ತುಳುನಾಡಿನ ಯುವಕನಿಗೆ ಅರ್ಜೆಂಟ್ ಬಂತು ಭಾರತ ತಂಡದಿಂದ ಬುಲಾವ್!
ತನುಷ್ ಕೋಟ್ಯಾನ್ ಕೊನೆಗೂ ಟೀಮ್ ಭಾರತ್ ನಲ್ಲಿ ಸ್ಥಾನ ಪಡೆಯುವ ಮೂಲಕ ಕರ್ನಾಟಕದ ಮತ್ತೊಬ್ಬ ಆಟಗಾರ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಹಾಗೆ ಆಗಿದೆ. ತನುಷ್ ಕರಾವಳಿ ಕರ್ನಾಟಕದ ಪಾಂಗಾಳದವರಾಗಿದ್ದರೂ ಅವರ ಕ್ರಿಕೆಟ್ ಬದುಕಿನ ಸಾಧನೆಗಳು ನಡೆದದ್ದು ಮುಂಬೈ ತಂಡದಲ್ಲಿ ಆಡುವ ಮೂಲಕ ಎನ್ನುವುದೇ ರೋಚಕ.
ತಮ್ಮ ಕಠಿಣ ಪರಿಶ್ರಮದಿಂದ ಮುಂಬೈ ತಂಡದ ಖಾಯಂ ಸದಸ್ಯರಾಗಿರುವ ಕೋಟ್ಯಾನ್ ಅತ್ಯುತ್ತಮ ಆಲ್ ರೌಂಡರ್ ಆಗಿ ಅಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟಿಗೆ 2018 ರಲ್ಲಿ ಪಾದಾರ್ಪಣೆ ಮಾಡಿರುವ ಕೋಟ್ಯಾನ್ ಇಲ್ಲಿಯ ತನಕ 33 ಪಂದ್ಯಗಳ ಮೂಲಕ 1525 ರನ್ ಬಾರಿಸಿದ್ದಾರೆ. ಆ ಸರಾಸರಿಯೇ 41.21 ಇದೆ. ಅದರಲ್ಲಿ ಎರಡು ಶತಕ ಮತ್ತು 13 ಅರ್ಧ ಶತಕಗಳು ಇವೆ. ಇನ್ನು ಚೆಂಡಿನ ಮೂಲಕ 101 ವಿಕೆಟ್ ಕಬಳಿಸಿರುವ ಕೋಟ್ಯಾನ್ ಒಟ್ಟು ಮೂರು ಬಾರಿ ಐದು ವಿಕೆಟುಗಳ ಗೊಂಚಲನ್ನು ಪಡೆದಿದ್ದಾರೆ.
ಇವರ ಕ್ರಿಕೆಟ್ ಹಾದಿ ಕೂಡ ತುಂಬಾ ಕಠಿಣ ಮತ್ತು ಸವಾಲಿನದ್ದು ಆಗಿತ್ತು. ಮುಂಬೈ ಹಿರಿಯರ ತಂಡದಿಂದ ಇವರ ಮೊದಲ ರಣಜಿ ಪಂದ್ಯಾಟದ ಬಳಿಕ ಸ್ಥಾನ ಕಳೆದುಕೊಳ್ಳಬೇಕಾಗಿ ಬಂದಿದ್ದರೂ, 23 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂಡರ್ 23 ಯಲ್ಲಿ ಆಡಿ ಅಲ್ಲಿ ಉತ್ತಮ ಸಾಧನೆ ಮಾಡಿ ಮುಂಬೈ ಹಿರಿಯರ ತಂಡದಲ್ಲಿ 2022 ರಲ್ಲಿ ಮರಳಿದ್ದರು. 2023 – 24 ರಲ್ಲಿ ಇವರ ಸಾಧನೆ ಹೇಗಿತ್ತು ಎಂದರೆ ಇವರು 29 ವಿಕೆಟ್ ಕಿತ್ತು, 502 ರನ್ ಬಾರಿಸಿ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದರು. ಈ ಪ್ರದರ್ಶನದ ಕಾರಣದಿಂದ ಮುಂಬೈ ತಂಡ ಟ್ರೋಫಿ ಗೆದ್ದುಕೊಂಡಿತು.
ಇವರ ಬೌಲಿಂಗ್ ಶೈಲಿಯನ್ನು ರವಿಂದ್ರನ್ ಅಶ್ವಿನ್ ಅವರಿಗೆ ಹೋಲಿಸಲಾಗುತ್ತಿದ್ದು, ಕೋಟ್ಯಾನ್ 85 – 90 ಸ್ಪೀಡ್ ನಲ್ಲಿ ಏಕ್ಸಟ್ರಾ ಬೌನ್ಸ್ ಹಾಗೂ ತಿರುವು ಪಡೆದುಕೊಳ್ಳುವ ಬೌಲಿಂಗ್ ಸಂಘಟಿಸುವ ಚಾಕಚಕ್ಯತೆ ಹೊಂದಿದ್ದಾರೆ. ಮುಂಬೈಯ ವಿಕ್ರೋಲಿಯಲ್ಲಿ ಬೆಳೆದ ಕೋಟ್ಯಾನ್ ತಂದೆ ಕೂಡ ಕ್ರಿಕೆಟ್ ಕೋಚ್ ಆಗಿ ಮಗನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಆಟಗಾರ ಅಶ್ವಿನ್ ರವಿಚಂದ್ರನ್ ಅವರಿಂದ ತೆರವಾಗಿರುವ ಭಾರತೀಯ ತಂಡವನ್ನು ತುಂಬಬಲ್ಲ ಛಾತಿ ಹೊಂದಿದ್ದು, ಭವಿಷ್ಯದ ಆಟಗಾರ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ವಿಜಯ್ ಹಜಾರೆ ಟ್ರೋಫಿಗಾಗಿ ಅಹಮದಾಬಾದಿನಲ್ಲಿದ್ದ ತನುಷ್ ಅಲ್ಲಿಂದ ಮುಂಬೈಗೆ ಬಂದು ಮೆಲ್ಬೋನ್ ಗೆ ತೆರಳಿದ್ದಾರೆ. ಇವರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದ ಭಾಗವಾಗಿದ್ದ ಕಾರಣ ಇವರಿಗೆ ಯಾವುದೇ ವೀಸಾ ಸಮಸ್ಯೆಯಾಗಿಲ್ಲ.
Leave A Reply