ಐವನ್ ಮನೆ ಮೇಲೆ ಕಲ್ಲು ತೂರಾಟ; ಇಬ್ಬರ ಬಂಧನ
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರ ವಿರುದ್ಧ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದರ ಪರಿಣಾಮ ಕಿಡಿಗೇಡಿಗಳು ಐವನ್ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ದಿನೇಶ್ ಕುಡ್ತಮೊಗರು 20) ಮತ್ತು ಬೋಳಂತೂರು ನಿವಾಸಿ ಭರತ್ ಅಲಿಯಾಸ್ ಯಕ್ಷಿತ್ (24) ಬಂಧಿತ ಆರೋಪಿಗಳು, ಇಬ್ಬರೂ ಬಜರಂಗದಳ ಕಾರ್ಯಕರ್ತರೆಂದು ತಿಳಿದುಬಂದಿದೆ. ದಿನೇಶ್ ಚಾಲಕನಾಗಿ ಕೆಲಸ ಮಾಡುತ್ತಿದ್ದು ಈ ಹಿಂದೆ ಮೂರು ಹಲ್ಲೆ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಭರತ್ ಕನ್ಯಾನದಲ್ಲಿ ಫೈನಾನ್ಸ್ ಕಲೆಕ್ಷನ್ ಮಾಡುವ ಕೆಲಸ ಮಾಡುತ್ತಿದ್ದು ಈ ಹಿಂದೆ ಒಂದು ಪ್ರಕರಣ ಇದೆ. ಆರೋಪಿಗಳು ಮಂಗಳೂರಿನ ಹೊಟೇಲ್ ಒಂದರಲ್ಲಿ ಊಟ ಮಾಡಿ, ಐವಾನ್ ವಿರುದ್ಧದ ಸಿಟ್ಟಿನಲ್ಲಿ ಕಲ್ಲು ಎಸೆದಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಐವನ್ ಮನೆಯ ಪರಿಸರದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾಗಿ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ರಾಜ್ಯಪಾಲರನ್ನು ಬಾಂಗ್ಲಾಕ್ಕೆ ಹೋಲಿಸಿ ಹೇಳಿಕೆ ನೀಡಿದ್ದಕ್ಕಾಗಿ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು. ಇದರ ನಡುವೆ, ಆಗಸ್ಟ್ 20 ರ ತಡರಾತ್ರಿ ಐವನ್ ಡಿಸೋಜಾ ಅವರ ಮಂಗಳೂರು ನಗರದ ವೆಲೆನ್ಸಿಯಾದಲ್ಲಿರುವ ಮನೆಗೆ ಕಲ್ಲು ತೂರಾಟ ನಡೆದಿತ್ತು. ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಮನೆಯ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದರು ಎನ್ನಲಾಗಿತ್ತು. ಘಟನೆ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪಾಂಡೇಶ್ವರ ಠಾಣೆ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ.
Leave A Reply