅವಕಾಶವನ್ನು ಕೂಡ ಕೊಡಬೇಕು. ಆ ದಿವಸ ಏನಾದರೂ ಅಸಾಧ್ಯವಾದಲ್ಲಿ ಇನ್ನೊಂದು ದಿವಸದ ಅವಕಾಶವನ್ನಾದರೂ ಆತ ಪಡೆದುಕೊಳ್ಳುತ್ತಾನೆ. ಈ ಸಂಗತಿಗಳು ಈ ಕಾಲದಲ್ಲಿ ಏನೂ ಕಷ್ಟವಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದರೆ ಇದೇ ರೀತಿ ಮತದಾನ ನಿರ್ಲಕ್ಷದಿಂದಲೇ ಸಾಗುತ್ತಾ ಇರುತ್ತದೆ.
ಈ ದೇಶದಲ್ಲಿದ್ದುಕೊಂಡು ಈ ದೇಶಕ್ಕಾಗಿ ಕನಿಷ್ಠಪಕ್ಷ ಮತದಾನವನ್ನಾದರೂ ಮಾಡದಿದ್ದವ ಆತ ಈ ದೇಶದಲ್ಲಿರುವುದು ವ್ಯರ್ಥ.ಸೈನಿಕರು ಈ ದೇಶಕ್ಕಾಗಿ ತನ್ನ ಪ್ರಾಣವನ್ನು ಸಮರ್ಪಿಸುತ್ತಿರುವಾಗ ಕನಿಷ್ಠ ಮತದಾನವನ್ನಾದರೂ ಮಾಡದಂತಹ ಅಯೋಗ್ಯರು ಶಿಕ್ಷೆಯನ್ನು ಅನುಭವಿಸಲೇಬೇಕು.ಮತದಾನ ಮಾಡದವ ಮತ್ಯಾವ ರೀತಿಯಲ್ಲೂ ಕೂಡ ಈತ ದೇಶ ಸೇವೆಯನ್ನು ಮಾಡುವುದಿಲ್ಲ ಎನ್ನುವುದು ಈ ಮೂಲಕವೇ ತಿಳಿದುಕೊಳ್ಳಬಹುದು. ಇದೇ ರೀತಿ ನಿರ್ಲಕ್ಷ್ಯದಿಂದ ಮತದಾನವನ್ನು ನಡೆಸುತ್ತಿದ್ದರೆ ಒಂದು ಕ್ಷೇತ್ರದಲ್ಲಿ ಕೇವಲ ಸರ್ವಾನುಮತದಿಂದ ಅಥವಾ ಪ್ರಜಾಪ್ರಭುತ್ವದ ಅಧಿಕಾರದಿಂದ ಒಬ್ಬ ಅಭ್ಯರ್ಥಿ ಅಧಿಕಾರವನ್ನು ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಕೇವಲ ಐವತ್ತು ಶೇಕಡ ಮತದಾನದಿಂದ ಗೆದ್ದ ಅಭ್ಯರ್ಥಿಯನ್ನು ಉಳಿದ ಐವತ್ತು ಶೇಕಡ ಮಂದಿ ಒಪ್ಪಿಕೊಂಡ ವ್ಯಕ್ತಿಯನ್ನು ಪ್ರಜಾಪ್ರಭುತ್ವದ ಆಧಾರದಲ್ಲಿ ಆಯ್ಕೆಯಾದ ಎನ್ನುವುದು ಎಷ್ಟು ಸರಿ. ಆದ್ದರಿಂದ ಪ್ರಜಾಪ್ರಭುತ್ವ ಎನ್ನುವಂತಹ ಒಂದು ಸಿದ್ಧಾಂತವೇ ಬಿದ್ದುಹೋಗುತ್ತದೆ. ಒಂದು ದೇಶದ ಪ್ರಧಾನ ಸಿದ್ದಾಂತವನ್ನು ರಕ್ಷಿಸಬೇಕಾದದ್ದು ಸರ್ಕಾರದ ಬದ್ಧತೆ. ಈ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಕೊಂಡು ಹೋಗಬೇಕು. ಈ ಮೂಲಕ ಮತದಾನ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಒಳಗಾಗಬಾರದು.
Leave A Reply