ಶರದ್ ಪವಾರ್ ಅವರಿಗೆ ಇನ್ನು ಝಡ್ ಪ್ಲಸ್ ಭದ್ರತೆ! ಯಾಕೆ?
ಕೇಂದ್ರ ಸರಕಾರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ- ಎಸ್ ಪಿ)ಯ ಮುಖಂಡ ಶರದ್ ಪವಾರ್ ಅವರಿಗೆ ಇನ್ನು ವಿಶೇಷ ಗಣ್ಯರಿಗೆ ಮಾತ್ರ ನೀಡುವ ಝಡ್ ಪ್ಲಸ್ ಭದ್ರತಾ ವ್ಯವಸ್ಥೆಯನ್ನು ನೀಡಲು ತೀರ್ಮಾನಿಸಿದೆ. ಕೇಂದ್ರದ ಗೃಹ ಸಚಿವಾಲಯ ಮಹಾರಾಷ್ಟ್ರದ ಮಹಾನಾಯಕನಿಗೆ ಹೆಚ್ಚಿನ ಭದ್ರತೆ ನೀಡುವಂತೆ ಕೇಂದ್ರ ಮೀಸಲು ಪೊಲೀಸ್ ಪಡೆ ( ಸಿಆರ್ ಪಿಎಫ್) ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇನ್ನು ಮುಂದೆ ಸಿಆರ್ ಪಿಎಫ್ ಇದರ 55 ಯೋಧರು 83 ವರ್ಷದ ಶರದ್ ಪವಾರ್ ಅವರ ಸುರಕ್ಷತಾ ವಲಯದಲ್ಲಿ ಯಾವತ್ತೂ ಕಾವಲು ಕಾಯುತ್ತಿರುತ್ತಾರೆ.
ಸಾಮಾನ್ಯವಾಗಿ ದೇಶದ ಉನ್ನತ ನಾಯಕರ ಭದ್ರತೆಯ ಬಗ್ಗೆ ಆಗಾಗ ಪರಿಶೀಲನಾ ಸಭೆ ಕೇಂದ್ರ ಮಟ್ಟದಲ್ಲಿ ನಡೆಯುತ್ತಲೇ ಇರುತ್ತದೆ. ಯಾರಿಗಾದರೂ ಬೆದರಿಕೆ ಇದ್ದಲ್ಲಿ ಅಥವಾ ಗುಪ್ತಚರ ಇಲಾಖೆಯಿಂದ ಇಂತಿಂತವರ ಮೇಲೆ ಏನಾದರೂ ದಾಳಿ ಸಂಭವಿಸಬಹುದು ಎನ್ನುವ ಮುನ್ಸೂಚನೆ ಇದ್ದಲ್ಲಿ ಕೇಂದ್ರ ಗೃಹ ಸಚಿವಾಲಯ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ವಿವಿಐಪಿಗಳಿಗೆ ನೀಡುವ ಸುರಕ್ಷತಾ ವ್ಯವಸ್ಥೆಗಳಲ್ಲಿ ವಿವಿಧ ಹಂತಗಳು ಇದ್ದು, ಏಕ್ಸ್, ವೈ, ವೈ ಪ್ಲಸ್, ಝಡ್, ಝಡ್ ಪ್ಲಸ್ ಕ್ಯಾಟಗರಿ ಇರುತ್ತದೆ.
ಈಗಾಗಲೇ ಶರದ್ ಪವಾರ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವ ತಂಡ ಮಹಾರಾಷ್ಟ್ರಕ್ಕೆ ಬಂದಿಳಿದಿದ್ದು, ಪವಾರ್ ಅವರ ಸುರಕ್ಷತೆಯ ಹೊಣೆಯನ್ನು ಕೈಗೆತ್ತಿಕೊಂಡಿದೆ. ಈ ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರದ ವಿಧಾನಸಭೆಗೆ ಚುನಾವಣೆಗಳು ನಡೆಯಲಿದ್ದು, ಈ ಹಂತದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸದಂತೆ ಈ ಮುಂಜಾಗ್ರತಾ ಕ್ರಮ ಪ್ರಾಮುಖ್ಯವೆನಿಸಿದೆ.
Leave A Reply