ವೈದ್ಯೆಯ “ಹತ್ಯಾಚಾರ” ಪ್ರಕರಣದಲ್ಲಿ ಸುಪ್ರೀಂ ಸುಮೋಟೋ ನಿರ್ಧಾರ..
ಕೊಲ್ಕೊತ್ತಾದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸುಮೋಟೋ ಪ್ರಕರಣವನ್ನಾಗಿ ಕೈಗೆತ್ತಿಕೊಂಡಿದೆ. ಸುಮೋಟೋ ಎಂದರೆ ಕಾನೂನು ಭಾಷೆಯಲ್ಲಿ ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳುವುದು. ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆಬಿ ಪರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರ ತ್ರಿಸದಸ್ಯ ಪೀಠ ಈ ಪ್ರಕರಣವನ್ನು ಅಗಸ್ಟ್ 20 ಕ್ಕೆ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಸುಪ್ರೀಂ ಕೋರ್ಟಿನ ಈ ನಿರ್ಧಾರ ದೇಶದ ಉದ್ದಗಲಕ್ಕೂ ನಡೆಯುತ್ತಿರುವ ನ್ಯಾಯಕ್ಕಾಗಿ ಪ್ರತಿಭಟನೆ ಮತ್ತು ಪಶ್ಚಿಮ ಬಂಗಾಲದ ರಾಜ್ಯ ಸರಕಾರದ ಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿರುವ ಹೋರಾಟಗಾರರಿಗೆ ಒಂದು ಸಮಾಧಾನಕರ ಅಂಶವಾಗಿದೆ. ಭಾರತೀಯ ವೈದ್ಯಕೀಯ ಸಂಘಟನೆಗಳು ಮತ್ತು ವಿವಿಧ ಸಂಬಂಧಪಟ್ಟ ಸಂಘ ಸಂಸ್ಥೆಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಿ ವೈದ್ಯರ ಸುರಕ್ಷತೆಗೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಒತ್ತಡ ಹೇರಿರುವ ಹಿನ್ನಲೆಯಲ್ಲಿ ಸುಪ್ರೀಂಕೋರ್ಟಿನ ಈ ತೀರ್ಮಾನ ಮಹತ್ವದಾಗಿದೆ.
ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಪ್ರಕಾರ ಸಿಬಿಐ ಈಗಾಗಲೇ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಬಂಧಿತ ಪ್ರಧಾನ ಆರೋಪಿ ಸಂಜಯ್ ರಾಯ್ ನನ್ನು ವಿವಿಧ ರೀತಿಯ ಮಾನಸಿಕ ಪರೀಕ್ಷೆಗೆ ಒಳಪಡಿಸಿದೆ. ಕೇಂದ್ರದ ಫಾರೆನ್ಸಿಕ್ ವಿಜ್ಞಾನದ ಲ್ಯಾಬೋರೇಟರಿ (ಸಿಎಫ್ ಎಸ್ ಎಲ್) ರಾಯ್ ನನ್ನು ವಿಚಾರಣೆಗೆ ಒಳಪಡಿಸಿದೆ.
ಈ ಪ್ರಕರಣದಲ್ಲಿ ಮೃತ ವೈದ್ಯೆಯ ತಾಯಿ ತಮ್ಮ ಮಗಳು ಆತ್ಮಹತ್ಯೆ ಮಾಡಿದ್ದಾಳೆ ಎಂದು ಆರಂಭದಲ್ಲಿ ಆಸ್ಪತ್ರೆಯ ಕಡೆಯಿಂದ ಕರೆ ಬಂದಿತ್ತು. ನಾವು ಆಸ್ಪತ್ರೆಗೆ ಬಂದಾಗ ನಮಗೆ ತುಂಬಾ ಹೊತ್ತು ಮಗಳನ್ನು ನೋಡಲು ಅವಕಾಶ ನೀಡಿರಲಿಲ್ಲ.
ಕೊನೆಗೂ ಮೃತದೇಹವನ್ನು ನೋಡಲು ಅವಕಾಶ ನೀಡಿದಾಗ ದೇಹದ ಮೇಲೆ ಒಂದೇ ಬಟ್ಟೆಯ ತುಂಡು ಇತ್ತು. ಅವಳ ಕೈ ಮುರಿದಿತ್ತು. ಕಣ್ಣು ಮತ್ತು ಮುಖದಿಂದ ರಕ್ತ ಹೊರಬಂದಿತ್ತು ಎಂದು ಹೇಳಿದ್ದಾರೆ.
ಇನ್ನು ಸಿಬಿಐ ಈ ವಿಷಯದಲ್ಲಿ ಈ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಾಜಿ ಪ್ರಿನ್ಸಿಪಾಲ್ ಸಂದೀಪ್ ಘೋಷ್ ಅವರ ಮೊಬೈಲನ್ನು ಕೂಡ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ದುರ್ಘಟನೆ ಸಂಭವಿಸಿದ ಮೊದಲು ಮತ್ತು ಅನಂತರ ಘೋಷ್ ಯಾರಿಗೆಲ್ಲಾ ಕರೆ ಮಾಡಿದ್ದಾರೆ ಎನ್ನುವ ವಿಷಯ ತನಿಖೆ ಆಗಲಿದೆ. ಅಷ್ಟೇ ಅಲ್ಲ, ತನಿಖಾಧಿಕಾರಿಗಳು ಆ ಫೋನ್ ಕಾಲ್ ಗಳ ಬಗ್ಗೆ ಮತ್ತು ಡಾಜಾ ಯೂಸೆಜ್ ಬಗ್ಗೆ ಮೊಬೈಲ್ ಕರೆನ್ಸಿ ಕಂಪೆನಿಗಳ ಜೊತೆಯೂ ಸಂಪರ್ಕದಲ್ಲಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ.
ಈ ವಿಷಯದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ” ನಿರಂತರ 36 ಗಂಟೆಯ ಸೇವಾವಧಿಯಲ್ಲಿ ಬಳಲಿ ಬೆಂಡಾಗಿರುವ ಸಂತ್ರಸ್ತೆಗೆ ಒಂದು ಸಣ್ಣ ವಿರಾಮದ ಅವಧಿಯಲ್ಲಿಯೂ ಸೂಕ್ತ ವಿಶ್ರಾಂತಿ ಗೃಹದ ಸೌಲಭ್ಯ ಇಲ್ಲದೇ ಇರುವುದು ಶೋಚನೀಯ. ಮಹಿಳಾ ವೈದ್ಯೆಯರ ಸುರಕ್ಷತೆ ಮತ್ತು ರಕ್ಷಣೆಯ ವಿಷಯದಲ್ಲಿ ಸಮರ್ಪಕ ಕಾನೂನು ಜಾರಿಗೆ ತರಬೇಕು ” ಎಂದು ಮನವಿ ಮಾಡಿದೆ.
Leave A Reply