ಲಂಚ ಕೇಳುವವನು ಅವನ ವಂಶದ ಕೊನೆಯ ಸರಕಾರಿ ಉದ್ಯೋಗಿಯಾಗಲಿದ್ದಾನೆ – ಸಿಎಂ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿ ಬಂಡವಾಳ ಹೂಡುವವರು ಯಾವುದೇ ಕಿರಿಕಿರಿ ಇಲ್ಲದೇ ಆರಾಮವಾಗಿ ಮುಂದುವರೆಯಬಹುದು. ಸಿಂಗಲ್ ವೀಂಡೋ ಸಿಸ್ಟಮ್ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಕೊಡಲಾಗುವುದು. ಅದರೊಂದಿಗೆ ಯುವಕರಿಗೆ ಸಾಲವನ್ನು ನೀಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಈ ಎಲ್ಲಾ ವಿಷಯದಲ್ಲಿ ನಿಮ್ಮಿಂದ ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ದೂರು ನೀಡಿ. ಅಂತಹ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ಅಂತವರ ವಂಶದಲ್ಲಿಯೇ ಯಾರಿಗೂ ಸರಕಾರಿ ಉದ್ಯೋಗ ಸಿಗದ ಹಾಗೆ ನೋಡುವ ಜವಾಬ್ದಾರಿ ನಮ್ಮದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಭ್ರಷ್ಟಾಚಾರ ಎನ್ನುವುದು ಯಾವುದೇ ವ್ಯವಸ್ಥೆ ಸಮರ್ಪಕವಾಗಿ ನಡೆದು ರಾಜ್ಯ, ದೇಶ ಅಭಿವೃದ್ಧಿಗೊಳ್ಳಲು ಇರುವ ಬಹುದೊಡ್ಡ ಅಡಚಣೆ. ಅದನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ಅದಕ್ಕೆ ನಮ್ಮ ಸರಕಾರ ಬದ್ಧ ಎಂದು ಸಿಎಂ ಹೇಳಿದರು. ಉತ್ತರ ಪ್ರದೇಶ ರಾಜ್ಯದ ಹಿಂದಿನ ಕೆಟ್ಟ ಇಮೇಜ್ ಕಳಚಿ ಈಗಿನ ಸರಕಾರದಿಂದ ಸಂಪೂರ್ಣ ಇಮೇಜ್ ಬದಲಾವಣೆ ಆಗುತ್ತಿದ್ದು, ಇದು ಪ್ರಸ್ತುತ ದೇಶದ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ರಾಜ್ಯವಾಗಿದೆ ಎಂದು ಹೇಳಿದ ಯೋಗಿ ಗೊಂಡಾದಲ್ಲಿ ಮುಖ್ಯಮಂತ್ರಿ ಯುವ ಉದ್ಯಮಿ ವಿಕಾಸ ಅಭಿಯಾನದ ಅಡಿಯಲ್ಲಿ ಆ ಜಿಲ್ಲೆಯ ದೇವಿಪಟ್ಟಣ ವಿಭಾಗದ 1423 ಯುವ ಉದ್ಯಮಿಗಳಿಗೆ 55 ಕೋಟಿ ರೂ ಸಾಲ ವಿತರಿಸಿದರು.
ಒಂದು ಜಿಲ್ಲೆ, ಒಂದು ಉತ್ಪನ್ನ ಅಥವಾ ವಿಶ್ವಕರ್ಮ ಶ್ರಮ ಸಮ್ಮಾನ್ ಯೋಜನೆಯಂತಹ ಯೋಜನೆಗಳ ಮೂಲಕ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಯುವಕರಿಗೆ ಕರೆ ನೀಡುತ್ತೇನೆ. ತಾಳ್ಮೆಯಿಂದ ಅದರ ಕಡೆ ಕೆಲಸ ಮಾಡಿ. ಸರಕಾರದ ಏಕಗವಾಕ್ಷಿ ಮತ್ತು ನಿವೇಶ್ ಸಾರಥಿ ಅವರಿಗೆ ಸಹಾಯ ಮಾಡುತ್ತದೆ. ಸಾಲ ಮಂಜೂರು ಮಾಡುವ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ, ದೂರು ದಾಖಲಿಸಿ. ಸಾಲ ಪಡೆಯುವ ಹೆಸರಿನಲ್ಲಿ ಯಾವುದೇ ವಂಚನೆಯನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದರು.
Leave A Reply