ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮೂಳೆ ದಾನ ನಡೆದಿದೆ. ಮಡಿಕೇರಿಯ ಸೋಮವಾರಪೇಟೆಯ ಜಾಮಬೂರ್ ಗ್ರಾಮದ ಈಶ್ವರ ಎನ್ ಅವರು ಡಿಸೆಂಬರ್ 22 ರಂದು ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಅವರನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ನಿಧನದ ನಂತರ ಅವರ ಸಹೋದರಿ ಮತ್ತು ಕುಟುಂಬಸ್ಥರ ಒಪ್ಪಿಗೆ ಪಡೆದು ಮೂಳೆ ದಾನ ಶಸ್ತ್ರಚಿಕಿತ್ಸೆ ನಡೆಸಲಾಯಿತು. 32 ವರ್ಷದ ಈಶ್ವರ್ ಅವರು ನಿಧನ ಅಪಘಾತದಿಂದ ಆಗಿದ್ದ ಕಾರಣ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡಿ ಮೂಳೆ ದಾನ ಪ್ರಕ್ರಿಯೆ ನಡೆಸಲಾಗಿತ್ತು. ಇಲ್ಲಿಯವರೆಗೆ ನೇತ್ರದಾನ, ಲಿವರ್, ಕಿಡ್ನಿ ಸಹಿತ ಬೇರೆ ಬೇರೆ ಅಂಗಾಗಗಳ ದಾನ ಪ್ರಕ್ರಿಯೆ ನಡೆದಿದೆ. ಆದರೆ ಕರ್ನಾಟಕದಲ್ಲಿ ಮೂಳೆ ದಾನ ಪ್ರಕ್ರಿಯೆ ನಡೆದಿರುವುದು ಇದೇ ಮೊದಲು.
ಆಸ್ಪತ್ರೆಯ ವೈದ್ಯರಾದ ಡಾ. ವರುಣ್ ಶೆಟ್ಟಿಯವರು ಮಾಹಿತಿ ನೀಡಿ ಈ ಮೂಳೆ ದಾನದಿಂದ ಸಂಗ್ರಹಿಸಲಾಗುವ ಅಂಶಗಳು ಭವಿಷ್ಯದಲ್ಲಿ ಕ್ಯಾನ್ಸರ್ ಪೀಡಿತರಾಗಿರುವ ಆರು ಮಕ್ಕಳ ವೈದ್ಯಕೀಯ ಚಿಕಿತ್ಸೆಯ ಅವಧಿಯಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇದು ನಮ್ಮ ರಾಜ್ಯದ ಮಟ್ಟಿಗೆ ಮೊದಲ ಮೂಳೆ ದಾನವಾಗಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡುವ ಅಗತ್ಯವೂ ಇದೆ. ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಸುಮಲತಾ ಶೆಟ್ಟಿಯವರು ಮಾತನಾಡಿ ಈಶ್ವರ್ ಅವರ ಪರಿವಾರದವರಿಗೆ ಕೃತಜ್ಞತೆ ಸಲ್ಲಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡಕ್ಕೂ ಅಭಿನಂದನೆ ತಿಳಿಸಿದರು.
Leave A Reply