ಮೌಮಿತ ಹತ್ಯಾ ಆರೋಪಿ ಕೊಲ್ಕೊತ್ತಾ ಪೊಲೀಸರ ನಾಗರಿಕ ಸ್ವಯಂಸೇವಕ!?
ಪಶ್ಚಿಮ ಬಂಗಾಲದ ಕೊಲ್ಕೊತ್ತಾದ ಸರಕಾರಿ ಆಡಳಿತದ ಆರ್ ಜಿ ಖರ್ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ವೈದ್ಯೆ ಮೌಮಿತ ದೇಬನಾಥ್ ಅವರ ಮೃತದೇಹ ಸಿಕ್ಕಿದ ನಂತರ ಇಡೀ ಪಶ್ಚಿಮ ಬಂಗಾಲ ಮಾತ್ರವಲ್ಲ ದೇಶದ ವಿವಿಧ ಭಾಗಗಳಲ್ಲಿ ಆಕ್ರೋಶ ಕಂಡುಬಂದಿದೆ. ಅರೆ ನಗ್ನ ದೇಹ ಪತ್ತೆಯಾದಾಗಲೇ ಮೇಲ್ನೋಟಕ್ಕೆ ಅದು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಎಂದು ಯಾರು ಬೇಕಾದರೂ ಹೇಳಬಹುದಾಗಿತ್ತು. ಯಾಕೆಂದರೆ ದೇಹ ಆ ರೀತಿಯಲ್ಲಿ ಕಂಡುಬಂದಿತ್ತು. ಆದರೆ ಆ ಹೆಣ್ಣುಮಗಳ ಮನೆಯವರಿಗೆ ಆಸ್ಪತ್ರೆಯ ಆಡಳಿತ ಮಂಡಳಿಯವರು ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿರುವುದಾಗಿ ಮೌಮಿತ ಕುಟುಂಬದವರು ಆರೋಪಿಸಿದ್ದಾರೆ. ಹಾಗಾದರೆ ಆಸ್ಪತ್ರೆಯವರು ಮೌಮಿತ ಅವರ ಪೋಷಕರಿಗೆ ಸುಳ್ಳು ಮಾಹಿತಿಯನ್ನು ಯಾಕೆ ಹೇಳಿದರು ಎನ್ನುವುದು ಈಗ ಇರುವ ಪ್ರಶ್ನೆ. ಹಾಗಾದರೆ ಇಲ್ಲಿ ಸುಳ್ಳು ಹೇಳಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗಿತ್ತಾ ಎನ್ನುವುದರ ಕುರಿತು ತನಿಖೆ ಆಗಬೇಕು.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೌಮಿತ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎನ್ನುವ ಅಂಶ ವರದಿ ಆಗಿದೆ. ಆ ಯುವತಿಯ ಗುಪ್ತಾಂಗದಲ್ಲಿ ಸಿಕ್ಕಿದ ವೀರ್ಯಾಣುಗಳು, ಅವಳ ಕಾಲ ಮೇಲೆ ಬಲ ಹಾಕಿ ಅದು ಮುರಿಯಲ್ಪಟ್ಟಿರುವುದು, ಕಣ್ಣುಗಳು ತೀವ್ರವಾಗಿ ಹಾನಿಗೊಳಗಾಗಿರುವುದು ಎಲ್ಲವನ್ನು ಪೋಸ್ಟ್ ಮಾರ್ಟಂ ನಲ್ಲಿ ವೈದ್ಯರು ಪತ್ತೆಹಚ್ಚಿದ್ದಾರೆ.
ಸದ್ಯ ಪೊಲೀಸರು ಬಂಧಿಸಿರುವ ಆರೋಪಿ ಸಂಜಯ್ ರಾಯ್ ಕೊಲ್ಕೋತ್ತಾ ಪೊಲೀಸರ ನಾಗರಿಕ ಸ್ವಯಂಸೇವಕನಾಗಿದ್ದಾನೆ. ಇವನ ಕ್ರಿಮಿನಲ್ ಹಿನ್ನಲೆಯ ಬಗ್ಗೆ ಪೊಲೀಸರಿಗೆ ಗೊತ್ತಿದ್ದೂ ಅವನಿಗೆ ತಮ್ಮ ಪರವಾಗಿ ಕೆಲಸ ಮಾಡಲು ಅನುಮತಿ ನೀಡಲಾಗಿತ್ತಾ ಎನ್ನುವುದರ ಬಗ್ಗೆ ತನಿಖೆ ಆಗಬೇಕು. ಇನ್ನು ಪೊಲೀಸರ ಕೃಪಾಕಟಾಕ್ಷ ಇದೆ ಎನ್ನುವ ಕಾರಣಕ್ಕೆ ಸಂಜಯ್ ರಾಯ್ ಹೀಗೆ ಮಾಡಿದ್ನಾ ಎಂದು ಕೂಡ ಗೊತ್ತಾಗಬೇಕು.
ಇನ್ನು ಆಶ್ಚರ್ಯ ಎಂದರೆ ಮೌಮಿತ ಅವರ ಮೃತದೇಹ ಸಿಕ್ಕಿದ ಕೆಲವೇ ಗಜಗಳ ಅಂತರದಲ್ಲಿ ಆಸ್ಪತ್ರೆಯವರು ಕಟ್ಟಡದ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಇದು ಸಾಕ್ಷ್ಯಗಳನ್ನು ದಮನಿಸುವ ಯತ್ನವಾ ಎಂದು ಕೂಡ ನೋಡಬೇಕು.
ಕೊನೆಯದಾಗಿ ಶೀಘ್ರದಲ್ಲಿ ತನಿಖೆ ನಡೆದು ಎಲ್ಲಾ ಆರೋಪಿಗಳಿಗೆ ಸೂಕ್ತ ಕಠಿಣ ಶಿಕ್ಷೆಯಾಗಲಿ ಎನ್ನುವುದು ಎಲ್ಲರ ಪ್ರಾರ್ಥನೆ.
Leave A Reply