ಮಗನ ಸಿಎ ಪಾಸ್ ಫಲಿತಾಂಶಕ್ಕೆ ತಾಯಿಯ ಸ್ಪಂದನೆ
ಹೆತ್ತವರು ತಾವು ಎಷ್ಟೇ ಕಷ್ಟಪಟ್ಟರೂ ತಮ್ಮ ಮಕ್ಕಳು ಮಾತ್ರ ಉತ್ತಮ ಜೀವನವನ್ನು ನಡೆಸಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಎಲ್ಲಾ ಕಷ್ಟಗಳನ್ನು ತಾವು ಅನುಭವಿಸುತ್ತಾ ಮಕ್ಕಳಿಗೆ ಉತ್ತಮ ಬದುಕನ್ನು ನೀಡಲು ಹಗಲಿರುಳು ಶ್ರಮಿಸುತ್ತಾರೆ. ಕೆಲವೊಮ್ಮೆ ಮಕ್ಕಳಿಗೆ ತಮ್ಮ ಅಪ್ಪ, ಅಮ್ಮ ತಮಗಾಗಿ ಅನುಭವಿಸುತ್ತಿರುವ ಕಷ್ಟ ಗೊತ್ತಾಗುವುದಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ಪೋಷಕರು ಎಷ್ಟೇ ಸಂಕಟಪಟ್ಟು ಮಕ್ಕಳನ್ನು ಓದಿಸುತ್ತಿದ್ದರೂ ಅದರ ಮಹತ್ವ ಅರಿಯದೇ ಮಗ, ಮಗಳು ದಾರಿ ತಪ್ಪುವುದೂ ಇದೆ. ಆದರೆ ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು ತಮ್ಮ ತಂದೆ, ತಾಯಿಯ ತ್ಯಾಗವನ್ನು ಅರಿತು ತಾವು ಉತ್ತಮವಾಗಿ ಕಲಿತು ಹೆತ್ತವರಿಗೆ ಖುಷಿ ಕೊಟ್ಟಿದ್ದೂ ಇದೆ.
ತೊಂಬರೆ ಮಾವಶಿ ಎನ್ನುವ ತಾಯಿಯೊಬ್ಬರು ಮಹಾರಾಷ್ಟ್ರದ ಥಾಣೆ ಉಪನಗರದ ಡೊಂಬಿವಿಲಿ ಪೂರ್ವ ಪ್ರದೇಶದ ಗಾಂಧೀನಗರದಲ್ಲಿ ರಸ್ತೆಬದಿಯಲ್ಲಿ ತರಕಾರಿ ವ್ಯಾಪಾರವನ್ನು ನಡೆಸುತ್ತಿದ್ದರು. ಅವರ ಮಗ ಈ ವರ್ಷ ಸಿಎ ಪರೀಕ್ಷೆಯನ್ನು ಬರೆದಿದ್ದ. ಇತ್ತೀಚೆಗೆ ಅದರ ಫಲಿತಾಂಶ ಬಂದಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ಅತ್ಯಂತ ಕಠಿಣವಾದ ಪರೀಕ್ಷೆ. ಅದನ್ನು ಒಂದೇ ಪ್ರಯತ್ನದಲ್ಲಿ ಪಾಸ್ ಮಾಡುವುದು ಕೂಡ ದೊಡ್ಡ ಸವಾಲಿನ ಕೆಲಸ. ಅದಕ್ಕಾಗಿ ಕೋಚಿಂಗ್ ಸಹಿತ ನಿರಂತರ ಅಧ್ಯಯನ ನಡೆಸಬೇಕಾಗುತ್ತದೆ.
ಹೀಗೆ ಕಠಿಣ ಅಭ್ಯಾಸ ನಡೆಸಿರುವ ಯೋಗೇಶ್ ಎನ್ನುವ ಯುವಕ ಸಿಎ ಫಲಿತಾಂಶ ನೋಡಿ ಬಂದು ತಾಯಿಯನ್ನು ಭೇಟಿಯಾದಾಗ ಆಕೆ ಪಟ್ಟಿರುವ ಸಂಭ್ರಮವನ್ನು ಈ ವಿಡಿಯೋದಲ್ಲಿ ನೋಡಬಹುದು. ಅದನ್ನು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ರವೀಂದ್ರ ಚವಾಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾಯಿಯ ಆನಂದ ಭಾಷ್ಪ ಮತ್ತು ಮಗನ ಯಶಸ್ಸಿನ ಸಂತೋಷಕ್ಕೆ ಬೆಲೆಕಟ್ಟಲಾದೀತೆ!
Leave A Reply