ಫ್ರೀ ಟಿಕೆಟ್ ಬೇಡಾ ಎಂದು ಮಹಿಳೆಯರಿಂದ ಒತ್ತಡ ಎಂದ ಡಿಸಿಎಂ!
ಮಹಿಳೆಯರು ಸರಕಾರದ ನಿರ್ದಿಷ್ಟ್ಯ ಕ್ಯಾಟಗರಿಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದ್ದ ಯೋಜನೆ ಶಕ್ತಿಗೆ ಈಗ ಕಂಟಕ ಬಂದಂತಿದೆ. ಈ ಯೋಜನೆ ನಿಲ್ಲುವ ಸಂಕೇತವನ್ನು ಸ್ವತ: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೀಡಿದ್ದಾರೆ. ಶಕ್ತಿ ಯೋಜನೆಯನ್ನು ಮುಂದುವರೆಸಬೇಕಾ, ಬೇಡ್ವಾ ಎನ್ನುವುದನ್ನು ಪರಿಶೀಲಿಸುತ್ತೇವೆ ಎಂದು ಡಿಸಿಎಂ ಹೇಳುವ ಮೂಲಕ ಈ ಯೋಜನೆಯ ಅಂತ್ಯಕ್ಕೆ ನಾಂದಿ ಹಾಡಿದಂತಿದೆ.
ಇದಕ್ಕೆ ಅವರು ನೀಡಿರುವ ಕಾರಣ ಮಾತ್ರ ಆಶ್ಚರ್ಯ ತರುವಂತದ್ದು. ಶಕ್ತಿ ಯೋಜನೆ ಬಗ್ಗೆ ಮರುಚಿಂತನೆ ನಡೆಸುವಂತೆ ಸ್ತ್ರೀಯರಿಂದಲೇ ಒತ್ತಡವಿದೆ. ಅನೇಕ ಹೆಣ್ಣುಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿ ಇದೆ. ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ನಮ್ಮಿಂದ ಉಚಿತ ಪ್ರಯಾಣ ಬೇಡವೆಂದಿದ್ದಾರೆ. ಟ್ವೀಟ್, ಇಮೇಲ್ ಮೂಲಕ ಅನೇಕ ಮಹಿಳೆಯರು ಈ ಬಗ್ಗೆ ತಿಳಿಸುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ. ಅನುಕೂಲ ಸ್ಥಿತಿಯಲ್ಲಿರುವ ಹೆಣ್ಣುಮಕ್ಕಳು ಹಣ ನೀಡಿ ಟಿಕೆಟ್ ಪಡೆಯಲು ಮುಂದಾದರೂ ನಿರ್ವಾಹಕರು ಪ್ರಯಾಣ ದರ ತೆಗೆದುಕೊಳ್ಳುತ್ತಿಲ್ಲ. ಕೆಲವು ನಿರ್ವಾಹಕರು ಹಣ ಪಡೆದರೂ ಟಿಕೆಟ್ ನೀಡುತ್ತಿಲ್ಲ ಎಂದು ಆಪಾದನೆಗಳಿವೆ ಎಂದು ಡಿಸಿಎಂ ತಿಳಿಸಿದರು.
ಈ ಹಿನ್ನಲೆಯಲ್ಲಿ ಶಕ್ತಿ ಯೋಜನೆ ಮರುಪರಿಶೀಲನೆ ಬಗ್ಗೆ ಚರ್ಚೆ ಮಾಡುತ್ತೇವೆ. ಇದರ ಬಗ್ಗೆ ಶೀಘ್ರದಲ್ಲಿಯೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಸಭೆ ಮಾಡುತ್ತೇವೆ. ಪ್ರತ್ಯೇಕವಾಗಿ ಸಭೆ ನಡೆಸಿ ಶಕ್ತಿ ಯೋಜನೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ ಜೂನ್ 11 ರಂದು ಜಾರಿಗೆ ಬಂದಿದ್ದು, ಮಹಿಳಾ ಪ್ರಯಾಣಿಕರು ಉಚಿತ ಬಸ್ ಪ್ರಯಾಣಕ್ಕಾಗಿ ಶೂನ್ಯ ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ಅಥವಾ ಕೇಂದ್ರ ಅಥವಾ ರಾಜ್ಯ ಸರಕಾರದ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ. ನಿರ್ವಾಹಕರು ಮಹಿಳೆಯರ ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತರ “ಶೂನ್ಯ ಟಿಕೆಟ್” (ಉಚಿತ ಟಿಕೆಟ್) ನೀಡುತ್ತಿದ್ದಾರೆ. ಇನ್ನು ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸರಕಾರದ ನಾಲ್ಕೂ ನಿಗಮಗಳಾದ ಕೆಎಸ್ ಆರ್ ಟಿಸಿ, ಎನ್ ಡಬ್ಲೂಕೆಆರ್ ಟಿಸಿ, ಕೆಕೆಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಹೆಣ್ಣುಮಕ್ಕಳು ಪ್ರಯಾಣ ಮಾಡುವುದು ಹೆಚ್ಚಾಗಿದೆ. ಇದರಿಂದ ಬಸ್ ಗಳು ತುಂಬಿ ತುಳುಕುತ್ತಿವೆ. ಈ ಕಾರಣದಿಂದ ಶಾಲಾ – ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಆದರೆ ಹೀಗೆ ಡಿಸಿಎಂ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆ ಕೂಡ ಹೊರಗೆ ಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಹಿಳೆಯರ ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ. ಕೆಲವು ಮಹಿಳೆಯರು ಯೋಜನೆ ಬೇಡಾ ಎಂದು ಹೇಳಿರಬಹುದು. ಆದರೆ ರಾಜ್ಯದಲ್ಲಿ ಶಕ್ತಿ ಯೋಜನೆಯ ಪರಿಷ್ಕರಣೆಯ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ. ಒಂದು ಕಡೆ ಡಿಸಿಎಂ ಶಕ್ತಿ ಯೋಜನೆಯನ್ನು ನಿಲ್ಲಿಸುವ ಹಿಂಟ್ ನೀಡುವುದು, ಮತ್ತೊಂದೆಡೆ ಸಿಎಂ ಅಂತಹ ಸಾಧ್ಯತೆ ಇಲ್ಲ ಎಂದು ಹೇಳುವುದು ಮಹಿಳೆಯರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ಯೋಜನೆಯ ಭವಿಷ್ಯ ಮಾತ್ರ ಅಡಕತ್ತರಿಗೆ ಸಿಲುಕಿರುವುದು ಮಾತ್ರ ಸತ್ಯ.
ಇದೇ ಸಂದರ್ಭದಲ್ಲಿ ರಾಜ್ಯದ ಮಹಿಳೆಯರು ಡಿಕೆಶಿ ಕನಸಲ್ಲಿ ಬಂದು ಶಕ್ತಿ ಯೋಜನೆ ನಿಲ್ಲಿಸೋಕೆ ಹೇಳಿದ್ರಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
Leave A Reply