ವಾಟ್ಸಾಪ್ ಗ್ರೂಪ್ ನಲ್ಲಿ ಮಾಹಿತಿ ನೋಡಿ ಪತ್ನಿಗೆ ಹೆರಿಗೆ, ಪ್ರಕರಣ ದಾಖಲು!
ಈ ಘಟನೆ ನಡೆದಿರುವುದು ತಮಿಳುನಾಡಿನ ಕುಂಡ್ರತೂರ್ ಎಂಬಲ್ಲಿ. ಸುಕನ್ಯಾ ಮತ್ತು ಮನೋಹರ್ ದಂಪತಿಗಳ ಭಂಡ ಧೈರ್ಯ ಈಗ ಅವರ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದೆ. ಇವರು ” ಹೋಂ ಡೆಲಿವರಿ ಎಕ್ಸರೀಯನ್ಸ್ ” ಎಂಬ ವಾಟ್ಸಾಪ್ ಗ್ರೂಪಿನ ಸದಸ್ಯರಾಗಿದ್ದರು. ಅದು ಹೆರಿಗೆಯ ಸಂಬಂಧಿತ ಮಾಹಿತಿ ನೀಡುವ ಗ್ರೂಪ್ ಆಗಿತ್ತು. ಅದರಲ್ಲಿ ಬಂದದ್ದನ್ನು ಇವರು ಪಾಲಿಸುತ್ತಿದ್ದರು. ಸುಕನ್ಯಾ ಗರ್ಭಿಣಿಯಾದ ನಂತರ ಇವರು ಒಮ್ಮೆಯೂ ವೈದ್ಯರ ಬಳಿ ಹೋಗಿರಲಿಲ್ಲ. ಎಲ್ಲಿಯ ತನಕ ಅಂದರೆ ನವೆಂಬರ್ 17 ರಂದು ಸುಕನ್ಯಾಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕವೂ ಇವರು ಆಸ್ಪತ್ರೆಗೆ ತೆರಳಲಿಲ್ಲ. ಅದರ ಬದಲು ಈ ಮಾಹಿತಿಯನ್ನು ಗ್ರೂಪಿನಲ್ಲಿ ಹಾಕಿ ಅವರಿಂದ ಮಾಹಿತಿ ಕೇಳಿದ್ದಾರೆ. ಅದರಲ್ಲಿ ಬಂದ ಮಾಹಿತಿಯಂತೆ ಪತ್ನಿಗೆ ಹೆರಿಗೆ ಮಾಡಿಸಿದ್ದಾರೆ. ನಂತರ ತಾಯಿ, ಮಗುವಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸಾಪ್ ನಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಆರೋಗ್ಯ ಇಲಾಖೆಯ ಕೈ ಸೇರಿದೆ. ಈಗ ಇಡೀ ವಾಟ್ಸಾಪ್ ಗ್ರೂಪ್ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಕಾರಣಕ್ಕೆ ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಹೀಗೆ ವಾಟ್ಸಾಪ್ ನಲ್ಲಿ ಮಾಹಿತಿ ಪಡೆದು ಅತಿರೇಕದ ಹೆಜ್ಜೆ ಇಟ್ಟರೆ ಅದರಿಂದ ಒಂದು ವೇಳೆ ತಾಯಿ, ಮಗುವಿಗೆ ಹೆಚ್ಚು ಕಡಿಮೆ ಆದರೆ ಯಾರು ಕಾರಣ? ಇನ್ನು ಎಲ್ಲರೂ ಹೀಗೆ ಮಾಡಿ ಹೆರಿಗೆ ಮಾಡಿದರೆ ಉತ್ತಮ ಎಂದು ಅಂದುಕೊಂಡು ಹಾಗೆ ಮಾಡಲು ಹೋದರೆ ತಾಯಿ, ಮಗುವಿನ ಜೀವಕ್ಕೆ ಅಪಾಯ ಆದರೆ ಕಾರಣ ಯಾರು?
ಆದ್ದರಿಂದ ವಾಟ್ಸಾಪ್ ವಿಶ್ವವಿದ್ಯಾನಿಲಯದಿಂದ ಬಂದಿರುವ ಎಲ್ಲಾ ಮಾಹಿತಿಗಳು ಯಾವ ಕಾಲಕ್ಕೂ ನಿಜವೇ ಆಗಿರುವುದಿಲ್ಲ. ಈಗ ಈ ವಾಟ್ಸಾಪ್ ಗ್ರೂಪ್ ನಲ್ಲಿ ಯಾರಾದರೂ ಪರಿಣಿತರು ಇದ್ದು ಅವರು ಸೂಕ್ತ ಮಾಹಿತಿಯನ್ನು ಕೊಟ್ಟಿರಬಹುದು. ಆದರೆ ಮುಂದಿನ ದಿನಗಳಲ್ಲಿ ಯಾರೋ ಅರ್ಧಂಬರ್ದ ತಿಳಿದವರು ಏನಾದರೂ ಸಾಹಸ ಮಾಡಲು ಹೋಗಿ ಗಂಡಾಂತರ ತಂದುಕೊಂಡರೆ. ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳು ಹೇಗೆ ಜೀವ ಉಳಿಸಬಲ್ಲದು ಮತ್ತು ಅರೆಬೆಂದ ಮಾಹಿತಿಗಳು ಜೀವ ತೆಗೆಯಬಲ್ಲದು ಎನ್ನುವುದನ್ನು ನಾವು ಅನುಭವಗಳಿಂದ ಪಾಠ ಕಲಿತಿದ್ದೇವೆ. ಆದರೂ ಕೆಲವರಿಗೆ ಬುದ್ಧಿ ಬರುವುದಿಲ್ಲ.
Leave A Reply