ಉಡುಪಿ ಮೂಲದ ದಿಶಾ ಸಾಲ್ಯಾನ್ ನಿಗೂಢ ಸಾವಿನ ಕೇಸಿನಲ್ಲಿ ಆದಿತ್ಯ ಠಾಕ್ರೆ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ!

ಬಹುತೇಕ ಮುಚ್ಚಿಯೇ ಹೋಗಿದ್ದ ದಿಶಾ ಸಾಲ್ಯಾನ್ ಸಾವಿನ ಪ್ರಕರಣದಲ್ಲಿ ಬಾಳಾ ಠಾಕ್ರೆ ಮೊಮ್ಮೊಗ ಆದಿತ್ಯ ಠಾಕ್ರೆ ವಿರುದ್ಧ ತನಿಖೆಗೆ ಬಾಂಬೆ ಉಚ್ಚ ನ್ಯಾಯಾಲಯ ಅಸ್ತು ಎಂದಿದೆ. ದಿಶಾ ಸಾಲ್ಯಾನ್ ತಂದೆ ಸತೀಶ್ ಸಾಲ್ಯಾನ್ ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆಯವರನ್ನು ವಿಚಾರಣೆ ನಡೆಸಿದರೆ ಸತ್ಯ ಹೊರಬರಬಹುದು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದನ್ನು ನ್ಯಾಯಾಲಯ ಪುರಸ್ಕರಿಸಿದೆ.
ದಿಶಾ ಸಾಲ್ಯಾನ್ ಬಾಲಿವುಡ್ ತಾರೆ ಸುಶಾಂತ್ ಸಿಂಗ್ ರಾಜಪೂತ್ ಅವರ ಮ್ಯಾನೇಜರ್ ಆಗಿದ್ದರು. ಆಕೆ ಮಲ್ನಾಡಿನ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ಸತ್ತಿದ್ದಾಳೆ ಎಂದು ಪ್ರಕರಣ ದಾಖಲಾಗಿತ್ತು. ಜೂನ್ 8, 2020 ರಂದು ಆಕೆ ಮರಣವನ್ನಪ್ಪಿದ್ದು, ಅದು ಆತ್ಮಹತ್ಯೆ ಎಂದು ಅಂದಿನ ಪೊಲೀಸ್ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿತ್ತು. ಆಕೆಯ ನಿಧನದ ವಾರದೊಳಗೆ ಸುಶಾಂತ್ ಸಿಂಗ್ ರಾಜಪೂತ್ ಕೂಡ ನಿಧನ ಹೊಂದಿದ್ದರು.
ಆದರೆ ಆಗ ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಇನ್ನು ಸಿಎಂ ಮಗನ ವಿರುದ್ಧ ತನಿಖೆ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದು ಆಕೆಯ ಪೋಷಕರು ಮೌನಕ್ಕೆ ಶರಣಾಗಿದ್ದರು. ಆದರೆ ತಮ್ಮ ಮಗಳ ಸಾವಿನ ಹಿಂದೆ ದೊಡ್ಡ ದೊಡ್ಡ ಕೈಗಳು ಇವೆ ಎಂದು ಆಕೆಯ ಕುಟುಂಬದವರು ಆಗಾಗ ನೋವನ್ನು ತೋಡಿಕೊಳ್ಳುತ್ತಾ, ನ್ಯಾಯಕ್ಕಾಗಿ ಪ್ರಯತ್ನಪಡುತ್ತಿದ್ದರು. ಈಗ ಅಂತಿಮವಾಗಿ ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ಮಾಡಲಾಗುವುದು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನವೀಸ್ ಹೇಳಿದ ಬಳಿಕ ಆಕೆಯ ಮನೆಯವರಲ್ಲಿ ನ್ಯಾಯದ ನಿರೀಕ್ಷೆ ಹೆಚ್ಚಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ, ಸಾಕ್ಷ್ಯ ನಾಶದ ಪ್ರಕರಣ ದಾಖಲಾಗಿದ್ದು, ಎಫ್ ಐಆರ್ ಕೂಡ ದಾಖಲಾಗಿದೆ. ಬಿಜೆಪಿ ಮುಖಂಡರ ಪ್ರಕಾರ ಆದಿತ್ಯ ಠಾಕ್ರೆ ಹೆಸರನ್ನು ಈ ಪ್ರಕರಣದಲ್ಲಿ ಕೇವಲ ತಳಕು ಹಾಕಿರುವುದಲ್ಲ, ಆದಿತ್ಯ ಠಾಕ್ರೆ ನೇರವಾಗಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದೇ ಆರೋಪಿಸುತ್ತಿದ್ದಾರೆ.
ಇನ್ನು ದಿಶಾ ತಂದೆ ಅವರು ತಮ್ಮ ಹೇಳಿಕೆಯಲ್ಲಿ ತಮ್ಮ ಜೀವಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ಆದಿತ್ಯ ಠಾಕ್ರೆಯೇ ನೇರ ಹೊಣೆ ಎಂದು ಹೇಳಿರುವುದಲ್ಲದೇ, ಇದನ್ನು ತಮ್ಮ ಅಂತಿಮ ಹೇಳಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ. ಇನ್ನು ಈ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್ ಕೂಡ ಸಿಕ್ಕಿದ್ದು , ದಿಶಾ ಸಾಲ್ಯಾನ್ ಸಾವಿಗೀಡಾದ ಜೂನ್ 8, 2020 ರಂದು ದಿಶಾ ಸತ್ತ ಮಲ್ನಾಡ್ ಅಪಾರ್ಟ್ ಮೆಂಟಿನಲ್ಲಿ ಆದಿತ್ಯ ಠಾಕ್ರೆ ಇದ್ದರು ಎಂದು ಆರೋಪದಲ್ಲಿ ಉಲ್ಲೇಖಿಸಲಾಗಿದೆ. ಅವರೊಂದಿಗೆ ಬಾಲಿವುಡ್ ನಟರಾದ ಸೂರಜ್ ಪಾಂಚೋಲಿ ಹಾಗೂ ಡಿನೋ ಮೊರಿಯಾ ಕೂಡ ಹಾಜರಿದ್ದರು ಎನ್ನಲಾಗಿದೆ.
ಈ ಪ್ರಕರಣದಿಂದ ಆದಿತ್ಯ ಠಾಕ್ರೆ ಬಹಳ ದೊಡ್ಡ ಇಕ್ಕಟ್ಟಿಗೆ ಸಿಲುಕಿದ್ದು, ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಲ್ಲಿ ದಿಶಾ ಸಾವಿಗೆ ನ್ಯಾಯ ಸಿಗಹುದು ಎಂದು ನಿರೀಕ್ಷಿಸಲಾಗಿದೆ.
Leave A Reply