ಕನ್ನಡ ಚಿತ್ರರಂಗದ ಏಳಿಗೆಗಾಗಿ ಪೂಜೆ ; ಹಿರಿಯ ನಟಿ ಭಾವೋದ್ವೇಗ
ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರರಂಗ ವಿವಿಧ ಸಮಸ್ಯೆಗಳನ್ನು ಅನುಭವಿಸಿಕೊಂಡು ಬರುತ್ತಿದೆ. ಥಿಯೇಟರ್ ಗಳಿಗೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ ಎನ್ನುವುದರಿಂದ ಹಿಡಿದು ಕಲಾವಿದರ, ತಂತ್ರಜ್ಞರ, ನಿರ್ಮಾಪಕರ ವೈಯಕ್ತಿಕ ಸಮಸ್ಯೆ, ಸಂಕಟಗಳು ಕೂಡ ಇಲ್ಲಿ ಪ್ರಮುಖವಾಗಿ ಚಿತ್ರರಂಗವನ್ನು ಕಾಡುತ್ತಿದ್ದವು. ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಚಿತ್ರರಂಗದ ಪ್ರಮುಖರು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಭೇಟಿಯಾಗಿದ್ದಾರೆ. ಜ್ಯೋತಿಷಿ ಹೇಳಿದ ವಿಚಾರವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಸಿನಿಗಣ್ಯರು ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ನಾಗಾರಾಧನೆಯನ್ನು ಹಮ್ಮಿಕೊಂಡಿದ್ದರು. ಈ ಹೋಮ, ಹವನದಲ್ಲಿ ಹಿರಿಯ ಮತ್ತು ಕಿರಿಯ ನಟ, ನಟಿಯರು ಭಾಗಿಯಾಗಿದ್ದರು.
ಬುಧವಾರ ( ಅಗಸ್ಟ್ 14 ರಂದು) ಕಲಾವಿದರ ಸಂಘದಲ್ಲಿ ನಡೆದ ನಾಗಾರಾಧನೆ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟಿಯೊಬ್ಬರು ಭಾವೋದ್ವೇಗಕ್ಕೆ ಒಳಗಾದ ಘಟನೆ ನಡೆದಿದೆ.
ನಾಗಾರಾಧನೆಯ ಪೂಜಾ ವಿಧಿವಿಧಾನಗಳು ನಡೆಯುವಾಗಲೇ ಅಲ್ಲಿಯೇ ಇತರ ನಟಿಯೊಂದಿಗೆ ನಿಂತಿದ್ದ ಜ್ಯೋತಿಯವರು ಭಾವೋದ್ವೇಗಕ್ಕೆ ಒಳಗಾಗಿ ಕಂಪಿಸಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಕಲಾವಿದರು ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಈ ಘಟನೆ ಎಲ್ಲರಲ್ಲಿಯೂ ಭಕ್ತಿಪರವಶತೆಯನ್ನು ಉಂಟು ಮಾಡಿತ್ತು.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ಈ ಹೋಮ – ಹವನಗಳು ನಡೆಯುತ್ತಿದ್ದು, ಅನೇಕ ಕಲಾವಿದರು ಭಾಗಿಯಾಗಿದ್ದಾರೆ.
Leave A Reply